From the earlier FilmySphere, kept as published on 2014-10-09. It has not been updated.
Sri Shruthi Interview
Kannada
ಶ್ರೀಶ್ರುತಿ ನಾಯಕಿಯಾಗಿ ನಟಿಸಿರುವ ಚಿತ್ರ ‘ಈ ದಿಲ್ ಹೇಳಿದೆ ನೀ ಬೇಕಂತ’. ಚಿತ್ರದ ಚಿತ್ರೀಕರಣ ಸಂಪೂರ್ಣಗೊಂಡಿದ್ದು ಬಿಡುಗಡೆಗಾಗಿ ದಿನಗಣನೆಯಾಗುತ್ತಿದೆ. ಧಾರಾವಾಹಿರಂಗದಿಂದ ಬಂದು ಸಿನೆಮಾದಲ್ಲಿ ತರಂಗ ಸೃಷ್ಠಿಸಲು ತಯಾರಾಗಿರುವ ಈ ಸುಂದರಿ ಜೊತೆಗೆ ನಡೆಸಿದ ಸಂದರ್ಶನ ಇದು.
ನಟನಾ ಬದುಕು ಆರಂಭವಾಗಿದ್ದು ಹೇಗೆ?
ಚಂದನ ವಾಹಿನಿಯಲ್ಲಿ ತ್ರಿಷಾಗ್ನಿ, ಅಭಿನೇತ್ರಿ, ಮೊಗ್ಗರಳುವ ಮುನ್ನ ಧಾರಾವಾಹಿಗಳಲ್ಲಿ ಬಾಲನಟಿಯಾಗಿ ನಟಿಸಿದ್ದೆ. ವೀರಪ್ಪ ನಾಯ್ಕ ಚಿತ್ರದಲ್ಲಿ ವಿಷ್ಣುಪುತ್ರನಾಗಿ ನಟಿಸಿದ್ದ ಬಾಲನಟನಿಗೆ ಕಂಠದಾನ ನೀಡಿದ್ದೆ. ಪ್ರೀತಿ ಪ್ರೇಮ ಧಾರಾವಾಹಿಯ ಮೂಲಕ ತೆರೆಯ ಮೇಲಿನ ನಟನೆ ಶುರುಮಾಡಿದೆ. ವಸುಧೈವ ಕುಟುಂಬ ಮತ್ತು ಅದರ ಬಳಿಕ ಗಾಳಿಪಟ ಮೊದಲಾದ ಧಾರಾವಾಹಿಗಳಲ್ಲಿ ನಟಿಸಿದ್ದೇನೆ.
ನಿಮಗೆ ದೊಡ್ಡದಾದ ಕಲಾ ಹಿನ್ನೆಲೆಯಿದೆಯಂತೆ?
ಹೌದು. ನನ್ನಜ್ಜಿ ವಸಂತೀ ಬಾಯಿ ಡಾ.ರಾಜಕುಮಾರ್ ಜೊತೆ ನಾಟಕಗಳಲ್ಲಿ ಜೋಡಿಯಾಗಿ ನಟಿಸಿದ್ದರು.ನನ್ನ ತಾತ ಶ್ರೀರಾಮುಲು ನಾಯ್ಡು ಕಂಠದಾನ ಕಲಾವಿದರು. ತಂದೆಯ ತಂದೆ ಶ್ರೀನಿವಾಸ್ ಕೂಡ ಹವ್ಯಾಸಿ ನಾಟಕ ಕಲಾವಿದರಾಗಿದ್ದರು. ತಾಯಿ ಕೆ.ನಯನಾ ತುಳು ಸಿನೆಮಾಗಳಲ್ಲಿ ನಾಯಕಿಯಾಗಿದ್ದರು.ಮಾತ್ರವಲ್ಲ, ಕನ್ನಡದ ಗುರುಶಿಷ್ಯರು, ಭಾಗ್ಯದ ಬೆಳಕು ಚಿತ್ರಗಳಲ್ಲಿ ನಟಿಸಿದ್ದಾರೆ. ತಂದೆ ಶ್ರೀ ಚಂದ್ರು ಸಿನೆಮಾಗಳಿಗೆ ಕತೆ, ಸಂಭಾಷಣೆ, ಹಾಡುಗಳನ್ನು ಬರೆದು ಗುರುತಿಸಿಕೊಂಡಿದ್ದಾರೆ. ಅಣ್ಣ ಶ್ರೀರಘು ಸೌಂಡ್ ಇಂಜನಿಯರಾಗಿ ತಮ್ಮದೇ ಶ್ರೀ ಅಕ್ಷರ ಸ್ಟುಡಿಯೋದಲ್ಲಿ ಕೆಲಸದಲ್ಲಿದ್ದಾರೆ. ಚಿಕ್ಕಮ್ಮ ಆಶಾ ಕೂಡ ನಾಯಕಿಯರಿಗೆ ಕಂಠದಾನ ನೀಡುತ್ತಾರೆ.
ಇಂದು ಉದ್ಯಮದಲ್ಲಿ ಕಂಠದಾನ ಕಲಾವಿದರ ಪರಿಸ್ಥಿತಿ ಹೇಗಿದೆ?
ಭಾಷೆ ಬಾರದ ಕಲಾವಿದರ ತುಟಿಗಳ ಚಲನೆಗೆ ತಕ್ಕ ಹಾಗೆ ಶಬ್ಧ ನೀಡುವುದು ನಿಜಕ್ಕೂ ಪರಿಶ್ರಮದ ಕೆಲಸ. ಆದರೆ ಉದ್ಯಮದೊಳಗಿನ ಬಹಳಷ್ಟು ಕಂಠದಾನ ಕಲಾವಿದರು ಗುರುತಿಸಲ್ಪಡುವುದೇ ಇಲ್ಲ. ಚಿತ್ರಗಳ ಗೆಲುವಿನ ಸಂಭ್ರಮದಲ್ಲಿಯೂ ಅಂಥ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವುದು ಉತ್ತಮ.
ಚಿತ್ರೋದ್ಯಮದಲ್ಲಿ ನಿಮ್ಮ ಕನಸು ಯಾವುದು?
ನನ್ನ ತಂದೆಗೆ ನನ್ನನ್ನು ಒಳ್ಳೆಯ ಗಾಯಕಿಯನ್ನಾಗಿಸುವ ಹಂಬಲವಿತ್ತು. ಒಂದಷ್ಟು ಸಂಗೀತವನ್ನು ಕಲಿತರೂ ಮುಂದುವರಿಸಿಕೊಂಡು ಹೋಗಲು ನನ್ನಿಂದ ಸಾಧ್ಯವಾಗಲಿಲ್ಲ. ಆದರೂ ತಂದೆಯ ನಾಲ್ಕೈದು ಭಕ್ತಿಗೀತೆ ಕ್ಯಾಸೆಟ್ ಗಳಿಗೆ ಹಾಡಿದ್ದೇನೆ. ಆದರೆ ಚಿತ್ರೋದ್ಯಮದಲ್ಲಿ ನಾಯಕಿಯಾಗಿಒ ಹೆಸರು ಮಾಡಬೇಕೆಂಬುದು ನನ್ನ ಕನಸು.
ಗ್ಲಾಮರಸ್ ಪಾತ್ರಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಸದ್ಯದ ಮಟ್ಟಿಗೆ ನನಗೆ ನಟಿಸಲು ದೊರಕಿರುವ ಪಾತ್ರಗಳೆಲ್ಲ ಮೈತುಂಬ ಬಟ್ಟೆ ಧರಿಸಿಕೊಂಡಿರುವಂಥವು.ಆದರೆ ಮಾಡರ್ನ್ ಕಾಸ್ಟ್ಯೂಮ್ ಗಳಲ್ಲಿ ನನ್ನನ್ನು ಕಂಡಿರುವ ಚಿತ್ರ ತಂತ್ರಜ್ಞರು ‘ನೀನು ಎರಡೂ ವಿಧದ ಪಾತ್ರಗಳಿಗೆ ಹೊಂದಿಕೊಳ್ಳಬಲ್ಲ ಅಪರೂಪದ ನಟಿ’ ಎಂದಿದ್ದಾರೆ. ಹಾಗಾಗಿ ಗ್ಲಾಮರಸ್ ಪಾತ್ರ ನಿರ್ವಹಣೆಗೆ ಕೂಡ ನಾನು ತಯಾರು. ಏನೇ ಮಾಡಿದರೂ ಅದರಿಂದ ನನ್ನ ತಂದೆ ತಾಯಿಗೆ ಮುಜುಗರ ಪಡುವಂಥ ಸಂದರ್ಭ ಬರಬಾರದೆಂಬ ನಿಲುವು ನನ್ನದು. ಅವರಾಗಲೀ, ನನ್ನ ಫ್ರೆಂಡ್ಸ್ ಆಗಲೀ ಸಿನೆಮಾವನ್ನು ಖುಷಿಯಿಂದಲೇ ನೋಡುವಂತಿರಬೇಕು.