From the earlier FilmySphere, kept as published on 2014-10-22. It has not been updated.
Abhimanyu Audio Released by Sri Shivakumar Swamy
'ಅಭಿಮನ್ಯು' ಆಡಿಯೋ ಬಿಡುಗಡೆಗೊಳಿಸಿದ ಶಿವಕುಮಾರ ಸ್ವಾಮಿ
Kannada
ನನ್ನ ಚಿತ್ರದ ಸೀಡಿಯನ್ನು ಫೈವ್ ಸ್ಟಾರ್ ಹೋಟೆಲ್ ನಲ್ಲಿ ಬಿಡುಗಡೆಗೊಳಿಸಿದರೆ ನನಗೆ ಸಿಗುವ ತೃಪ್ತಿ ಅದು 5ಪರ್ಸೆಂಟ್ ನಷ್ಟು ಮಾತ್ರ. ಆದರೆ ಈಗ ಸಿದ್ಧಗಂಗಾ ಮಠದಲ್ಲಿ ಶಿವಕುಮಾರ ಸ್ವಾಮಿಗಳ ಹಸ್ತದಿಂದ ಬಿಡುಗಡೆಯಾಗುತ್ತಿರುವುದರಿಂದಾಗಿ ನನಗೆ ನೂರಕ್ಕೆ ನೂರರಷ್ಟು ತೃಪ್ತಿ ದೊರಕಿದೆ ಎಂದರು ಅರ್ಜುನ್ ಸರ್ಜಾ. ಅವರು ತಮ್ಮ ಅಭಿಮನ್ಯು ಚಿತ್ರದ ಹಾಡುಗಳ ಸೀಡಿ ಬಿಡುಗಡೆಯ ಬಳಿಕ ಈ ಮಾತುಗಳನ್ನಾಡಿದರು. 'ನನ್ನ ತಂದೆ ತುಮಕೂರು ಜಿಲ್ಲೆಯ ಜಕ್ಕನಹಳ್ಳಿಯವರು. ಮಾತ್ರವಲ್ಲ, ಚಿತ್ರದಲ್ಲಿ ನಾನು ಶಿವಕುಮಾರ ಸ್ವಾಮಿಯವರು ಸಾವಿರಾರು ವಿದ್ಯಾರ್ಥಿಗಳಿಗೆ ನೀಡುವ ಉಚಿತ ವಿದ್ಯಾಭ್ಯಾಸದಿಂದ ಸ್ಪೂರ್ತಿಗೊಂಡಂಥ ದೃಶ್ಯಗಳು ಚಿತ್ರದಲ್ಲಿವೆ ಎಂದು ಹೇಳುವ ಮೂಲಕ ಕ್ಯಾಸೆಟ್ ಅಲ್ಲೇ ಏಕೆ ಬಿಡುಗಡೆಗೊಳಿಸಿದ್ದೆಂಬುದನ್ನು ಸಮರ್ಥಿಸಿದರು ಅರ್ಜುನ್.
ನಡೆದಾಡುವ ದೇವರು ಎಂದೇ ಹೆಸರಾಗಿರುವ ಧಾರ್ಮಿಕ ಮುಖಂಡ 107ವರ್ಷಗಳ ಶಿವಕುಮಾರ ಸ್ವಾಮೀಜಿ 15000ದಷ್ಟು ಮಕ್ಕಳಿಗೆ ಉಚಿತವಾಗಿ ಊಟ,ವಸತಿ ಮತ್ತು ವಿದ್ಯೆ ನೀಡುವ ಮೂಲಕ ಮೂರು ದಾಸೋಹಗಳನ್ನು ಮಾಡುತ್ತಿರುವ ಕೀರ್ತಿಗೆ ಭಾಜನರಾದವರು ಎಂಬುದು ಎಲ್ಲರಿಗೂ ಗೊತ್ತಿದೆ. ನಟ ಅರ್ಜುನ್ ಸರ್ಜಾ ಶಿವಕುಮಾರ ಸ್ವಾಮಿಗಳ ಪಾದಪೂಜೆ ನಡೆಸುವ ಮೂಲಕ ಗೌರವ ಸಲ್ಲಿಸಿದ್ದು ಈ ಸಂದರ್ಭದಲ್ಲಿ ಅವರ ತಾಯಿ ಚಿಕ್ಕ ರಾಜಮ್ಮಣ್ಣಿ, ಸಹೋದರಿ ಲಕ್ಷ್ಮೀದೇವಿ, ಚಿರಂಜೀವಿ ಸರ್ಜಾ ಮತ್ತು ಧ್ರುವಸರ್ಜಾ ಉಪಸ್ಥಿತರಿದ್ದರು. ಚಿತ್ರದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ನಾಯಕಿ ಸಿಮ್ರಾನ್ ಕಪೂರ್, ನಿರ್ದೇಶಕ ಸಂತು ಮತ್ತು ಚೇತನ್ ಕುಮಾರ್ ಮೊದಲಾದವರು ಕೂಡ ಅಲ್ಲಿ ನೆರೆದಿದ್ದರು. ಚಿತ್ರವನ್ನು ತಮಿಳು ಮತ್ತು ತೆಲುಗಿನಲ್ಲಿಯೂ ತೆರೆಗೆ ತರುತ್ತಿರುವುದು ವಿಶೇಷ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮಾತನಾಡಿ 'ನಾನು ಸಂಗೀತ ನೀಡಿದ ಸೀಡಿ ಸ್ವಾಮಿಗಳ ಕೈಯ್ಯಿಂದ ಬಿಡುಗೊಡೆಗೊಳ್ಳುವ ಸೌಭಾಗ್ಯ ದೊರಕೀತೆಂದು ನಾನು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ ಎಂದರು. ಚಿರಂಜೀವಿ ಸರ್ಜಾ ತಮ್ಮ ಮುಂಬರುವ ಚಿತ್ರವಾದ ರುದ್ರತಾಂಡವದ ಸಂಭಾಷಣೆ ಹೇಳುವ ಮೂಲಕ ನೆರದವರ ಮನರಂಜಿಸಿದರು. ಬಹದ್ದೂರ್ ನ ಯಶಸ್ವಿ ನಾಯಕ ಧ್ರುವಸರ್ಜಾ ಮಾತುಗಳಿಗೂ ಅದ್ಧೂರಿ ಸ್ವಾಗತ ದೊರೆಯಿತು.