From the earlier FilmySphere, kept as published on 2014-10-17. It has not been updated.
Khaidi Kannada Movie Audio Release
ಖೈದಿ ಧ್ವನಿ ಸಾಂದ್ರಿಕೆ ಬಿಡುಗಡೆ
Kannada
ಖೈದಿ ಚಿತ್ರದ ಆಡಿಯೋ ಬಿಡುಗಡೆ ಅದ್ಧೂರಿಯಾಗಿ ನಡೆಯಿತು. ಅರೇ ಖೈದಿ ವಿಷ್ಣುವರ್ಧನ್ ನಟಿಸಿದ ಹಿಟ್ ಸಿನೆಮಾ ತಾನೇ ಎಂಬ ಸಂದೇಹ ಬೇಡ. ಹೆಸರು ಅದೇ ಆಗಿದ್ದರೂ ಚಿತ್ರ ಮಾತ್ರ ಬೇರೆ. ನವ ನಿರ್ದೇಶಕ ಗುರುದತ್ ನಿರ್ದೇಶಿಸಿರುವ ನೂತನ ಖೈದಿಯಲ್ಲಿ ಧನುಶ್ ನಾಯಕ. 'ಎ' ಖ್ಯಾತಿಯ ಚಾಂದಿನಿ ನಾಯಕಿ. ನವ ಸಂಗೀತ ನಿರ್ದೇಶಕರ ಜೋಡಿ ಜಸ್ಟಿನ್ ಮತ್ತು ಉದಯ್ ಸೇರಿಕೊಂಡು ಕನ್ನಡಕ್ಕೆ ಹೊಸಬರೆನಿಸಿದ ಬಾಲಿವುಡ್ ಗಾಯಕರಿಂದ ಹಾಡಿಸಿದ್ದಾರೆನ್ನುವುದು ಪ್ರಮುಖ ವಿಶೇಷ.
ಸಂಗೀತ ನಿರ್ದೇಶಕರಲ್ಲೊಬ್ಬರಾದ ಉದಯ್ ಮೂಲತಃ ಬೆಂಗಳೂರಿನವರು. ಅವರು ಮಾತನಾಡುತ್ತಾ 'ನನ್ನ ತಂದೆ ಡಾ.ವ್ಯಾಸರಾವ್ ಕನ್ನಡದಲ್ಲಿ ಲೇಖಕರು. ಅವರ ಪುತ್ರನಾಗಿ ನಾನು ಕನ್ನಡ ಚಿತ್ರಕ್ಕೆ ಸಂಗೀತ ನೀಡಲು ಸಾಧ್ಯವಾಗಿದ್ದಕ್ಕೆ ಖುಷಿಯಾಗಿದ್ದೇನೆ' ಎಂದರು. ಅವರ ಜೋಡಿ ಜಸ್ಟಿನ್ ಮಾತನಾಡಿ ಮುಂಬೈನ ಗಾನ ಪ್ರತಿಭೆಗಳಾದ ನೇಹಾ ಬಸಿ, ಹಂಸಿಕಾ, ಅದಿತಿ, ರಿಷಿ ಮತ್ತು ನಿನಾದ್ ಕಾಮತ್ ರನ್ನು ಪರಿಚಯಿಸಿದರು. ಅವರಲ್ಲಿ ಹಂಸಿಕಾ ಚಮಕ್ ಚಲ್ಲೋ ಹಾಡಿನಿಂದ ಖ್ಯಾತಿ ಹೊಂದಿದವರಾಗಿದ್ದರೆ, ನಿನಾದ್ ಕಾಮತ್ ಮೂಲತಃ ಕುಮುಟಾದವರಾಗಿದ್ದು ಮುಂಬೈನಲ್ಲೇ ಇರುವವರು. ಪರಿಣೀತಾ ಸೇರಿದಂತೆ ಒಂದಷ್ಟು ಬಾಲಿವುಡ್ ಚಿತ್ರಗಳಲ್ಲಿ ನಟಿಸಿದವರು. ಅದಿತಿಗೆ ಅಪಘಾತವಾಗಿ ಕಾಲು ನೋವಿದ್ದರೂ ಕೂಡ ಕುಂಟಿಕೊಂಡೇ ಬಂದು ವೇದಿಕೆ ಮೇಲೆ ನಾಲ್ಕು ಸಾಲು ಹಾಡಿ ಸಮಾರಂಭದ ಮೇಲಿದ್ದ ತಮ್ಮ ಆಸಕ್ತಿಯನ್ನು ತೋರಿಸಿದರು. ಉಳಿದಂತೆ ಹಾಡುಗಳಿಗೆ ದನಿಯಾಗಿದ್ದ ಶಂಕರ್ ಮಹಾದೇವನ್, ಕಾರ್ತಿಕ್, ಮನೋ ಮೊದಲಾದವರು ಹಾಜರಿರಲಿಲ್ಲ. ಆದರೆ ನಾಯಕಿ ಚಾಂದನಿ ಜೊತೆಗೆ ಧನುಶ್ ಡ್ಯಾನ್ಸ್ ಮಾಡಿದಾಗ ಇಡೀ ಸಭೆಯಲ್ಲಿ ವಿದ್ಯುತ್ ಸಂಚಾರವಾಯಿತು. ಜೊತೆಗೆ ವಿಷ್ಣುವರ್ಧನ್ ರ ಖೈದಿ ಚಿತ್ರದ 'ತಾಳೆ ಹೂವ ಮಡಿಲಿಂದ..' ಎಂಬ ಹಾಡಿನ ರೀಮಿಕ್ಸ್ ಇದಾಗಿದ್ದು, ಇದರಲ್ಲಿ ನಟಿಸಲು ಅವಕಾಶ ಸಿಕ್ಕಿದ್ದಕ್ಕೆ ಕೃತಾರ್ಥತೆಯಿರುವುದಾಗಿ ಚಾಂದಿನಿ ಹೇಳಿದರು. ದೀಪಾವಳಿ ಚಿತ್ರದಲ್ಲಿ ವಿಷ್ಣುವರ್ಧನ್ ಜೊತೆಗೆ ನಟಿಸಿದ್ದನ್ನು ಮರೆಯಲಾಗದ ಅನುಭವವೆಂದ ಆಕೆ ಈ ಸಂದರ್ಭದಲ್ಲಿ ಅವರನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದರು. ಮಾತ್ರವಲ್ಲ, ದೀಪಾವಳಿಯ ಆ ಹಾಡನ್ನು ಈ ದೀಪಾವಳಿಗೆ ಡೆಡಿಕೇಟ್ ಮಾಡುವುದಾಗಿ ಹೇಳಿದರು. ನಿರ್ದೇಶಕ ಗುರುದತ್ ಚಿತ್ರದ ಐದು ಹಾಡುಗಳು ಐದು ರೀತಿಯಲ್ಲಿದ್ದುಕೊಂಡು ವಿಭಿನ್ನವಾಗಿವೆ ಎಂಬ ಹೊಗಳಿಕೆ ಎಲ್ಲರಿಂದ ದೊರಕಿದ್ದು ಅದೇ ಕಾರಣ ಹೇಳಿ ಕ್ಯಾಸೆಟ್ ಹಕ್ಕು ಪಡೆದುಕೊಂಡ ಲಹರಿ ವೇಲುರವರಿಗೆ ಕೃತಜ್ಞನಾಗಿರುವುದಾಗಿ ಹೇಳಿದರು. ಬಳಿಕ ಮಾತನಾಡಿದ ಲಹರಿ ವೇಲು ಖೈದಿಯ ರಿಮೇಕ್ ಹಾಡಿನ ಹಕ್ಕಿಗಾಗಿ ತುಂಬ ಕಷ್ಟಪಟ್ಟಿದ್ದು ಜಾವೇದ್ ಅಖ್ತರ್ ಕೂಡ ಸಹಾಯ ಮಾಡಿದ್ದಾರೆಂದು ನೆನಪಿಸಿಕೊಂಡರು. ಚಿತ್ರದ ನಿರ್ಮಾಪಕಿಯರಾದ ಕಲಾಭಕ್ತ, ನಯನಾ ಶರತ್ ಸೇರಿದಂತೆ ಮಾಸ್ಟರ್ ಅನಂದ್, ಬಸವೇ ಗೌಡ, ಬಸಂತ್ ಕುಮಾರ್ ಪಾಟೀಲ್, ಅಮಿತ್ ಮೊದಲಾದವರ ಸಮ್ಮುಖದಲ್ಲಿ ಚಿನ್ನೇಗೌಡ ಮತ್ತು ಕೆಎಸ್ ಎಲ್ ಸ್ವಾಮಿ ಆಡಿಯೋ ಬಿಡುಗಡೆಗೊಳಿಸಿದರು.