From the earlier FilmySphere, kept as published on 2014-10-16. It has not been updated.
Mohanlal Interview
ಮೋಹನ ಸಂದರ್ಶನ
Kannada
ಮೈತ್ರಿ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಷ್ಟೇ ಪವರ್ ಫುಲ್ ಪಾತ್ರದಲ್ಲಿ ನಟಿಸುತ್ತಿರುವವರು ಮಲಯಾಳಂನ ಸುಪರ್ ಸ್ಟಾರ್ ಮೋಹನ್ ಲಾಲ್. ಅವರು ಕಳೆದ ವಾರ ಚಿತ್ರದ ತಮ್ಮ ಪಾತ್ರಕ್ಕಾಗಿ ಕೊಚ್ಚಿಯ ತಮ್ಮದೇ ಮಾಲಕತ್ವದ ವಿಸ್ಮಯಾ ಸ್ಟುಡಿಯೋದಲ್ಲಿ ಕಂಠದಾನ ನಿರತರಾಗಿದ್ದರು. ನಿರ್ದೇಶಕ ಬಿಎಮ್ ಗಿರಿರಾಜ್ ಹೇಳಿಕೊಡುವುದನ್ನು ಚಾಚೂ ತಪ್ಪದೆ ಅನುಸರಿಸುವ ಮೂಲಕ ಕನ್ನಡದ ವಿಧೇಯ ವಿದ್ಯಾರ್ಥಿಯಂತೆ ಕಾಣಿಸುತ್ತಿದ್ದ ಮೋಹನ್ ಲಾಲ್ ಡಬ್ಬಿಂಗ್ ಬಳಿಕ ಒಂದಷ್ಟು ಹೊತ್ತು ಮಾತಿಗೆ ಸಿಕ್ಕರು. ಇಲ್ಲಿ ಅವರು ನಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತಾ ಇದುವರೆಗೆ ಯಾವ ಸಂದರ್ಶನಗಳಲ್ಲಿಯೂ ನೀಡಿರದ ಉತ್ತರಗಳನ್ನು ನೀಡಿದ್ದಾರೆ ಎನ್ನುವುದು ವಿಶೇಷ. ಭಾರತೀಯ ಚಿತ್ರರಂಗದ ಬೆರಳಿಕೆಯ ಶ್ರೇಷ್ಠ ನಟರಾಗಿ ಹಲವು ಮಾಧ್ಯಮಗಳಿಂದ ಗುರುತಿಸಲ್ಪಟ್ಟ ಮೋಹನ್ ಲಾಲ್ ನಟನೆಗೆ ನಿಂತರೆ ಅದರಲ್ಲಿನ ನೈಜತೆ ಕಂಡು ಮಣಿರತ್ನಂ, ರಾಮ್ ಗೋಪಾಲ್ ವರ್ಮರಂಥ ದಿಗ್ಗಜ ನಿರ್ದೇಶಕರೇ ಕಟ್ ಹೇಳಲು ಮರೆತು ಆತನಲ್ಲೇ ತಲ್ಲೀನವಾಗಿ ಹೋದದ್ದು ಇತಿಹಾಸ! ಅದೇಹೊತ್ತಿಗೆ ಜಾದೂ ವಿದ್ಯೆಗಳ ಪಾರಂಗತನಾಗಿ, ಜಾಹಿರಾತುಗಳಿಗೆ ರೂಪದರ್ಶಿಯಾಗಿ, ಹೋಟೆಲ್ ಉದ್ಯಮಿಯಾಗಿ, ಸಮಾಜ ಸೇವಕನಾಗಿ, ಗಾಯಕನಾಗಿ, ಸಿಸಿಎಲ್ ನಲ್ಲಿ ಕ್ರಿಕೆಟ್ ಆಟಗಾರನಾಗಿ ಬಹುಮುಖ ವ್ಯಕ್ತಿತ್ವ ತೋರಿಸಿದ್ದಾರೆ. ಗೌರವಪೂರ್ವಕವಾಗಿ ಡಾಕ್ಟರೇಟ್, ಲೆಫ್ಟಿನೆಂಟ್ ಕರ್ನಲ್ ಪದವಿಗೆ ಭಾಜನರಾಗಿರುವ ಮೋಹನ್ ಲಾಲ್ ಟೀಕ್ವಾಂಡೋನಲ್ಲಿ ಗೌರವಾನ್ವಿತ ಬ್ಲ್ಯಾಕ್ ಬೆಲ್ಟ್ ಹೋಲ್ಡರ್ ಕೂಡ ಹೌದು. 6ಬಾರಿ ಕೇರಳ ರಾಜ್ಯ ಸರ್ಕಾರದ ಶ್ರೇಷ್ಠನಟರಾದ ಇವರಿಗೆ ಅದೇ ವಿಭಾಗದಲ್ಲಿ 7 ಬಾರಿ ಫಿಲ್ಮ್ ಫೇರ್ ಅವಾರ್ಡ್ ಲಭಿಸಿದೆ. ಎರಡು ಬಾರಿ ಶ್ರೇಷ್ಠ ನಟರಾಗಿ ಮತ್ತು ಶ್ರೇಷ್ಠ ನಿರ್ಮಾಪಕರಾಗಿ ಒಟ್ಟು ಮೂರು ಬಾರಿ ರಾಷ್ಟ್ರಪ್ರಶಸ್ತಿಗೆ ಭಾಜನರಾಗಿರುವ ಮೋಹನ್ ಲಾಲ್ ಕಂಪನಿ ಎಂಬ ಹಿಂದಿ ಚಿತ್ರದ ನಟನೆಗಾಗಿ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಸ್ವಂತವಾಗಿಸಿದ್ದಾರೆ. ಇವುಗಳ ನಡುವೆ ಖಾಸಗಿ ಪ್ರಶಸ್ತಿಗಳು ಅಸಂಖ್ಯಾತ. 13 ವರ್ಷಗಳ ಹಿಂದೆ ಪದ್ಮಶ್ರೀಗೆ ಅರ್ಹರಾದ ಮೋಹನ್ ಲಾಲ್ ರ ಹೆಸರನ್ನು ಈ ಬಾರಿ ಪದ್ಮಭೂಷಣಕ್ಕೆ ನಾಮನಿರ್ದೇಶಿತಗೊಳಿಸಲಾಗಿದೆ. ಅವರಿಗೆ ಶುಭ ಹಾರೈಕೆಗಳು.
ಕರ್ನಾಟಕ ಎಂದು ಹೇಳುವಾಗ ಪ್ರಥಮದಲ್ಲಿ ನಿಮಗೆ ನೆನಪಾಗುವುದೇನು? ಒಬ್ಬ ಸಿನೆಮಾ ನಟನಾಗಿರುವುದರಿಂದ ಸಹಜವಾಗಿ ಕರ್ನಾಟಕವೆಂದಾಕ್ಷಣ ನನಗೆ ನೆನಪಾಗುವುದೇ ಡಾ. ರಾಜಕುಮಾರ್. ಅವರೊಂದಿಗೆ ನನ್ನದು 38 ವರ್ಷಗಳ ಹಿಂದಿನ ಬಾಂಧವ್ಯ! ಕಾಲೇಜು ದಿನಗಳಲ್ಲಿ ಸ್ನೇಹಿತರೊಂದಿಗೆ ಬೆಂಗಳೂರಿಗೆ ಬಂದು ಸುತ್ತಾಡಿ ಹೋಗುತ್ತಿದ್ದೆ. ಅಂದಿನ ಸಿಟಿ, ಅಲ್ಲಿನ ಕ್ಲೈಮ್ಯಾಟ್ ಎಲ್ಲವೂ ಇಷ್ಟವಾಗಿತ್ತು. ಇಂದಿನ ಬದಲಾವಣೆ ಅದನ್ನೊಂದು ಕಾಂಕ್ರಿಟ್ ಕಾಡನ್ನಾಗಿಸಿರುವುದು ಬೇರೆ ಮಾತು. ಪರಭಾಷಾ ಸಿನೆಮಾಗಳಲ್ಲಿ ಕನ್ನಡ ಸಿನೆಮಾ, ಡಾ.ರಾಜಕುಮಾರ್ ಸಿನೆಮಾ ಎಂಬುದು ನನಗೆ ಆಕರ್ಷಣೆಯಾಗಿತ್ತು. ಅಲ್ಲದೆ ಮಲಯಾಳಂಗೆ ಡಬ್ ಆಗಿದ್ದ ಅವರ ಹಲವು ಚಿತ್ರಗಳನ್ನು ನೋಡಿದ್ದೆ. ಅವುಗಳಲ್ಲಿ ಚಂದನ ಕಾಡ್ (ಗಂಧದ ಗುಡಿ) ಕೂಡ ಒಂದು. ಮಾತ್ರವಲ್ಲ ದ್ವಾರಕೀಶ್ ರ ಹಾಸ್ಯ ಪಾತ್ರಗಳು, ಪಾಯಿಂಟ್ ಪರಿಮಳ ಎಂಬ ಸಿನೆಮಾ ಹೀಗೆ ದೊಡ್ಡ ನೆನಪುಗಳ ಸಾಲೇ ಅಲ್ಲಿದೆ. ನಟನಾದ ಬಳಿಕ ನನ್ನ ಹಲವಾರು ಚಿತ್ರಗಳು ಬೆಂಗಳೂರಿನಲ್ಲಿ ಚಿತ್ರೀಕರಿಸಲ್ಪಟ್ಟಿವೆ. ನಾನು ರಾಜ್ ರನ್ನು ಅವರ ಮನೆಯಲ್ಲೇ ಭೇಟಿಯಾಗಿದ್ದೇನೆ. ಅವರ ಭಕ್ತ ಪ್ರಹ್ಲಾದದ ಹಿರಣ್ಯ ಕಶಿಪುವಾಗಿ ಮಲಯಾಳಂನಲ್ಲಿ ನಾನು ನಟಿಸುವಂತೆ ಅವರು ಆಗ್ರಹಿಸಿದ್ದರಂಬುದನ್ನು ಕೂಡ ಮರೆಯುವಂತಿಲ್ಲ.
ಡಾ.ರಾಜಕುಮಾರ್ ಫ್ಯಾಮಿಲಿ ಹೊರತುಪಡಿಸಿ ನಿಮಗೆ ಕನ್ನಡದ ಯಾವ ಕಲಾವಿದರ ಪರಿಚಯವಿದೆ? ಅಯ್ಯೋ.. ತುಂಬಾನೇ ಮಂದಿ ನನಗೆ ಗೊತ್ತು. ಸುಮಲತಾರಿಂದ ಹಿಡಿದುನೀತು ತನಕ ಹಲವು ಮಂದಿ ಕನ್ನಡದ ನಟಿಯರು ನನ್ನೊಂದಿಗೆ ಮಲಯಾಳಂ ಚಿತ್ರದಲ್ಲಿ ನಟಿಸಿದ್ದಾರೆ. ಡಾ. ವಿಷ್ಣುವರ್ಧನ್ ಸರ್ ಕೂಡ ನನಗೆ ಸ್ನೇಹಿತರಾಗಿದ್ದರು. ಅವರ ಪತ್ನಿ ಭಾರತಿಯಮ್ಮ ನನ್ನ ತಾಯಿಯಾಗಿ ನಟಿಸಿದ್ದಾರೆ. ಅಂಬರೀಶ್, ರವಿಚಂದ್ರನ್, ರಮೇಶ್ ಅರವಿಂದ್ ಹೀಗೆ ಹೆಸರುಗಳನ್ನು ಹೇಳುತ್ತಾ ಹೋಗಬಹುದು.
ಸಿಸಿಎಲ್ ನಲ್ಲಿ ಕಂಡದ್ದನ್ನು ಹೊರತು ಪಡಿಸಿ ನಟನಾಗಿ ಸುದೀಪ್ ಬಗ್ಗೆ ಪರಿಚಯವಿತ್ತೇ? ಖಂಡಿತಾ. ಅವರೊಬ್ಬ ಕನ್ನಡದ ಯುವನಟ ಎಂದು ಮಾತ್ರ ಗೊತ್ತಿತ್ತು. ಆದರೆ ಯಾವಾಗ ರಾಜಮೌಳಿ ನಿರ್ದೇಶನದಲ್ಲಿ ಅವರ ಅಭಿನಯದ 'ಈಗ' ಚಿತ್ರವನ್ನು ನೋಡಿದೆನೋ ಬಳಿಕ ನನಗೆ ಅವರು ತುಂಬಾ ಪ್ರತಿಭಾವಂತ ಎಂದು ತಿಳಿಯಿತು. ವಾಸ್ತವದಲ್ಲಿ ನಾನು ಮಲಯಾಳಂ ಚಿತ್ರವೊಂದರಲ್ಲಿ ಅವರಿಗೊಂದು ಸ್ಪೆಷಲ್ ಪಾತ್ರದಲ್ಲಿ ನಟಿಸುವಂತೆ ಆಹ್ವಾನಿಸಲಾಗಿತ್ತು. ಆದರೆ ತಮಗೆ ಮಲಯಾಳಂ ಭಾಷಾ ಜ್ಞಾನವಿಲ್ಲದ ಕಾರಣ ತಮ್ಮಿಂದ ಡಬ್ ಮಾಡಲಾಗದು ಎಂದು ಹೇಳಿ ಪಾತ್ರವನ್ನು ನಿರಾಕರಿಸಿದರು. ಅವರನ್ನೇ ಗಮನದಲ್ಲಿಟ್ಟು ತಯಾರಿಸಿದ ಪಾತ್ರವಾಗಿದ್ದ ಕಾರಣ ಬಳಿಕ ಆ ಪಾತ್ರವನ್ನೇ ಇಲ್ಲವಾಗಿಸಿ ಚಿತ್ರಕತೆಯಲ್ಲಿ ಬದಲಾವಣೆ ತಂದೆವು. ಕ್ರಿಕೆಟ್ ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ಯಾಕೆ ಗೆಲುವು ಸಾಧಿಸುತ್ತೆ ಅಂದ್ರೆ ಅದಕ್ಕೆ ಕಾರಣ ಸುದೀಪ್ ನಾಯಕತ್ವವೇ ಕಾರಣ.
ನೀವು ಅಪರೂಪದಲ್ಲಿ ಒಪ್ಪಿಕೊಂಡ ಕನ್ನಡದ ಚಿತ್ರ ಮೈತ್ರಿ. ಅದರ ಬಗ್ಗೆ ಹೇಳಿ ಒಂದು ಒಳ್ಳೆಯ ಚಿತ್ರ. ಹಾಗಾಗಿಯೇ ನಾನು ಆ ಪಾತ್ರವನ್ನು ಒಪ್ಪಿದೆ. ನಿರ್ದೇಶಕ ಗಿರಿರಾಜ್ ಮನದಲ್ಲಿ ಪಾತ್ರವಾಗಿ ನನ್ನನ್ನೇ ಕಲ್ಪಿಸಿರುವುದಾಗಿ ಹೇಳಿದರು. ಅವರ ಆಲೋಚನೆಗಳು, ನಿರೂಪಣೆಯ ರೀತಿ ಎಲ್ಲವೂ ತುಂಬಾನೇ ಭರವಸೆ ಮೂಡಿಸುವಂಥವು. ಮಾತ್ರವಲ್ಲ, ನಾನು ಮಲಯಾಳಂನಲ್ಲಿ ಪ್ರೇಮ್ ನಸೀರ್, ತಮಿಳಿನ ಶಿವಾಜಿ ಗಣೇಶನ್, ತೆಲುಗಿನ ನಾಗೇಶ್ವರ ರಾವ್, ಹಿಂದಿಯ ಅಮಿತಾಬ್ ಬಚ್ಚನ್ ಹೀಗೆ ಲೆಜೆಂಡ್ರಿ ಕಲಾವಿದರೊಂದಿಗೆ ನಟಿಸಿದ್ದೇನೆ. ಕನ್ನಡದಲ್ಲಿ ಮಾತ್ರ ಡಾ.ರಾಜಕುಮಾರ್ ಜೊತೆ ನಟಿಸುವ ಅವಕಾಶ ಸಿಕ್ಕಿರಲಿಲ್ಲ. ಆ ಆಸೆಯನ್ನು ಅವರ ಪುತ್ರ ಪುನೀತ್ ರಾಜಕುಮಾರ್ ಜೊತೆಗೆ ನಟಿಸುವ ಮೂಲಕ ಪೂರ್ತಿಗೊಳಿಸಿದ ತೃಪ್ತಿಯಿದೆ! ಜೊತೆಗೆ ಪುನೀತ್ ಕೂಡ ತುಂಬಾನೇ ಫ್ರೆಂಡ್ಲಿ ವ್ಯಕ್ತಿತ್ವದವರು.
ಮುನ್ನೂರು ಚಿತ್ರಗಳನ್ನು ದಾಟಿರುವ ನೀವು ಇಂದಿಗೂ ಕೈ ತುಂಬ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದೀರಿ. ಆದರೆ ನಿಮ್ಮ ನಿರ್ಮಾಣದ ಚಿತ್ರಗಳಲ್ಲಿನ ಚಿತ್ರಕತೆಯ ಗಟ್ಟಿತನ ಉಳಿದವುಗಳಲ್ಲಿ ಕಾಣಿಸುವುದಿಲ್ಲ. ಇನ್ನಷ್ಟು ಚ್ಯೂಸಿಯಾಗಬೇಕು ಎನಿಸುವುದಿಲ್ಲವೇ? ನಾನು ಕಡಿಮೆ ಚಿತ್ರಗಳಲ್ಲಿ ನಟಿಸಿದೆನೆಂಬ ಕಾರಣದಿಂದ ಅವುಗಳ ಕ್ವಾಲಿಟಿ ಹೆಚ್ಚಾಗಬೇಕೆಂದೇನಿಲ್ಲ. ಯಾಕೆಂದರೆ ಪ್ರತಿಯೊಂದು ಚಿತ್ರವನ್ನು ಕೂಡ ಸಾಕಷ್ಟು ಆಲೋಚಿಸಿಯೇ ಆಯ್ಕೆ ಮಾಡಿರುತ್ತೇನೆ. ಮಾತ್ರವಲ್ಲ, ನಾನು ನಟಿಸಲು ನಿರಾಕರಿಸಿದರೆ ನನಗೆಂದೇ ತಯಾರಾಗುವ ಹಲವು ಚಿತ್ರಗಳು ಕಡಿಮೆಯಾಗುತ್ತವೆ. ಅದಕ್ಕೆ ಸಂಬಂಧಿಸಿದ ಕೆಲಸಗಾರರಿಗೆ ಕೆಲಸವಿಲ್ಲದಾಗುತ್ತದೆ. ಮೂಲತಃ ನಾನು ನಿರ್ಮಾಣ ಸಂಸ್ಥೆಗಳೊಂದಿಗೆ ಬಹಳಷ್ಟು ಕಮಿಟ್ ಮೆಂಟ್ ಇರಿಸಿಕೊಂಡಿರುವವನು. ಹಾಗಾಗಿ ಸಾಧ್ಯವಾದಷ್ಟು ಒಳ್ಳೆಯ ಚಿತ್ರಗಳಲ್ಲಿ ನಟಿಸುವ ಪ್ರಯತ್ನ ನಡೆದೇ ಇರುತ್ತದೆ.
ದೃಶ್ಯಂ ಸಿನೆಮಾದ ತಮಿಳು ರಿಮೇಕ್ ನಲ್ಲಿ ನಿಮ್ಮ ಮಗ ಪ್ರಣವ್ ಅಸಿಸ್ಟೆಂಟ್ ಡೈರೆಕ್ಟರಾಗಿದ್ದಾರೆ. ಡೈರೆಕ್ಷನ್ ಅವರ ಆಸಕ್ತಿಯೇ? ಹೌದು. ಆದರೆ ಆತ ಈಗಾಗಲೇ ಬಾಲನಟನಾಗಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾನೆ. ದೃಶ್ಯಂ ರಿಮೇಕ್ ಎಂಬುದು ನಮ್ಮದೇ ಪ್ರೊಡಕ್ಷನ್ ಚಿತ್ರ. ಚಿತ್ರಕ್ಕೆ ಪಾಪನಾಶಂ ಎಂದು ಹೆಸರಿಡಲಾಗಿದ್ದು ಕಮಲಹಾಸನ್ ನಾಯಕನಾಗಿದ್ದಾರೆ. ಸಿನೆಮಾ ಬಗೆಗಿನ ಆಸಕ್ತಿಯಿಂದಾಗಿ ಆತ ಅಲ್ಲಿ ಅಸಿಸ್ಟೆಂಟಾಗಿದ್ದಾನೆ. ಬೇರೆ ಸಿನೆಮಾಗೂ ಅದೇ ರೀತಿ ಕೆಲಸ ಮಾಡುತ್ತಾನ ಎಂಬುದನ್ನು ಹೇಳುವುದು ಕಷ್ಟ . ಒಟ್ಟಿನಲ್ಲಿ ಆತನ ಇಷ್ಟವೇನಿದೆಯೋ ಅದರಲ್ಲಿ ಮುಂದುವರಿಯಲು ಆತ ಸಂಪೂರ್ಣ ಸ್ವತಂತ್ರ.
ನೀವು ಓಶೋ ರಜನೀಶ್ ತತ್ವಗಳನ್ನು ಬೆಂಬಲಿಸುವ ಬಗ್ಗೆ ಬಹಳ ಬಾರಿ ಹೇಳಿದ್ದೀರಿ. ಅವರ ಅನ್ ಕಂಡಿಶನಲ್ ಲವ್ ಕುರಿತಂತೇ ಎಲ್ಲವನ್ನೂ ಪ್ರೀತಿಸುವುದನ್ನು ಒಪ್ಪಬಹುದು. ಆದರೆ ಒಂದು ಪ್ರೇಮದಲ್ಲಿ ಮಾತ್ರ ವಿಶ್ವಾಸವಿಡುವುದು ತಪ್ಪು ಎನ್ನುವುದನ್ನು ಸಮರ್ಥಿಸುವುದು ಅನೈತಿಕ ಸಂಬಂಧಗಳಿಗೆ ಪ್ರೇರಕವೆನಿಸದೇ? ಓಶೋ ಬಗ್ಗೆ ತಿಳಿಯದವರಲ್ಲಿ ಅದಕ್ಕೆ ನಮಗೆ ಉತ್ತರ ನೀಡಲು ಸಾಧ್ಯವಿಲ್ಲ. ಒಬ್ಬೊಬ್ಬರ ಪರ್ಸ್ಪೆಕ್ಟಿವ್. ನನ್ನ ಪರ್ಸಪೆಕ್ಟಿವ್ ನಲ್ಲಿ, ನನ್ನ ಫಿಲಾಸಫಿಯಲ್ಲಿ ನಾನು ಹೇಗೆ ಬದುಕುತ್ತಿದ್ದೇನೆ ಎಂಬುದನ್ನು ನಾನು ಇನ್ನೊಬ್ಬರಿಗೆ ಹೇಳುವ ಅಗತ್ಯವಿಲ್ಲ. ಓಶೋ ಫಿಲಾಸಫಿ ನನ್ನ ಬದುಕಲ್ಲ. ಅವರ ಪುಸ್ತಕವನ್ನು ಓದಿ ಹೇಗೆ ನನ್ನ ಫಿಲಾಸಫಿಯಾಗಿ ಬದಲಿಸಬಹುದು ಎಂಬುದೇ ನನ್ನ ಬದುಕು. ಅದರಲ್ಲಿ ಒಳಿತನ್ನು ಅಳವಡಿಸಿಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಅಲ್ಲದೆ ನನ್ನ ಜೀವನದ ಬಗ್ಗೆ ಇನ್ನೊಬ್ಬರಿಗೆ ಬೋಧನೆ ನೀಡಬೇಕಾದ ದರ್ದು ನನಗಿಲ್ಲ.
ಇಬ್ಬರು ಸಮಾನ ಸ್ಟಾರ್ ಡಮ್ ಹೊಂದಿರುವ ತಾರೆಗಳನ್ನು ಜೊತೆಗಿರಿಸಿ ಚಿತ್ರ ಮಾಡುವುದು ಎಲ್ಲ ಭಾಷೆಗಳಲ್ಲೂ ಛಾಲೆಂಜಿಂಗ್ ವಿಚಾರ. ಆದರೆ ಮೆಗಾಸ್ಟಾರ್ ಮಮ್ಮೂಟ್ಟಿ ಜೊತೆಗಿನ ನಿಮ್ಮ ಐತಿಹಾಸಿಕ ಕಾಂಬಿನೇಶನ್ ಕುರಿತು ಹೇಳಿ. ನಾವು ಇದುವರೆಗೆ 54ರಷ್ಟು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದೇವೆ. ನಮಗೆ ಯಾವುದೇ ಫ್ಯಾನ್ಸ್ ಗಳಿಂದ ಇದಕ್ಕೆ ತೊಂದರೆಯಾಗಿಲ್ಲ. ಅದರಲ್ಲೂ ನಾವು ಕಲಾವಿದರೆಲ್ಲ ಒಂದೇ ಕುಟುಂಬದವರಂತೆ ಇದ್ದೇವೆ. ಜೊತೆಯಾಗಿ ನಟಿಸಲು ನಾವು ಸದಾ ಸನ್ನದ್ಧರಾಗಿರುತ್ತೇವೆ. ಆದರೆ ಅದಕ್ಕೆ ತಕ್ಕ ಸ್ಕ್ರಿಪ್ಟ್ ಗಳು ತಯಾರಿರಬೇಕು. ಅಷ್ಟೇ.