Skip to content
FilmySphere

From the earlier FilmySphere, kept as published on 2014-10-28. It has not been updated.

Fair and Lovely movie Success meet

ಫೇರ್ ಅ್ಯಂಡ್ ಲವ್ಲಿ ಸಂಭ್ರಮ

Kannada

ಕಳೆದವಾರ ರಾಜ್ಯಾದ್ಯಂತ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ವಿಭಿನ್ನ ಚಿತ್ರ ಫೇರ್ ಅ್ಯಂಡ್ ಲವ್ಲಿ. ಚಿತ್ರತಂಡ ಮಂಗಳವಾರ ಪತ್ರಿಕಾಗೋಷ್ಠಿ ಕರೆದು ತಮ್ಮ ಸಂಭ್ರಮ ಹಂಚಿಕೊಂಡಿತು. ಅದಕ್ಕೆ ಕಾರಣವನ್ನು ಕೂಡ ಆರಂಭದಲ್ಲೇ ಚಿತ್ರದ ನಿರ್ಮಾಪಕರು ಹೇಳಿಕೊಂಡರು. ನಿರ್ಮಾಪಕಿ ಶಿಲ್ಪಾ ರಮೇಶ್ ರಮಣಿ ಮಾತನಾಡುತ್ತಾ ಚಿತ್ರಕ್ಕೆ ಮಾಧ್ಯಮದವರು ನೀಡಿದ ಪ್ರೋತ್ಸಾಹಕ್ಕೆ ಅಭಿನಂದನೆ ಹೇಳಲೆಂದು ಪತ್ರಿಕಾಗೋಷ್ಠಿ ಕರೆದಿರುವುದಾಗಿ ಹೇಳಿದರು. ಬಿಡುಗಡೆಯ ಮರುದಿನ ಜೋರು ಮಳೆಯಿದ್ದ ಕಾರಣ ಕಲೆಕ್ಷನ್ ಕಡಿಮೆಯಿತ್ತು. ಆದರೆ ಶುಕ್ರವಾರ ಮತ್ತು ಸೋಮವಾರದ ಕಲೆಕ್ಷನ್ ಒಳ್ಳೆಯ ರೀತಿಯಲ್ಲಿ ಮುಂದುವರಿದಿದೆ. ಅದಕ್ಕಾಗಿ ಖುಷಿಯಾಗಿದೆ ಎಂದರು.

ಚಿತ್ರದ ನಾಯಕ ಲವ್ಲಿಸ್ಟಾರ್ ಪ್ರೇಮ್ ಕೂಡ ಮಾಧ್ಯಮದ ಮೆಚ್ಚುಗೆ ನುಡಿಗೆ ಕೃತಜ್ಞತೆ ಹೇಳಿದರು. ಚಿತ್ರವನ್ನು ಒಮ್ಮೆ ಒಪ್ಪಿಕೊಂಡ ಮೇಲೆ ಅವರೊಳಗೆ ಕಾಡಿದ್ದ ಅಂಜಿಕೆಗೆ ಈಗ ತೆರೆ ಬಿದ್ದಿದೆ ಎಂದು ಸಮಾಧಾನಗೊಂಡಿರುವುದನ್ನು ತಿಳಿಸಿದರು. ನಾಯಕಿ ಶ್ವೇತಾ ಶ್ರೀವಾತ್ಸವ್ ಕೂಡ ಖುಷಿಯ ಮಾತುಗಳನ್ನಾಡುತ್ತಾ ಚಿತ್ರ ಈ ಮಟ್ಟದಲ್ಲಿ ಸುದ್ದಿ ಮಾಡುತ್ತಿರುವುದು ನಿಜಕ್ಕೂ ಉತ್ಸಾಹ ತಂದಿದೆ. ಖುಷಿಯಿಂದ ಏನು ಮಾತನಾಡಬೇಕೆಂದೇ ಅರ್ಥವಾಗುತ್ತಿಲ್ಲ ಎಂದರು. ಆದರೆ ಅವಕಾಶ ಕೊಟ್ಟ ನಿರ್ಮಾಪಕಿಗೆ ವಂದನೆ ಹೇಳುವುದನ್ನು ಮತ್ತು ಪ್ರೇಮ್ ರಿಯಲ್ ಹೀರೋನಂತೆ ನಟಿಸಿದ್ದಾರೆಂದು ಹೇಳುವುದನ್ನು ಶ್ವೇತಾ ಮರೆಯಲಿಲ್ಲ. 'ಕತೆಯನ್ನು ನಿರ್ದೇಶಕರಿಗೆ ಕೊಡ್ಬೇಕಾದ್ರೆ ಇದು ನನ್ನ ಮಗುವಿದ್ದ ಹಾಗೆ ಎಂದು ಭಾವನಾತ್ಮಕವಾಗಿ ಹೇಳಿದ್ದೆ. ಇಂದು ಆ ಮಗುವಿಗೆ ಅವರ ಮೂಲಕ ಒಳ್ಳೆಯ ಹೆಸರು ಬಂದಿದೆಯೆಂಬ ತೃಪ್ತಿ ನನಗೆ ಮೂಡಿದೆ' ಎಂಬ ಆತ್ಮತೃಪ್ತಿಯ ಮಾತುಗಳು ಕತೆಗಾರ ಯತಿರಾಜ್ ರದ್ದಾಗಿತ್ತು. ಅದೇ ರೀತಿ ಸಂಭಾಷಣೆಗೆ ಒ‍ಳ್ಳೆಯ ಪ್ರತಿಕ್ರಿಯೆ ಬರುತ್ತಿರುವುದನ್ನು ಕಂಡು ಖುಷಿಯಾಗಿದೆ ಎಂದರು ಚಿತ್ರದ ಸಂಭಾಷಣೆಕಾರ ಆನಂದಪ್ರಿಯ. ಬಳಿಕ ಮಾತನಾಡಿದ ನಿರ್ದೇಶಕ ರಘು 'ಚಿತ್ರಕ್ಕೆ ಮಾಧ್ಯಮ ವಲಯದಿಂದ ನೀಡಿರುವ ಪ್ರೋತ್ಸಾಹಕ್ಕೆ ವಂದನೆಗಳನ್ನು ಹೇಳಿದರು. ಚಿತ್ರವು ಬಂಗಾಳಿ, ತಮಿಳು ಮತ್ತು ಮಲಯಾಳಂಗೆ ಡಬ್ ಆಗುತ್ತಿದೆ. ತೆಲುಗಿನಲ್ಲಿ ಇದೇ ನಿರ್ಮಾಪಕರೇ ಚಿತ್ರವನ್ನು ರಿಮೇಕ್ ಮಾಡುವ ಯೋಜನೆಯಲ್ಲಿದ್ದಾರೆ ಎಂದರು. ಛಾಯಾಗ್ರಾಹಕ ಜಗದೀಶ್ ವಾಲಿ ಕೂಡ ಪತ್ತಿಕಾಗೋಷ್ಠಿಯಲ್ಲಿ ಪಾಲ್ಗೊಂಡು ತಮ್ಮ ಸಂಭ್ರಮವನ್ನು ಹಂಚಿಕೊಂಡರು.