Skip to content
FilmySphere

From the earlier FilmySphere, kept as published on 2014-10-31. It has not been updated.

Jaggi Movie Review

ಜಗ್ಗಿ ಚಿತ್ರ ವಿಮರ್ಶೆ

ನಾಯಕ ಕಾಲೇಜು ಹುಡುಗ. ಆದರೆ ಕಾಲೇಜ್ ಸ್ಟೋರಿಯಲ್ಲ. ನಾಯಕನ ಗೆಳೆಯರಲ್ಲೊಬ್ಬನ ಊರಾದ ಮಡಿಕೇರಿಗೆ ಹೋದಾಗ ನಡೆಯುವ ಘಟನೆಯೇ ಚಿತ್ರದ ಕತೆ.ಜಗ್ಗಿ ಅಂದರೆ ಚಿತ್ರದ ಸಬ್ ಟೈಟಲ್ ಹೇಳುವಂತೆ ಒಬ್ಬ ಬಿಂದಾಸ್ ಲವ್ವರ್ ಬಾಯ್. ಸ್ನೇಹಕ್ಕೇ ಜೀವ ಕೊಡುತ್ತೇನೆ ಎಂದು ಹೇಳುತ್ತಾ ಸ್ನೇಹಿತನ ಅತ್ತಿಗೆಯಾಗುವವಳನ್ನೇ ಪ್ರೀತಿಸುತ್ತಾನೆ. ಆಕೆ ಒಪ್ಪದಿದ್ದರೂ ಒಪ್ಪಿಗೆಗಾಗಿ ಕಾಯುತ್ತಾನೆ. ಆದರೆ ತನ್ನ ನಿಶ್ಚಿತಾರ್ಥ ನಡೆದಿರುವುದು ಓರ್ವ ರೌಡಿಯೊಂದಿಗೆ ಎಂಬ ಅರಿವಾದ ಬಳಿಕ ಆಕೆ ಜಗ್ಗಿಯನ್ನು ಪ್ರೀತಿಸುತ್ತಾಳೆ. ಈ ವಿಚಾರವನ್ನು ಆಕೆಯ ಬಾಯಿಯಿಂದಲೇ ಅರಿತ ರೌಡಿ ಆಕೆಗೆ ಚೂರಿ ಹಾಕುತ್ತಾನೆ. ತನ್ನ ಅಣ್ಣನ ಬಾಳನ್ನು ಅಲ್ಲೋಲ ಕಲ್ಲೋಲ ಮಾಡಿದ ಜಗ್ಗಿಯನ್ನು ಆತನ ಸ್ನೇಹಿತನೇ ಶೂಟ್ ಮಾಡುತ್ತಾನೆ. ಅಲ್ಲಿಗೆ ಚಿತ್ರ ಮುಗಿಯುತ್ತದೆ. ಚಿತ್ರ ನೋಡುವಾಗ ಖುಷಿಯಾಗುವ ಎರಡು ಸಂಗತಿಗಳಲ್ಲಿ ಒಂದು ಚುರುಕಿನ ಸಂಭಾಷಣೆ ಇನ್ನೊಂದು ಮೆಲೊಡಿ ಡ್ಯೂಯೆಟ್ ಮತ್ತು ಅದರ ಕೊರಿಯಾಗ್ರಫಿ ಮಾತ್ರ. ಆದರೆ ಕೆಲವೊಂದೆಡೆ ಪಾತ್ರಕ್ಕೆ ಒಗ್ಗದ ಮಾತುಗಳು ಭೂತದ ಬಾಯಲ್ಲಿ ಭಗವದ್ಗೀತೆಯಂತೆ ಅನಿಸುವುದುಂಟು. ಐಟಂಗೆಂದೇ ಹಾಡನ್ನು ತುರುಕಲಾಗಿದೆ. ಅದಕ್ಕೆಂದೇ ನೀತು ಕುಣಿದಿದ್ದಾರೆ. ಆದರೆ ರಿಯಾಲಿಟಿ ಶೋನಿಂದಾಗಿ ನೀತು ಡಾನ್ಸ್ ನೋಡಲೆಂದೇ ಚಿತ್ರ ನೋಡುವವರಿಗೂ ಕೊರತೆಯಿಲ್ಲ. ಜಗ್ಗಿಯಾಗಿ ಸುನೀಲ್ ರಾಜ್ ನಟನೆಗಿಂತ ಕಂಠವೇ ನೆನಪಲ್ಲಿ ಉಳಿಯುತ್ತದೆ. ಖುದ್ದು ಮಾಡಿರುವ ಸಾಹಸಗಳು ಅಷ್ಟು ಸುದ್ದಿ ಮಾಡುವುದಿಲ್ಲ. ನಾಯಕಿ ಮುಂಬೈ ಬೆಡಗಿಯಾದರೂ ಚಿತ್ರದಲ್ಲಿನ ಗ್ಲಾಮರ್ ಮತ್ತು ನಟನೆ ಅಷ್ಟಕ್ಕಷ್ಟೇ. ಖಳನಾಗಿ ಮುನಿರಾಜುಗೆ ಇರುವ ಸ್ಕೋಪ್ ಶರತ್ ಲೋಹಿತಾಶ್ವಗೆ ಇಲ್ಲ. ಅಜ್ಜಿ ಅದವಾನಿ ಲಕ್ಷ್ಮೀದೇವಿಯನ್ನು ಬಹಳ ಕಾಲದ ನಂತರ ಚೆನ್ನಾಗಿ ತೋರಿಸಲಾಗಿದೆ. ಮನಸ್ಸಿಗೆ ನಾಟದ ಪ್ರೇಮಕತೆಗೆ ನೀಡಿರುವ ದುಃಖಾಂತ್ಯವೂ ಅಷ್ಟೇ ಅನಗತ್ಯವೆನಿಸುತ್ತದೆ. ಇಷ್ಟರ ಮೇಲೆ ಚಿತ್ರ ಯಾಕೆ ನೋಡಬೇಕೆಂಬುದನ್ನು ನೋಡುಗರೇ ತೀರ್ಮಾನಿಸಬೇಕು.