From the earlier FilmySphere, kept as published on 2014-10-27. It has not been updated.
Ravichandran's new movie - Love you aliya
"ಲವ್ ಯು ಆಲಿಯಾ" ರವಿಚಂದ್ರನ್ ರ ಹೊಸ ಚಿತ್ರ
Kannada
"ಲವ್ ಯು ಆಲಿಯಾ" ರವಿಚಂದ್ರನ್ ರ ಹೊಸ ಚಿತ್ರ
'ಆಲ್ ರೌಂಡರ್ ಎಂಬ ಪತ್ರಿಕೆಯನ್ನು ಆರಂಭಿಸುವಾಗ ಅದನ್ನು ಕನ್ನಡ ಚಿತ್ರರಂಗದ ಆಲ್ ರೌಂಡರ್ ವಿ.ರವಿಚಂದ್ರನ್ ಬಿಡುಗಡೆಗೊಳಿಸಿದರೆ ಚೆನ್ನಾಗಿರುತ್ತದೆ ಎಂದುಕೊಂಡದ್ದು ನಮ್ಮಪ್ಪ ಲಂಕೇಶ್. ಅವರು ಆಹ್ವಾನಿಸಿದ ಕೂಡಲೇ ಬಂದು ಪುಸ್ತಕ ಬಿಡುಗಡೆಗೊಳಿಸಿದ್ದು ಕ್ರೇಜಿಸ್ಟಾರ್ ರವಿಚಂದ್ರನ್. ಅಲ್ಲಿಂದ ಮುಂದೆ ಬೆಳೆದುಕೊಂಡು ಬಂದ ನಮ್ಮ ಸಂಬಂಧ ಆಪ್ತವಾಗುತ್ತಾ ಹೋಯಿತು. ನಾನು ತುಂಟಾಟ ಚಿತ್ರ ಮಾಡಿದಾಗ ಅದರ ಪ್ರಥಮ ಪ್ರೇಕ್ಷಕ ರವಿಚಂದ್ರನ್ ಆಗಿದ್ದರು. ಇನ್ನು ಈ ಚಿತ್ರದ ಬಗ್ಗೆ ಇಲ್ಲಿ ನಾನೇನೋ ಹೇಳಿ ಅವರು ಅದನ್ನು ತಮಾಷೆ ಮಾಡುವ ಬದಲು ಅವರೇ ಚಿತ್ರದ ಬಗ್ಗೆ ಹೇಳಿದರೆ ಚೆನ್ನಾಗಿರುತ್ತದೆ' ಎಂದರು ಇಂದ್ರಜಿತ್ ಲಂಕೇಶ್. ಅವರು ತಮ್ಮ ನಿರ್ದೇಶನದಲ್ಲಿ ಕ್ರೇಜಿಸ್ಟಾರ್ ನಟಿಸುತ್ತಿರುವ ಹೊಸ ಚಿತ್ರಕ್ಕೆ ಹೆಸರಿಡುವ ಕಾರ್ಯಕ್ರಮದಲ್ಲಿ ರವಿಚಂದ್ರನ್ ರನ್ನು ವೇದಿಕೆಗೆ ಆಹ್ವಾನಿಸುತ್ತಾ ಈ ಮಾತುಗಳನ್ನು ಹೇಳಿದರು.
'ಲವ್ ಯು ಆಲಿಯ' ಎಂಬ ಹೆಸರನ್ನು ನಾನು ಕೂಡ ಇಲ್ಲೇ ಪ್ರಥಮ ಬಾರಿ ಕೇಳಿಸಿಕೊಳ್ಳುತ್ತಿರುವುದಾಗಿ ಹೇಳಿದ ರವಿಚಂದ್ರನ್ "ಲವ್ ಯು ಆಲ್ ಯ" ಎಂದು ಪಂಚ್ ಹೊಡೆದರು. ಚಿತ್ರದಲ್ಲಿ ನೀವು ಡಾಕ್ಟರ್ ಆಗಿ ನಟಿಸುತ್ತಿದ್ದೀರ ಎಂದಾಗ ನಾನು ಒಪ್ಪಿದೆ. ಜೊತೆಗೆ ನನಗೆ ಚಿತ್ರದಲ್ಲೊಬ್ಬರು ಡಾಟರ್ ಕೂಡ ಇರುತ್ತಾರೆ ಎಂದರು ರವಿ. ಅಂದಹಾಗೆ ಡಾಕ್ಟರ್ ಪಾತ್ರ ನನ್ನ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿ ಮಾಡುತ್ತಿದ್ದೇನೆ ಎಂದರು. ನಾಯಕಿ ಭೂಮಿಕಾ ರವಿಚಂದ್ರನ್ ರಂಥ ಹೆಸರಾಂತ ನಟರೊಂದಿಗೆ ನಟಿಸಲು ಸಾಧ್ಯವಾಗಿದ್ದು ತಮ್ಮ ಅದೃಷ್ಟ ಎಂದರು. ಅದಕ್ಕೂ ಮುನ್ನ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಚಿತ್ರದ ಹೆಸರನ್ನು ಲಾಂಚ್ ಮಾಡಿ ಶುಭ ಕೋರಿದರು. ಸಮಾರಂಭದಲ್ಲಿ ಚಿತ್ರದ ಮೂಲಕ ಪರಿಚಯಗೊಳ್ಳುತ್ತಿರುವ ನವ ನಾಯಕಿ ಸಂಗೀತಾ, ಮೈಸೂರು ಹುಡುಗಿ ಅದಿತಿ, ಯುವ ನಾಯಕ ಚಂದನ್ ಮೊದಲಾದವರು ವೇದಿಕೆಯಲ್ಲಿದ್ದರು. ಸಮಾರಂಭದಲ್ಲಿ ಸಂಜನಾ, ಪವಿತ್ರಾ ಲೋಕೇಶ್, ಸುಚೇಂದ್ರ ಪ್ರಸಾದ್, ವಿತರಕ ಬಾಷಾ, ನಟಿ ಭವ್ಯಾ ಮೊದಲಾದವರು ಸಾನ್ನಿಧ್ಯವಿತ್ತು.