Archive.
News and reviews from the earlier FilmySphere, 2013 to 2019. They are kept as they were published and are not updated. For current stories, see the journal.
- Ee Dil Helide Nee Bekantha Movie Review
ಈ ದಿಲ್ ಹೇಳಿದೆ ನೀ ಬೇಕಂತ ಚಿತ್ರ ವಿಮರ್ಶೆ
ಇದು ಹೃದಯಗಳಾ ವಿಷಯ ಮುಖ ನೋಡದೆ ಪ್ರೀತಿಸುವ ಕತೆ ಬಹಳ ಹಿಂದಿನಿಂದಲೇ ಇದೆ. ಆದರೆ ಯಾರೇ ನೀನು ಚೆಲುವೆ ಚಿತ್ರದ ಬಳಿಕ ಫೋನ್ ಇನ್ ಲವ್ ಚಿತ್ರಗಳೂ ಆರಂಭವಾದವು. ಅವುಗಳ ಸಾಲಿಗೆ ಸೇರಿದರೂ ಮತ್ತೊಂದು ಸುಂದರ ಪ್ರೇಮಕಾವ್ಯವಾಗಿ ಗಮನ ಸೆಳೆಯುವ ಚಿತ್ರ 'ಈ ದಿಲ್ ಹೇಳಿದೆ ನೀ ಬೇಕಂತ'. ನಾಯಕ ಬಾಲುವಿಗೆ ಹೇಳಿಕೊಳ್ಳಲು ಕೆಲಸವಿಲ್ಲ. ಆದರೂ ಹೊಸದೊಂದು ಮೊಬೈಲ್ ತೆಗೆದಿರುತ್ತಾನೆ. ಗಾಯಾಳುವೊಬ್ಬನನ್ನು ಆಸ್ಪತ್ರೆ ಸೇರಿಸುವ ತರಾತುರಿಯಲ್ಲಿ ಅದನ್ನು ಕಳೆದುಕೊಳ್ಳುತ್ತಾನೆ. ನಾಯಕಿಯ ಕೈಸೇರುವ ಮೊಬೈಲ್ ಅವರಿಬ್ಬರ ಪರಿಚಯಕ್ಕೆ ಬಳಿಕ ಪ್ರೇಮಕ್ಕೆ ದಾರಿಯಾಗುತ್ತದೆ. ಆದರೆ ಎಲ್ಲ ಚಿತ್ರಗಳಂತೆ ಇಲ್ಲಿಯೂ ತಾಯಿ ನೋಡಿದ ಹುಡುಗಿಯನ್ನು ಮದುವೆಯಾಗುವುದಾಗಿ ನಾಯಕ ಮೊದಲೇ ಮಾತು ಕೊಟ್ಟಿರುತ್ತಾನೆ. ವ್ಯತ್ಯಾಸವೇನೆಂದರೆ ಇಲ್ಲಿ ಮಾತು ತೆಗೆದುಕೊಂಡ ಬಳಿಕ ತಾಯಿಯ ಆರೋಗ್ಯ ಕೆಡುತ್ತದೆ! ಒಟ್ಟಿನಲ್ಲಿ ಮನೆಯವರು ಮಾಡುವ ಮದುವೆಗೆ ಇಬ್ಬರೂ ಒಪ್ಪಿಕೊಳ್ಳಲೇಬೇಕಾಗುತ್ತದೆ. ಆದರೆ ಮನೆಯವರು ನಡೆಸುತ್ತಿರುವುದು ಕೂಡ ತಮ್ಮಿಬ್ಬರದೇ ಮದುವೆಯನ್ನು ಎಂಬ ಸತ್ಯ ಅವರಿಗೆ ಗೊತ್ತಿರುವುದಿಲ್ಲ. ಕೊನೆಯಲ್ಲಿ ಯಾವ ರೀತಿ ಒಂದಾಗುತ್ತಾರೆ ಎಂಬುದೇ ಚಿತ್ರದ ಮುಖ್ಯ ಕತೆ. ತಮ್ಮದೇ ಮದುವೆ ಮಾಡುವುದೆಂದು ಗೊತ್ತಿದ್ದರೂ ಕೂಡ ಅದನ್ನರಿಯದೆ ಪರಸ್ಪರ ಭೇಟಿಗಾಗಿ ಒದ್ದಾಡುವ ಜೋಡಿಯನ್ನು ಮಲಯಾಳಂನ ಡಾರ್ಲಿಂಗ್ ಡಾರ್ಲಿಂಗ್ ಚಿತ್ರದಲ್ಲಿ ಈ ಹಿಂದೆಯೇ ತೋರಿಸಲಾಗಿತ್ತು. ಆದರೆ ಅಲ್ಲಿ ನಾಯಕ ಮತ್ತು ನಾಯಕಿಯನ್ನು ಬೇರೆ ಮಾಡುವ ಶಕ್ತಿಗಳೂ ಇದ್ದವು. ಆದರೆ ಇಂದು ಪರಸ್ಪರರ ಪತ್ತೆಗೆ ಅತ್ಯಧಿಕ ಸಾಧ್ಯತೆಗಳಿರುವ ಕಾಲದಲ್ಲಿ ಹುಡುಗನನ್ನು ಹುಡುಕ ಬಯಸುವ ಹುಡುಗಿಯ ಎಲ್ಲ ಪ್ರಯತ್ನಗಳು ವಿಫಲವಾಗುವಂತೆ ತೋರಿಸಿರುವುದನ್ನು ಕಂಡರೆ ಅದಕ್ಕೆ ಆಕೆಯ ಮೂರ್ಖತನವೊಂದೇ ಕಾರಣವೆನ್ನಬೇಕಾದೀತು. ಸಿಕ್ಕ ಮೊಬೈಲ್ ನಲ್ಲಿರುವ ಸಿಮ್ ನಂಬರ್ ತಿಳಿಯಲಾಗದೆ ಹೋಗುವುದು, ಕರೆ ಮಾಡುವವನ ಊರು ಗೊತ್ತಿದ್ದರೂ, ಆತನ ಸಂಪರ್ಕದಲ್ಲಿರುವ ಹೋಟೆಲ್ ತಿಳಿದರೂ ಅಲ್ಲಿ ಇನ್ನಷ್ಟು ವಿಚಾರಣೆ ಮಾಡದಿರುವುದು ಅವಳ ತಪ್ಪೆನಿಸಿದೆರೆ, ಆಕೆಯನ್ನು ಭೇಟಿಯಾಗಲೇಬೇಕೆಂದು ತೀರ್ಮಾನಿಸಿದ ಮೇಲೆಯೂ ತನ್ನ ಕಡೆಯಿಂದ ಒಂದು ಪರ್ಮನೆಂಟ್ ಸಂಪರ್ಕ ಸಂಖ್ಯೆಯನ್ನು ನಾಯಕಿಗೆ ಒದಗಿಸಲಾಗದೆ ಹೋಗುವ ನಾಯಕನ ಬುದ್ಧಿಹೀನತೆಯೂ ಕತೆಗೆಂದೇ ಸೃಷ್ಠಿಸಲ್ಪಟ್ಟಂತಿದೆ. ಆದರೆ ಇಷ್ಟೆಲ್ಲ ಕೊರತೆಗಳ ನಡುವೆಯೂ ಜೋಡಿಗಳಿಬ್ಬರೂ ಒಂದಾಗುವ ಕ್ಲೈಮ್ಯಾಕ್ಸ್ ಸನ್ನಿವೇಶ ಸಾಮಾನ್ಯ ಪ್ರೇಕ್ಷಕರ ಕಣ್ಣಲ್ಲಿ ಆನಂದ ಭಾಷ್ಪ ಸುರಿಯುವಂತೆ ಮಾಡುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ. ನಾಯಕನಾಗಿ ಜುಗಾರಿ ಅವಿನಾಶ್ ರದ್ದು ನೈಜ ನಟನೆ. ನಾಯಕಿಯ ಪಾತ್ರಕ್ಕೆ ಶ್ರೀಶ್ರುತಿ ನ್ಯಾಯವೊದಗಿಸಿದ್ದಾರೆ. ಒಂದೆರಡು ದುಃಖದ ಸನ್ನಿವೇಶದ ಮಾತುಗಳಲ್ಲಿ ನಾಟಕೀಯತೆ ಕಂಡದ್ದು ಬಿಟ್ಟರೆ ಚಿತ್ರದ ಆಕೆಯನ್ನೇ ಚಿತ್ರದ ಪ್ರಮುಖ ಆಕರ್ಷಣೆ ಎನ್ನಬಹುದು. ಇಬ್ಬರಿಗೆ ಕಾಯಿನ್ ಫೋನ್ ಸಂಪರ್ಕವಾಗಿ ಬರುವ ಮಿತ್ರನ ಪಾತ್ರ ಯಾರೇ ನೀನು ಚೆಲುವೆಯ ಸಾಧು ಕೋಕಿಲರ ಪಾತ್ರವನ್ನು ನೆನನಪಿಸುತ್ತದೆ. ಆದರೆ ಸಂಭಾಷಣೆಯ ಶೈಲಿ 'ದುನಿಯಾ'ದಲ್ಲಿನ ರಂಗಾಯಣ ರಘುವಿನದ್ದು. ಚಿತ್ರದಲ್ಲಿ ನಾಗೇಂದ್ರ ಶಾ, ಸುರೇಶ್ ಮಂಗಳೂರು ಮೊದಲಾದ ಹಿರಿಯ ಪೋಷಕ ನಟರ ಸದ್ಬಳಕೆಯಾಗಿದೆ. ನಿರ್ದೇಶಕರು ಚಿತ್ರಕ್ಕೆ ಅನಾವಶ್ಯಕ ದೃಶ್ಯಗಳು ನುಸುಳದಂತೆ ಜಾಗ್ರತೆ ವಹಿಸಿದ್ದಾರೆ. ಆದರೂ ಋಷಿಕುಮಾರರ ಕುಡಿತದ ಗೀತೆ ಮೈಕಡಿತ ನೀಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಚಿತ್ರದ ಛಾಯಾಗ್ರಹಣ ಮತ್ತು ಸಂಗೀತ ಆಕರ್ಷಕ. ಅದರಲ್ಲೂ ರೀರೆಕಾರ್ಡಿಂಗ್ ಇಫೆಕ್ಟ್ ಗಳು ತುಂಬಾ ನೈಜತೆಯೊದಗಿಸಿವೆ. ಮುಖ ಕಾಣದೆ ಮಾತನಾಡುವ ಎಷ್ಟೋ ಗಂಡು ಹೆಣ್ಣುಗಳು ಒಂದಾಗಬೇಕೆಂದುಕೊಳ್ಳುವುದು ಈ ಮೊಬೈಲ್ ಯುಗದ ಸಹಜ ಬೆಳವಣಿಗೆ. ಆದರೆ ಅದೆಲ್ಲವನ್ನೂ ಮೀರಿ ಚಿತ್ರದಲ್ಲಿನ ನಾಯಕಿಗೆ ನಾಯಕನಲ್ಲಿನ ನಿಸ್ವಾರ್ಥ ಸಮಾಜ ಸೇವೆ ಪ್ರಮುಖ ಆಕರ್ಷಣೆಯಾಗುತ್ತದೆ. ಜೊತೆಗೆ ಮತ್ತೊಂದು ಮುಖ್ಯ ಅಂಶವಾಗಿ ತನಗಷ್ಟೇ ಸಂಬಂಧಿಸಿದ ವಿಚಾರವೊಂದು ಆತನಲ್ಲಿನ ಆತ್ಮೀಯತೆಯನ್ನು ಹೆಚ್ಚಿಸುತ್ತದೆ. ಅದು ಏನು ಎಂಬುದನ್ನು ಚಿತ್ರಮಂದಿರದಲ್ಲಿ ಕುಳಿತು ನೋಡುವುದೇ ಆನಂದ, ಆಹ್ಲಾದದಾಯಕ.
2014-10-31
- Jaggi Movie Review
ಜಗ್ಗಿ ಚಿತ್ರ ವಿಮರ್ಶೆ
ನಾಯಕ ಕಾಲೇಜು ಹುಡುಗ. ಆದರೆ ಕಾಲೇಜ್ ಸ್ಟೋರಿಯಲ್ಲ. ನಾಯಕನ ಗೆಳೆಯರಲ್ಲೊಬ್ಬನ ಊರಾದ ಮಡಿಕೇರಿಗೆ ಹೋದಾಗ ನಡೆಯುವ ಘಟನೆಯೇ ಚಿತ್ರದ ಕತೆ.ಜಗ್ಗಿ ಅಂದರೆ ಚಿತ್ರದ ಸಬ್ ಟೈಟಲ್ ಹೇಳುವಂತೆ ಒಬ್ಬ ಬಿಂದಾಸ್ ಲವ್ವರ್ ಬಾಯ್. ಸ್ನೇಹಕ್ಕೇ ಜೀವ ಕೊಡುತ್ತೇನೆ ಎಂದು ಹೇಳುತ್ತಾ ಸ್ನೇಹಿತನ ಅತ್ತಿಗೆಯಾಗುವವಳನ್ನೇ ಪ್ರೀತಿಸುತ್ತಾನೆ. ಆಕೆ ಒಪ್ಪದಿದ್ದರೂ ಒಪ್ಪಿಗೆಗಾಗಿ ಕಾಯುತ್ತಾನೆ. ಆದರೆ ತನ್ನ ನಿಶ್ಚಿತಾರ್ಥ ನಡೆದಿರುವುದು ಓರ್ವ ರೌಡಿಯೊಂದಿಗೆ ಎಂಬ ಅರಿವಾದ ಬಳಿಕ ಆಕೆ ಜಗ್ಗಿಯನ್ನು ಪ್ರೀತಿಸುತ್ತಾಳೆ. ಈ ವಿಚಾರವನ್ನು ಆಕೆಯ ಬಾಯಿಯಿಂದಲೇ ಅರಿತ ರೌಡಿ ಆಕೆಗೆ ಚೂರಿ ಹಾಕುತ್ತಾನೆ. ತನ್ನ ಅಣ್ಣನ ಬಾಳನ್ನು ಅಲ್ಲೋಲ ಕಲ್ಲೋಲ ಮಾಡಿದ ಜಗ್ಗಿಯನ್ನು ಆತನ ಸ್ನೇಹಿತನೇ ಶೂಟ್ ಮಾಡುತ್ತಾನೆ. ಅಲ್ಲಿಗೆ ಚಿತ್ರ ಮುಗಿಯುತ್ತದೆ. ಚಿತ್ರ ನೋಡುವಾಗ ಖುಷಿಯಾಗುವ ಎರಡು ಸಂಗತಿಗಳಲ್ಲಿ ಒಂದು ಚುರುಕಿನ ಸಂಭಾಷಣೆ ಇನ್ನೊಂದು ಮೆಲೊಡಿ ಡ್ಯೂಯೆಟ್ ಮತ್ತು ಅದರ ಕೊರಿಯಾಗ್ರಫಿ ಮಾತ್ರ. ಆದರೆ ಕೆಲವೊಂದೆಡೆ ಪಾತ್ರಕ್ಕೆ ಒಗ್ಗದ ಮಾತುಗಳು ಭೂತದ ಬಾಯಲ್ಲಿ ಭಗವದ್ಗೀತೆಯಂತೆ ಅನಿಸುವುದುಂಟು. ಐಟಂಗೆಂದೇ ಹಾಡನ್ನು ತುರುಕಲಾಗಿದೆ. ಅದಕ್ಕೆಂದೇ ನೀತು ಕುಣಿದಿದ್ದಾರೆ. ಆದರೆ ರಿಯಾಲಿಟಿ ಶೋನಿಂದಾಗಿ ನೀತು ಡಾನ್ಸ್ ನೋಡಲೆಂದೇ ಚಿತ್ರ ನೋಡುವವರಿಗೂ ಕೊರತೆಯಿಲ್ಲ. ಜಗ್ಗಿಯಾಗಿ ಸುನೀಲ್ ರಾಜ್ ನಟನೆಗಿಂತ ಕಂಠವೇ ನೆನಪಲ್ಲಿ ಉಳಿಯುತ್ತದೆ. ಖುದ್ದು ಮಾಡಿರುವ ಸಾಹಸಗಳು ಅಷ್ಟು ಸುದ್ದಿ ಮಾಡುವುದಿಲ್ಲ. ನಾಯಕಿ ಮುಂಬೈ ಬೆಡಗಿಯಾದರೂ ಚಿತ್ರದಲ್ಲಿನ ಗ್ಲಾಮರ್ ಮತ್ತು ನಟನೆ ಅಷ್ಟಕ್ಕಷ್ಟೇ. ಖಳನಾಗಿ ಮುನಿರಾಜುಗೆ ಇರುವ ಸ್ಕೋಪ್ ಶರತ್ ಲೋಹಿತಾಶ್ವಗೆ ಇಲ್ಲ. ಅಜ್ಜಿ ಅದವಾನಿ ಲಕ್ಷ್ಮೀದೇವಿಯನ್ನು ಬಹಳ ಕಾಲದ ನಂತರ ಚೆನ್ನಾಗಿ ತೋರಿಸಲಾಗಿದೆ. ಮನಸ್ಸಿಗೆ ನಾಟದ ಪ್ರೇಮಕತೆಗೆ ನೀಡಿರುವ ದುಃಖಾಂತ್ಯವೂ ಅಷ್ಟೇ ಅನಗತ್ಯವೆನಿಸುತ್ತದೆ. ಇಷ್ಟರ ಮೇಲೆ ಚಿತ್ರ ಯಾಕೆ ನೋಡಬೇಕೆಂಬುದನ್ನು ನೋಡುಗರೇ ತೀರ್ಮಾನಿಸಬೇಕು.
2014-10-31
- Upendra Sings for Krishna Leela
Real Star Upendra Sings a song starts from 'Phoneammangu Simmappangu' for the movie "Krishna Leela" starring Ajay Rao in the lead role and the music has been composed by Sridhar Sambhram.This is the first time that Upendra is singing in the music direction of Sridhar Sambhram. As we all know just a week after 'Power Star' Puneeth Rajkumar had sung a song for 'Krishna Leela'.
2014-10-29 · Kannada
- Fair and Lovely movie Success meet
ಫೇರ್ ಅ್ಯಂಡ್ ಲವ್ಲಿ ಸಂಭ್ರಮ
ಕಳೆದವಾರ ರಾಜ್ಯಾದ್ಯಂತ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ವಿಭಿನ್ನ ಚಿತ್ರ ಫೇರ್ ಅ್ಯಂಡ್ ಲವ್ಲಿ. ಚಿತ್ರತಂಡ ಮಂಗಳವಾರ ಪತ್ರಿಕಾಗೋಷ್ಠಿ ಕರೆದು ತಮ್ಮ ಸಂಭ್ರಮ ಹಂಚಿಕೊಂಡಿತು. ಅದಕ್ಕೆ ಕಾರಣವನ್ನು ಕೂಡ ಆರಂಭದಲ್ಲೇ ಚಿತ್ರದ ನಿರ್ಮಾಪಕರು ಹೇಳಿಕೊಂಡರು. ನಿರ್ಮಾಪಕಿ ಶಿಲ್ಪಾ ರಮೇಶ್ ರಮಣಿ ಮಾತನಾಡುತ್ತಾ ಚಿತ್ರಕ್ಕೆ ಮಾಧ್ಯಮದವರು ನೀಡಿದ ಪ್ರೋತ್ಸಾಹಕ್ಕೆ ಅಭಿನಂದನೆ ಹೇಳಲೆಂದು ಪತ್ರಿಕಾಗೋಷ್ಠಿ ಕರೆದಿರುವುದಾಗಿ ಹೇಳಿದರು. ಬಿಡುಗಡೆಯ ಮರುದಿನ ಜೋರು ಮಳೆಯಿದ್ದ ಕಾರಣ ಕಲೆಕ್ಷನ್ ಕಡಿಮೆಯಿತ್ತು. ಆದರೆ ಶುಕ್ರವಾರ ಮತ್ತು ಸೋಮವಾರದ ಕಲೆಕ್ಷನ್ ಒಳ್ಳೆಯ ರೀತಿಯಲ್ಲಿ ಮುಂದುವರಿದಿದೆ. ಅದಕ್ಕಾಗಿ ಖುಷಿಯಾಗಿದೆ ಎಂದರು. ಚಿತ್ರದ ನಾಯಕ ಲವ್ಲಿಸ್ಟಾರ್ ಪ್ರೇಮ್ ಕೂಡ ಮಾಧ್ಯಮದ ಮೆಚ್ಚುಗೆ ನುಡಿಗೆ ಕೃತಜ್ಞತೆ ಹೇಳಿದರು. ಚಿತ್ರವನ್ನು ಒಮ್ಮೆ ಒಪ್ಪಿಕೊಂಡ ಮೇಲೆ ಅವರೊಳಗೆ ಕಾಡಿದ್ದ ಅಂಜಿಕೆಗೆ ಈಗ ತೆರೆ ಬಿದ್ದಿದೆ ಎಂದು ಸಮಾಧಾನಗೊಂಡಿರುವುದನ್ನು ತಿಳಿಸಿದರು. ನಾಯಕಿ ಶ್ವೇತಾ ಶ್ರೀವಾತ್ಸವ್ ಕೂಡ ಖುಷಿಯ ಮಾತುಗಳನ್ನಾಡುತ್ತಾ ಚಿತ್ರ ಈ ಮಟ್ಟದಲ್ಲಿ ಸುದ್ದಿ ಮಾಡುತ್ತಿರುವುದು ನಿಜಕ್ಕೂ ಉತ್ಸಾಹ ತಂದಿದೆ. ಖುಷಿಯಿಂದ ಏನು ಮಾತನಾಡಬೇಕೆಂದೇ ಅರ್ಥವಾಗುತ್ತಿಲ್ಲ ಎಂದರು. ಆದರೆ ಅವಕಾಶ ಕೊಟ್ಟ ನಿರ್ಮಾಪಕಿಗೆ ವಂದನೆ ಹೇಳುವುದನ್ನು ಮತ್ತು ಪ್ರೇಮ್ ರಿಯಲ್ ಹೀರೋನಂತೆ ನಟಿಸಿದ್ದಾರೆಂದು ಹೇಳುವುದನ್ನು ಶ್ವೇತಾ ಮರೆಯಲಿಲ್ಲ. 'ಕತೆಯನ್ನು ನಿರ್ದೇಶಕರಿಗೆ ಕೊಡ್ಬೇಕಾದ್ರೆ ಇದು ನನ್ನ ಮಗುವಿದ್ದ ಹಾಗೆ ಎಂದು ಭಾವನಾತ್ಮಕವಾಗಿ ಹೇಳಿದ್ದೆ. ಇಂದು ಆ ಮಗುವಿಗೆ ಅವರ ಮೂಲಕ ಒಳ್ಳೆಯ ಹೆಸರು ಬಂದಿದೆಯೆಂಬ ತೃಪ್ತಿ ನನಗೆ ಮೂಡಿದೆ' ಎಂಬ ಆತ್ಮತೃಪ್ತಿಯ ಮಾತುಗಳು ಕತೆಗಾರ ಯತಿರಾಜ್ ರದ್ದಾಗಿತ್ತು. ಅದೇ ರೀತಿ ಸಂಭಾಷಣೆಗೆ ಒಳ್ಳೆಯ ಪ್ರತಿಕ್ರಿಯೆ ಬರುತ್ತಿರುವುದನ್ನು ಕಂಡು ಖುಷಿಯಾಗಿದೆ ಎಂದರು ಚಿತ್ರದ ಸಂಭಾಷಣೆಕಾರ ಆನಂದಪ್ರಿಯ. ಬಳಿಕ ಮಾತನಾಡಿದ ನಿರ್ದೇಶಕ ರಘು 'ಚಿತ್ರಕ್ಕೆ ಮಾಧ್ಯಮ ವಲಯದಿಂದ ನೀಡಿರುವ ಪ್ರೋತ್ಸಾಹಕ್ಕೆ ವಂದನೆಗಳನ್ನು ಹೇಳಿದರು. ಚಿತ್ರವು ಬಂಗಾಳಿ, ತಮಿಳು ಮತ್ತು ಮಲಯಾಳಂಗೆ ಡಬ್ ಆಗುತ್ತಿದೆ. ತೆಲುಗಿನಲ್ಲಿ ಇದೇ ನಿರ್ಮಾಪಕರೇ ಚಿತ್ರವನ್ನು ರಿಮೇಕ್ ಮಾಡುವ ಯೋಜನೆಯಲ್ಲಿದ್ದಾರೆ ಎಂದರು. ಛಾಯಾಗ್ರಾಹಕ ಜಗದೀಶ್ ವಾಲಿ ಕೂಡ ಪತ್ತಿಕಾಗೋಷ್ಠಿಯಲ್ಲಿ ಪಾಲ್ಗೊಂಡು ತಮ್ಮ ಸಂಭ್ರಮವನ್ನು ಹಂಚಿಕೊಂಡರು.
2014-10-28 · Kannada
- Ee Dil Helide Nee Bekantha Releasing on 31st Oct
"ಈ ದಿಲ್..." ಈ ವಾರ ತೆರೆಗೆ
'ಈ ದಿಲ್ ಹೇಳಿದೆ ನೀ ಬೇಕಂತ' ಎಂಬ ಹೆಸರನ್ನು ಚಿತ್ರಕ್ಕೆ ಇರಿಸಿಕೊಂಡು ಅದರ ಹೆಸರು ಹೇಳುವ ಮೂಲಕವೇ ನೂರಾರು ಪ್ರೇಮಿಗಳು ಬಾಯ್ಬಿಟ್ಟು ತಮ್ಮ ಪ್ರೇಮಾಭಿಲಾಷೆಯನ್ನು ಪ್ರೇಯಸಿಯಲ್ಲಿ ಹೇಳಲು ಅವಕಾಶ ಕಲ್ಪಿಸಿದ ಚಿತ್ರತಂಡ ಚಿತ್ರವನ್ನು ತೆರೆಗೆ ತರುವ ವಿಚಾರದಲ್ಲಿ ತಾವೇ ದಿಲ್ ಮೇಲೆ ಕೈಯ್ಯಿಟ್ಟುಕೊಂಡು ಕಾದಿದ್ದಾರೆ. ಹೆಚ್ಚು ಕಡಿಮೆ ಚಿತ್ರತಂಡದಮಂದಿಯೆಲ್ಲಾ ಹೊಸಬರಿರುವುದು ಇದಕ್ಕೆ ಕಾರಣವಾದರೂ ಒಂದು ಒಳ್ಳೆಯ ಪ್ರೊಡಕ್ಟನ್ನು ತೆರೆಗರ್ಪಿಸುತ್ತಿರುವ ಆತ್ಮ ಸಂತೃಪ್ತಿಯನ್ನು ಅವರಲ್ಲಿ ಕಾಣಬಹುದಿತ್ತು. ನಿರ್ದೇಶಕ ಕೆಟಿಮ್ ಶ್ರೀನಿವಾಸ್ ಮಾತನಾಡಿ 'ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಚಿಕ್ಕ ಮಗಳೂರಿನ ಗಿರಿ ಎಂಬ ಸಾವಿರಾರು ಅಡಿ ಎತ್ತರದ ಜಾಗದಲ್ಲಿ ಚಿತ್ರೀಕರಣ ಮಾಡಿದ್ದೇವೆ. ಚಿತ್ರ ನೋಡಿದವರೆಲ್ಲರೂ ಇದೊಂದು ಸದಭಿರುಚಿಯ ಚಿತ್ರವೆನ್ನುವುದರಲ್ಲಿ ಸಂದೇಹವಿಲ್ಲ; ಆದರೆ ಬಿಡುಗಡೆಯ ದಿನಾಂಕ ಹತ್ತಿರವಾಗುತ್ತಿರುವುದು ಮೊದಲ ಪ್ರಸವದ ಆತಂಕ ತಂದಿದೆ' ಎಂದು ಅವರು ಹೇಳಿದರು. ಚಿತ್ರದ ನಾಯಕ ಜುಗಾರಿ ಅವಿನಾಶ್ ಮಾತನಾಡಿ 'ತಮಗೆ ಈ ಚಿತ್ರದ ಬಗ್ಗೆ ಈ ಹಿಂದಿನ ಎಲ್ಲ ಚಿತ್ರಗಳಿಗಿಂತ ಹೆಚ್ಚಿನ ಭರವಸೆಯಿದೆ ಎಂದರು. ಚಿತ್ರದಲ್ಲಿ ಐದು ಹಾಡುಗಳಿದ್ದು ಶ್ರೇಯಾ ಗೊಷಾಲ್, ಟಿಪ್ಪು ಮೊದಲಾದವರು ಮೂರು ಗೀತೆಗಳಿಗೆ ದನಿಯಾಗಿದ್ದು, ಎರಡು ಹಾಡುಗಳ ಮೂಲಕ ಹೊಸಬರಿಗೂ ಅವಕಾಶ ನೀಡಲಾಗಿದೆಯೆಂದು ಸಂಗೀತ ನಿರ್ದೇಶಕ ಸತೀಶ್ ಆರ್ಯನ್ ತಿಳಿಸಿದರು. ಐದು ಹಾಡುಗಳಿಗೂ ಸಾಹಿತ್ಯ ಬರೆದಿರುವ ಚಿತ್ರದ ನಿರ್ಮಾಪಕ ಶ್ರೀಧರ್ ಮಾತನಾಡಿ 'ಚಿತ್ರಕ್ಕೆ ಒಟ್ಟು ಎರಡು ಕೋಟಿಯಷ್ಟು ಖರ್ಚಾಗಿದೆ. ದುಡ್ಡು ಮಾಡುವ ಉದ್ದೇಶದಿಂದ ಚಿತ್ರ ತೆಗೆದಿಲ್ಲ. 25,000 ಆಡಿಯೋ ಮಾರಾಟವಾಗಿ ಬಂದ ದುಡ್ಡಿಗೆ ಇನ್ನಷ್ಟು ಹಾಕಿ ಅದರ ಸಂಭ್ರಮಾಚರಣೆಯನ್ನೂ ಮಾಡಿದ್ದೇವೆ. ಚಿತ್ರವನ್ನು 65ರಿಂದ 70 ಚಿತ್ರ ಮಂದಿರಗಳಲ್ಲಿ ಬಿಡುಗಡೆಗೊಳಿಸುವ ಯೋಜನೆ ಹಾಕಿದ್ದು, ಇದೇ 31ಕ್ಕೆ ತೆರೆಕಾಣಲಿರುವುದಾಗಿ ಹೇಳಿದರು. ಚಿತ್ರದ ಮತ್ತೋರ್ವ ನಿರ್ಮಾಪಕ ಪ್ರಭಾಕರ್ ಉಪಸ್ಥಿತರಿದ್ದು ಚಿತ್ರದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದರು. ನಾಯಕಿ ಶ್ರೀಶೃತಿ ಪತ್ರಿಕಾಗೋಷ್ಠಿಗೆ ಹಾಜರಿರಲಿಲ್ಲ.
2014-10-27 · Kannada
- New member to S Narayana's family
ಮಾವನಾಗುತ್ತಿರುವ ಎಸ್. ನಾರಾಯಣ್!
ಎಸ್ ನಾರಾಯಣ್ ಹೆಣ್ಣು ಕೊಡುವ ತಂದೆಯಾಗಲು ತಯಾರಾಗಿದ್ದಾರೆ. ಇದು ಅವರ ಯಾವುದೇ ಹೊಸ ಚಿತ್ರದ ವಿಚಾರವಲ್ಲ. ಬದಲಿಗೆ ನಿಜ ಜೀವನದಲ್ಲಿ ಕನ್ಯಾದಾನ ಮಾಡಲು ಮುಂದಾಗಿದ್ದಾರೆಂಬ ಸಂಭ್ರಮದ ಸಮಾಚಾರ. ನಿರ್ದೇಶಕ ನಾರಾಯಣ್ ರ ಮಕ್ಕಳಲ್ಲಿ ವಿದ್ಯಾ ಹಿರಿಯವಳು. ಈಗಾಗಲೇ ನಾಯಕ ನಟನಾಗಿ ಕನ್ನಡಿಗರಿಗೆ ಪರಿಚಿತನಾಗಿರುವ ಪಂಕಜ್ ಈಕೆಯ ನೇರ ತಮ್ಮ. ಇನ್ನು ಈತನಿಗೂ ಒಬ್ಬ ತಮ್ಮನಿದ್ದಾನೆ. ಮೂವರು ಮಕ್ಕಳಲ್ಲಿ ಹಿರಿಯಳೆನಿಸಿದ ವಿದ್ಯಾ ವೈವಾಹಿಕ ಬದುಕಿಗೆ ತಯಾರಾಗಿದ್ದಾರೆ. ವರ ಶ್ರೀನಿವಾಸ ದೊಡ್ಡ ಕುಟುಂಬದ ಹುಡುಗನಾಗಿದ್ದು, ವಿದ್ಯಾಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ. ಬೆಂಗಳೂರಿನ ಖ್ಯಾತ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಎಂ.ಎ ಮುಗಿಸಿದ್ದ ವಿದ್ಯಾರ ನಿಶ್ಚಿತಾರ್ಥ ಸಮಾರಂಭ ಇದೇ ಗುರುವಾರ ಅದ್ಧೂರಿಯಾಗಿ ನೆರವೇರಲಿದೆ. ಕುಟುಂಬದೊಳಗೆ ಇದುವೇ ದೊಡ್ಡ ಮಟ್ಟದ ಪ್ರಥಮ ಸಮಾರಂಭ ಎಂದಿರುವ ನಾರಾಯಣ್ ಅಷ್ಟೇ ಖುಷಿಯಲ್ಲಿ ಸಂಭ್ರಮಿಸುತ್ತಿದ್ದಾರೆ. ಈಗಾಗಲೇ ತಮ್ಮ ಹಲವಾರು ಚಿತ್ರಗಳಲ್ಲಿ ಮದುವೆ ಸಮಾರಂಭಗಳನ್ನು ಆಕರ್ಷಕವಾಗಿ ತೋರಿಸಿರುವ ಎಸ್. ನಾರಾಯಣ್ ಶಿಸ್ತು ಬದ್ಧ ಕಾರ್ಯಕ್ರಮ ನಿರ್ವಹಣೆಗೆ ಮತ್ತೊಂದು ಹೆಸರು. ಒಟ್ಟು ಚಿತ್ರರಂಗದ ಎಲ್ಲ ಮಿತ್ರರನ್ನು ಆಹ್ವಾನಿಸಿರುವ ಎಸ್.ನಾರಾಯಣ್ ಮಗಳ ನಿಶ್ಚಿತಾರ್ಥ ಲೆ ಮೆರಿಡಿಯನ್ ಹೋಟೆಲ್ ನಲ್ಲಿ ನಭೂತೋ ರೀತಿಯಲ್ಲಿ ನಡೆಯುವ ಎಲ್ಲ ನಿರೀಕ್ಷೆಗಳಿವೆ. ನೂತನ ಜೋಡಿ ಮತ್ತು ಕುಟುಂಬಕ್ಕೆ ಶುಭಾಶಯಗಳು.
2014-10-27 · Kannada
- Roopa nataraj 7 film muhurtha
ರೂಪಾ ನಟರಾಜ್ ರ 7 ಚಿತ್ರದ ಮುಹೂರ್ತ
ರೂಪಾ ನಟರಾಜ್ ರ 7 ಚಿತ್ರದ ಮುಹೂರ್ತ ನಿರ್ದೇಶಕ ಚಂದ್ರಶೇಖರ್ ಶ್ರೀವತ್ಸ ನೆನಪಿರಬಹುದು. ಪಟ್ರೆ ಲವ್ಸ್ ಪದ್ಮ ಮತ್ತು ಕಾಲಾಯ ತಸ್ಮೈ ನಮಃ ಚಿತ್ರಗಳ ಮೂಲಕ ಸುದ್ದಿಯಾದವರು. ಅವರು ಇದೀಗ ಹೊಸದೊಂದು ಚಿತ್ರವನ್ನು ನಿರ್ದೇಶಿಸಲು ಹೊರಟಿದ್ದಾರೆ. ಅಂದಹಾಗೆ ನಿರ್ದೇಶನದ ಜೊತೆಗೆ ಚಿತ್ರದಲ್ಲಿ ನಾಯಕನಾಗಿಯೂ ಕಾಣಿಸಿಕೊಳ್ಳುತ್ತಿರುವ ಚಂದ್ರಶೇಖರ್ ರ ಚಿತ್ರದ ಹೆಸರು 7. ಕಂಠೀರವ ಸ್ಟುಡಿಯೋದಲ್ಲಿ ನಡೆದ ಮುಹೂರ್ತದ ವೇಳೆ ಸುರಿದ ಭಾರೀ ಮಳೆಯಿಂದಾಗಿ ಪತ್ರಿಕಾಗೋಷ್ಠಿ ಕತ್ತಲೆಯಲ್ಲೇ ನಡೆದಿದ್ದು ವಿಶೇಷ. ಏಳು ಎಂಬುದಕ್ಕೆ ಹಲವಾರು ವಿಶೇಷತೆಗಳಿವೆ. ಅದರಲ್ಲಿ ಒಳ್ಳೆಯದನ್ನು ಹೇಳುವುದರ ಜೊತೆಗೆ ಕೆಟ್ಟದ್ದನ್ನೂ ಹೇಳುತ್ತಾರೆ. ನಾವು ಒಳ್ಳೆಯದನ್ನು ಹೇಳಲಿದ್ದೇವೆ ಎಂದರು ಚಂದ್ರಶೇಖರ್. ಚಂದ್ರಶೇಖರ್ ನಾಯಕನಾದಾಗ ಆಕೆಗೆ ಜೋಡಿಯಾಗಿರುವವರು ಖ್ಯಾತ ಯುವನಟಿ ರೂಪಾ ನಟರಾಜ್. ಯಂಗ್ ಅ್ಯಂಡ್ ಎನರ್ಜೆಟಿಕ್ ಹುಡುಗಿಯೊಬ್ಬಳು ಮನಸ್ಸು ಮಾಡಿದರೆ ಒಬ್ಬನನ್ನು ಯಾವ ಮಟ್ಟಕ್ಕೆ ಮೋಸ ಮಾಡಬಹುದು ಎಂಬುದನ್ನು ತೋರಿಸುವುದೇ ತಮ್ಮ ಪಾತ್ರದ ವಿಶೇಷತೆ ಎಂದರು ರೂಪಾ. ಅಂದಹಾಗೆ ಚಿತ್ರಕ್ಕೆ ನಾಯಕಿಯಾದರೂ ಕತೆಯಲ್ಲಿ ತಮ್ಮದು ಖಳನಾಯಕಿಯ ಪಾತ್ರ ಎಂಬುದನ್ನು ಅವರು ಒಪ್ಪಿಕೊಳ್ಳುತ್ತಾರೆ. ಬಳಿಕ ಮಾತನಾಡಿದ ಸಂಗೀತ ನಿರ್ದೇಶಕ ನೀಲ್ ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಜಾನಪದಕ್ಕೆ ಫ್ಯೂಷನ್ ಮಿಕ್ಸ್ ಮಾಡಿ ಮತ್ತೊಂದು ರೀತಿಯ ಸಂಗೀತ ವೈವಿಧ್ಯವನ್ನು ತೋರಿಸಲು ಯತ್ನಿಸಿದ್ದೇವೆ. ಹಿನ್ನೆಲೆಯಲ್ಲಿ ಚಂದನ್ ಶೆಟ್ಟಿ, ಚೇತನ್, ಫಯಾಜ್ ಖಾನ್ ಮೊದಲಾದವರ ತಂಡವಿದೆ ಎಂದರು. ಚಿತ್ರವನ್ನು ಬೆಂಗಳೂರು, ಊಟಿ, ಮೈಸೂರು, ಕೆಜಿಎಫ್ ಮೊದಲಾದೆಡೆಗಳಲ್ಲಿ ಚಿತ್ರೀಕರಿಸಲಾಗುವುದಂತೆ. ನಿರ್ಮಾಪಕ ಲಕ್ಷ್ಮೀಶ ತಾವು ಇದು ನಿರ್ಮಾಣರಂಗದಲ್ಲಿ ಪ್ರಥಮ ಪ್ರಯತ್ನ ಮಾಡುತ್ತಿರುವುದಾದರೂ ಚಿತ್ರರಂಗದಲ್ಲೊಂದು ಒಳ್ಳೆಯ ಚಿತ್ರ ನೀಡುವ ಉದ್ದೇಶ, ಭರವಸೆ ಇರುವುದಾಗಿ ಹೇಳಿದರು. ಚಿತ್ರದ ಛಾಯಾಗ್ರಾಹಕ ಶಂಕರ್ ಪತ್ರಿಕಗೋಷ್ಠಿಯಲ್ಲಿದ್ದರು. ಅಂದಹಾಗೆ ಚಿತ್ರವನ್ನು ಮುಂದಿನ ವರ್ಷ ಫೆಬ್ರವರಿ 13ಕ್ಕೆ ಬಿಡುಗಡೆಗೊಳಿಸಲು ನಿರ್ದೇಶಕರು ಯೋಜನೆ ಹಾಕಿದ್ದಾರೆ.
2014-10-27 · Kannada
- gulihatti trailer launched
ಗೂಳಿ ಹಟ್ಟಿ ಚಿತ್ರದ ಬಗೆಗಿನ ಕೈಪಿಡಿ ಬಿಡುಗಡೆ
ಗೂಳಿ ಹಟ್ಟಿ ಚಿತ್ರದ ಬಗೆಗಿನ ಕೈಪಿಡಿ ಬಿಡುಗಡೆ ನವ ನಿರ್ದೇಶಕ ಶಶಾಂಕ್ ರಾಜ್ ನಿರ್ದೇಶಿಸುತ್ತಿರುವ ಗೂಳಿಹಟ್ಟಿ ಚಿತ್ರದ ವಿಶೇಷತೆಗಳ ಬಗ್ಗೆ ಕೈಪಿಡಿಯೊಂದನ್ನು ಬಿಡುಗಡೆಗೊಳಿಸಲಾಗಿದೆ. ರೇಣುಕಾಂಬ ಸ್ಟುಡಿಯೋನಲ್ಲಿ ನಡೆದ ಸಮಾರಂಭದಲ್ಲಿ ಚಿತ್ರದ ಟ್ರೇಲರ್ ಬಿಡುಗಡೆಯನ್ನೂ ಮಾಡಲಾಯಿತು. ನಿರ್ದೇಶಕ ಶಶಾಂಕ್ ರಾಜ್ ಈಶ್ವರಿ ನಿರ್ಮಾಣ ಸಂಸ್ಥೆಯೊಂದಿಗೆ ಕಳೆದ 12 ವರ್ಷಗಳಿಂದ ಗುರುತಿಸಿಕೊಂಡಿದ್ದವರು. ಇದೀಗ ಪ್ರಥಮ ಬಾರಿ ಚಿತ್ರವೊಂದನ್ನು ನಿರ್ದೇಶಿಸಲು ಮುಂದೆ ಬಂದಿದ್ದಾರೆ. ಇದರಲ್ಲಿ ಋಷಿ ಕುಮಾರ ಸ್ವಾಮೀಜಿ ನಟಿಸಿರುವ ಹಾಡು ಚಿತ್ರದ ಹೈಲೈಟ್ ಅಂಶಗಳಲ್ಲೊಂದು ಎಂಬುದು ಅವರು ಸಮಾರಂಭದಲ್ಲಿ ಹಂಚಿಕೊಂಡ ಪ್ರಮುಖ ವಿಚಾರ. ಸಂಗೀತ ನಿರ್ದೇಶಕ ಶ್ರೀಮಂಜು ಮಾತನಾಡುತ್ತಾ ಚಿತ್ರಕ್ಕಾಗಿ ತಾವು ಸಂಗೀತ ನೀಡಿದ ದುಃಖ ಗೀತೆಯೊಂದನ್ನು ಹಾಡಲು ಬಂದ ವಿಜಯಪ್ರಕಾಶ್ ಇದನ್ನು ಡಾ.ರಾಜಕುಮಾರ್ ಹಾಡಿದ್ದರೆ ತುಂಬ ಚೆನ್ನಾಗಿರುತ್ತಿತ್ತು ಎಂದಿರುವುದನ್ನು ಹೆಮ್ಮೆಯಿಂದ ಹೇಳಿಕೊಂಡರು. ಋಷಿಕುಮಾರ ಸ್ವಾಮೀಜಿ ತನಗೆ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ಹಾಗೆ ಪರಕಾಯ ಪ್ರವೇಶ ಮಾಡುವಂಥ ಅನುಭವವಾಯಿತೆಂದರು!ನಾಯಕರಾದ ಪವನ್ ಸೂರ್ಯಗೆ ಇದು ಪ್ರಥಮಚಿತ್ರ. ಅವರ ಜೊತೆ ಸಮಾನ ಪಾತ್ರಗಳಲ್ಲಿ ನಟಿಸುತ್ತಿರುವರು ಅಪ್ಪು ವೆಂಕಟೇಶ್, ರಾಘವ್ ನಾಗರಾಜ್ , ಅರುಣ್ ಭಗತ್ ಮತ್ತು ಇಂಡಿಯನ್ ಖ್ಯಾತಿಯ ಮಹೇಶ್. ನಾಯಕಿ ತೇಜಸ್ವಿನಿ ಮಾತನಾಡಿ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಇನ್ನು ಎಲ್ಲವೂ ವೀಕ್ಷಕರ ಕೈಯ್ಯಲ್ಲಿದೆ ಎಂದರು. ನಟ ಮೈಕೋ ನಾಗರಾಜ್, ಗಾಯಕ ಅವಿನಾಶ್ ಚಬ್ಭಿ, ರವೀಂದ್ರ ಸೂರ್ಗಾವಿ, ನಿರ್ನಾಪಕ ಕಿರಣ್ ಭಾರ್ಗವ್ ಉಪಸ್ಥಿತರಿದ್ದು ಮಾತನಾಡಿದರು. ಚಿತ್ರದಲ್ಲಿ ರಂಗಾಯಣ ರಘು, ದೊಡ್ಡಣ್ಣ, ಅವಿನಾಶ್, ಹೊನ್ನವಳ್ಳಿ ಕೃಷ್ಣ, ಶರತ್ ಲೋಹಿತಾಶ್ವ, ಆದಿ ಲೋಕೇಶ್, ಸ್ವಯಂವರ ಚಂದ್ರು, ಶರತ್ ಚಂದ್ರ, ಸುಧಾ ಬೆಳವಾಡಿ, ಎಂಎನ್ ಲಕ್ಷ್ಮೀದೇವಿ ಮೊದಲಾದ ಹಿರಿಯ ಕಲಾವಿದರ ತಂಡವೇ ಇರುವುದು ವಿಶೇಷ. ಉತ್ತರಕರ್ನಾಟಕದ ಮೈಲಾರ ಲಿಂಗೇಶ್ವರ ಸ್ವಾಮಿ ದೇವಾಲಯದ ಪರಿಸರದಲ್ಲಿ ಜಾತ್ರೆಗೆಂದು ನೆರೆದ 20ಲಕ್ಷಕ್ಕೂ ಅಧಿಕ ಮಂದಿಯನ್ನು ಹೆಲಿಕ್ಯಾಮ್ ಮೂಲಕ ಚಿತ್ರೀಕರಿಸಿ ಕನ್ನಡ ಚಿತ್ರರಂಗದಲ್ಲಿ ದಾಖಲೆ ಬರೆಯಲಾಗಿದ್ದು ಹಲವಾರು ಕಾರಣಗಳಿಂದಾಗಿ ಚಿತ್ರ ನಿರೀಕ್ಷೆ ಮೂಡಿಸಿರುವುದಂತೂ ವಾಸ್ತವ. ಗೂಳಿಹಟ್ಟಿ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ನಟಿ ಮಮತಾ ರಾವತ್ ಮತ್ತು ನಟ ಅರುಣ್ ಕಾರ್ಯಕ್ರಮ ನಿರೂಪಿಸಿದರು.
2014-10-27 · Kannada
- Prem launches mamu tea angadi trailer
ಪ್ರೇಮ್ ನಿಂದ ಮಾಮು ಟೀ ಅಂಗಡಿ ಟ್ರೇಲರ್ ಬಿಡುಗಡೆ
ಪ್ರೇಮ್ ನಿಂದ ಮಾಮು ಟೀ ಅಂಗಡಿ ಟ್ರೇಲರ್ ಬಿಡುಗಡೆ ಕೊನೆಗೂ ಮಾಮು ಟೀ ಅಂಗಡಿ ಬಿಡುಗಡೆಯ ಹಂತ ತಲುಪಿದೆ. ಅದರ ಪೂರ್ವಭಾವಿಯಾಗಿ ಮಲ್ಲೇಶ್ವರಂನ ರೇಣುಕಾಂಬ ಸ್ಟುಡಿಯೋನಲ್ಲಿ ಮಾಧ್ಯಮದ ಮುಂದೆ ಚಿತ್ರದ ಟ್ರೇಲರ್ ಮತ್ತು ಹಾಡುಗಳನ್ನು ಪ್ರದರ್ಶಿಸಲಾಯಿತು. ನಿರ್ದೇಶಕ ಪರಮೇಶ್ ಈ ಸಂದರ್ಭದಲ್ಲಿ ಚಿತ್ರದ ಬಗ್ಗೆ ಮಾತನಾಡುತ್ತಾ 'ನಾನೊಂದು ಚಿತ್ರವನ್ನು ನಿರ್ದೇಶಿಸಲು ಮುಂದೆ ಬಂದಾಗ ಮಿತ್ರ ನೆನಪಿರಲಿ ಪ್ರೇಮ್ ನೀಡಿರುವ ಸಹಕಾರ ದೊಡ್ಡದು. ಆತ ನೆನಪಿರಲಿ ಚಿತ್ರದಲ್ಲಿ ನಟಿಸುವುದಕ್ಕೂ ಮುನ್ನವೇ ನನಗೆ ಸ್ನೇಹಿತ. ಇದೀಗ ನಮ್ಮ ಚಿತ್ರ ಪೂರ್ಣಗೊಳ್ಳುತ್ತಿರುವ ಹೊತ್ತಿನಲ್ಲಿಯೂ ನಮ್ಮ ಜೊತೆಗಿದ್ದು ಸಹಕರಿಸಿರುವುದು ಖಷಿ ತಂದಿದೆ ಎಂದರು. ಅವರ ನಮ್ಮ ಸ್ನೇಹದಲ್ಲಿ ನಡೆದ ಘಟನೆಗಳು ಸೇರಿದಂತೆ ಹಿಂದೆ ಪ್ರೇಮ್ ನಡೆಸಿದ ತುಂಟಾಟಗಳಿಂದ ಸ್ಪೂರ್ತಿಗೊಂಡ ದೃಶ್ಯಗಳು ಚಿತ್ರದಲ್ಲಿವೆ ಎಂದರು ಪರಮೇಶ್. ಟ್ರೇಲರ್ ಪ್ರದರ್ಶಿಸುವ ಮುನ್ನ ಮಾತನಾಡಿದ ಲವ್ಲಿಸ್ಟಾರ್ ಪ್ರೇಮ್ 'ನನಗೆ ಸ್ನೇಹಿತನಾಗಿ ಪರಮೇಶ್ ತುಂಬಾ ಆತ್ಮೀಯ. ಸಿನೆಮಾರಂಗಕ್ಕೆ ಬರುವ ಮುನ್ನ ಜೊತೆಯಾಗಿ ಸೈಕಲ್ ಹೊಡೆದ ಗೆಳೆಯರು ನಾವು. ದಿನದ ಖರ್ಚಿಗೆ ಕಷ್ಟಪಡುತ್ತಿದ್ದ ದಿನಗಳಲ್ಲಿ ಪರಮೇಶ್ ನ ಸೀಡಿ ಅಂಗಡಿಯಲ್ಲಿ ಕೆಲಸಕ್ಕಿದ್ದೆ. ಅಂಥ ಋಣದ ದಿನಗಳನ್ನು ಮರೆಯಲಾಗದು. ನನ್ನ ಮಗ ಏಕಾಂತ್ ನನ್ನು ಈಗಲೇ ಚಿತ್ರರಂಗಕ್ಕೆ ಕರೆತರುವ ಯೋಜನೆ ನನ್ನದಾಗಿರಲಿಲ್ಲ. ಆದರೆ ಪರಮೇಶ್ ಆತನನ್ನು ಬಾಲನಟನಾಗಿ ಪರಿಚಯಿಸಿದ ಕೀರ್ತಿ ಎಂದಿಗೂ ಗೆಳೆಯನದ್ದಾಗಿರುತ್ತದೆ' ಎಂದು ಪರಮೇಶ್ ನತ್ತ ನೋಡಿದರು ಪ್ರೇಮ್. ಅತಿಥಿಯಾಗಿ ಆಗಮಿಸಿದ ನಿರ್ಮಾಪಕ ಎನ್ ಎಂ ಸುರೇಶ್ ಪರದೆಯ ಮೇಲೆಯೂ ಕಾಣಿಸಿದ್ದಾರಂತೆ. ಮಾಮು ಟೀ ಅಂಗಡಿ ಚಿತ್ರ ಮೋದಿ ಟೀ ಅಂಗಡಿಯಂತೆ ಜನಪ್ರಿಯಗೊಳ್ಳಲಿ ಎಂದು ಅವರು ಹೇಳಿದರು. ನಾಯಕಿಯರಾದ ಅರ್ಚನಾ ತನಗಿದು ಮೊದಲ ಚಿತ್ರ ಎಂದರೆ, ಇನ್ನೋರ್ವ ನಾಯಕಿ ಸಂಗೀತಾ ಇದು ನಾನು ಮೊದಲು ಆರಂಭಿಸಿದ ಚಿತ್ರ.ಇದರಲ್ಲಿ ನನ್ನದು ಸಂಪ್ರದಾಯಸ್ಥ ಹುಡುಗಿಯ ಪಾತ್ರ ಎಂದರು. ಚಿತ್ರದಲ್ಲಿ ಅಜೇಯ ರಾವ್, ಶ್ರೀನಗರ ಕಿಟ್ಟಿ, ಪ್ರೇಮ್ ಮೊದಲಾದವರು ನಟಿಸಿದ್ದು ಮಾತ್ರವಲ್ಲ ಲೂಸ್ ಮಾದ ಯೋಗಿಯೊಂದಿಗೆ ಸೇರಿ ಹಾಡುಗಳನ್ನೂ ಹಾಡಿರುವುದು ವಿಶೇಷ. ಚಿತ್ರದ ನಾಯಕರಾದ ವರುಣ್ ತನಗೆ ಡ್ಯಾನ್ಸರ್ ನಿಂದ ಆ್ಯಕ್ಟರ್ ಆಗಲು ಕಾರಣವಾದ ನಿರ್ದೇಶಕ ಪರಮೇಶ್ ಗೆ ವಂದನೆ ಹೇಳಿದರು. ಉಳಿದ ನಾಯಕರಾದ ಅಭಿಷೇಕ್ , ರಿತೇಶ್, ಮಹೇಶ್ ರಾಜ್ ಕೂಡ ಚಿತ್ರವನ್ನು ನೋಡುವಂತೆ ವಿಂತಿಸಿದರು. ಭಾವಿಷ್ ಭಫ್ನ, ನೃತ್ಯ ನಿರ್ದೇಶಕರುಗಳಾದ ಮಂಜು ಮಾಸ್ಟರ್, ನಾಗರಾಜ್ , ಹಿನ್ನೆಲೆ ಸಂಗೀತ ನೀಡಿರುವ ಸತೀಶ್ ಮೊದಲಾದವರು ಪ್ರತಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
2014-10-27 · Kannada
- Ravichandran's new movie - Love you aliya
"ಲವ್ ಯು ಆಲಿಯಾ" ರವಿಚಂದ್ರನ್ ರ ಹೊಸ ಚಿತ್ರ
"ಲವ್ ಯು ಆಲಿಯಾ" ರವಿಚಂದ್ರನ್ ರ ಹೊಸ ಚಿತ್ರ 'ಆಲ್ ರೌಂಡರ್ ಎಂಬ ಪತ್ರಿಕೆಯನ್ನು ಆರಂಭಿಸುವಾಗ ಅದನ್ನು ಕನ್ನಡ ಚಿತ್ರರಂಗದ ಆಲ್ ರೌಂಡರ್ ವಿ.ರವಿಚಂದ್ರನ್ ಬಿಡುಗಡೆಗೊಳಿಸಿದರೆ ಚೆನ್ನಾಗಿರುತ್ತದೆ ಎಂದುಕೊಂಡದ್ದು ನಮ್ಮಪ್ಪ ಲಂಕೇಶ್. ಅವರು ಆಹ್ವಾನಿಸಿದ ಕೂಡಲೇ ಬಂದು ಪುಸ್ತಕ ಬಿಡುಗಡೆಗೊಳಿಸಿದ್ದು ಕ್ರೇಜಿಸ್ಟಾರ್ ರವಿಚಂದ್ರನ್. ಅಲ್ಲಿಂದ ಮುಂದೆ ಬೆಳೆದುಕೊಂಡು ಬಂದ ನಮ್ಮ ಸಂಬಂಧ ಆಪ್ತವಾಗುತ್ತಾ ಹೋಯಿತು. ನಾನು ತುಂಟಾಟ ಚಿತ್ರ ಮಾಡಿದಾಗ ಅದರ ಪ್ರಥಮ ಪ್ರೇಕ್ಷಕ ರವಿಚಂದ್ರನ್ ಆಗಿದ್ದರು. ಇನ್ನು ಈ ಚಿತ್ರದ ಬಗ್ಗೆ ಇಲ್ಲಿ ನಾನೇನೋ ಹೇಳಿ ಅವರು ಅದನ್ನು ತಮಾಷೆ ಮಾಡುವ ಬದಲು ಅವರೇ ಚಿತ್ರದ ಬಗ್ಗೆ ಹೇಳಿದರೆ ಚೆನ್ನಾಗಿರುತ್ತದೆ' ಎಂದರು ಇಂದ್ರಜಿತ್ ಲಂಕೇಶ್. ಅವರು ತಮ್ಮ ನಿರ್ದೇಶನದಲ್ಲಿ ಕ್ರೇಜಿಸ್ಟಾರ್ ನಟಿಸುತ್ತಿರುವ ಹೊಸ ಚಿತ್ರಕ್ಕೆ ಹೆಸರಿಡುವ ಕಾರ್ಯಕ್ರಮದಲ್ಲಿ ರವಿಚಂದ್ರನ್ ರನ್ನು ವೇದಿಕೆಗೆ ಆಹ್ವಾನಿಸುತ್ತಾ ಈ ಮಾತುಗಳನ್ನು ಹೇಳಿದರು. 'ಲವ್ ಯು ಆಲಿಯ' ಎಂಬ ಹೆಸರನ್ನು ನಾನು ಕೂಡ ಇಲ್ಲೇ ಪ್ರಥಮ ಬಾರಿ ಕೇಳಿಸಿಕೊಳ್ಳುತ್ತಿರುವುದಾಗಿ ಹೇಳಿದ ರವಿಚಂದ್ರನ್ "ಲವ್ ಯು ಆಲ್ ಯ" ಎಂದು ಪಂಚ್ ಹೊಡೆದರು. ಚಿತ್ರದಲ್ಲಿ ನೀವು ಡಾಕ್ಟರ್ ಆಗಿ ನಟಿಸುತ್ತಿದ್ದೀರ ಎಂದಾಗ ನಾನು ಒಪ್ಪಿದೆ. ಜೊತೆಗೆ ನನಗೆ ಚಿತ್ರದಲ್ಲೊಬ್ಬರು ಡಾಟರ್ ಕೂಡ ಇರುತ್ತಾರೆ ಎಂದರು ರವಿ. ಅಂದಹಾಗೆ ಡಾಕ್ಟರ್ ಪಾತ್ರ ನನ್ನ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿ ಮಾಡುತ್ತಿದ್ದೇನೆ ಎಂದರು. ನಾಯಕಿ ಭೂಮಿಕಾ ರವಿಚಂದ್ರನ್ ರಂಥ ಹೆಸರಾಂತ ನಟರೊಂದಿಗೆ ನಟಿಸಲು ಸಾಧ್ಯವಾಗಿದ್ದು ತಮ್ಮ ಅದೃಷ್ಟ ಎಂದರು. ಅದಕ್ಕೂ ಮುನ್ನ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಚಿತ್ರದ ಹೆಸರನ್ನು ಲಾಂಚ್ ಮಾಡಿ ಶುಭ ಕೋರಿದರು. ಸಮಾರಂಭದಲ್ಲಿ ಚಿತ್ರದ ಮೂಲಕ ಪರಿಚಯಗೊಳ್ಳುತ್ತಿರುವ ನವ ನಾಯಕಿ ಸಂಗೀತಾ, ಮೈಸೂರು ಹುಡುಗಿ ಅದಿತಿ, ಯುವ ನಾಯಕ ಚಂದನ್ ಮೊದಲಾದವರು ವೇದಿಕೆಯಲ್ಲಿದ್ದರು. ಸಮಾರಂಭದಲ್ಲಿ ಸಂಜನಾ, ಪವಿತ್ರಾ ಲೋಕೇಶ್, ಸುಚೇಂದ್ರ ಪ್ರಸಾದ್, ವಿತರಕ ಬಾಷಾ, ನಟಿ ಭವ್ಯಾ ಮೊದಲಾದವರು ಸಾನ್ನಿಧ್ಯವಿತ್ತು.
2014-10-27 · Kannada
- vamshodharaka vijay raghavendra
ವಂಶೋದ್ಧಾರಕ ವಿಜಯ ರಾಘವೇಂದ್ರ!
ವಿಜಯರಾಘವೇಂದ್ರ ವಂಶೋದ್ಧಾರಕರಾಗಿದ್ದಾರೆ. ಸಿನೆಮಾದಲ್ಲಿ ಅವರನ್ನು ವಂಶೋದ್ಧಾರಕನನ್ನಾಗಿಸಲು ಹೊರಟವರು ಹಿರಿಯ ನಿರ್ದೇಶಕ ಚಿಕ್ಕಣ್ಣ. ಅವರಿಗೆ ಸಾಥ್ ನೀಡಿ ಪ್ರಥಮ ಬಾರಿಗೆ ಚಿತ್ರ ನಿರ್ಮಾಣ ಮಾಡುವ ಹೊಣೆ ಹೊತ್ತಿರುವವರು ನಟ ಅರವಿಂದ್. 'ಕಳೆದ 35 ವರ್ಷಗಳಿಂದ ಚಿತ್ರರಂಗದಲ್ಲಿರುವ ನನಗೆ ಸಿನೆಮಾಗಳ ನಾಡಿ ಮಿಡಿತ ಚೆನ್ನಾಗಿ ಗೊತ್ತಾಗಿದೆ. ಮಚ್ಚಿನ ಚಿತ್ರಗಳ ನಡುವೆಯೂ ಹಳ್ಳಿಯ ಬದುಕಿನ ಒಳ್ಳೆಯ ಚಿತ್ರಗಳನ್ನು ಸ್ವೀಕರಿಸುವ ಪ್ರೇಕ್ಷಕರಿರುವುದನ್ನು ಅರಿತುಕೊಂಡಿದ್ದೇನೆ. ಹಾಗಾಗಿಯೇ ಎಲ್ಲರೂ ನೋಡುವಂಥ ಚಿತ್ರವೊಂದನ್ನು ನಿರ್ಮಿಸುವ ನಿರ್ಧಾರಕ್ಕೆ ಬಂದೆ' ಎನ್ನುತ್ತಾರೆ ಅರವಿಂದ್. ಕಳೆದ ದಶಕಗಳಲ್ಲಿ ಕನ್ನಡ ಚಿತ್ರರಂಗದ ಖಳನಾಯಕರಲ್ಲೊಬ್ಬನಾಗಿ ಹೆಸರು ಮಾಡಿದ್ದ ಅರವಿಂದ್ ಗೆ ಇದು ಹೊಸ ಅನುಭವವಾದರೂ ಚಿತ್ರದ ಬಗ್ಗೆ ತುಂಬು ಭರವಸೆಯನ್ನು ಅವರಲ್ಲಿ ಕಾಣಬಹುದಿತ್ತು. ಅದಕ್ಕೆ ಪೂರಕವಾಗಿ ಚಿತ್ರದಲ್ಲಿ ಕಾಮಿಡಿ, ಸೆಂಟಿಮೆಂಟ್, ಸಸ್ಪೆನ್ಸ್, ಲವ್ ಎಲ್ಲವೂ ಒಳಗೊಂಡಿರುವುದಾಗಿ ತಿಳಿಸಿದರು. ಡಾ.ರಾಜ್ ರ ವಜ್ರೇಶ್ವರಿ ಸಂಸ್ಥೆಯ ಹಲವಾರು ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ತಾನು ಇಂದು ನಿರ್ದೇಶಕನಾಗಿ ಹೆಸರು ಮಾಡಿದ್ದರೆ ಅದಕ್ಕೆ ಅವರೇ ಕಾರಣ ಎಂದ ಚಿಕ್ಕಣ್ಣ ಪ್ರಸ್ತುತ ಚಿತ್ರದಲ್ಲಿ ಜಮೀನ್ದಾರ ಕುಟುಂಬದ ಕತೆಯನ್ನು ಹೇಳ ಹೊರಟಿರುವುದಾಗಿ ತಿಳಿಸಿದರು. ಸೇವಂತಿ ಸೇವಂತಿಯ ಬಳಿಕ ಪಕ್ಕಾ ಹಳ್ಳಿ ಸಬ್ಜೆಕ್ಟ್ ನಲ್ಲಿ ವಿಜಯರಾಘವೇಂದ್ರ ನಟಿಸುತ್ತಿದ್ದು, ಇಲ್ಲಿ ನಗರದಿಂದ ಹಳ್ಳಿಗೆ ಬಂದು ಕೃಷಿಯಲ್ಲಿ ಯಶಸ್ಸು ಸಾಧಿಸುವ ಮಾದರಿ ಪುರುಷನಾಗಿ ಕಾಣಿಸಲಿದ್ದೇನೆಂದು ಅವರು ಹೇಳಿದರು. ನಾಯಕಿ ಮೇಘನಾ ರಾಜ್ ಮಾತನಾಡಿ ಇದರಲ್ಲಿ ತಾನು ಸಮಾಜ ಸೇವಕಿಯ ಪಾತ್ರ ನಿರ್ವಹಿಸುತ್ತಿದ್ದೇನೆ ಎಂದರು. ಹಾಗಂತ ರಾಜಾಹುಲಿ ಮಾದರಿಯಲ್ಲಿ ನೈಜ ಪಾತ್ರವಲ್ಲ, ಕಮರ್ಷಿಯಲ್ಲಾಗಿ ಕಲರ್ ಫುಲ್ಲಾಗಿರುತ್ತದೆ ಎಂದರು. ಚಿತ್ರಕ್ಕೆ ಖ್ಯಾತ ಕಾದಂಬರಿಕಾರ ಬಿಎಲ್ ವೇಣು ಸಂಭಾಷಣೆಯಿದ್ದು ವಿ.ಮನೋಹರ್ ಸಂಗೀತವಿದೆಯಂತೆ. ಅಪರೂಪಕ್ಕೆಂಬಂತೆ ಛಾಯಾಗ್ರಾಹಕ ಪಿಕೆಎಚ್ ದಾಸ್ ಮಾತನಾಡಿ ಪ್ರಕೃತಿ ಮತ್ತು ರೈತನ ಸಂಬಂಧದ ಬಗ್ಗೆ ಚಿತ್ರದಲ್ಲಿ ತೋರಿಸಲಿರುವುದಾಗಿ ಹೇಳಿದರು. ಮೈಸೂರು ಸುತ್ತಮುತ್ತ ಸೇರಿದಂತೆ ಮಡಿಕೇರಿ, ಚಿಕ್ಕಮಗಳೂರು, ಬಾಬಾ ಬುಡನ್ ಗಿರಿ ಮೊದಲಾದೆಡೆಗಳಲ್ಲಿ ಚಿತ್ರೀಕರಣ ನಡೆಸಲಾಗುವುದಂತೆ. ಕಾಲೇಜುಕಲಿತ ನಾಯಕ ಬಳಿಕ ಹಳ್ಳಿಗೆ ಮರಳಿ ಕೃಷಿ ಮಾಡುವ ಕತೆಯಿದು ಎಂದರು ಕತೆಗಾರ ಕುಮಾರ್. ಒಟ್ಟಿನಲ್ಲಿ ಬಂಗಾರದ ಮನುಷ್ಯದಂಥ ಚಿತ್ರವೊಂದರ ನಿರೀಕ್ಷೆ ಮಾಡುವ ರೀತಿಯಲ್ಲಿ ಚಿತ್ರತಂಡ ಕಾರ್ಯೋನ್ಮುಖವಾಗಿದೆ.
2014-10-26 · Kannada
- Abhimanyu Audio Released by Sri Shivakumar Swamy
'ಅಭಿಮನ್ಯು' ಆಡಿಯೋ ಬಿಡುಗಡೆಗೊಳಿಸಿದ ಶಿವಕುಮಾರ ಸ್ವಾಮಿ
ನನ್ನ ಚಿತ್ರದ ಸೀಡಿಯನ್ನು ಫೈವ್ ಸ್ಟಾರ್ ಹೋಟೆಲ್ ನಲ್ಲಿ ಬಿಡುಗಡೆಗೊಳಿಸಿದರೆ ನನಗೆ ಸಿಗುವ ತೃಪ್ತಿ ಅದು 5ಪರ್ಸೆಂಟ್ ನಷ್ಟು ಮಾತ್ರ. ಆದರೆ ಈಗ ಸಿದ್ಧಗಂಗಾ ಮಠದಲ್ಲಿ ಶಿವಕುಮಾರ ಸ್ವಾಮಿಗಳ ಹಸ್ತದಿಂದ ಬಿಡುಗಡೆಯಾಗುತ್ತಿರುವುದರಿಂದಾಗಿ ನನಗೆ ನೂರಕ್ಕೆ ನೂರರಷ್ಟು ತೃಪ್ತಿ ದೊರಕಿದೆ ಎಂದರು ಅರ್ಜುನ್ ಸರ್ಜಾ. ಅವರು ತಮ್ಮ ಅಭಿಮನ್ಯು ಚಿತ್ರದ ಹಾಡುಗಳ ಸೀಡಿ ಬಿಡುಗಡೆಯ ಬಳಿಕ ಈ ಮಾತುಗಳನ್ನಾಡಿದರು. 'ನನ್ನ ತಂದೆ ತುಮಕೂರು ಜಿಲ್ಲೆಯ ಜಕ್ಕನಹಳ್ಳಿಯವರು. ಮಾತ್ರವಲ್ಲ, ಚಿತ್ರದಲ್ಲಿ ನಾನು ಶಿವಕುಮಾರ ಸ್ವಾಮಿಯವರು ಸಾವಿರಾರು ವಿದ್ಯಾರ್ಥಿಗಳಿಗೆ ನೀಡುವ ಉಚಿತ ವಿದ್ಯಾಭ್ಯಾಸದಿಂದ ಸ್ಪೂರ್ತಿಗೊಂಡಂಥ ದೃಶ್ಯಗಳು ಚಿತ್ರದಲ್ಲಿವೆ ಎಂದು ಹೇಳುವ ಮೂಲಕ ಕ್ಯಾಸೆಟ್ ಅಲ್ಲೇ ಏಕೆ ಬಿಡುಗಡೆಗೊಳಿಸಿದ್ದೆಂಬುದನ್ನು ಸಮರ್ಥಿಸಿದರು ಅರ್ಜುನ್. ನಡೆದಾಡುವ ದೇವರು ಎಂದೇ ಹೆಸರಾಗಿರುವ ಧಾರ್ಮಿಕ ಮುಖಂಡ 107ವರ್ಷಗಳ ಶಿವಕುಮಾರ ಸ್ವಾಮೀಜಿ 15000ದಷ್ಟು ಮಕ್ಕಳಿಗೆ ಉಚಿತವಾಗಿ ಊಟ,ವಸತಿ ಮತ್ತು ವಿದ್ಯೆ ನೀಡುವ ಮೂಲಕ ಮೂರು ದಾಸೋಹಗಳನ್ನು ಮಾಡುತ್ತಿರುವ ಕೀರ್ತಿಗೆ ಭಾಜನರಾದವರು ಎಂಬುದು ಎಲ್ಲರಿಗೂ ಗೊತ್ತಿದೆ. ನಟ ಅರ್ಜುನ್ ಸರ್ಜಾ ಶಿವಕುಮಾರ ಸ್ವಾಮಿಗಳ ಪಾದಪೂಜೆ ನಡೆಸುವ ಮೂಲಕ ಗೌರವ ಸಲ್ಲಿಸಿದ್ದು ಈ ಸಂದರ್ಭದಲ್ಲಿ ಅವರ ತಾಯಿ ಚಿಕ್ಕ ರಾಜಮ್ಮಣ್ಣಿ, ಸಹೋದರಿ ಲಕ್ಷ್ಮೀದೇವಿ, ಚಿರಂಜೀವಿ ಸರ್ಜಾ ಮತ್ತು ಧ್ರುವಸರ್ಜಾ ಉಪಸ್ಥಿತರಿದ್ದರು. ಚಿತ್ರದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ನಾಯಕಿ ಸಿಮ್ರಾನ್ ಕಪೂರ್, ನಿರ್ದೇಶಕ ಸಂತು ಮತ್ತು ಚೇತನ್ ಕುಮಾರ್ ಮೊದಲಾದವರು ಕೂಡ ಅಲ್ಲಿ ನೆರೆದಿದ್ದರು. ಚಿತ್ರವನ್ನು ತಮಿಳು ಮತ್ತು ತೆಲುಗಿನಲ್ಲಿಯೂ ತೆರೆಗೆ ತರುತ್ತಿರುವುದು ವಿಶೇಷ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮಾತನಾಡಿ 'ನಾನು ಸಂಗೀತ ನೀಡಿದ ಸೀಡಿ ಸ್ವಾಮಿಗಳ ಕೈಯ್ಯಿಂದ ಬಿಡುಗೊಡೆಗೊಳ್ಳುವ ಸೌಭಾಗ್ಯ ದೊರಕೀತೆಂದು ನಾನು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ ಎಂದರು. ಚಿರಂಜೀವಿ ಸರ್ಜಾ ತಮ್ಮ ಮುಂಬರುವ ಚಿತ್ರವಾದ ರುದ್ರತಾಂಡವದ ಸಂಭಾಷಣೆ ಹೇಳುವ ಮೂಲಕ ನೆರದವರ ಮನರಂಜಿಸಿದರು. ಬಹದ್ದೂರ್ ನ ಯಶಸ್ವಿ ನಾಯಕ ಧ್ರುವಸರ್ಜಾ ಮಾತುಗಳಿಗೂ ಅದ್ಧೂರಿ ಸ್ವಾಗತ ದೊರೆಯಿತು.
2014-10-22 · Kannada
- 21 movie news
ಇದು 21 ರ ವಿಶೇಷ
ಸಿನೆಮಾಗಳು ಹೆಸರುಗಳಲ್ಲಿ ವಿಭಿನ್ನತೆ ತೋರಿಸುವುದನ್ನು ಬಹಳ ಹಿಂದಿನಿಂದಲೇ ಕಂಡಿದ್ದೇವೆ. ಉಪೇಂದ್ರರಂತೂ ಅದನ್ನು ಉಚ್ಛ್ರಾಯ ಸ್ಥಿತಿಗೆ ತಂದರು. ನಂಬರ್ ಗಳ ರೂಪದಲ್ಲಿ ಸಿನೆಮಾಗೆ ಹೆಸರಿಡುವಾಗ ಅದಕ್ಕೇನಾದರೂ ವಿಶೇಷ ಕಾರಣಗಳಿರುತ್ತವೆ. ಅಂಥದೇ ಕಾರಣದೊಂದಿಗೆ ಹೊಸ ಚಿತ್ರತಂಡವೊಂದು ಸನ್ನದ್ಧವಾಗಿ ಬಂದಿದೆ. ಸಾಫ್ಟ್ ವೇರ್ ಇಂಜಿನಿಯರ್ ಹರಿಕೃಷ್ಣರಿಗೆ ಸಿನೆಮಾ ನಿರ್ಮಾಣ 20 ವರ್ಷಗಳ ಕನಸು. 21ನೇ ವರ್ಷದಲ್ಲಿ ತಮ್ಮ 'ಆಧ್ಯ' ಪ್ರೊಡಕ್ಷನ್ಸ್ ನಲ್ಲಿ ನೆರವೇರುತ್ತಿರುವುದು ಅವರಿಗೆ ಖುಷಿ. ಜೊತೆಗೆ ಚಿತ್ರದಲ್ಲಿ ಒಂದು ಪಾತ್ರವಾಗಿಯೂ ನಟಿಸುತ್ತಿರುವ ಸಂಭ್ರಮ ವೂ ಇದೆ. ನಿರ್ದೇಶಕ ಪ್ರೇಮ್ ಗೆ ಸಹಾಯಕ ನಿರ್ದೇಶಕರಾಗಿದ್ದ ಅನುಭವವುಳ್ಳ ಎಂ.ಲೋಹಿತ್ ರಾಜ್ ಈ ಮೂಲಕ ಪ್ರಥಮ ಬಾರಿ ನಿರ್ದೇಶಕರಾಗುತ್ತಿದ್ದಾರೆ. ವಾಸ್ತವದಲ್ಲಿ ಅಕುಲ್ ಬಾಲಾಜಿ ನಾಯಕನಾಗಿದ್ದ 'ದುಬಾರಿ' ಇವರ ಪ್ರಥಮ ಚಿತ್ರವಾಗಬೇಕಿತ್ತು. ಆದರೆ ಚಿತ್ರ ಇನ್ನೇನು ಆರಂಭವಾಗಬೇಕು ಎಂಬ ಹೊತ್ತಿಗೆ ಅಕುಲ್ ಬಿಗ್ ಬಾಸ್ ಮನೆಯೊಳಗೆ ಸೇರಿಕೊಂಡಿದ್ದರು. ಹಾಗಾಗಿ 21 ಎಂಬ ಚಿತ್ರವನ್ನು ಕೈಗೆತ್ತಿಕೊಂಡು ಇಪ್ಪತ್ತೊಂದೇ ದಿನಗಳಲ್ಲಿ ಚಿತ್ರೀಕರಣ ಪೂರ್ತಿಗೊಳಿಸಿದ್ದಾರೆ. ನಿರ್ದೇಶನದ ಜೊತೆಗೆ ಕತೆ ಚಿತ್ರಕತೆಯನ್ನೂ ಖುದ್ದಾಗಿ ಬರೆದಿರುವ ಲೋಹಿತ್ ಚಿತ್ರದೊಳಗೆ ಒಂದು ಡಕಾಯಿತರ ತಂಡವನ್ನು ಪರಿಚಯಿಸುತ್ತಾರೆ. ಅವರು 21ನೇ ತಾರೀಕು, 21 ಗಂಟೆಗೆ ನಡೆಸುವ ದರೋಡೆಯ ಬಗ್ಗೆ ಚಿತ್ರ ತಿಳಿಸುವುದಂತೆ. ಇಂಥ ಪ್ರಯತ್ನದಲ್ಲಿ 20ಬಾರಿ ಯಶಸ್ಸಾಗುವ ಡಕಾಯಿತರ 21ನೇ ಪ್ರಯತ್ನವನ್ನು 2ಗಂಟೆ 1ನಿಮಿಷದ ಕಾಲಾವಧಿಯ ಚಿತ್ರವಾಗಿಸಿರುವುದಾಗಿ ನಿರ್ದೇಶಕರು ಹೇಳುತ್ತಾರೆ. ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಮಮತಾ ರಾವತ್ 21 ಎಂಬುದು ತಮಗೂ ವಿಶೇಷ ದಿನವಾಗಿದ್ದು ಅದು ತಮ್ಮ ಬರ್ತ್ ಡೇ ಡೇಟ್ ಎಂದರು. ಯುಎಸ್ ನಿಂದ ಬರುವ ಹುಡುಗಿಯಾಗಿ ತಾನು ಕಾಣಿಸಿಕೊಳ್ಳುತ್ತಿದ್ದು, ಉಳಿದ ಪಾತ್ರಗಳು ನನ್ನ ಸುತ್ತಲೇ ಸುತ್ತುತ್ತವೆ ಎಂದರು. ಮತ್ತೋರ್ವ ನಾಯಕಿ ಪೂಜಾ ಕಾಲೇಜು ಹುಡುಗಿಯಾಗಿ ನಟಿಸುತ್ತಿದ್ದು ಇದು ಅವರಿಗೆ ನಾಲ್ಕನೇ ಚಿತ್ರವಂತೆ. ಪ್ರಮುಖ ಖಳನಾಗಿ ನಟಿಸುತ್ತಿರುವ ಸಂಜೀವ್ ಶ್ರೀರಾಂಪುರದವರಾಗಿದ್ದು, ಅಲ್ಲಿನ ಪಿನ್ ಕೋಡ್ 21, ಹಾಗಾಗಿ ಅದು ತಮಗಿರುವ ವಿಶೇಷತೆ ಎಂದರು. ಚಿತ್ರದಲ್ಲಿ ಹಾಡುಗಳಿಲ್ಲವಾದರೂ ಬ್ಯಾಕ್ ಗ್ರೌಂಡ್ ಸ್ಕೋರ್ ಚೆನ್ನಾಗಿ ನೀಡಲು ಪ್ರಯತ್ನಿಸಿರುವುದಾಗಿ ಹೇಳಿದರು ಸಂಗೀತ ನವ ನಿರ್ದೇಶಕ ಅರ್ಜುನ್ ರಾಮ್. ಕಲಾವಿದರಾದ ಪ್ರಶಾಂತ್ ಸಿದ್ಧಿ, ಹುಬ್ಬಳ್ಳಿಯ ಹೊಸಮುಖ ವಿಜಯ್ ಹಿರೇಗೌಡ, ರೂಪೇಶ್ ಮೊದಲಾದವರು ಉಪಸ್ಥಿತರಿದ್ದರು. ಚಿತ್ರವನ್ನು ನವೆಂಬರ್ 21ರಂದು ಬಿಡುಗಡೆಗೊಳಿಸಲು ನಿರ್ಧರಿಸಿದೆ ಚಿತ್ರತಂಡ.
2014-10-21 · Kannada
- Asaadhya movie Muhurtha
ಅಸಾಧ್ಯ ಚಿತ್ರಕ್ಕೆ ಮುಹೂರ್ತ
ಮೊದಲ ನೋಟದಲ್ಲಿ ಕಂಡಾಗ ಸಾಧ್ಯ ಅನಿಸುವಂತೆ ಡಿಸೈನ್ ಮಾಡಲಾಗಿದ್ದ ಅಸಾಧ್ಯ ಚಿತ್ರದ ಪೋಸ್ಟರ್ ಗಳನ್ನು ಅಲ್ಲೆಲ್ಲಾ ಹಾಕಿರಿಸಲಾಗಿತ್ತು. ಅದೊಂದು ಹೊಸಬರ ಚಿತ್ರದ ಮುಹೂರ್ತ ಸಮಾರಂಭ. ಆದರೆ ಚಿತ್ರದ ಪೋಸ್ಟರ್ ಮೇಲೆ ಆರ್ ಚಂದ್ರು ಶೈಲಿಯಲ್ಲಿ ಹಾಕಲಾಗಿದ್ದ ಮುದ್ರೆಯಿತ್ತು. ಆದರೆ ಇಲ್ಲಿ ಆರ್ ಬದಲು ಇದ್ದಿದ್ದು ಚಂದ್ರು ಎಂಬ ಹೆಸರು ಮಾತ್ರ. ನಿರ್ದೇಶಕ ಚಂದ್ರುವಿಗೆ ಇದು ಪ್ರಥಮ ಚಿತ್ರ. ಎನ್.ಎಂ.ಸಿ ಕ್ರಿಯೇಶನ್ಸ್ ನ ಲಾಂಛನದಲ್ಲಿ ತಯಾರಾಗುತ್ತಿರುವ ಅಸಾಧ್ಯ ಚಿತ್ರದ ಕತೆ ಎಂಬುದು ಚಂದ್ರುವಿನ ನಾಲ್ಕು ವರ್ಷದ ಕನಸಾಗಿದೆಯಂತೆ. ಇದೊಂದು ರಿಯಲ್ ಲೈಫ್ ಸ್ಟೋರಿ. ಎಲ್.ಎಲ್.ಬಿ ಮಾಡುತ್ತಿದ್ದಾಗ ನಡೆದ ಘಟನೆ. ಚಿತ್ರಕ್ಕೆ ನಾಲ್ವರು ನಾಯಕರಿದ್ದು ಅಂದು ಘಟನೆಯಲ್ಲಿದ್ದ ಇಬ್ಬರು ಇದೀಗ ಚಿತ್ರದಲ್ಲಿಯೂ ನಟಿಸುತ್ತಿರುವುದಾಗಿ ತಿಳಿಸಿದರು. ಅಂದಹಾಗೆ ಇವರಿಗೆ ನೃತ್ಯ ನಿರ್ದೇಶಕ ರಾಜೇಶ್ ಬ್ರಹ್ಮಾವರ್ ಗೆ ಅಸಿಸ್ಟೆಂಟ್ ಆಗಿ ಕಾರ್ಯನಿರ್ವಹಿಸಿದ ಅನುಭವವಿದೆ. ಚಿತ್ರದ ಸಬ್ ಟೈಟಲ್ ಹೇಳುವಂತೆ "ಮನಸ್ಸಿಟ್ಟು ಮಾಡಿದ್ರೆ ಎಲ್ಲವೂ ಸಾಧ್ಯ" ಎಂಬ ಎಳೆಯೇ ಚಿತ್ರದ ಮುಖ್ಯ ಕತೆ. 4 ಶೆಡ್ಯೂಲ್ ಗಳಲ್ಲಿ 45ದಿನಗಳ ಕಾಲ ಚಿತ್ರೀಕರಣ ನಡೆಸಲಾಗುತ್ತದೆ. ಬೆಂಗಳೂರಲ್ಲಿ 15 ದಿನಗಳು ಸೇರಿದಂತೆ ಮಡಿಕೇರಿ, ಚಿಕ್ಕಮಗಳೂರು ಮತ್ತು ಹಾಸನಗಳಲ್ಲಿ ಲೊಕೇಶನ್ ನಿರ್ಧರಿಸಲಾಗಿದೆ. ಚಿತ್ರದ ನಾಯಕರಲ್ಲೊಬ್ಬರಾದ ಮಂಜುನಾಥ್ ಗೆ ನಿರ್ದೇಶಕ ಚಂದ್ರು ಕ್ಲಾಸ್ ಮೇಟ್ ಅಂತೆ. ಮತ್ತೊಬ್ಬ ನಾಯಕ ಸುಭಾನ್ ಕೂಡ ಚಿತ್ರರಂಗಕ್ಕೆ ಹೊಸ ಮುಖ. ಚಿತ್ರದಲ್ಲಿ ಆತನ ತಂದೆಯಾಗಿ ನಟಿಸುತ್ತಿರುವುದು ನೆನಪಿರಲಿ ಪ್ರೇಮ್ ನ ತಂದೆ ಬಸಪ್ಪ ಎಂಬುದು ವಿಶೇಷ. ಅವರು ಈಗಾಗಲೇ ಜಾಸ್ಮಿನ್ 5 ಸೇರಿದಂತೆ ನಾಲ್ಕರಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲೊಂದು ಪ್ರಮುಖ ಪಾತ್ರ ನಿರ್ವಹಿಸಲು ಪ್ರೇಮ್ ನನ್ನು ಸಂಪರ್ಕಿಸಲಾಗಿದ್ದು ಆ ಬಗ್ಗೆ ಖಚಿತ ಮಾಹಿತಿ ಮುಂದಿನ ಪತ್ರಿಕಾಗೋಷ್ಠಿಯಲ್ಲಿ ಹೇಳುವುದಾಗಿ ನಿರ್ದೇಶಕರು ಹೇಳಿದರು. ನಾಯಕಿರಾಗಿ ಕೂಡ ಹೊಸಮುಖಗಳಾದ ಅಕ್ಷತಾ ಶೆಟ್ಟಿ ಮತ್ತು ಪಲ್ಲವಿ ನಟಿಸಿದ್ದಾರೆ. ಅಂದಹಾಗೆ ಪಲ್ಲವಿ ನಿರ್ದೇಶಕ ಚಂದ್ರುವಿನ ತಂಗಿ ಎಂಬುದು ಗಮನಾರ್ಹ. ಚಿತ್ರದ ಸಂಗೀತ ನಿರ್ದೇಶನಕ್ಕೆ ಶ್ರೀದೇವಿ ಮೆಳ್ಳಗಟ್ಟಿ ಎಂಬ ಸ್ತ್ರೀಶಕ್ತಿಯಿರುವುದು ಮತ್ತೊಂದು ವಿಶೇಷ. ಹಿಂದೂಸ್ಥಾನಿ ಸಂಗೀತದಲ್ಲಿ ಚಿನ್ನದಪದಕ ವಿಜೇತೆಯಾದ ಈಕೆ ಗಾಯಕಿ, ನಿರೂಪಕಿಯಾಗಿ ಗುರುತಿಸಿಕೊಂಡವರು. ಚಿತ್ರದಲ್ಲಿ 3 ಹಾಡುಗಳಿವೆ ಪ್ರೋತ್ಸಾಹಿಸಿ ಎಂದರು ಶ್ರೀದೇವಿ. ನಿರ್ಮಾಪಕ ಎಚ್ ಎಂ ಆರ್ ಆನಂದ ರೆಡ್ಡಿ ಚಿತ್ರವನ್ನು ನಿರ್ಮಿಸಿದ್ದು, ಕತೆ ಕೇಳಿ ಖುಷಿಯಾದ ಕಾರಣ ಚಿತ್ರಕ್ಕೆ 3ಕೋಟಿ ಹಾಕಲು ಮುಂದೆ ಬಂದಿದ್ದಾಗಿ ಹೇಳಿದರು.
2014-10-21 · Kannada
- Jaggi to release on November 1st
ರಾಜ್ಯೋತ್ಸವಕ್ಕೆ "ಜಗ್ಗಿ" ಬರಲಿದ್ದಾನೆ!
ನವನಟ ಸುನೀಲ್ ರಾಜ್ ಮೊದಲ ಬಾರಿಗೆ ನಾಯಕನಾಗಿ ನಟಿಸುತ್ತಿರುವ ಜಗ್ಗಿ ಚಿತ್ರ ಇದೇ ತಿಂಗಳ ಕೊನೆಗೆ ತೆರೆಕಾಣಲಿದೆ. ಆ ಕುರಿತಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚಿತ್ರದ ನಿರ್ದೇಶಕ ವಿಎಂ ರಾಜ್ 'ರಾಜ್ಯೋತ್ಸವದ ಸಂಭ್ರಮದಲ್ಲಿ ತೆರೆಕಾಣಲು ಈ ಸ್ವಮೇಕ್ ಚಿತ್ರಕ್ಕೆ ತುಂಬಾನೇ ಅರ್ಹತೆಯಿದೆ' ಎಂದರು. ಚಿತ್ರದಲ್ಲಿ ನಾನು ಕಾಲೇಜ್ ಹುಡುಗನಾಗಿ ಕಾಣಿಸಿಕೊಳ್ಳುತ್ತಿದ್ದು, ಇದೊಂದು ಫ್ಯಾಮಿಲಿ ಸ್ಟೋರಿಯಾಗಿದೆ ಎಂದರು ನಾಯಕ ಸುನೀಲ್ ರಾಜ್. ನನ್ನಂಥ ಕಲಾವಿದರಿಗೆ ಈ ಚಿತ್ರಕ್ಕೆ ಸಿಕ್ಕಂಥ ನಿರ್ಮಾಪಕರು ದೊರಕಿದರೆ ಅದುವೇ ಅದೃಷ್ಟವೆಂದ ಸುನೀಲ್ ಚಿತ್ರಕ್ಕಾಗಿ ತುಂಬಾ ಡೆಡಿಕೇಟ್ ಆಗಿ ಕೆಲಸ ಮಾಡಿದ್ದಾರೆಂದು ತಂಡದ ಅಭಿಪ್ರಾಯ. ಉದಾಹರಣೆಗೆ ಚಿತ್ರದಲ್ಲಿ ಬೈಕ್ ಮೂಲಕ ಗ್ಲಾಸ್ ಒಡೆಯುವುದೂ ಸೇರಿದಂತೆ ಪ್ರಮುಖ ಸಾಹಸ ಸನ್ನಿವೇಶಗಳನ್ನು ಖುದ್ದು ನಾಯಕನೇ ನಿರ್ವಹಿಸಿದ್ದಾರಂತೆ. ನಾಯಕಿ ಮುಂಬೈ ಬೆಡಗಿ ಅಹ್ನಾ ತಮ್ಮದು ಬಬ್ಲಿ ಬಬ್ಲಿ ಪಾತ್ರವೆಂದರು. ನಟ ಕುರಿರಂಗ ತಮಗೆ ಚಿತ್ರದಲ್ಲಿ ಹೇಳಿಕೊಳ್ಳುವಂಥ ಒಳ್ಳೆಯ ಪಾತ್ರ ದೊರಕಿದ್ದು, ನಿರ್ದೇಶಕರು ಬರೆದಿರುವ ಆಕರ್ಷಕ ಸಂಭಾಷಣೆ ತಮ್ಮ ಪಾತ್ರದ ಹೈಲೈಟ್ ಎಂದರು. ಹಂಚಿಕೆದಾರ ಆರ್ಯಮೌರ್ಯ ತಿಮ್ಮೇಗೌಡ ಮಾತನಾಡಿ ಚಿತ್ರವನ್ನು ನವೆಂಬರ್ ಆರಂಭದಲ್ಲಿ ಥಿಯೇಟರ್ ಗೆ ತರುವುದರಿಂದ ಪರಭಾಷೆ ಚಿತ್ರಗಳ ಹಾವಳಿ ಇರುವುದಿಲ್ಲ. ಹಾಗಾಗಿ 75 ಚಿತ್ರಮಂದಿರಗಳಿಗೆ ಜಗ್ಗಿ ನುಗ್ಗಲಿದ್ದಾನೆ ಎಂದರು. ಅಧ್ಯಕ್ಷದಲ್ಲಿ ಚಿಕ್ಕಣ್ಣನಿಗೆ ಜೋಡಿಯಾಗಿದ್ದ ಆರೋಹಿತ, ಸಂಗೀತ ನಿರ್ದೇಶಕ ವಿಲ್ಸನ್ ಜೋಶ್ವಾ, ಛಾಯಾಗ್ರಾಹಕ ರಮೇಶ್ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು.
2014-10-21 · Kannada
- Dove movie Audio Released
ವ್ಹಾವ್ ಎಂಬಂತೆ ಬಿಡುಗಡೆಗೊಂಡ ಡವ್ ಆಡಿಯೋ..!
ಡವ್ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮವು ಅದ್ಧೂರಿಯಾಗಿ ಅದ್ಧೂರಿಯಾಗಿ ನೆರವೇರಿತು. ನಾಡಗೀತೆಯ ಬಳಿಕ ಮುಖ್ಯಮಂತ್ರಿ ಸಿದ್ಧರಾಮಯ್ಯ ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. "ಸಾ.ರಾ ಗೋವಿಂದು ಜೊತೆಗೆ ನನ್ನದು ಹಳೆಯ ಪರಿಚಯ. ನಾವೆಲ್ಲ ಒಂದೇ ಕಡೆಯವರು. ಅಂದರೆ ಮೂಲತಃ ಮೈಸೂರಿನವರು. ಡಾ.ರಾಜಕುಮಾರ್ ಕೂಡ 'ನನ್ನನ್ನು ಬೇಟಿಯಾದಾಗಲೆಲ್ಲಾ 'ನಮ್ ಕಾಡ್ ನವರು ಬಂದ್ರು' ಎಂದು ಸಂತಸದಿಂದ ಹೆಳಿಕೊಳ್ಳುತ್ತಿದ್ದಿದ್ದು ನೆನಪಿದೆ. ಇಂದು ಗೋವಿಂದುರ ಪುತ್ರ ನಾಯಕನಾಗುತ್ತಿರುವ ಚಿತ್ರದ ಸೀಡಿ ಬಿಡುಗಡೆಯಾಗುತ್ತಿದೆ. ಸದ್ಯಕ್ಕೆ ಅವರ ಪುತ್ರ ಅನೂಪ್ ನಾಯಕನಾಗಿ ನಟಿಸುತ್ತಿದ್ದಾರೆ. ಅವರಿಗೆ ಶುಭವಾಗಲಿ; ಕನ್ನಡ ಚಿತ್ರರಂಗದಲ್ಲಿ ಒಂದು ಭದ್ರ ನೆಲೆ ಕಂಡುಕೊಳ್ಳಲಿ" ಎಂದು ಸಿದ್ಧರಾಮಯ್ಯ ನವ ನಾಯಕನಿಗೆ ಶುಭ ಹಾರೈಸಿದರು . ಜೊತೆಗೆ ಚಿತ್ರದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಗೆ ಈ ಚಿತ್ರದ ಹಾಡುಗಳಿಗೆ ಕೂಡ ರಾಜ್ಯಪ್ರಶಸ್ತಿ ಸಿಗುವಂತಾಗಲೆಂದು ಹಾರೈಸಿದರು. ಈ ನಡುವೆ "ಚಿತ್ರಕ್ಕೆ ಡವ್ ಎಂದು ಆಂಗ್ಲ ಹೆಸರು ಇಟ್ಟಿದ್ದಾರೆ. ಕನ್ನಡ ಚಿತ್ರಕ್ಕೆ ಆಂಗ್ಲ ಹೆಸರು!" ಎಂದು ಸ್ವಗತ ಎಂಬ ಹಾಗೆ ಸಿದ್ಧರಾಮಯ್ಯ ಹೇಳಿಕೊಂಡರು. ಅದಕ್ಕೂ ಮುನ್ನ ಅವರು ವೇದಿಕೆಯ ಮೇಲ್ಭಾಗದಿಂದ ಕೆಳಗಿಳಿಸಲಾದ ಪಾರಿವಾಳದ ಪ್ರತಿಕೃತಿಯ ಬೆನ್ನಿಂದ ಡವ್ ಚಿತ್ರದ ಹಾಡುಗಳ ಸೀಡಿಗಳನ್ನು ತೆಗೆದು ಬಿಡುಗಡೆಗೊಳಿಸಿದರು. ಸಮಾರಂಭದಲ್ಲಿ ಗೃಹ ಸಚಿವ ಕೆ.ಜೆ ಜಾರ್ಜ್, ವಾರ್ತಾ ಸಚಿವ ರೋಶನ್ ಬೇಗ್, ಬರಗೂರು ರಾಮಚಂದ್ರಪ್ಪ, ಕೆ.ವಿ ಚಂದ್ರಶೇಖರ್, ನಟಿ ಸಂಜನಾ ಮೊದಲಾದವರು ಹಾಜರಿದ್ದರು. ಡವ್ ಚಿತ್ರದ ನಿರ್ಮಾಪಕ ಬೆಂಕೋ ಶ್ರೀನಿವಾಸ್ ಸ್ವಾಗತ ಕೋರಿದರು. ಬಳಿಕ ನಡೆದ ಮನೋರಂಜನಾ ಕಾರ್ಯಕ್ರಮದಲ್ಲಿ ನಾಯಕ ಅನೂಪ್ ಸೇರಿದಂತೆ ಕಲಾವಿದರ ನೃತ್ಯಗಳು ಮನರಂಜಿಸಿದವು. ಇದೇ ವೇಳೆ ನವರಸ ನಾಯಕ ಜಗ್ಗೇಶ್ ಮತ್ತು ಶ್ರೀನಗರ ಕಿಟ್ಟಿ ತಲಾ ಒಂದೊಂದು ಹಾಡುಗಳನ್ನು ಪರದೆಯ ಮೇಲೆ ಬಿಡುಗಡೆಗೊಳಿಸಿದರು. ಕೋಟಿ ನಿರ್ಮಾಪಕ ರಾಮು ಚಿತ್ರದ ಟ್ರೇಲರ್ ಲಾಂಚ್ ಮಾಡಿ ಶುಭಕೋರಿದರು.
2014-10-21 · Kannada
- Namaste Madam Releasing this week
ನಮಸ್ತೇ ಮೇಡಂ ಬಿಡುಗಡೆಗೆ ಸಿದ್ಧ
ನಮಸ್ತೇ ಹೊಡೆಯಲು ಮೇಡಮ್ ಸಿದ್ಧವಾಗಿದ್ದಾರೆ. ಚಿತ್ರದ ಬಗ್ಗೆ ಮೈಸೂರು, ಹಾಸನ, ಶಿವಮೊಗ್ಗ, ತುಮಕೂರುಗಳಲ್ಲಿ ಪ್ರಚಾರ ಕೈಗೊಂಡಿದ್ದು ಒಳ್ಳೆಯ ಪ್ರತಿಕ್ರಿಯೆ ಲಭ್ಯವಾಗಿದೆ ಎಂಬ ಖುಷಿ ಹಂಚಿಕೊಂಡರು ಚಿತ್ರದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಶಿವರಾಜ್. ಅವರು ನಮಸ್ತೇ ಮೇಡಂ ಚಿತ್ರ ಇದೇ ವಾರ ಬಿಡುಗಡೆಗೊಳ್ಳಲಿರುವ ಬಗ್ಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಖ್ಯಾತ ಕಿರುತೆರೆ ನಿರ್ದೇಶಕ ಹಾಗೂ ನಮಸ್ತೇ ಮೇಡಂ ಚಿತ್ರದ ನಿರ್ಮಾಪಕ ರವಿ ಗರಣಿ ಮಾತನಾಡುತ್ತಾ 'ಚಿತ್ರವನ್ನು ನೂರು ಥಿಯೇಟರ್ ಗಳಲ್ಲಿ ಬಿಡುಗಡೆ ಮಾಡುವ ಯೋಜನೆ ಹಾಕಿರುವುದಾಗಿ ಹೇಳಿದರು. ಚಿತ್ರದ ಪ್ರಚಾರ ಕಾರ್ಯದಲ್ಲಿ ಸಿಕ್ಕ ಪ್ರೋತ್ಸಾಹವನ್ನು ಅವರು ಕೂಡ ನೆನಪಿಸಿಕೊಂಡು ಖುಷಿ ಪಟ್ಟರು. ಚಿತ್ರದ ನಾಯಕ ಶ್ರೀನಗರ ಕಿಟ್ಟಿ ಮಾತನಾಡಿ 'ನಮಸ್ತೇ ಮೇಡಂ ಎಂಬುದು ತೆಲುಗು ಮಿಸ್ಸಮ್ಮ ಚಿತ್ರದ ರಿಮೇಕ್. ಅದು ಅಲ್ಲಿ ಸೂಪರ್ ಹಿಟ್ ಆಗಿತ್ತು. ಚಿತ್ರದಲ್ಲಿ ತಾನು ಮಧ್ಯಮ ವರ್ಗದ ಕುಟುಂಬದವನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರ ಇಲ್ಲಿಯೂ ಅದೇ ಮಟ್ಟದ ಯಶಸ್ಸು ಕಾಣುವ ನಿರೀಕ್ಷೆ ಇರುವುದಾಗಿ ಕಿಟ್ಟಿ ತಿಳಿಸಿದರು. ಕನ್ನಡದಲ್ಲಿ ನವ ನಿರ್ದೇಶಕನಾಗಿ ಪರಿಚಯಗೊಳ್ಳುತ್ತಿರುವ ರಘುರಾಜ್ ಮಾತನಾಡಿ ಪ್ರೇಕ್ಷಕರು ಚಿತ್ರನೋಡಿ ಪ್ರೇಕ್ಷಕರು ಪ್ರೋತ್ಸಾಹಿಸಬೇಕೆಂದು ಮಾಧ್ಯಮದ ಮೂಲಕ ವಿನಂತಿಸಿದರು.
2014-10-19 · Kannada
- First Rank Raju Muhoortha
ಫಸ್ಟ್ ರ್ಯಾಂಕ್ ರಾಜು ಗೆ ಮುಹೂರ್ತ
ನಿರ್ದೇಶಕ ನರೇಶ್ ತಾವೇ ಕತೆ ಬರೆದು ನಿರ್ದೇಶಿಸುತ್ತಿರುವ ಚಿತ್ರ ಫಸ್ಟ್ ರ್ಯಾಂಕ್ ರಾಜು. ಚಿತ್ರಕ್ಕೆ ಕ್ಲ್ಯಾಪ್ ಹೊಡೆಯಲು ಚಾಮುಂಡೇಶ್ವರಿ ಸ್ಟುಡಿಯೋಗೆ ಬಂದು ಶುಭ ಹಾರೈಸಿದವರು ಮುತ್ತಪ್ಪ ರೈ. ಕ್ಯಾಮರ ಸ್ವಿಚ್ ಆನ್ ಮಾಡಲು ರಾಘವೇಂದ್ರ ರಾಜಕುಮಾರ್ ಸಪತ್ನೀಕರಾಗಿ ಆಗಮಿಸಿದ್ದರು. ಪರೀಕ್ಷೆಯಲ್ಲಿ ನೂರಕ್ಕೆ ನೂರರಷ್ಟು ಅಂಕ ಗಳಿಸುವ ನಾಯಕ ಸಾಮಾನ್ಯ ಜ್ಞಾನದ ವಿಚಾರಕ್ಕೆ ಬಂದಾಗ ಸೊನ್ನೆಯಾಗಿರುತ್ತಾನೆ. ಆದರೆ ಬದುಕಿನಲ್ಲಿಯೂ ನೂರರ ಸಾಧನೆ ಮಾಡುವತ್ತ ಹೇಗೆ ಹೋಗುತ್ತಾನೆ ಎಂಬುದನ್ನು ಹಾಸ್ಯಭರಿತವಾಗಿ ಹೇಳುವ ಚಿತ್ರವೇ ಫಸ್ಟ್ ರ್ಯಾಂಕ್ ರಾಜು ಎಂದು ಹೇಳುತ್ತಾರೆ ನಿರ್ದೇಶಕ ನರೇಶ್. ಅಂದಹಾಗೆ ತಮ್ಮ ಈ ಚಿತ್ರಕ್ಕೆ ಬಾಲಿವುಡ್ ನ ಯಶಸ್ವಿ ಚಿತ್ರವಾದ ತ್ರೀ ಇಡಿಯಟ್ಸ್ ನಿಂದ ಸ್ಪೂರ್ತಿಗೊಂಡಿದ್ದಾಗಿ ಅವರೇ ಹೇಳುತ್ತಾರೆ. ರಮೇಶ್ ಅರವಿಂದ್ ಗೆ ಅಸೋಸಿಯೇಟಾಗಿ ಕೆಲಸ ಮಾಡಿದ ಅನುಭವವಿರುವುದಾಗಿ ಅವರು ತಿಳಿಸಿದರು. ಚಿತ್ರವನ್ನು ಆನೆಕಲ್ಲು ಸೇರಿದಂತೆ ಬೆಂಗಳೂರು ಸುತ್ತಮುತ್ತ ಚಿತ್ರೀಕರಿಸಲಾಗುವುದಂತೆ. ಡೆಂಟಲ್ ಸ್ಟೂಡೆಂಟ್ ಅಪೂರ್ವ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದಾರೆ. ಅವರಿಗಿದು ಪ್ರಥಮ ಚಿತ್ರ. ಮತ್ತೋರ್ವ ನಾಯಕಿಯಾಗಿ ಬೆಡಗಿ ಕಾನಿಷ್ಕ ಕಾಣಿಸಿಕೊಳ್ಳುತ್ತಿದ್ದು ಪ್ರವೀಣ್ ಪ್ರಥಮ ಬಾರಿ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಿತ್ರದ ಮತ್ತೋರ್ವ ನಾಯಕಿಯಾಗಿ ಕಾನಿಷ್ಕಾ ನಟಿಸಿದ್ದು ಚಿತ್ರದಲ್ಲಿ 6 ಹಾಡುಗಳಿವೆಯೆನ್ನಲಾಗಿದೆ. ಸಂಗೀತ ನಿರ್ದೇಶಕ ಕಿರಣ್ ಗೆ ಇದು ಮೂರನೇ ಚಿತ್ರವಂತೆ. ನಿರ್ಮಾಪಕ ಮಂಜುನಾಥ್ ಒಳ್ಳೆಯ ಚಿತ್ರವೊಂದನ್ನು ನಿರ್ಮಿಸುವ ಖುಷಿಯಲ್ಲಿದ್ದರು.
2014-10-19 · Kannada
- adhyaksha 75 days celebration
ಅಧ್ಯಕ್ಷ ಚಿತ್ರಕ್ಕೆ 75ರ ಸಂಭ್ರಮ
ಅಧ್ಯಕ್ಷ ಚಿತ್ರಕ್ಕೆ ಇದೀಗ 75ರ ಸಂಭ್ರಮ. ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಮತ್ತು ನೆನಪಿರಲಿ ಪ್ರೇಮ್, ಶ್ರೀನಗರ ಕಿಟ್ಟಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರುಗು ನೀಡಿದರು. 'ನಿರ್ದೇಶಕ ನಂದ ಕಿಶೋರ್ ನನಗೆ ನಲ್ಲ ಚಿತ್ರದ ವೇಳೆಯಿಂದಲೇ ಪರಿಚಯ. ಆತನಲ್ಲಿ ಒಬ್ಬ ಕಲಾವಿದನಿಗಿಂತಲೂ ಹೆಚ್ಚಿನದೇನೋ ಇರುವಂತೆ ನನಗೆ ಆಗಲೇ ಅನಿಸಿತ್ತು. ಆಗಲೇ ಹೊಸತನದ ಪ್ರಯತ್ನಕ್ಕೆ ತೊಡಗಿಕೊಳ್ಳುವಂತೆ ನಾನು ಆತನಲ್ಲಿ ಹೇಳಿದ್ದೆ. ಇಂದು ಒಬ್ಬ ಹಾಸ್ಯ ಕಲಾವಿದನನ್ನು ಇಟ್ಟುಕೊಂಡು ಸೂಪರ್ ಹಿಟ್ ಚಿತ್ರವನ್ನು ನೀಡುವ ಮೂಲಕ ನನ್ನ ನಂಬಿಕೆಯನ್ನು ನಿಜಗೊಳಿಸಿದ್ದಾರೆ' ಎಂದು ಸುದೀಪ್ ತೃಪ್ತಿಯ ಮಾತುಗಳನ್ನಾಡಿದಾಗ ನಂದಕಿಶೋರ್ ಬಂದು ಸುದೀಪ್ ಪಾದಗಳಿಗೆ ಬಿದ್ದು ಆಶೀರ್ವಾದ ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಸುದೀಪ್ ರನ್ನು ನಾಯಕನನ್ನಾಗಿಸಿ ನಂದಕಿಶೋರ್ ನಿರ್ದೇಶಿಸುತ್ತಿರುವ 'ರನ್ನ' ಚಿತ್ರದ ಒಂದು ನಿಮಿಷದ ಪ್ರೊಮೊವನ್ನು ಬಿಡುಗಡೆಗೊಳಿಸಲಾಯಿತು. ಅಧ್ಯಕ್ಷ ಚಿತ್ರದ ನಾಯಕ ಶರಣ್ ಯಶಸ್ಸಿನ ಖುಷಿಯಲ್ಲಿ ಮಾತೇ ಹೊರಡುತ್ತಿಲ್ಲವೆಂದು ಕಡಿಮೆ ಮಾತನಾಡಿದರು. ಡ್ಯಾನ್ಸ್ ಎಂದರೆ ನಡುಕ ಎಂದು ಹೇಳುತ್ತಲೇ ಒಂದೆರಡು ಹಾಡುಗಳಿಗೆ ಮೈ ಕುಣಿಸಿದರು. ಅರ್ಜುನ್ ಜನ್ಯರಿಗೆ ಹರಿಕೃಷ್ಣರ ಡಿ'ಬೀಟ್ಸ್ ವತಿಯಿಂದ ಸುದೀಪ್ ಸನ್ಮಾನಗೈದರು. ನೆನಪಿರಲಿ ಪ್ರೇಮ್ ಈ ಯಶಸ್ಸನ್ನು ಬರಗಾಲದ ಬೆಳೆಯಂತೆ ಎಂದು ಖುಷಿ ಪಟ್ಟರು. ಚಿಕ್ಕಣ್ಣ ಮತ್ತು ಕುರಿ ಪ್ರತಾಪ್ ಕಾಮಿಡಿ ಸ್ಕಿಟ್ ಮೂಲಕ ರಂಜಿಸಿದರು. ಅನುಪಮಾ ಕಾರ್ಯಕ್ರಮ ನಿರೂಪಿಸಿದರು. ಅರ್ಜುನ್ ಜನ್ಯಾ ಸಂಗೀತದಲ್ಲಿ ಅನುರಾಧ ಭಟ್ ಮೊದಲಾದವರರ ಗಾಯನವಿತ್ತು. ನಟ ರವಿಶಂಕರ್, ಶೈಲಜಾ ನಾಗ್, ಅಸ್ಮಿತಾ ಸೂದ್, ಹೇಬ ಪಟೇಲ್, ಪ್ರಾದೇಶಿಕ ಸೆನ್ಸಾರ್ ಬೋರ್ಡ್ ನಾಗೇಂದ್ರ ಸ್ವಾಮಿ, ನಿರ್ಮಾಪಕ ರಾಮು, ವಾಣಿಜ್ಯ ಮಂಡಳಿ ಅಧ್ಯಕ್ಷ ಗಂಗರಾಜು ಮೊದಲಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು. ಚಿತ್ರದ ಕಲಾವಿದ ಮತ್ತು ತಂತ್ರಜ್ಞರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
2014-10-18 · Kannada
- Khaidi Kannada Movie Audio Release
ಖೈದಿ ಧ್ವನಿ ಸಾಂದ್ರಿಕೆ ಬಿಡುಗಡೆ
ಖೈದಿ ಚಿತ್ರದ ಆಡಿಯೋ ಬಿಡುಗಡೆ ಅದ್ಧೂರಿಯಾಗಿ ನಡೆಯಿತು. ಅರೇ ಖೈದಿ ವಿಷ್ಣುವರ್ಧನ್ ನಟಿಸಿದ ಹಿಟ್ ಸಿನೆಮಾ ತಾನೇ ಎಂಬ ಸಂದೇಹ ಬೇಡ. ಹೆಸರು ಅದೇ ಆಗಿದ್ದರೂ ಚಿತ್ರ ಮಾತ್ರ ಬೇರೆ. ನವ ನಿರ್ದೇಶಕ ಗುರುದತ್ ನಿರ್ದೇಶಿಸಿರುವ ನೂತನ ಖೈದಿಯಲ್ಲಿ ಧನುಶ್ ನಾಯಕ. 'ಎ' ಖ್ಯಾತಿಯ ಚಾಂದಿನಿ ನಾಯಕಿ. ನವ ಸಂಗೀತ ನಿರ್ದೇಶಕರ ಜೋಡಿ ಜಸ್ಟಿನ್ ಮತ್ತು ಉದಯ್ ಸೇರಿಕೊಂಡು ಕನ್ನಡಕ್ಕೆ ಹೊಸಬರೆನಿಸಿದ ಬಾಲಿವುಡ್ ಗಾಯಕರಿಂದ ಹಾಡಿಸಿದ್ದಾರೆನ್ನುವುದು ಪ್ರಮುಖ ವಿಶೇಷ. ಸಂಗೀತ ನಿರ್ದೇಶಕರಲ್ಲೊಬ್ಬರಾದ ಉದಯ್ ಮೂಲತಃ ಬೆಂಗಳೂರಿನವರು. ಅವರು ಮಾತನಾಡುತ್ತಾ 'ನನ್ನ ತಂದೆ ಡಾ.ವ್ಯಾಸರಾವ್ ಕನ್ನಡದಲ್ಲಿ ಲೇಖಕರು. ಅವರ ಪುತ್ರನಾಗಿ ನಾನು ಕನ್ನಡ ಚಿತ್ರಕ್ಕೆ ಸಂಗೀತ ನೀಡಲು ಸಾಧ್ಯವಾಗಿದ್ದಕ್ಕೆ ಖುಷಿಯಾಗಿದ್ದೇನೆ' ಎಂದರು. ಅವರ ಜೋಡಿ ಜಸ್ಟಿನ್ ಮಾತನಾಡಿ ಮುಂಬೈನ ಗಾನ ಪ್ರತಿಭೆಗಳಾದ ನೇಹಾ ಬಸಿ, ಹಂಸಿಕಾ, ಅದಿತಿ, ರಿಷಿ ಮತ್ತು ನಿನಾದ್ ಕಾಮತ್ ರನ್ನು ಪರಿಚಯಿಸಿದರು. ಅವರಲ್ಲಿ ಹಂಸಿಕಾ ಚಮಕ್ ಚಲ್ಲೋ ಹಾಡಿನಿಂದ ಖ್ಯಾತಿ ಹೊಂದಿದವರಾಗಿದ್ದರೆ, ನಿನಾದ್ ಕಾಮತ್ ಮೂಲತಃ ಕುಮುಟಾದವರಾಗಿದ್ದು ಮುಂಬೈನಲ್ಲೇ ಇರುವವರು. ಪರಿಣೀತಾ ಸೇರಿದಂತೆ ಒಂದಷ್ಟು ಬಾಲಿವುಡ್ ಚಿತ್ರಗಳಲ್ಲಿ ನಟಿಸಿದವರು. ಅದಿತಿಗೆ ಅಪಘಾತವಾಗಿ ಕಾಲು ನೋವಿದ್ದರೂ ಕೂಡ ಕುಂಟಿಕೊಂಡೇ ಬಂದು ವೇದಿಕೆ ಮೇಲೆ ನಾಲ್ಕು ಸಾಲು ಹಾಡಿ ಸಮಾರಂಭದ ಮೇಲಿದ್ದ ತಮ್ಮ ಆಸಕ್ತಿಯನ್ನು ತೋರಿಸಿದರು. ಉಳಿದಂತೆ ಹಾಡುಗಳಿಗೆ ದನಿಯಾಗಿದ್ದ ಶಂಕರ್ ಮಹಾದೇವನ್, ಕಾರ್ತಿಕ್, ಮನೋ ಮೊದಲಾದವರು ಹಾಜರಿರಲಿಲ್ಲ. ಆದರೆ ನಾಯಕಿ ಚಾಂದನಿ ಜೊತೆಗೆ ಧನುಶ್ ಡ್ಯಾನ್ಸ್ ಮಾಡಿದಾಗ ಇಡೀ ಸಭೆಯಲ್ಲಿ ವಿದ್ಯುತ್ ಸಂಚಾರವಾಯಿತು. ಜೊತೆಗೆ ವಿಷ್ಣುವರ್ಧನ್ ರ ಖೈದಿ ಚಿತ್ರದ 'ತಾಳೆ ಹೂವ ಮಡಿಲಿಂದ..' ಎಂಬ ಹಾಡಿನ ರೀಮಿಕ್ಸ್ ಇದಾಗಿದ್ದು, ಇದರಲ್ಲಿ ನಟಿಸಲು ಅವಕಾಶ ಸಿಕ್ಕಿದ್ದಕ್ಕೆ ಕೃತಾರ್ಥತೆಯಿರುವುದಾಗಿ ಚಾಂದಿನಿ ಹೇಳಿದರು. ದೀಪಾವಳಿ ಚಿತ್ರದಲ್ಲಿ ವಿಷ್ಣುವರ್ಧನ್ ಜೊತೆಗೆ ನಟಿಸಿದ್ದನ್ನು ಮರೆಯಲಾಗದ ಅನುಭವವೆಂದ ಆಕೆ ಈ ಸಂದರ್ಭದಲ್ಲಿ ಅವರನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದರು. ಮಾತ್ರವಲ್ಲ, ದೀಪಾವಳಿಯ ಆ ಹಾಡನ್ನು ಈ ದೀಪಾವಳಿಗೆ ಡೆಡಿಕೇಟ್ ಮಾಡುವುದಾಗಿ ಹೇಳಿದರು. ನಿರ್ದೇಶಕ ಗುರುದತ್ ಚಿತ್ರದ ಐದು ಹಾಡುಗಳು ಐದು ರೀತಿಯಲ್ಲಿದ್ದುಕೊಂಡು ವಿಭಿನ್ನವಾಗಿವೆ ಎಂಬ ಹೊಗಳಿಕೆ ಎಲ್ಲರಿಂದ ದೊರಕಿದ್ದು ಅದೇ ಕಾರಣ ಹೇಳಿ ಕ್ಯಾಸೆಟ್ ಹಕ್ಕು ಪಡೆದುಕೊಂಡ ಲಹರಿ ವೇಲುರವರಿಗೆ ಕೃತಜ್ಞನಾಗಿರುವುದಾಗಿ ಹೇಳಿದರು. ಬಳಿಕ ಮಾತನಾಡಿದ ಲಹರಿ ವೇಲು ಖೈದಿಯ ರಿಮೇಕ್ ಹಾಡಿನ ಹಕ್ಕಿಗಾಗಿ ತುಂಬ ಕಷ್ಟಪಟ್ಟಿದ್ದು ಜಾವೇದ್ ಅಖ್ತರ್ ಕೂಡ ಸಹಾಯ ಮಾಡಿದ್ದಾರೆಂದು ನೆನಪಿಸಿಕೊಂಡರು. ಚಿತ್ರದ ನಿರ್ಮಾಪಕಿಯರಾದ ಕಲಾಭಕ್ತ, ನಯನಾ ಶರತ್ ಸೇರಿದಂತೆ ಮಾಸ್ಟರ್ ಅನಂದ್, ಬಸವೇ ಗೌಡ, ಬಸಂತ್ ಕುಮಾರ್ ಪಾಟೀಲ್, ಅಮಿತ್ ಮೊದಲಾದವರ ಸಮ್ಮುಖದಲ್ಲಿ ಚಿನ್ನೇಗೌಡ ಮತ್ತು ಕೆಎಸ್ ಎಲ್ ಸ್ವಾಮಿ ಆಡಿಯೋ ಬಿಡುಗಡೆಗೊಳಿಸಿದರು.
2014-10-17 · Kannada
- Goa Audio and Trailer Launch
ಗೋವಾ ಚಿತ್ರಕ್ಕೀಗ ಟ್ರೇಲರ್ ಹಾಡುಗಳ ಹವಾ
ಗೋವಾ ಚಿತ್ರದ ಸೀಡಿ ಬಿಡುಗಡೆಯಾಗಿದೆ. ಖ್ಯಾತ ನಿರ್ಮಾಪಕ ಸ್ವಸ್ತಿಕ್ ಶಂಕರ್ ಸೀಡಿ ಬಿಡುಗಡೆಗೊಳಿಸಿದ್ದಾರೆ. ಗಾಜಿನ ತೊಟ್ಟಿಯಲ್ಲಿ ಗೋವಾ ತೀರದ ಪ್ರತಿಕೃತಿ ನಿರ್ಮಿಸಿ ಅದರೊಳಗಿನಿಂದ ಸೀಡಿ ಬಿಡುಗಡೆಗೊಳಿಸಿದ್ದು ಸಮಾರಂಭದ ವಿಶೇಷತೆಯಾಗಿತ್ತು. ಸಮಾರಂಭದಲ್ಲಿ ಮೂರು ಹಾಡುಗಳನ್ನು ಮತ್ತು ಟ್ರೇಲರ್ ಗಳನ್ನು ಕೂಡ ಬಿಡುಗೊಳಿಸಲಾಯಿತು. ನಿರ್ದೇಶಕ ಸೂರ್ಯ ಮಾತನಾಡಿ 'ಚಿತ್ರ ನಿರೀಕ್ಷೆಗಿಂತ ತಡವಾಗಿದೆ. ಹಾಗಂತ ಹಾಡುಗಳು ಹಳೆಯದಾಯಿತೆಂದು ಖಂಡಿತಾ ತಿಳಿಯಬೇಡಿ. ಯಾಕೆಂದರೆ, ಕಳೆದ ವರ್ಷವೇ ಇಂದಿಗೂ ಹೊಸ ಟ್ರೆಂಡ್ ಸೃಷ್ಠಿಸುವ ರೀತಿಯಲ್ಲಿನ ಹಾಡುಗಳನ್ನು ಅರ್ಜುನ್ ಜನ್ಯಾ ನೀಡಿದ್ದಾರೆ' ಎಂದು ಹಾಡುಗಳ ಬಗ್ಗೆ ಭರವಸೆಯ ಮಾತುಗಳನ್ನಾಡಿದರು. ಗೋವಾದಲ್ಲಿ ಚಿತ್ರೀಕರಣ ನಡೆಸುವಾಗ ಕಲಾವಿದರು ನೀಡಿದ ಸಹಕಾರ ಅಪಾರ ಎಂದು ಎಲ್ಲರಿಗೂ ಧನ್ಯವಾದ ಹೇಳಲು ಸೂರ್ಯ ಮರೆಯಲಿಲ್ಲ. ಕಾರ್ಯಕ್ರಮದ ನಾಯಕ ಅರ್ಜುನ್ ಜನ್ಯ ಮಾತನಾಡಿ 'ಚಿತ್ರದ ಎಲ್ಲ ಹಾಡುಗಳನ್ನು ಕನ್ನಡದ ಗಾಯಕರೇ ಹಾಡಿದ್ದಾರೆ ಎಂಬುದು ಈ ಸೀಡಿಯ ವಿಶೇಷ' ಎಂದರು. ಚಿತ್ರದ ನಾಯಕರಲ್ಲೊಬ್ಬರಾದ ಶ್ರೀಕಾಂತ್ ಗೆ 'ಶುರುವಾಯ್ತು..' ಎಂದು ಆರಂಭವಾಗುವ ಹಾಡು ಫೇವರಿಟ್ ಅಂತೆ. ಗೋವಾಗೆ ಹೋಗಿ ಚಿತ್ರೀಕರಣ ಮಾಡಿ ಬಂದಿದ್ದು ಒಂದು ಸುಂದರವಾದ ಟ್ರಿಪ್ ಹೋಗಿ ಬಂದ ಫೀಲ್ ನೀಡಿದೆ ಎಂದರು ಶ್ರೀಕಿ. ಅಂದಹಾಗೆ ನಾಯಕಿಯರಲ್ಲೊಬ್ಬರಾದ ಶರ್ಮಿಳಾ ಮಾಂಡ್ರೆ ಕೂಡ 'ಶುರುವಾಯ್ತು' ಎಂಬ ಅದೇ ಹಾಡು ತಮಗೂ ಫೇವರಿಟ್ ಎಂದು ಹೇಳುವ ಮೂಲಕ ಆ ಹಾಡಿನ ಬಗ್ಗೆ ಇಲ್ಲದ ಕುತೂಹಲ ಮೂಡಿಸಿದ್ದಾರೆ. ನಾಯಕಿಯರಾದ ರಚೆಲ್, ಸೋನು ಗೌಡ ಕೂಡ ಸಮಾರಂಭದಲ್ಲಿ ಪಾಲ್ಗೊಂಡು ವೇದಿಕೆಗೆ ಕಳೆ ನೀಡಿದರು. ಚಿತ್ರದಲ್ಲಿ ಡ್ಯಾನಿ ಮತ್ತು ಖಳನಟ ಧರ್ಮ ಜೋಡಿಯಾಗಿ ಕಾಣಿಸುತ್ತಿರುವುದು ವಿಶೇಷ. ಅಂದರೆ ಧರ್ಮ ಗೇ ಪಾತ್ರ ಮಾಡುತ್ತಿದ್ದಾರಂತೆ. ನಟ ಕರಿಸುಬ್ಬು ಸೇರಿದಂತೆ ನಿರ್ಮಾಪಕ ಶಂಕರೇಗೌಡಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
2014-10-17 · Kannada
- Inaguration for Fly Movie
"ಫ್ಲೈ "ಚಿತ್ರಕ್ಕೆ ಮುಹೂರ್ತ
ಭರತ್ ಜಿ ಪ್ರಥಮ ಬಾರಿ ನಿರ್ದೇಶಿಸುತ್ತಿರುವ ಚಿತ್ರ ಫ್ಲೈ. ನಾಳೆ ಮಾಡೋಣ ಎನ್ನುವುದನ್ನು ಇಂದೇ ಮಾಡೋಣ ಎನ್ನುವ ಮನೋಭಾವ ಹೊಂದಿರುವ ನಾಯಕ-ನಾಯಕಿಯ ಕತೆ ಹೊಂದಿರುವ ಚಿತ್ರವಿದು. ಕತೆ ಕೇಳಿ ಸ್ವತಃ ರಮೇಶ್ ಅರವಿಂದ್ ನಟಿಸಲು ಆಸಕ್ತಿ ತೋರಿದ್ದರಂತೆ. ಬಹುಶಃ ಅದೇ ಕಾರಣಕ್ಕೆ ಇರಬೇಕು, ಚಿತ್ರದ ಪ್ರಥಮ ದೃಶ್ಯಕ್ಕೆ ಕ್ಲ್ಯಾಪ್ ಹೊಡೆಯಲು ಖುದ್ದು ರಮೇಶ್ ಆಗಮಿಸಿದ್ದರು. ಛಾಯಾಗ್ರಾಹಕ ರಮೇಶ್ ಗೆ ಇದು 9ನೇ ಚಿತ್ರ. ಇದೊಂದು ಥ್ರಿಲ್ಲಿಂಗ್ ಪ್ರೊಜೆಕ್ಟ್ ಆಗಿದ್ದು, ಛಾಯಾಗ್ರಹಣಕ್ಕಾಗಿ ಹೊಸ ಉಪಕರಣಗಳನ್ನು ಬಳಸಿರುವುದಾಗಿ ಹೇಳಿಕೊಂಡರು. ಚಿತ್ರವನ್ನು ರೆಡ್ ಡ್ರ್ಯಾಗನ್ ಕ್ಯಾಮರಾದಲ್ಲಿ ಚಿತ್ರೀಕರಿಸುವುದಾಗಿ ತಿಳಿಸಿದರು. ನಾಲ್ಕು ವರ್ಷದ ಬಳಿಕ ಸಂಘಿತ ನಿರ್ದೇಶಕರಾಗಿ ರಘು ದೀಕ್ಷಿತ್ ಕಾಣಿಸಿಕೊಳ್ಳುತ್ತಿದ್ದು, ಚಿತ್ರದಲ್ಲಿ 7 ಹಾಡುಗಳಿವೆಯಂತೆ. ಚಿತ್ರದ ಹಿನ್ನೆಲೆ ಸಂಗೀತ ಕೂಡ ಪ್ರಧಾನ ಪಾತ್ರವಹಿಸಿದ್ದು, ಇದೊಂದು ಮ್ಯೂಸಿಕಲ್ ಸಿನೆಮಾ ಕೂಡ ಹೌದು ಎಂದರು ರಘು ದೀಕ್ಷಿತ್. ಸೈಕೋ, ಕೋಟೆ, ಜಸ್ಟ್ ಮಾತ್ ಮಾತಲ್ಲಿ ಚಿತ್ರಗಳ ಹಾಡುಗಳಿಗಿಂತಲೂ ದೊಡ್ಡ ಮಟ್ಟದ ಜನಪ್ರಿಯ ಗೀತೆಗಳನ್ನು ನಿರೀಕ್ಷಿಸುವಂತೆ ಮಾಡಿದ್ದಾರೆ ರಘು ದೀಕ್ಷಿತ್. ನಾಯಕನಾಗಿ ಖ್ಯಾತ ಹಾಸ್ಯನಟ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ನಟಿಸಿದ್ದಾರೆ. ನಾಯಕಿಯಾಗಿ ಮಿಲನಾ ನಟಿಸಿದ್ದಾರೆ. ಉಳಿದ ಪಾತ್ರಗಳಲ್ಲಿ ಅಚ್ಯುತ ಕುಮಾರ್, ರಾಜೇಂದ್ರ ಕಾರಂತ್, ರಂಗಾಯಣ ರಘು, ಸಾಧು ಕೋಕಿಲ, ಚಿಕ್ಕಣ್ಣ, ಪ್ರಕಾಶ್, ಭಾಗ್ಯಶ್ರೀ ರಾವ್, ಬೇಬಿ ಶ್ರಾವ್ಯ, ಪಾಪ ಪಾಂಡು, ಮಿತ್ರ, ನಿಶಿತಾ ಮೊದಲಾದ ಖ್ಯಾತನಾಮರ ತಂಡವಿದೆ. ವಿಘ್ನೇಶ್ವರ ಎಂಟರ್ ಟೈನರ್ ನಲ್ಲಿ ಚಿತ್ರವನ್ನು ನಿರ್ಮಿಸುತ್ತಿರುವ ಮೋಹನ್ ಕುಮಾರ್ ಎಚ್ ಮೂಲತಃ ಲ್ಯಾಂಡ್ ಬ್ಯುಸಿನೆಸ್ ನಲ್ಲಿ ತೊಡಗಿಸಿಕೊಂಡವರು. ಚಿತ್ರಕ್ಕೆ ಮಾಸ್ ಮಾದ ಸಾಹಸ ಸಂಯೋಜನೆಯಿದ್ದು ರಾಜ್ಯದಾದ್ಯಂತ ಇರುವ ರೊಮ್ಯಾಂಟಿಕ್ ಪ್ರೇಕ್ಷಣೀಯ ಸ್ಥಳಗಳಲ್ಲಿ ಚಿತ್ರವನ್ನು ಚಿತ್ರೀಕರಿಸುವ ಯೋಜನೆ ತಂಡದ್ದಾಗಿದೆ.
2014-10-16 · Kannada
- Mohanlal Interview
ಮೋಹನ ಸಂದರ್ಶನ
ಮೈತ್ರಿ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಷ್ಟೇ ಪವರ್ ಫುಲ್ ಪಾತ್ರದಲ್ಲಿ ನಟಿಸುತ್ತಿರುವವರು ಮಲಯಾಳಂನ ಸುಪರ್ ಸ್ಟಾರ್ ಮೋಹನ್ ಲಾಲ್. ಅವರು ಕಳೆದ ವಾರ ಚಿತ್ರದ ತಮ್ಮ ಪಾತ್ರಕ್ಕಾಗಿ ಕೊಚ್ಚಿಯ ತಮ್ಮದೇ ಮಾಲಕತ್ವದ ವಿಸ್ಮಯಾ ಸ್ಟುಡಿಯೋದಲ್ಲಿ ಕಂಠದಾನ ನಿರತರಾಗಿದ್ದರು. ನಿರ್ದೇಶಕ ಬಿಎಮ್ ಗಿರಿರಾಜ್ ಹೇಳಿಕೊಡುವುದನ್ನು ಚಾಚೂ ತಪ್ಪದೆ ಅನುಸರಿಸುವ ಮೂಲಕ ಕನ್ನಡದ ವಿಧೇಯ ವಿದ್ಯಾರ್ಥಿಯಂತೆ ಕಾಣಿಸುತ್ತಿದ್ದ ಮೋಹನ್ ಲಾಲ್ ಡಬ್ಬಿಂಗ್ ಬಳಿಕ ಒಂದಷ್ಟು ಹೊತ್ತು ಮಾತಿಗೆ ಸಿಕ್ಕರು. ಇಲ್ಲಿ ಅವರು ನಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತಾ ಇದುವರೆಗೆ ಯಾವ ಸಂದರ್ಶನಗಳಲ್ಲಿಯೂ ನೀಡಿರದ ಉತ್ತರಗಳನ್ನು ನೀಡಿದ್ದಾರೆ ಎನ್ನುವುದು ವಿಶೇಷ. ಭಾರತೀಯ ಚಿತ್ರರಂಗದ ಬೆರಳಿಕೆಯ ಶ್ರೇಷ್ಠ ನಟರಾಗಿ ಹಲವು ಮಾಧ್ಯಮಗಳಿಂದ ಗುರುತಿಸಲ್ಪಟ್ಟ ಮೋಹನ್ ಲಾಲ್ ನಟನೆಗೆ ನಿಂತರೆ ಅದರಲ್ಲಿನ ನೈಜತೆ ಕಂಡು ಮಣಿರತ್ನಂ, ರಾಮ್ ಗೋಪಾಲ್ ವರ್ಮರಂಥ ದಿಗ್ಗಜ ನಿರ್ದೇಶಕರೇ ಕಟ್ ಹೇಳಲು ಮರೆತು ಆತನಲ್ಲೇ ತಲ್ಲೀನವಾಗಿ ಹೋದದ್ದು ಇತಿಹಾಸ! ಅದೇಹೊತ್ತಿಗೆ ಜಾದೂ ವಿದ್ಯೆಗಳ ಪಾರಂಗತನಾಗಿ, ಜಾಹಿರಾತುಗಳಿಗೆ ರೂಪದರ್ಶಿಯಾಗಿ, ಹೋಟೆಲ್ ಉದ್ಯಮಿಯಾಗಿ, ಸಮಾಜ ಸೇವಕನಾಗಿ, ಗಾಯಕನಾಗಿ, ಸಿಸಿಎಲ್ ನಲ್ಲಿ ಕ್ರಿಕೆಟ್ ಆಟಗಾರನಾಗಿ ಬಹುಮುಖ ವ್ಯಕ್ತಿತ್ವ ತೋರಿಸಿದ್ದಾರೆ. ಗೌರವಪೂರ್ವಕವಾಗಿ ಡಾಕ್ಟರೇಟ್, ಲೆಫ್ಟಿನೆಂಟ್ ಕರ್ನಲ್ ಪದವಿಗೆ ಭಾಜನರಾಗಿರುವ ಮೋಹನ್ ಲಾಲ್ ಟೀಕ್ವಾಂಡೋನಲ್ಲಿ ಗೌರವಾನ್ವಿತ ಬ್ಲ್ಯಾಕ್ ಬೆಲ್ಟ್ ಹೋಲ್ಡರ್ ಕೂಡ ಹೌದು. 6ಬಾರಿ ಕೇರಳ ರಾಜ್ಯ ಸರ್ಕಾರದ ಶ್ರೇಷ್ಠನಟರಾದ ಇವರಿಗೆ ಅದೇ ವಿಭಾಗದಲ್ಲಿ 7 ಬಾರಿ ಫಿಲ್ಮ್ ಫೇರ್ ಅವಾರ್ಡ್ ಲಭಿಸಿದೆ. ಎರಡು ಬಾರಿ ಶ್ರೇಷ್ಠ ನಟರಾಗಿ ಮತ್ತು ಶ್ರೇಷ್ಠ ನಿರ್ಮಾಪಕರಾಗಿ ಒಟ್ಟು ಮೂರು ಬಾರಿ ರಾಷ್ಟ್ರಪ್ರಶಸ್ತಿಗೆ ಭಾಜನರಾಗಿರುವ ಮೋಹನ್ ಲಾಲ್ ಕಂಪನಿ ಎಂಬ ಹಿಂದಿ ಚಿತ್ರದ ನಟನೆಗಾಗಿ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಸ್ವಂತವಾಗಿಸಿದ್ದಾರೆ. ಇವುಗಳ ನಡುವೆ ಖಾಸಗಿ ಪ್ರಶಸ್ತಿಗಳು ಅಸಂಖ್ಯಾತ. 13 ವರ್ಷಗಳ ಹಿಂದೆ ಪದ್ಮಶ್ರೀಗೆ ಅರ್ಹರಾದ ಮೋಹನ್ ಲಾಲ್ ರ ಹೆಸರನ್ನು ಈ ಬಾರಿ ಪದ್ಮಭೂಷಣಕ್ಕೆ ನಾಮನಿರ್ದೇಶಿತಗೊಳಿಸಲಾಗಿದೆ. ಅವರಿಗೆ ಶುಭ ಹಾರೈಕೆಗಳು. ಕರ್ನಾಟಕ ಎಂದು ಹೇಳುವಾಗ ಪ್ರಥಮದಲ್ಲಿ ನಿಮಗೆ ನೆನಪಾಗುವುದೇನು? ಒಬ್ಬ ಸಿನೆಮಾ ನಟನಾಗಿರುವುದರಿಂದ ಸಹಜವಾಗಿ ಕರ್ನಾಟಕವೆಂದಾಕ್ಷಣ ನನಗೆ ನೆನಪಾಗುವುದೇ ಡಾ. ರಾಜಕುಮಾರ್. ಅವರೊಂದಿಗೆ ನನ್ನದು 38 ವರ್ಷಗಳ ಹಿಂದಿನ ಬಾಂಧವ್ಯ! ಕಾಲೇಜು ದಿನಗಳಲ್ಲಿ ಸ್ನೇಹಿತರೊಂದಿಗೆ ಬೆಂಗಳೂರಿಗೆ ಬಂದು ಸುತ್ತಾಡಿ ಹೋಗುತ್ತಿದ್ದೆ. ಅಂದಿನ ಸಿಟಿ, ಅಲ್ಲಿನ ಕ್ಲೈಮ್ಯಾಟ್ ಎಲ್ಲವೂ ಇಷ್ಟವಾಗಿತ್ತು. ಇಂದಿನ ಬದಲಾವಣೆ ಅದನ್ನೊಂದು ಕಾಂಕ್ರಿಟ್ ಕಾಡನ್ನಾಗಿಸಿರುವುದು ಬೇರೆ ಮಾತು. ಪರಭಾಷಾ ಸಿನೆಮಾಗಳಲ್ಲಿ ಕನ್ನಡ ಸಿನೆಮಾ, ಡಾ.ರಾಜಕುಮಾರ್ ಸಿನೆಮಾ ಎಂಬುದು ನನಗೆ ಆಕರ್ಷಣೆಯಾಗಿತ್ತು. ಅಲ್ಲದೆ ಮಲಯಾಳಂಗೆ ಡಬ್ ಆಗಿದ್ದ ಅವರ ಹಲವು ಚಿತ್ರಗಳನ್ನು ನೋಡಿದ್ದೆ. ಅವುಗಳಲ್ಲಿ ಚಂದನ ಕಾಡ್ (ಗಂಧದ ಗುಡಿ) ಕೂಡ ಒಂದು. ಮಾತ್ರವಲ್ಲ ದ್ವಾರಕೀಶ್ ರ ಹಾಸ್ಯ ಪಾತ್ರಗಳು, ಪಾಯಿಂಟ್ ಪರಿಮಳ ಎಂಬ ಸಿನೆಮಾ ಹೀಗೆ ದೊಡ್ಡ ನೆನಪುಗಳ ಸಾಲೇ ಅಲ್ಲಿದೆ. ನಟನಾದ ಬಳಿಕ ನನ್ನ ಹಲವಾರು ಚಿತ್ರಗಳು ಬೆಂಗಳೂರಿನಲ್ಲಿ ಚಿತ್ರೀಕರಿಸಲ್ಪಟ್ಟಿವೆ. ನಾನು ರಾಜ್ ರನ್ನು ಅವರ ಮನೆಯಲ್ಲೇ ಭೇಟಿಯಾಗಿದ್ದೇನೆ. ಅವರ ಭಕ್ತ ಪ್ರಹ್ಲಾದದ ಹಿರಣ್ಯ ಕಶಿಪುವಾಗಿ ಮಲಯಾಳಂನಲ್ಲಿ ನಾನು ನಟಿಸುವಂತೆ ಅವರು ಆಗ್ರಹಿಸಿದ್ದರಂಬುದನ್ನು ಕೂಡ ಮರೆಯುವಂತಿಲ್ಲ. ಡಾ.ರಾಜಕುಮಾರ್ ಫ್ಯಾಮಿಲಿ ಹೊರತುಪಡಿಸಿ ನಿಮಗೆ ಕನ್ನಡದ ಯಾವ ಕಲಾವಿದರ ಪರಿಚಯವಿದೆ? ಅಯ್ಯೋ.. ತುಂಬಾನೇ ಮಂದಿ ನನಗೆ ಗೊತ್ತು. ಸುಮಲತಾರಿಂದ ಹಿಡಿದುನೀತು ತನಕ ಹಲವು ಮಂದಿ ಕನ್ನಡದ ನಟಿಯರು ನನ್ನೊಂದಿಗೆ ಮಲಯಾಳಂ ಚಿತ್ರದಲ್ಲಿ ನಟಿಸಿದ್ದಾರೆ. ಡಾ. ವಿಷ್ಣುವರ್ಧನ್ ಸರ್ ಕೂಡ ನನಗೆ ಸ್ನೇಹಿತರಾಗಿದ್ದರು. ಅವರ ಪತ್ನಿ ಭಾರತಿಯಮ್ಮ ನನ್ನ ತಾಯಿಯಾಗಿ ನಟಿಸಿದ್ದಾರೆ. ಅಂಬರೀಶ್, ರವಿಚಂದ್ರನ್, ರಮೇಶ್ ಅರವಿಂದ್ ಹೀಗೆ ಹೆಸರುಗಳನ್ನು ಹೇಳುತ್ತಾ ಹೋಗಬಹುದು. ಸಿಸಿಎಲ್ ನಲ್ಲಿ ಕಂಡದ್ದನ್ನು ಹೊರತು ಪಡಿಸಿ ನಟನಾಗಿ ಸುದೀಪ್ ಬಗ್ಗೆ ಪರಿಚಯವಿತ್ತೇ? ಖಂಡಿತಾ. ಅವರೊಬ್ಬ ಕನ್ನಡದ ಯುವನಟ ಎಂದು ಮಾತ್ರ ಗೊತ್ತಿತ್ತು. ಆದರೆ ಯಾವಾಗ ರಾಜಮೌಳಿ ನಿರ್ದೇಶನದಲ್ಲಿ ಅವರ ಅಭಿನಯದ 'ಈಗ' ಚಿತ್ರವನ್ನು ನೋಡಿದೆನೋ ಬಳಿಕ ನನಗೆ ಅವರು ತುಂಬಾ ಪ್ರತಿಭಾವಂತ ಎಂದು ತಿಳಿಯಿತು. ವಾಸ್ತವದಲ್ಲಿ ನಾನು ಮಲಯಾಳಂ ಚಿತ್ರವೊಂದರಲ್ಲಿ ಅವರಿಗೊಂದು ಸ್ಪೆಷಲ್ ಪಾತ್ರದಲ್ಲಿ ನಟಿಸುವಂತೆ ಆಹ್ವಾನಿಸಲಾಗಿತ್ತು. ಆದರೆ ತಮಗೆ ಮಲಯಾಳಂ ಭಾಷಾ ಜ್ಞಾನವಿಲ್ಲದ ಕಾರಣ ತಮ್ಮಿಂದ ಡಬ್ ಮಾಡಲಾಗದು ಎಂದು ಹೇಳಿ ಪಾತ್ರವನ್ನು ನಿರಾಕರಿಸಿದರು. ಅವರನ್ನೇ ಗಮನದಲ್ಲಿಟ್ಟು ತಯಾರಿಸಿದ ಪಾತ್ರವಾಗಿದ್ದ ಕಾರಣ ಬಳಿಕ ಆ ಪಾತ್ರವನ್ನೇ ಇಲ್ಲವಾಗಿಸಿ ಚಿತ್ರಕತೆಯಲ್ಲಿ ಬದಲಾವಣೆ ತಂದೆವು. ಕ್ರಿಕೆಟ್ ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ಯಾಕೆ ಗೆಲುವು ಸಾಧಿಸುತ್ತೆ ಅಂದ್ರೆ ಅದಕ್ಕೆ ಕಾರಣ ಸುದೀಪ್ ನಾಯಕತ್ವವೇ ಕಾರಣ. ನೀವು ಅಪರೂಪದಲ್ಲಿ ಒಪ್ಪಿಕೊಂಡ ಕನ್ನಡದ ಚಿತ್ರ ಮೈತ್ರಿ. ಅದರ ಬಗ್ಗೆ ಹೇಳಿ ಒಂದು ಒಳ್ಳೆಯ ಚಿತ್ರ. ಹಾಗಾಗಿಯೇ ನಾನು ಆ ಪಾತ್ರವನ್ನು ಒಪ್ಪಿದೆ. ನಿರ್ದೇಶಕ ಗಿರಿರಾಜ್ ಮನದಲ್ಲಿ ಪಾತ್ರವಾಗಿ ನನ್ನನ್ನೇ ಕಲ್ಪಿಸಿರುವುದಾಗಿ ಹೇಳಿದರು. ಅವರ ಆಲೋಚನೆಗಳು, ನಿರೂಪಣೆಯ ರೀತಿ ಎಲ್ಲವೂ ತುಂಬಾನೇ ಭರವಸೆ ಮೂಡಿಸುವಂಥವು. ಮಾತ್ರವಲ್ಲ, ನಾನು ಮಲಯಾಳಂನಲ್ಲಿ ಪ್ರೇಮ್ ನಸೀರ್, ತಮಿಳಿನ ಶಿವಾಜಿ ಗಣೇಶನ್, ತೆಲುಗಿನ ನಾಗೇಶ್ವರ ರಾವ್, ಹಿಂದಿಯ ಅಮಿತಾಬ್ ಬಚ್ಚನ್ ಹೀಗೆ ಲೆಜೆಂಡ್ರಿ ಕಲಾವಿದರೊಂದಿಗೆ ನಟಿಸಿದ್ದೇನೆ. ಕನ್ನಡದಲ್ಲಿ ಮಾತ್ರ ಡಾ.ರಾಜಕುಮಾರ್ ಜೊತೆ ನಟಿಸುವ ಅವಕಾಶ ಸಿಕ್ಕಿರಲಿಲ್ಲ. ಆ ಆಸೆಯನ್ನು ಅವರ ಪುತ್ರ ಪುನೀತ್ ರಾಜಕುಮಾರ್ ಜೊತೆಗೆ ನಟಿಸುವ ಮೂಲಕ ಪೂರ್ತಿಗೊಳಿಸಿದ ತೃಪ್ತಿಯಿದೆ! ಜೊತೆಗೆ ಪುನೀತ್ ಕೂಡ ತುಂಬಾನೇ ಫ್ರೆಂಡ್ಲಿ ವ್ಯಕ್ತಿತ್ವದವರು. ಮುನ್ನೂರು ಚಿತ್ರಗಳನ್ನು ದಾಟಿರುವ ನೀವು ಇಂದಿಗೂ ಕೈ ತುಂಬ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದೀರಿ. ಆದರೆ ನಿಮ್ಮ ನಿರ್ಮಾಣದ ಚಿತ್ರಗಳಲ್ಲಿನ ಚಿತ್ರಕತೆಯ ಗಟ್ಟಿತನ ಉಳಿದವುಗಳಲ್ಲಿ ಕಾಣಿಸುವುದಿಲ್ಲ. ಇನ್ನಷ್ಟು ಚ್ಯೂಸಿಯಾಗಬೇಕು ಎನಿಸುವುದಿಲ್ಲವೇ? ನಾನು ಕಡಿಮೆ ಚಿತ್ರಗಳಲ್ಲಿ ನಟಿಸಿದೆನೆಂಬ ಕಾರಣದಿಂದ ಅವುಗಳ ಕ್ವಾಲಿಟಿ ಹೆಚ್ಚಾಗಬೇಕೆಂದೇನಿಲ್ಲ. ಯಾಕೆಂದರೆ ಪ್ರತಿಯೊಂದು ಚಿತ್ರವನ್ನು ಕೂಡ ಸಾಕಷ್ಟು ಆಲೋಚಿಸಿಯೇ ಆಯ್ಕೆ ಮಾಡಿರುತ್ತೇನೆ. ಮಾತ್ರವಲ್ಲ, ನಾನು ನಟಿಸಲು ನಿರಾಕರಿಸಿದರೆ ನನಗೆಂದೇ ತಯಾರಾಗುವ ಹಲವು ಚಿತ್ರಗಳು ಕಡಿಮೆಯಾಗುತ್ತವೆ. ಅದಕ್ಕೆ ಸಂಬಂಧಿಸಿದ ಕೆಲಸಗಾರರಿಗೆ ಕೆಲಸವಿಲ್ಲದಾಗುತ್ತದೆ. ಮೂಲತಃ ನಾನು ನಿರ್ಮಾಣ ಸಂಸ್ಥೆಗಳೊಂದಿಗೆ ಬಹಳಷ್ಟು ಕಮಿಟ್ ಮೆಂಟ್ ಇರಿಸಿಕೊಂಡಿರುವವನು. ಹಾಗಾಗಿ ಸಾಧ್ಯವಾದಷ್ಟು ಒಳ್ಳೆಯ ಚಿತ್ರಗಳಲ್ಲಿ ನಟಿಸುವ ಪ್ರಯತ್ನ ನಡೆದೇ ಇರುತ್ತದೆ. ದೃಶ್ಯಂ ಸಿನೆಮಾದ ತಮಿಳು ರಿಮೇಕ್ ನಲ್ಲಿ ನಿಮ್ಮ ಮಗ ಪ್ರಣವ್ ಅಸಿಸ್ಟೆಂಟ್ ಡೈರೆಕ್ಟರಾಗಿದ್ದಾರೆ. ಡೈರೆಕ್ಷನ್ ಅವರ ಆಸಕ್ತಿಯೇ? ಹೌದು. ಆದರೆ ಆತ ಈಗಾಗಲೇ ಬಾಲನಟನಾಗಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾನೆ. ದೃಶ್ಯಂ ರಿಮೇಕ್ ಎಂಬುದು ನಮ್ಮದೇ ಪ್ರೊಡಕ್ಷನ್ ಚಿತ್ರ. ಚಿತ್ರಕ್ಕೆ ಪಾಪನಾಶಂ ಎಂದು ಹೆಸರಿಡಲಾಗಿದ್ದು ಕಮಲಹಾಸನ್ ನಾಯಕನಾಗಿದ್ದಾರೆ. ಸಿನೆಮಾ ಬಗೆಗಿನ ಆಸಕ್ತಿಯಿಂದಾಗಿ ಆತ ಅಲ್ಲಿ ಅಸಿಸ್ಟೆಂಟಾಗಿದ್ದಾನೆ. ಬೇರೆ ಸಿನೆಮಾಗೂ ಅದೇ ರೀತಿ ಕೆಲಸ ಮಾಡುತ್ತಾನ ಎಂಬುದನ್ನು ಹೇಳುವುದು ಕಷ್ಟ . ಒಟ್ಟಿನಲ್ಲಿ ಆತನ ಇಷ್ಟವೇನಿದೆಯೋ ಅದರಲ್ಲಿ ಮುಂದುವರಿಯಲು ಆತ ಸಂಪೂರ್ಣ ಸ್ವತಂತ್ರ. ನೀವು ಓಶೋ ರಜನೀಶ್ ತತ್ವಗಳನ್ನು ಬೆಂಬಲಿಸುವ ಬಗ್ಗೆ ಬಹಳ ಬಾರಿ ಹೇಳಿದ್ದೀರಿ. ಅವರ ಅನ್ ಕಂಡಿಶನಲ್ ಲವ್ ಕುರಿತಂತೇ ಎಲ್ಲವನ್ನೂ ಪ್ರೀತಿಸುವುದನ್ನು ಒಪ್ಪಬಹುದು. ಆದರೆ ಒಂದು ಪ್ರೇಮದಲ್ಲಿ ಮಾತ್ರ ವಿಶ್ವಾಸವಿಡುವುದು ತಪ್ಪು ಎನ್ನುವುದನ್ನು ಸಮರ್ಥಿಸುವುದು ಅನೈತಿಕ ಸಂಬಂಧಗಳಿಗೆ ಪ್ರೇರಕವೆನಿಸದೇ? ಓಶೋ ಬಗ್ಗೆ ತಿಳಿಯದವರಲ್ಲಿ ಅದಕ್ಕೆ ನಮಗೆ ಉತ್ತರ ನೀಡಲು ಸಾಧ್ಯವಿಲ್ಲ. ಒಬ್ಬೊಬ್ಬರ ಪರ್ಸ್ಪೆಕ್ಟಿವ್. ನನ್ನ ಪರ್ಸಪೆಕ್ಟಿವ್ ನಲ್ಲಿ, ನನ್ನ ಫಿಲಾಸಫಿಯಲ್ಲಿ ನಾನು ಹೇಗೆ ಬದುಕುತ್ತಿದ್ದೇನೆ ಎಂಬುದನ್ನು ನಾನು ಇನ್ನೊಬ್ಬರಿಗೆ ಹೇಳುವ ಅಗತ್ಯವಿಲ್ಲ. ಓಶೋ ಫಿಲಾಸಫಿ ನನ್ನ ಬದುಕಲ್ಲ. ಅವರ ಪುಸ್ತಕವನ್ನು ಓದಿ ಹೇಗೆ ನನ್ನ ಫಿಲಾಸಫಿಯಾಗಿ ಬದಲಿಸಬಹುದು ಎಂಬುದೇ ನನ್ನ ಬದುಕು. ಅದರಲ್ಲಿ ಒಳಿತನ್ನು ಅಳವಡಿಸಿಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಅಲ್ಲದೆ ನನ್ನ ಜೀವನದ ಬಗ್ಗೆ ಇನ್ನೊಬ್ಬರಿಗೆ ಬೋಧನೆ ನೀಡಬೇಕಾದ ದರ್ದು ನನಗಿಲ್ಲ. ಇಬ್ಬರು ಸಮಾನ ಸ್ಟಾರ್ ಡಮ್ ಹೊಂದಿರುವ ತಾರೆಗಳನ್ನು ಜೊತೆಗಿರಿಸಿ ಚಿತ್ರ ಮಾಡುವುದು ಎಲ್ಲ ಭಾಷೆಗಳಲ್ಲೂ ಛಾಲೆಂಜಿಂಗ್ ವಿಚಾರ. ಆದರೆ ಮೆಗಾಸ್ಟಾರ್ ಮಮ್ಮೂಟ್ಟಿ ಜೊತೆಗಿನ ನಿಮ್ಮ ಐತಿಹಾಸಿಕ ಕಾಂಬಿನೇಶನ್ ಕುರಿತು ಹೇಳಿ. ನಾವು ಇದುವರೆಗೆ 54ರಷ್ಟು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದೇವೆ. ನಮಗೆ ಯಾವುದೇ ಫ್ಯಾನ್ಸ್ ಗಳಿಂದ ಇದಕ್ಕೆ ತೊಂದರೆಯಾಗಿಲ್ಲ. ಅದರಲ್ಲೂ ನಾವು ಕಲಾವಿದರೆಲ್ಲ ಒಂದೇ ಕುಟುಂಬದವರಂತೆ ಇದ್ದೇವೆ. ಜೊತೆಯಾಗಿ ನಟಿಸಲು ನಾವು ಸದಾ ಸನ್ನದ್ಧರಾಗಿರುತ್ತೇವೆ. ಆದರೆ ಅದಕ್ಕೆ ತಕ್ಕ ಸ್ಕ್ರಿಪ್ಟ್ ಗಳು ತಯಾರಿರಬೇಕು. ಅಷ್ಟೇ.
2014-10-16 · Kannada
- Ricky story Line
"ರಿಕ್ಕಿ"ಗಾಗಿ ನೆಲಸಮವಾದ ಮನೆ
ಕರಾವಳಿಯ ಹುಡುಗ ರಕ್ಷಿತ್ ಶೆಟ್ಟಿ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು ಸುದ್ಧಿಯಾಗಿರುವುದು ತಮ್ಮ ನಿರ್ದೇಶನಕ್ಕಾಗಿ ಅಲ್ಲ; ಬದಲಿಗೆ ತಾವು ನಾಯಕನಾಗಿ ನಟಿಸುತ್ತಿರುವ ಚಿತ್ರದ ಕಾನ್ಸೆಪ್ಟ್ ಗಾಗಿ. ಕೆಲವು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಎಸ್ಇಜೆಡ್ ನಿಂದ ರೈತರ ಮನೆಯನ್ನು ಒಡೆದು ಭೂಮಿ ವಸಪಡಿಸಿದ ಘಟನೆಯನ್ನು ಆಧಾರವಾಗಿಟ್ಟುಕೊಂಡು ತಯಾರಾಗುತ್ತಿರುವ ಚಿತ್ರ ರಿಕ್ಕಿ. ಚಿತ್ರದಲ್ಲಿ ರಿಕ್ಕಿಯೆಂಬುದು ನಾಯಕನ ಹೆಸರು. ಆತ ರಾಧೆ ಎಂಬ ಹುಡುಗಿಯನ್ನು ಪ್ರಾಣದಂತೆ ಪ್ರೀತಿಸಿರುತ್ತಾನೆ. ಆದರೆ ಮಧ್ಯದಲ್ಲೆಲ್ಲೋ ಆಕೆ ರಿಕ್ಕಿಯನ್ನು ಬಿಟ್ಟು ದೂರಾಗುತ್ತಾಳೆ. ಮತ್ತೆ ಸಿಗುವ ವೇಳೆ ಅವಳು ಏನಾಗಿ ಬದಲಾಗಿರುತ್ತಾಳೆ? ರಾಧೆಯಿಲ್ಲದ ಕೃಷ್ಣ ಯಾವ ರೀತಿ ವರ್ತಿಸುತ್ತಾನೆ ? ಮೊದಲಾದವನ್ನು ತೆರೆಯ ಮೇಲೆ ನೋಡಲು ರಿಕ್ಕಿ ತೆರೆಕಾಣವುದನ್ನು ಕಾಯಬೇಕಿದೆ. ಚಿತ್ರದ ನಿರ್ಮಾಪಕ ಎಸ್.ವಿ ಬಾಬು ರಿಕ್ಕಿ ಚಿತ್ರದ ಚಿತ್ರೀಕರಣವನ್ನು ತೋರಿಸಲೆಂದೇ ದೂರದ ಕಾರ್ಕಳಕ್ಕೆ ಬೆಂಗಳೂರಿನ ಮಾಧ್ಯಮದವರನ್ನು ವಿಶೇಷ ಬಸ್ಸಿನ ಮೂಲಕ ಕರೆಸಿಕೊಂಡಿದ್ದರು. ಅಂದು ಬೈಲೂರಿನಲ್ಲಿ ನಾಯಕಿಯಿದ್ದ ಎರಡಂತಸ್ತಿನ ಮನೆಯನ್ನು ಬುಲ್ಡೋಜರ್ ಮೂಲಕ ನೆಲಸಮ ಮಾಡುವ ಸನ್ನಿವೇಶವನ್ನು ಚಿತ್ರೀಕರಿಸಲಾಯಿತು. ರಾಧೆಯ ಪಾತ್ರಧಾರಿ ನಟಿ ಹರಿಪ್ರಿಯ ಗೂಡಿನ ಮೇಲೆ ಧಾಳಿ ಗೈಯ್ಯಲು ಬಂದ ಗಿಡುಗನನ್ನು ಓಡಿಸಲೆತ್ನಿಸುವ ಗಿಳಿಯಂತೆ ಅತ್ತಣಿಂದಿತ್ತ, ಇತ್ತಣಿಂದತ್ತ ಓಡುತ್ತಿದ್ದರು. ಆದರೆ ಪೊಲೀಸರ ಕಾವಲಿನೊಂದಿಗೆ ಮನೆಯನ್ನು ಕಣ್ಮುಂದೆಯೇ ಕೆಡವಿ ಹಾಕಲಾಯಿತು. ಕೆಡವಲೆಂದೇ ಕಟ್ಟಲಾಗಿದ್ದ ಮನೆ, ಮಗುಚಿ ಹಾಕಲಾದ ಉದ್ದ ತೆಂಗು, ಹತಾಶೆಯ ಮುಖ ಹೊತ್ತು ಸೇರಿದ ಜನ ಸಾಗರ ಎಲ್ಲವೂ ನೈಜತೆಗೆ ಕನ್ನಡಿ ಹಿಡಿದಂತಿತ್ತು. ಮಹಿಳಾ ಪೊಲೀಸರ ಹಿಡಿತದಿಂದ ಬಳೆಯೊಡೆದು ನಿಜಕ್ಕೂ ಕೈಯ್ಯಲ್ಲಿ ರಕ್ತ ಬಂದರೂ ಲೆಕ್ಕಿಸದೇ ನಟಿಸಿದ ಹರಿಪ್ರಿಯಾ ಅಭಿನಂದನಾರ್ಹರು. 47ದಿನಗಳ ಕಾಲ ನಡೆದ ಒಂದೇ ಶೆಡ್ಯೂಲ್ ನ ಚಿತ್ರೀಕರಣದ ಮೂಲಕ ಚಿತ್ರೀಕರಣ ಕೊನೆಗೊಳ್ಳುತ್ತಿದ್ದು, ನಾಯಕನ ಡೇಟ್ಸ್ ಹೊಂದಿಸಲು ಸಹಾಯ ಮಾಡಿದ ನಿರ್ಮಾಪಕ ಕೆ.ಮಂಜುವಿಗೆ ಕೃತಜ್ಞತೆ ಹೇಳಿದರು ಚಿತ್ರದ ನಿರ್ಮಾಪಕ ಎಸ್ ವಿ ಬಾಬು. ಕಮಲಹಾಸನ್ ಚಿತ್ರಗಳಿಗೆ ಛಾಯಾಗ್ರಹಣ ನಿರ್ವಹಿಸಿರುವಂಥ ಛಾಯಾಗ್ರಾಹಕ ವೆಂಕಟ್ ಅಂಗುರಾಜ್ ಚಿತ್ರದ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಅಚ್ಯುತ ಕುಮಾರ್ ಮತ್ತು ವೀಣಾ ಸುಂದರ್ ನಾಯಕಿಯ ತಂದೆ ತಾಯಿಯ ಪಾತ್ರ ನಿರ್ವಹಿಸಿದ್ದಾರೆ. ರವಿ ಕಾಳೆ ಎಸಿಪಿ ಪಾತ್ರದಲ್ಲಿ ಮತ್ತು ಮುನಿರಾಜು ಇನ್ಸ್ಪೆಕ್ಟರಾಗಿ ನಟಿಸುತ್ತಿದ್ದಾರೆ. ನಿರ್ದೇಶಕ ರಿಷಬ್ ಶೆಟ್ಟಿ ಈ ಹಿಂದೆ ಸೈನೆಡ್ ಚಿತ್ರದಲ್ಲಿ ಎಎಂಆರ್ ರಮೇಶ್ ಗೆ ಅಸಿಸ್ಟೆಂಟಾಗಿ ಕಾರ್ಯನಿರ್ವಹಿಸಿದ್ದರು. ತುಘಲಕ್ ಚಿತ್ರದ ಬಳಿಕ ನಾಯಕ ರಕ್ಷಿತ್ ಗೆ ಹೆಚ್ಚು ಆಪ್ತರಾದ ರಿಷಭ್ ಅವರ ನಿರ್ದೇಶನದ ಉಳಿದವರು ಕಂಡಂತೆ ಚಿತ್ರದಲ್ಲೊಂದು ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು. ಚಿತ್ರದಲ್ಲಿ ಸಮಾಜದ ಬಗ್ಗೆ ಹೇಗೆ ಕನ್ಸರ್ನ್ ತೋರಿಸಲಾಗುವುದೋ ಅದೇ ರೀತಿ ನಾಯಕ ನಾಯಕಿಯರ ನಡುವಿನ ಕ್ಯೂಟ್ ಲವ್ ಸ್ಟೋರಿಯೊಂದನ್ನು ಕೂಡ ಬಿಚ್ಚಿಡಲಾಗುತ್ತದೆ ಎಂದರು ನಿರ್ದೇಶಕ ರಿಷಭ್ ಶೆಟ್ಟಿ.
2014-10-16 · Kannada
- Muddu manase audio release
ಮುದ್ದು ಮನಸೇ ಆಡಿಯೋ ಬಿಡುಗಡೆ
ಆಡಿಯೋ ಕ್ಯಾಸೆಟ್ ರಿಲೀಸ್ ಗೆ ಬಾಸ್ ಬರ್ತಾರೆ ಎಂದು ಸುದ್ದಿ ಹರಡಿ ಕುತೂಹಲ ಮೂಡಿಸಿತ್ತು ಚಿತ್ರತಂಡ. ಆದರೆ ಬಂದ ಬಾಸ್ ಯಾರು ಎಂದು ತಿಳಿಯುವ ಹೊತ್ತಿಗೆ ಬೇಸ್ತು ಬಿದ್ದಿದ್ದರು ಪ್ರೇಕ್ಷಕರು. ಯಾಕೆಂದರೆ ಸ್ಟೇಜ್ ಮೇಲೆ ಇದ್ದಿದ್ದು ಸಾಕ್ಷಾತ್ ಗಣೇಶ ಮೂರ್ತಿ! ನವನಾಯಕ ಅರುಣ್ ಗೆ ಜೋಡಿಯಾಗಿ ನಿತ್ಯಾರಾಮ್ ಮತ್ತು ಐಶ್ವರ್ಯಾ ನಾಗ್ ನಟಿಸಿದ್ದು ಅರುಣ್ ಎರಡು ಶೇಡ್ ನಲ್ಲಿನ ಕ್ಯಾರೆಕ್ಟರ್ ನಿರ್ವಹಿಸಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ನಿರ್ದೇಶಕ ಅನಂತ್ ಶೈನ್ ಹೇಗಾದರೂ ಗಿಮಿಕ್ ಮಾಡಿಯಾದರೂ ಚಿತ್ರಕ್ಕೊಂದು ಒಳ್ಳೆಯ ಪ್ರಚಾರ ನೀಡಬೇಕೆಂಬ ಗುರಿಯನ್ನು ಹೊಂದಿದ್ದು ಅದೇ ನಿಟ್ಟಿನಲ್ಲಿ ಚಿತ್ರದ ಆಡಿಯೋ ಬಿಡುಗಡೆಗೆ ಬಾಸ್ ಬರ್ತಾರೆ ಎಂಬುದು ಖುಷಿಯ ವಿಚಾರ ಎಂಬ ಮಾತುಗಳನ್ನು ಕನ್ನಡ ಚಿತ್ರರಂಗದ ಖ್ಯಾತ ತಾರೆಯರಾದ ಅಂಬರೀಶ್, ಶಿವರಾಜಕುಮಾರ್, ರಮೇಶ್ ಅರವಿಂದ್, ಪುನೀತ್ ರಾಜಕುಮಾರ್, ಸುದೀಪ್, ಶ್ರೀನಗರ ಕಿಟ್ಟಿ, ಗಣೇಶ್, ನೆನಪಿರಲಿ ಪ್ರೇಮ್, ದುನಿಯಾ ವಿಜಯ್ ಮೊದಲಾದವರಿಂದ ಹೇಳಿಸಿದ್ದರು. ಆದರೆ ಸಮಾರಂಭದಲ್ಲಿ ನಿರ್ದೇಶಕ ಅಲೆಮಾರಿ ಸಂತು, ಆನಂದ್ ಆಡಿಯೋನ ಶ್ಯಾಮ್, ನಟ ಅಜೇಯ ರಾವ್, ಶ್ರೀನಗರ ಕಿಟ್ಟಿ ಜೊತೆಗೆ ಚಿತ್ರಕ್ಕೆ ಸಾಹಿತ್ಯ ನೀಡಿದ ನಾಗೇಂದ್ರ ಪ್ರಸಾದ್, ಶಶಾಂಕ್, ಸಿಂಪಲ್ ಸುನಿ ಮೊದಲಾದವರಷ್ಟೇ ಉಪಸ್ಥಿತರಿದ್ದರು. ವಾಸ್ತವದಲ್ಲಿ ಸೀಡಿ ಬಿಡುಗಡೆಯಾದ ಆಡಿಟೋರಿಯಂ ತುಂಬಿ ತುಳುಕುವಂತೆ ಮಾಡಿದ್ದು ರಜನಿಕಾಂತ್ ಬರುತ್ತಾರೆಂಬ ನಿರೀಕ್ಷೆ ಮೂಡಿಸಿಕೊಂಡವರಿಂದಲೇ ಎಂಬುದು ನಿಸ್ಸಂದೇಹ. ಬಾಸ್ ಹೆಸರಲ್ಲಿ ಗಣೇಶನ ವಿಗ್ರಹವನ್ನು ವೇದಿಕೆ ತಂದವರು ರಜನಿಯನ್ನು ಸಂಧಿಸಿದ್ದು ಕೂಡ ಸತ್ಯವಿವೇನಾ ಎಂಬ ಬಗ್ಗೆ ಸಂದೇಹ ಮೂಡುವಂತಾಗಿದೆ. ಯಾಕೆಂದರೆ ಆ ಕುರಿತಾದ ಒಂದು ಫೊಟೋವನ್ನು ಕೂಡ ಅವರು ಮಾಧ್ಯಮಗಳ ಮುಂದೆ ಪ್ರಸ್ತುತ ಪಡಿಸುವಲ್ಲಿ ಯಶಸ್ವಿಯಾಗಿಲ್ಲ. ಒಟ್ಟಿನಲ್ಲಿ ಅಪಾರ ಪ್ರೇಕ್ಷಕರ ಮುಂದೆ ಸೀಡಿಯೇನೋ ಬಿಡುಗಡೆಯಾಗಿದೆ. ಆದರೆ ಚಿತ್ರದತ್ತ ಪ್ರೇಕ್ಷಕರನ್ನು ಸೆಳೆಯಲು ಅದೇನು ಗಿಮಿಕ್ ಮಾಡಲಿದ್ದಾರೆ ನಿರ್ದೇಶಕ ಅನಂತ್ ಶೈನ್ ಎಂಬುದನ್ನು ಕಾದು ನೋಡಬೇಕಾಗಿದೆ. ಸಮಾರಂಭದಲ್ಲಿ ಮಾಲ ಭಾಸ್ಕರ್ ತಂಡದ ಪ್ರಾರ್ಥನೆ, ಪೂಜಾಶ್ರೀಯ ಕೂಚುಪುಡಿ ಮತ್ತು ಚಿಕ್ಕ ಮಕ್ಕಳ ನೃತ್ಯ ಕಾರ್ಯಕ್ರಮವಿತ್ತು. ಚಿತ್ರಕ್ಕೆ ಹಾಡು ಬರೆದ ಸಾಹಿತಿಗಳಿಗೆ ಬೆಳ್ಳಿ ಪೆನ್ ನೀಡಿ ಸನ್ಮಾನಿಸಲಾಯಿತು.
2014-10-13 · Kannada
- Varalaxmi Interview
ವಿವರ ಹೇಳಿದ ವರಲಕ್ಷ್ಮೀ
ಈ ವರಲಕ್ಷ್ಮೀ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತು. ಮಾಣಿಕ್ಯದಲ್ಲಿ ಬಂದು ಸುದೀಪ್ ಗೆ ನಾಯಕಿಯಾದ ವರಲಕ್ಷ್ಮೀ ತಮಿಳಿನ ಖ್ಯಾತ ನಟ ಶರತ್ ಕುಮಾರ್ ಮಗಳು. ನಟಿಸಿದ ಮೊದಲ ಚಿತ್ರದಲ್ಲಿ ತಮಿಳಿನ ಖ್ಯಾತ ಯುವನಟ ಸಿಂಬು ಎಂಬ ಸಿಲಂಬರಸನ್ ನಾಯಕ. ಬಳಿಕ ವಿಶಾಲ್ ಜೊತೆಗೊಂದು ಚಿತ್ರ ನಟಿಸಿದ ಆನಂತರದಲ್ಲಿ ಕನ್ನಡಕ್ಕೆ ಬಂದಿದ್ದಳು. ಹಾಗೆ ನೋಡಿದರೆ ವರಲಕ್ಷ್ಮೀ ಮೂಲತಃ ಕನ್ನಡಿಗಳೇ. ಯಾಕೆಂದರೆ ಈಕೆ ಹುಟ್ಟಿದ್ದು ನಮ್ಮ ಬೆಂಗಳೂರಿನಲ್ಲೇ! ವರಲಕ್ಷ್ಮೀ ಜೊತೆಗೆ ನಡೆಸಿದ ಸರಳ ವಿರಳ ಮಾತುಕತೆ ಇದು. ನಿಮ್ಮ ತಾಯಿ ಈಗಲೂ ಬೆಂಗಳೂರಿನಲ್ಲೇ ವಾಸವಾಗಿದ್ದಾರ? ಇಲ್ಲ. ಅವರು ನನ್ನ ಜನನದ ವೇಳೆಯಷ್ಟೇ ಬೆಂಗಳೂರಲ್ಲಿದ್ದರು. ನಾನು ಕಲಿತು ಬೆಳೆದಿದ್ದು ಚೆನ್ನೈನಲ್ಲಿ. ಒಂದಷ್ಟು ಮಂದಿ ಸಂಬಂಧಿಕರು ಮಾತ್ರ ಈಗಲೂ ಬೆಂಗಳೂರಿನಲ್ಲಿದ್ದಾರೆ. ಮಾಣಿಕ್ಯದ ಬಳಿಕ ಕನ್ನಡಕ್ಕೆ ಬರುವ ಸುದ್ದಿಯಿಲ್ಲ? ಕನ್ನಡವೆಂದಷ್ಟೇ ಅಲ್ಲ. ಯಾವುದೇ ಭಾಷೆಯ ಚಿತ್ರಗಳನ್ನು ಆಯ್ಕೆ ಮಾಡಿಕೊಂಡಿಲ್ಲ. ಕತೆ ಕೇಳುತ್ತಿದ್ದೇನಷ್ಟೇ. ಚಿತ್ರಗಳ ಆಯ್ಕೆ ತಂದೆಯ ಮೂಲಕ ನಡೆಯತ್ತದೆಯೇ? ಇಲ್ಲ. ನನ್ನ ಚಿತ್ರಗಳ ಆಯ್ಕೆ ನನ್ನದೇ ನಿರ್ಧಾರ. ಚಿತ್ರದಲ್ಲಿ ನನ್ನ ಪಾತ್ರಕ್ಕೆ ನಟಿಸಲು ಅವಕಾಶ ಮತ್ತು ಪ್ರಾಧಾನ್ಯತೆ ಇರಬೇಕು. ಏನಾದರೂ ಗೈಡೆನ್ಸ್ ಬೇಕೆನಿಸಿದಾಗ ಮಾತ್ರ ಅಪ್ಪನಲ್ಲಿ ಕೇಳುತ್ತೇನೆ. ಸುದೀಪ್ ಜೊತೆಗೆ ನಟಿಸಿದ ಅನುಭವ ಹೇಗಿತ್ತು? ಚೆನ್ನಾಗಿತ್ತು. ಸಿಸಿಎಲ್ ನಲ್ಲಿ ಅವರನ್ನು ಕಂಡು ತುಂಬ ಹೆಚ್ಚು ಕೋಪಗೊಳ್ಳುವ ವ್ಯಕ್ತಿಯೆಂದುಕೊಂಡಿದ್ದೆ. ಆದರೆ ಮಾಣಿಕ್ಯದಲ್ಲಿನ ಅನುಭವ ಅದು ಸುಳ್ಳು ಎಂಬುದನ್ನು ಸಾಬೀತು ಮಾಡಿತು. ನಿಮ್ಮ ಡ್ರೀಮ್ ರೋಲ್ ಯಾವುದು? ಡ್ರೀಮ್ ರೋಲ್ ಬಗ್ಗೆ ನಾನಿನ್ನೂ ಕನಸು ಕಂಡಿಲ್ಲ. ಕನಸು ಕಂಡ ಮೇಲೆ ಹೇಳುತ್ತೇನೆ! ನಿಮ್ಮ ಹವ್ಯಾಸಗಳೇನು? ಡ್ಯಾನ್ಸಿಂಗ್ ಮತ್ತು ಟ್ರ್ಯಾವೆಲಿಂಗ್. ಕ್ಲಾಸಿಕಲ್ ಮತ್ತು ವೆಸ್ಟರ್ನ್ ಡ್ಯಾನ್ಸ್ ನಲ್ಲಿ ಹಿಡಿತವಿದೆ. ನಿಮ್ಮ ಫೇವರಿಟ್ ಗಳ ಬಗ್ಗೆ ಹೇಳಿ ನಾನು ನಾನ್ ವೆಜ್ ಪ್ರಿಯೆ. ಫೇವರಿಟ್ ಆ್ಯಕ್ಟರ್ ಶಾರುಖ್. ನಟಿ ಕಾಜೋಲ್.ಗ್ಲ್ಯಾಡಿಯೇಟರ್ ಇಷ್ಟದ ಚಿತ್ರ. ಎಸ್ಪಿಬಿ ನನ್ನ ಮೆಚ್ಚಿನ ಗಾಯಕರು.
2014-10-09 · Kannada
- Sri Shruthi Interview
ಶ್ರೀಶ್ರುತಿ ನಾಯಕಿಯಾಗಿ ನಟಿಸಿರುವ ಚಿತ್ರ ‘ಈ ದಿಲ್ ಹೇಳಿದೆ ನೀ ಬೇಕಂತ’. ಚಿತ್ರದ ಚಿತ್ರೀಕರಣ ಸಂಪೂರ್ಣಗೊಂಡಿದ್ದು ಬಿಡುಗಡೆಗಾಗಿ ದಿನಗಣನೆಯಾಗುತ್ತಿದೆ. ಧಾರಾವಾಹಿರಂಗದಿಂದ ಬಂದು ಸಿನೆಮಾದಲ್ಲಿ ತರಂಗ ಸೃಷ್ಠಿಸಲು ತಯಾರಾಗಿರುವ ಈ ಸುಂದರಿ ಜೊತೆಗೆ ನಡೆಸಿದ ಸಂದರ್ಶನ ಇದು. ನಟನಾ ಬದುಕು ಆರಂಭವಾಗಿದ್ದು ಹೇಗೆ? ಚಂದನ ವಾಹಿನಿಯಲ್ಲಿ ತ್ರಿಷಾಗ್ನಿ, ಅಭಿನೇತ್ರಿ, ಮೊಗ್ಗರಳುವ ಮುನ್ನ ಧಾರಾವಾಹಿಗಳಲ್ಲಿ ಬಾಲನಟಿಯಾಗಿ ನಟಿಸಿದ್ದೆ. ವೀರಪ್ಪ ನಾಯ್ಕ ಚಿತ್ರದಲ್ಲಿ ವಿಷ್ಣುಪುತ್ರನಾಗಿ ನಟಿಸಿದ್ದ ಬಾಲನಟನಿಗೆ ಕಂಠದಾನ ನೀಡಿದ್ದೆ. ಪ್ರೀತಿ ಪ್ರೇಮ ಧಾರಾವಾಹಿಯ ಮೂಲಕ ತೆರೆಯ ಮೇಲಿನ ನಟನೆ ಶುರುಮಾಡಿದೆ. ವಸುಧೈವ ಕುಟುಂಬ ಮತ್ತು ಅದರ ಬಳಿಕ ಗಾಳಿಪಟ ಮೊದಲಾದ ಧಾರಾವಾಹಿಗಳಲ್ಲಿ ನಟಿಸಿದ್ದೇನೆ. ನಿಮಗೆ ದೊಡ್ಡದಾದ ಕಲಾ ಹಿನ್ನೆಲೆಯಿದೆಯಂತೆ? ಹೌದು. ನನ್ನಜ್ಜಿ ವಸಂತೀ ಬಾಯಿ ಡಾ.ರಾಜಕುಮಾರ್ ಜೊತೆ ನಾಟಕಗಳಲ್ಲಿ ಜೋಡಿಯಾಗಿ ನಟಿಸಿದ್ದರು.ನನ್ನ ತಾತ ಶ್ರೀರಾಮುಲು ನಾಯ್ಡು ಕಂಠದಾನ ಕಲಾವಿದರು. ತಂದೆಯ ತಂದೆ ಶ್ರೀನಿವಾಸ್ ಕೂಡ ಹವ್ಯಾಸಿ ನಾಟಕ ಕಲಾವಿದರಾಗಿದ್ದರು. ತಾಯಿ ಕೆ.ನಯನಾ ತುಳು ಸಿನೆಮಾಗಳಲ್ಲಿ ನಾಯಕಿಯಾಗಿದ್ದರು.ಮಾತ್ರವಲ್ಲ, ಕನ್ನಡದ ಗುರುಶಿಷ್ಯರು, ಭಾಗ್ಯದ ಬೆಳಕು ಚಿತ್ರಗಳಲ್ಲಿ ನಟಿಸಿದ್ದಾರೆ. ತಂದೆ ಶ್ರೀ ಚಂದ್ರು ಸಿನೆಮಾಗಳಿಗೆ ಕತೆ, ಸಂಭಾಷಣೆ, ಹಾಡುಗಳನ್ನು ಬರೆದು ಗುರುತಿಸಿಕೊಂಡಿದ್ದಾರೆ. ಅಣ್ಣ ಶ್ರೀರಘು ಸೌಂಡ್ ಇಂಜನಿಯರಾಗಿ ತಮ್ಮದೇ ಶ್ರೀ ಅಕ್ಷರ ಸ್ಟುಡಿಯೋದಲ್ಲಿ ಕೆಲಸದಲ್ಲಿದ್ದಾರೆ. ಚಿಕ್ಕಮ್ಮ ಆಶಾ ಕೂಡ ನಾಯಕಿಯರಿಗೆ ಕಂಠದಾನ ನೀಡುತ್ತಾರೆ. ಇಂದು ಉದ್ಯಮದಲ್ಲಿ ಕಂಠದಾನ ಕಲಾವಿದರ ಪರಿಸ್ಥಿತಿ ಹೇಗಿದೆ? ಭಾಷೆ ಬಾರದ ಕಲಾವಿದರ ತುಟಿಗಳ ಚಲನೆಗೆ ತಕ್ಕ ಹಾಗೆ ಶಬ್ಧ ನೀಡುವುದು ನಿಜಕ್ಕೂ ಪರಿಶ್ರಮದ ಕೆಲಸ. ಆದರೆ ಉದ್ಯಮದೊಳಗಿನ ಬಹಳಷ್ಟು ಕಂಠದಾನ ಕಲಾವಿದರು ಗುರುತಿಸಲ್ಪಡುವುದೇ ಇಲ್ಲ. ಚಿತ್ರಗಳ ಗೆಲುವಿನ ಸಂಭ್ರಮದಲ್ಲಿಯೂ ಅಂಥ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವುದು ಉತ್ತಮ. ಚಿತ್ರೋದ್ಯಮದಲ್ಲಿ ನಿಮ್ಮ ಕನಸು ಯಾವುದು? ನನ್ನ ತಂದೆಗೆ ನನ್ನನ್ನು ಒಳ್ಳೆಯ ಗಾಯಕಿಯನ್ನಾಗಿಸುವ ಹಂಬಲವಿತ್ತು. ಒಂದಷ್ಟು ಸಂಗೀತವನ್ನು ಕಲಿತರೂ ಮುಂದುವರಿಸಿಕೊಂಡು ಹೋಗಲು ನನ್ನಿಂದ ಸಾಧ್ಯವಾಗಲಿಲ್ಲ. ಆದರೂ ತಂದೆಯ ನಾಲ್ಕೈದು ಭಕ್ತಿಗೀತೆ ಕ್ಯಾಸೆಟ್ ಗಳಿಗೆ ಹಾಡಿದ್ದೇನೆ. ಆದರೆ ಚಿತ್ರೋದ್ಯಮದಲ್ಲಿ ನಾಯಕಿಯಾಗಿಒ ಹೆಸರು ಮಾಡಬೇಕೆಂಬುದು ನನ್ನ ಕನಸು. ಗ್ಲಾಮರಸ್ ಪಾತ್ರಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು? ಸದ್ಯದ ಮಟ್ಟಿಗೆ ನನಗೆ ನಟಿಸಲು ದೊರಕಿರುವ ಪಾತ್ರಗಳೆಲ್ಲ ಮೈತುಂಬ ಬಟ್ಟೆ ಧರಿಸಿಕೊಂಡಿರುವಂಥವು.ಆದರೆ ಮಾಡರ್ನ್ ಕಾಸ್ಟ್ಯೂಮ್ ಗಳಲ್ಲಿ ನನ್ನನ್ನು ಕಂಡಿರುವ ಚಿತ್ರ ತಂತ್ರಜ್ಞರು ‘ನೀನು ಎರಡೂ ವಿಧದ ಪಾತ್ರಗಳಿಗೆ ಹೊಂದಿಕೊಳ್ಳಬಲ್ಲ ಅಪರೂಪದ ನಟಿ’ ಎಂದಿದ್ದಾರೆ. ಹಾಗಾಗಿ ಗ್ಲಾಮರಸ್ ಪಾತ್ರ ನಿರ್ವಹಣೆಗೆ ಕೂಡ ನಾನು ತಯಾರು. ಏನೇ ಮಾಡಿದರೂ ಅದರಿಂದ ನನ್ನ ತಂದೆ ತಾಯಿಗೆ ಮುಜುಗರ ಪಡುವಂಥ ಸಂದರ್ಭ ಬರಬಾರದೆಂಬ ನಿಲುವು ನನ್ನದು. ಅವರಾಗಲೀ, ನನ್ನ ಫ್ರೆಂಡ್ಸ್ ಆಗಲೀ ಸಿನೆಮಾವನ್ನು ಖುಷಿಯಿಂದಲೇ ನೋಡುವಂತಿರಬೇಕು.
2014-10-09 · Kannada
- Benkipatna Audio CD Release
ಬೆಂಕಿ ಪಟ್ಣ ಚಿತ್ರದ ಹಾಡುಗಳ ಸೀಡಿ ಬಿಡುಗಡೆ
ಯುವ ನಟ ಪ್ರತಾಪ್ ನಾರಾಯಣ್ ನಾಯಕನಾಗಿರುವ ಮತ್ತೊಂದು ಚಿತ್ರ ತೆರೆಗೆ ಸಿದ್ಧವಾಗುತ್ತಿದೆ. ಬೆಮಕಿಪಟ್ಣ ಎಂಬ ಚಿತ್ರದ ಹೆಸರಿನಂತೆ ಚಿತ್ರದ ಕತೆಯೂ ತುಂಬ ವಿಭಿನ್ನವಾಗಿರುತ್ತದೆ ಎಂಬುದು ಚಿತ್ರತಂಡದ ಪ್ರತಿಯೊಬ್ಬರ ಅಭಿಪ್ರಾಯ. ಪ್ರೀತಮ್ ಹರ್ಷ ಸಂಗೀತ ಸಂಯೋಜನೆಯಲ್ಲಿ ಸಿದ್ದವಾದ ಹಾಡುಗಳ ಸೀಡಿ ಬಿಡುಗಡೆ ಸಮಾರಂಭದಲ್ಲಿ ಈ ಮಾತುಕತೆಗಳು ನಡೆದವು. ಚಿತ್ರದ ಹಾಡುಗಳನ್ನು ಮೆಚ್ಚಿ ಆಡಿಯೋ ಹಕ್ಕನ್ನು ಪಡೆದುಕೊಂಡಿರುವ ಲಹರಿ ವೇಲು ಹಾಡುಗಳು ಹಳೆಯ ಕಾಲದ ಮೆಲೋಡಿಯಂತಿವೆ ಎಂದು ಗುಣಗಾನ ಮಾಡಿದರು. ಸೀಡಿಗಳನ್ನು ಬಿಡುಗಡೆ ಮಾಡಿದ ಯೋಗರಾಜ ಭಟ್ ಮಾತನಾಡಿ ನಿರ್ದೇಶಕ ಟಿಕೆ ದಯಾನಂದ್ ಓರ್ವ ಒಳ್ಳೆಯ ಕತೆಗಾರ. ದೀಪಾವಳಿ ಸ್ಪರ್ಧೆಗಳಲ್ಲಿ ಬಹುಮಾನ ಗೆದ್ದವರು. ಈಗ ನಿರ್ದೇಶನಕ್ಕೆ ಬಂದಿದ್ದಾರೆ. ಇಲ್ಲಿಯೂ ಅದೇ ಗೆಲುವು ಸಿಗಲಿ ಎಂದರು. ನಾಯಕಿ ಅನುಶ್ರೀ ಕೂಡ ಚಿತ್ರವನ್ನು ಒಪ್ಪಿಕೊಳ್ಳಲು ಕತೆಯೇ ಕಾರಣ, ಹಾಡುಗಳು ಚೆನ್ನಾಗಿವೆ ಎಂಬುದನ್ನೇ ಹೇಳಿದರು. ನಟ, ನಿರ್ಮಾಪಕ ಬಿ.ಸುರೇಶ್ ಚಿತ್ರದಲ್ಲಿ ತನ್ನದು ಚಿಕ್ಕದಾದರೂ ಒಳ್ಳೆಯದೊಂದು ಪಾತ್ರ ಇರುವುದಾಗಿ ಹೇಳಿದರು. ಖಳನಟನಾಗಿ ನಟಿಸುತ್ತಿರುವ ಅರುಣ್ ಸಾಗರ್ ಇಂಥದೊಂದು ಕತೆಯನ್ನು ಚಿತ್ರಮಾಡಲು ಮುಂದೆ ಬಂದ ನಿರ್ಮಾಪಕರಿಗೆ ತುಂಬು ಅಭಿನಂದನೆಗಳನ್ನು ಸಲ್ಲಿಸಿದರು. ಚಿತ್ರವನ್ನು ಸಕಲೇಶಪುರದ ಸುತ್ತಮುತ್ತ ಸೇರಿದಂತೆ ಕರ್ನಾಟಕದೊಳಗೆ ಚಿತ್ರೀಕರಿಸಲಾಗಿದೆಯಂತೆ. ಸಮಾರಂಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡರು ಪಾಲ್ಗೊಂಡು ಚಿತ್ರತಂಡಕ್ಕೆ ಶುಭ ಕೋರಿದರು. ಅವರ ಆಗಮನಕ್ಕೆ ವಿಶೇಷವಾಗಿ ಕಾರಣವಾಗಿದ್ದು ಚಿತ್ರವನ್ನು ನಿರ್ಮಿಸುತ್ತಿರುವ ಅವರ ಮಿತ್ರ ಕರಾವೇಯ ಜಾಕಿರ್ ಅಲಿಖಾನ್ ಎಂಬುದು ಗಮನಾರ್ಹ. ಅದಕ್ಕೆ ಸರಿಯಾಗಿ ಚಿತ್ರದಲ್ಲಿ ಎಲ್ಲರೂ ಕನ್ನಡದ ಕಲಾವಿದರು ಮತ್ತು ತಂತ್ರಜ್ಞರೇ ತುಂಬಿರುವುದು ವಿಶೇಷ. ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾದ ಒಂದು ಹಾಡು ಮತ್ತು ಟ್ರೇಲರ್ ಕುತೂಹಲ ಮೂಡಿಸುವಂತಿತ್ತು.
2014-10-08 · Kannada
- Komal as Deal Raja
'ಡೀಲ್ ರಾಜ'ನಾಗಿರುವ ಕೋಮಲ್
ಕೋಮಲ್ ಮತ್ತೆ ಬಂದಿದ್ದಾರೆ. ಕರೋಡ್ ಪತಿ, ಪುಂಗಿದಾಸ ಚಿತ್ರಗಳ ಸಾಲು ಸೋಲಿನಿಂದ ಮತ್ತೆ ಹೊಸದಾಗಿ ನಿರೀಕ್ಷೆ ತೋರಿದ್ದಾರೆ. ಆದರೆ 'ಡೀಲ್ ರಾಜ' ಎಂಬ ಹೊಸ ಚಿತ್ರವನ್ನು ಆರ್ಥಿಕ ಭದ್ರತೆಗಾಗಿಯೇ ಒಪ್ಪಿಕೊಂಡಿದ್ದಾಗಿ ಹತಾಶೆಯಿಂದ ಸತ್ಯ ಹೇಳಿದರು ಕೋಮಲ್. ನಿರ್ದೇಶಕ ರಾಜ್ ಗೋಪಿ ಸೂರ್ಯ ನಿರ್ದೇಶಿಸುತ್ತಿರುವ ಎರಡನೆ ಚಿತ್ರವಾದ ಡೀಲ್ ರಾಜದಲ್ಲಿ ನಾಯಕ ಹಾಸ್ಯದ ಪ್ರತೀಕವಾಗಿದ್ದಾರೆ ಎಂದು ಅವರು ಹೇಳಿದರು. ಚಿತ್ರದಲ್ಲಿ ನಾಯಕ ಅನಾಥನಾಗಿದ್ದು ಕ್ಲೈಮ್ಯಾಕ್ಸ್ ನಲ್ಲಿ ತನಗೂ ಒಂದು ಕುಟಂಬವಿರುವ ಸತ್ಯವನ್ನು ಅರಿತುಕೊಳ್ಳುತ್ತಾನೆ. ನಿಖಿ ಅಚಾರ್ಯ, ಭಾನು ಮೆಹ್ರಾ ಎಂಬ ಇಬ್ಬರು ನಾಯಕಿಯರು ಲೇಡಿ ಕಾನ್ಸ್ಟೇಬಲ್ ಪಾತ್ರಗಳನ್ಉ ನಿರ್ವಹಿಸಲಿದ್ದಾರಂತೆ. ಅಭಿಮಾನ್ ರಾಯ್ ಸಂಗೀತದಲ್ಲಿ ಚಿತ್ರಕ್ಕೆ 5ಹಾಡುಗಳಿದ್ದು ರವಿಚಂದ್ರ ರೆಡ್ಡಿ ಮತ್ತು ಕೃಷ್ಣ ಮೂರ್ತಿ ಚಿತ್ರವನ್ನು ನಿರ್ಮಿಸಿದ್ದಾರೆ.
2014-10-08 · Kannada
- Shimadri Press Meet
ಸಾಂಸಾರಿಕ ಕತೆಯ ಸಿಂಹಾದ್ರಿ ಗುರುವಾರ ತೆರೆಗೆ!!!
ಬ್ಲ್ಯಾಕ್ ಕೋಬ್ರ ವಿಜಯ್ ಪ್ರಥಮ ಬಾರಿಗೆ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ಚಿತ್ರ ಸಿಂಹಾದ್ರಿ. ಹಾಗಂತ ಹೇಳಿದ್ದು ಖುದ್ದು ಚಿತ್ರದ ನಿರ್ದೇಶಕ ಶಿವಮಣಿ. ಸಿಂಹಾದ್ರಿ ಪ್ರೆಸ್ ಮೀಟ್ ಫೋಟೋಸ್. ನಿಮಗೆ ನಿಮ್ಮ ನೆಚ್ಚಿನ ನಟನ ಬಗ್ಗೆ ತಿಳಿಯ ಬೇಕ, ಹಾಗಾದರೆ ನಿಮ್ಮ Android ಮೊಬೈಲ್ ನಲ್ಲಿ ನಮ್ಮ
2014-10-01