Skip to content
FilmySphere

From the earlier FilmySphere, kept as published on 2014-10-21. It has not been updated.

Asaadhya movie Muhurtha

ಅಸಾಧ್ಯ ಚಿತ್ರಕ್ಕೆ ಮುಹೂರ್ತ

Kannada

ಮೊದಲ ನೋಟದಲ್ಲಿ ಕಂಡಾಗ ಸಾಧ್ಯ ಅನಿಸುವಂತೆ ಡಿಸೈನ್ ಮಾಡಲಾಗಿದ್ದ ಅಸಾಧ್ಯ ಚಿತ್ರದ ಪೋಸ್ಟರ್ ಗಳನ್ನು ಅಲ್ಲೆಲ್ಲಾ ಹಾಕಿರಿಸಲಾಗಿತ್ತು. ಅದೊಂದು ಹೊಸಬರ ಚಿತ್ರದ ಮುಹೂರ್ತ ಸಮಾರಂಭ. ಆದರೆ ಚಿತ್ರದ ಪೋಸ್ಟರ್ ಮೇಲೆ ಆರ್ ಚಂದ್ರು ಶೈಲಿಯಲ್ಲಿ ಹಾಕಲಾಗಿದ್ದ ಮುದ್ರೆಯಿತ್ತು. ಆದರೆ ಇಲ್ಲಿ ಆರ್ ಬದಲು ಇದ್ದಿದ್ದು ಚಂದ್ರು ಎಂಬ ಹೆಸರು ಮಾತ್ರ. ನಿರ್ದೇಶಕ ಚಂದ್ರುವಿಗೆ ಇದು ಪ್ರಥಮ ಚಿತ್ರ.

ಎನ್.ಎಂ.ಸಿ ಕ್ರಿಯೇಶನ್ಸ್ ನ ಲಾಂಛನದಲ್ಲಿ ತಯಾರಾಗುತ್ತಿರುವ ಅಸಾಧ್ಯ ಚಿತ್ರದ ಕತೆ ಎಂಬುದು ಚಂದ್ರುವಿನ ನಾಲ್ಕು ವರ್ಷದ ಕನಸಾಗಿದೆಯಂತೆ. ಇದೊಂದು ರಿಯಲ್ ಲೈಫ್ ಸ್ಟೋರಿ. ಎಲ್.ಎಲ್.ಬಿ ಮಾಡುತ್ತಿದ್ದಾಗ ನಡೆದ ಘಟನೆ. ಚಿತ್ರಕ್ಕೆ ನಾಲ್ವರು ನಾಯಕರಿದ್ದು ಅಂದು ಘಟನೆಯಲ್ಲಿದ್ದ ಇಬ್ಬರು ಇದೀಗ ಚಿತ್ರದಲ್ಲಿಯೂ ನಟಿಸುತ್ತಿರುವುದಾಗಿ ತಿಳಿಸಿದರು. ಅಂದಹಾಗೆ ಇವರಿಗೆ ನೃತ್ಯ ನಿರ್ದೇಶಕ ರಾಜೇಶ್ ಬ್ರಹ್ಮಾವರ್ ಗೆ ಅಸಿಸ್ಟೆಂಟ್ ಆಗಿ ಕಾರ್ಯನಿರ್ವಹಿಸಿದ ಅನುಭವವಿದೆ. ಚಿತ್ರದ ಸಬ್ ಟೈಟಲ್ ಹೇಳುವಂತೆ "ಮನಸ್ಸಿಟ್ಟು ಮಾಡಿದ್ರೆ ಎಲ್ಲವೂ ಸಾಧ್ಯ" ಎಂಬ ಎಳೆಯೇ ಚಿತ್ರದ ಮುಖ್ಯ ಕತೆ. 4 ಶೆಡ್ಯೂಲ್ ಗಳಲ್ಲಿ 45ದಿನಗಳ ಕಾಲ ಚಿತ್ರೀಕರಣ ನಡೆಸಲಾಗುತ್ತದೆ. ಬೆಂಗಳೂರಲ್ಲಿ 15 ದಿನಗಳು ಸೇರಿದಂತೆ ಮಡಿಕೇರಿ, ಚಿಕ್ಕಮಗಳೂರು ಮತ್ತು ಹಾಸನಗಳಲ್ಲಿ ಲೊಕೇಶನ್ ನಿರ್ಧರಿಸಲಾಗಿದೆ. ಚಿತ್ರದ ನಾಯಕರಲ್ಲೊಬ್ಬರಾದ ಮಂಜುನಾಥ್ ಗೆ ನಿರ್ದೇಶಕ ಚಂದ್ರು ಕ್ಲಾಸ್ ಮೇಟ್ ಅಂತೆ. ಮತ್ತೊಬ್ಬ ನಾಯಕ ಸುಭಾನ್ ಕೂಡ ಚಿತ್ರರಂಗಕ್ಕೆ ಹೊಸ ಮುಖ. ಚಿತ್ರದಲ್ಲಿ ಆತನ ತಂದೆಯಾಗಿ ನಟಿಸುತ್ತಿರುವುದು ನೆನಪಿರಲಿ ಪ್ರೇಮ್ ನ ತಂದೆ ಬಸಪ್ಪ ಎಂಬುದು ವಿಶೇಷ. ಅವರು ಈಗಾಗಲೇ ಜಾಸ್ಮಿನ್ 5 ಸೇರಿದಂತೆ ನಾಲ್ಕರಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲೊಂದು ಪ್ರಮುಖ ಪಾತ್ರ ನಿರ್ವಹಿಸಲು ಪ್ರೇಮ್ ನನ್ನು ಸಂಪರ್ಕಿಸಲಾಗಿದ್ದು ಆ ಬಗ್ಗೆ ಖಚಿತ ಮಾಹಿತಿ ಮುಂದಿನ ಪತ್ರಿಕಾಗೋಷ್ಠಿಯಲ್ಲಿ ಹೇಳುವುದಾಗಿ ನಿರ್ದೇಶಕರು ಹೇಳಿದರು. ನಾಯಕಿರಾಗಿ ಕೂಡ ಹೊಸಮುಖಗಳಾದ ಅಕ್ಷತಾ ಶೆಟ್ಟಿ ಮತ್ತು ಪಲ್ಲವಿ ನಟಿಸಿದ್ದಾರೆ. ಅಂದಹಾಗೆ ಪಲ್ಲವಿ ನಿರ್ದೇಶಕ ಚಂದ್ರುವಿನ ತಂಗಿ ಎಂಬುದು ಗಮನಾರ್ಹ. ಚಿತ್ರದ ಸಂಗೀತ ನಿರ್ದೇಶನಕ್ಕೆ ಶ್ರೀದೇವಿ ಮೆಳ್ಳಗಟ್ಟಿ ಎಂಬ ಸ್ತ್ರೀಶಕ್ತಿಯಿರುವುದು ಮತ್ತೊಂದು ವಿಶೇಷ. ಹಿಂದೂಸ್ಥಾನಿ ಸಂಗೀತದಲ್ಲಿ ಚಿನ್ನದಪದಕ ವಿಜೇತೆಯಾದ ಈಕೆ ಗಾಯಕಿ, ನಿರೂಪಕಿಯಾಗಿ ಗುರುತಿಸಿಕೊಂಡವರು. ಚಿತ್ರದಲ್ಲಿ 3 ಹಾಡುಗಳಿವೆ ಪ್ರೋತ್ಸಾಹಿಸಿ ಎಂದರು ಶ್ರೀದೇವಿ. ನಿರ್ಮಾಪಕ ಎಚ್ ಎಂ ಆರ್ ಆನಂದ ರೆಡ್ಡಿ ಚಿತ್ರವನ್ನು ನಿರ್ಮಿಸಿದ್ದು, ಕತೆ ಕೇಳಿ ಖುಷಿಯಾದ ಕಾರಣ ಚಿತ್ರಕ್ಕೆ 3ಕೋಟಿ ಹಾಕಲು ಮುಂದೆ ಬಂದಿದ್ದಾಗಿ ಹೇಳಿದರು.