From the earlier FilmySphere, kept as published on 2014-10-21. It has not been updated.
21 movie news
ಇದು 21 ರ ವಿಶೇಷ
Kannada
ಸಿನೆಮಾಗಳು ಹೆಸರುಗಳಲ್ಲಿ ವಿಭಿನ್ನತೆ ತೋರಿಸುವುದನ್ನು ಬಹಳ ಹಿಂದಿನಿಂದಲೇ ಕಂಡಿದ್ದೇವೆ. ಉಪೇಂದ್ರರಂತೂ ಅದನ್ನು ಉಚ್ಛ್ರಾಯ ಸ್ಥಿತಿಗೆ ತಂದರು. ನಂಬರ್ ಗಳ ರೂಪದಲ್ಲಿ ಸಿನೆಮಾಗೆ ಹೆಸರಿಡುವಾಗ ಅದಕ್ಕೇನಾದರೂ ವಿಶೇಷ ಕಾರಣಗಳಿರುತ್ತವೆ. ಅಂಥದೇ ಕಾರಣದೊಂದಿಗೆ ಹೊಸ ಚಿತ್ರತಂಡವೊಂದು ಸನ್ನದ್ಧವಾಗಿ ಬಂದಿದೆ.
ಸಾಫ್ಟ್ ವೇರ್ ಇಂಜಿನಿಯರ್ ಹರಿಕೃಷ್ಣರಿಗೆ ಸಿನೆಮಾ ನಿರ್ಮಾಣ 20 ವರ್ಷಗಳ ಕನಸು. 21ನೇ ವರ್ಷದಲ್ಲಿ ತಮ್ಮ 'ಆಧ್ಯ' ಪ್ರೊಡಕ್ಷನ್ಸ್ ನಲ್ಲಿ ನೆರವೇರುತ್ತಿರುವುದು ಅವರಿಗೆ ಖುಷಿ. ಜೊತೆಗೆ ಚಿತ್ರದಲ್ಲಿ ಒಂದು ಪಾತ್ರವಾಗಿಯೂ ನಟಿಸುತ್ತಿರುವ ಸಂಭ್ರಮ ವೂ ಇದೆ. ನಿರ್ದೇಶಕ ಪ್ರೇಮ್ ಗೆ ಸಹಾಯಕ ನಿರ್ದೇಶಕರಾಗಿದ್ದ ಅನುಭವವುಳ್ಳ ಎಂ.ಲೋಹಿತ್ ರಾಜ್ ಈ ಮೂಲಕ ಪ್ರಥಮ ಬಾರಿ ನಿರ್ದೇಶಕರಾಗುತ್ತಿದ್ದಾರೆ. ವಾಸ್ತವದಲ್ಲಿ ಅಕುಲ್ ಬಾಲಾಜಿ ನಾಯಕನಾಗಿದ್ದ 'ದುಬಾರಿ' ಇವರ ಪ್ರಥಮ ಚಿತ್ರವಾಗಬೇಕಿತ್ತು. ಆದರೆ ಚಿತ್ರ ಇನ್ನೇನು ಆರಂಭವಾಗಬೇಕು ಎಂಬ ಹೊತ್ತಿಗೆ ಅಕುಲ್ ಬಿಗ್ ಬಾಸ್ ಮನೆಯೊಳಗೆ ಸೇರಿಕೊಂಡಿದ್ದರು. ಹಾಗಾಗಿ 21 ಎಂಬ ಚಿತ್ರವನ್ನು ಕೈಗೆತ್ತಿಕೊಂಡು ಇಪ್ಪತ್ತೊಂದೇ ದಿನಗಳಲ್ಲಿ ಚಿತ್ರೀಕರಣ ಪೂರ್ತಿಗೊಳಿಸಿದ್ದಾರೆ. ನಿರ್ದೇಶನದ ಜೊತೆಗೆ ಕತೆ ಚಿತ್ರಕತೆಯನ್ನೂ ಖುದ್ದಾಗಿ ಬರೆದಿರುವ ಲೋಹಿತ್ ಚಿತ್ರದೊಳಗೆ ಒಂದು ಡಕಾಯಿತರ ತಂಡವನ್ನು ಪರಿಚಯಿಸುತ್ತಾರೆ. ಅವರು 21ನೇ ತಾರೀಕು, 21 ಗಂಟೆಗೆ ನಡೆಸುವ ದರೋಡೆಯ ಬಗ್ಗೆ ಚಿತ್ರ ತಿಳಿಸುವುದಂತೆ. ಇಂಥ ಪ್ರಯತ್ನದಲ್ಲಿ 20ಬಾರಿ ಯಶಸ್ಸಾಗುವ ಡಕಾಯಿತರ 21ನೇ ಪ್ರಯತ್ನವನ್ನು 2ಗಂಟೆ 1ನಿಮಿಷದ ಕಾಲಾವಧಿಯ ಚಿತ್ರವಾಗಿಸಿರುವುದಾಗಿ ನಿರ್ದೇಶಕರು ಹೇಳುತ್ತಾರೆ. ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಮಮತಾ ರಾವತ್ 21 ಎಂಬುದು ತಮಗೂ ವಿಶೇಷ ದಿನವಾಗಿದ್ದು ಅದು ತಮ್ಮ ಬರ್ತ್ ಡೇ ಡೇಟ್ ಎಂದರು. ಯುಎಸ್ ನಿಂದ ಬರುವ ಹುಡುಗಿಯಾಗಿ ತಾನು ಕಾಣಿಸಿಕೊಳ್ಳುತ್ತಿದ್ದು, ಉಳಿದ ಪಾತ್ರಗಳು ನನ್ನ ಸುತ್ತಲೇ ಸುತ್ತುತ್ತವೆ ಎಂದರು. ಮತ್ತೋರ್ವ ನಾಯಕಿ ಪೂಜಾ ಕಾಲೇಜು ಹುಡುಗಿಯಾಗಿ ನಟಿಸುತ್ತಿದ್ದು ಇದು ಅವರಿಗೆ ನಾಲ್ಕನೇ ಚಿತ್ರವಂತೆ. ಪ್ರಮುಖ ಖಳನಾಗಿ ನಟಿಸುತ್ತಿರುವ ಸಂಜೀವ್ ಶ್ರೀರಾಂಪುರದವರಾಗಿದ್ದು, ಅಲ್ಲಿನ ಪಿನ್ ಕೋಡ್ 21, ಹಾಗಾಗಿ ಅದು ತಮಗಿರುವ ವಿಶೇಷತೆ ಎಂದರು. ಚಿತ್ರದಲ್ಲಿ ಹಾಡುಗಳಿಲ್ಲವಾದರೂ ಬ್ಯಾಕ್ ಗ್ರೌಂಡ್ ಸ್ಕೋರ್ ಚೆನ್ನಾಗಿ ನೀಡಲು ಪ್ರಯತ್ನಿಸಿರುವುದಾಗಿ ಹೇಳಿದರು ಸಂಗೀತ ನವ ನಿರ್ದೇಶಕ ಅರ್ಜುನ್ ರಾಮ್. ಕಲಾವಿದರಾದ ಪ್ರಶಾಂತ್ ಸಿದ್ಧಿ, ಹುಬ್ಬಳ್ಳಿಯ ಹೊಸಮುಖ ವಿಜಯ್ ಹಿರೇಗೌಡ, ರೂಪೇಶ್ ಮೊದಲಾದವರು ಉಪಸ್ಥಿತರಿದ್ದರು. ಚಿತ್ರವನ್ನು ನವೆಂಬರ್ 21ರಂದು ಬಿಡುಗಡೆಗೊಳಿಸಲು ನಿರ್ಧರಿಸಿದೆ ಚಿತ್ರತಂಡ.