Skip to content
FilmySphere

From the earlier FilmySphere, kept as published on 2014-10-08. It has not been updated.

Benkipatna Audio CD Release

ಬೆಂಕಿ ಪಟ್ಣ ಚಿತ್ರದ ಹಾಡುಗಳ ಸೀಡಿ ಬಿಡುಗಡೆ

Kannada

ಯುವ ನಟ ಪ್ರತಾಪ್ ನಾರಾಯಣ್ ನಾಯಕನಾಗಿರುವ ಮತ್ತೊಂದು ಚಿತ್ರ ತೆರೆಗೆ ಸಿದ್ಧವಾಗುತ್ತಿದೆ. ಬೆಮಕಿಪಟ್ಣ ಎಂಬ ಚಿತ್ರದ ಹೆಸರಿನಂತೆ ಚಿತ್ರದ ಕತೆಯೂ ತುಂಬ ವಿಭಿನ್ನವಾಗಿರುತ್ತದೆ ಎಂಬುದು ಚಿತ್ರತಂಡದ ಪ್ರತಿಯೊಬ್ಬರ ಅಭಿಪ್ರಾಯ. ಪ್ರೀತಮ್ ಹರ್ಷ ಸಂಗೀತ ಸಂಯೋಜನೆಯಲ್ಲಿ ಸಿದ್ದವಾದ ಹಾಡುಗಳ ಸೀಡಿ ಬಿಡುಗಡೆ ಸಮಾರಂಭದಲ್ಲಿ ಈ ಮಾತುಕತೆಗಳು ನಡೆದವು.

ಚಿತ್ರದ ಹಾಡುಗಳನ್ನು ಮೆಚ್ಚಿ ಆಡಿಯೋ ಹಕ್ಕನ್ನು ಪಡೆದುಕೊಂಡಿರುವ ಲಹರಿ ವೇಲು ಹಾಡುಗಳು ಹಳೆಯ ಕಾಲದ ಮೆಲೋಡಿಯಂತಿವೆ ಎಂದು ಗುಣಗಾನ ಮಾಡಿದರು. ಸೀಡಿಗಳನ್ನು ಬಿಡುಗಡೆ ಮಾಡಿದ ಯೋಗರಾಜ ಭಟ್ ಮಾತನಾಡಿ ನಿರ್ದೇಶಕ ಟಿಕೆ ದಯಾನಂದ್ ಓರ್ವ ಒಳ್ಳೆಯ ಕತೆಗಾರ. ದೀಪಾವಳಿ ಸ್ಪರ್ಧೆಗಳಲ್ಲಿ ಬಹುಮಾನ ಗೆದ್ದವರು. ಈಗ ನಿರ್ದೇಶನಕ್ಕೆ ಬಂದಿದ್ದಾರೆ. ಇಲ್ಲಿಯೂ ಅದೇ ಗೆಲುವು ಸಿಗಲಿ ಎಂದರು. ನಾಯಕಿ ಅನುಶ್ರೀ ಕೂಡ ಚಿತ್ರವನ್ನು ಒಪ್ಪಿಕೊಳ್ಳಲು ಕತೆಯೇ ಕಾರಣ, ಹಾಡುಗಳು ಚೆನ್ನಾಗಿವೆ ಎಂಬುದನ್ನೇ ಹೇಳಿದರು. ನಟ, ನಿರ್ಮಾಪಕ ಬಿ.ಸುರೇಶ್ ಚಿತ್ರದಲ್ಲಿ ತನ್ನದು ಚಿಕ್ಕದಾದರೂ ಒಳ್ಳೆಯದೊಂದು ಪಾತ್ರ ಇರುವುದಾಗಿ ಹೇಳಿದರು. ಖಳನಟನಾಗಿ ನಟಿಸುತ್ತಿರುವ ಅರುಣ್ ಸಾಗರ್ ಇಂಥದೊಂದು ಕತೆಯನ್ನು ಚಿತ್ರಮಾಡಲು ಮುಂದೆ ಬಂದ ನಿರ್ಮಾಪಕರಿಗೆ ತುಂಬು ಅಭಿನಂದನೆಗಳನ್ನು ಸಲ್ಲಿಸಿದರು. ಚಿತ್ರವನ್ನು ಸಕಲೇಶಪುರದ ಸುತ್ತಮುತ್ತ ಸೇರಿದಂತೆ ಕರ್ನಾಟಕದೊಳಗೆ ಚಿತ್ರೀಕರಿಸಲಾಗಿದೆಯಂತೆ. ಸಮಾರಂಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡರು ಪಾಲ್ಗೊಂಡು ಚಿತ್ರತಂಡಕ್ಕೆ ಶುಭ ಕೋರಿದರು. ಅವರ ಆಗಮನಕ್ಕೆ ವಿಶೇಷವಾಗಿ ಕಾರಣವಾಗಿದ್ದು ಚಿತ್ರವನ್ನು ನಿರ್ಮಿಸುತ್ತಿರುವ ಅವರ ಮಿತ್ರ ಕರಾವೇಯ ಜಾಕಿರ್ ಅಲಿಖಾನ್ ಎಂಬುದು ಗಮನಾರ್ಹ. ಅದಕ್ಕೆ ಸರಿಯಾಗಿ ಚಿತ್ರದಲ್ಲಿ ಎಲ್ಲರೂ ಕನ್ನಡದ ಕಲಾವಿದರು ಮತ್ತು ತಂತ್ರಜ್ಞರೇ ತುಂಬಿರುವುದು ವಿಶೇಷ. ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾದ ಒಂದು ಹಾಡು ಮತ್ತು ಟ್ರೇಲರ್ ಕುತೂಹಲ ಮೂಡಿಸುವಂತಿತ್ತು.