Skip to content
FilmySphere

From the earlier FilmySphere, kept as published on 2014-10-31. It has not been updated.

Ee Dil Helide Nee Bekantha Movie Review

ಈ ದಿಲ್ ಹೇಳಿದೆ ನೀ ಬೇಕಂತ ಚಿತ್ರ ವಿಮರ್ಶೆ

ಇದು ಹೃದಯಗಳಾ ವಿಷಯ

ಮುಖ ನೋಡದೆ ಪ್ರೀತಿಸುವ ಕತೆ ಬಹಳ ಹಿಂದಿನಿಂದಲೇ ಇದೆ. ಆದರೆ ಯಾರೇ ನೀನು ಚೆಲುವೆ ಚಿತ್ರದ ಬಳಿಕ ಫೋನ್ ಇನ್ ಲವ್ ಚಿತ್ರಗಳೂ ಆರಂಭವಾದವು. ಅವುಗಳ ಸಾಲಿಗೆ ಸೇರಿದರೂ ಮತ್ತೊಂದು ಸುಂದರ ಪ್ರೇಮಕಾವ್ಯವಾಗಿ ಗಮನ ಸೆಳೆಯುವ ಚಿತ್ರ 'ಈ ದಿಲ್ ಹೇಳಿದೆ ನೀ ಬೇಕಂತ'. ನಾಯಕ ಬಾಲುವಿಗೆ ಹೇಳಿಕೊಳ್ಳಲು ಕೆಲಸವಿಲ್ಲ. ಆದರೂ ಹೊಸದೊಂದು ಮೊಬೈಲ್ ತೆಗೆದಿರುತ್ತಾನೆ. ಗಾಯಾಳುವೊಬ್ಬನನ್ನು ಆಸ್ಪತ್ರೆ ಸೇರಿಸುವ ತರಾತುರಿಯಲ್ಲಿ ಅದನ್ನು ಕಳೆದುಕೊಳ್ಳುತ್ತಾನೆ. ನಾಯಕಿಯ ಕೈಸೇರುವ ಮೊಬೈಲ್ ಅವರಿಬ್ಬರ ಪರಿಚಯಕ್ಕೆ ಬಳಿಕ ಪ್ರೇಮಕ್ಕೆ ದಾರಿಯಾಗುತ್ತದೆ. ಆದರೆ ಎಲ್ಲ ಚಿತ್ರಗಳಂತೆ ಇಲ್ಲಿಯೂ ತಾಯಿ ನೋಡಿದ ಹುಡುಗಿಯನ್ನು ಮದುವೆಯಾಗುವುದಾಗಿ ನಾಯಕ ಮೊದಲೇ ಮಾತು ಕೊಟ್ಟಿರುತ್ತಾನೆ. ವ್ಯತ್ಯಾಸವೇನೆಂದರೆ ಇಲ್ಲಿ ಮಾತು ತೆಗೆದುಕೊಂಡ ಬಳಿಕ ತಾಯಿಯ ಆರೋಗ್ಯ ಕೆಡುತ್ತದೆ! ಒಟ್ಟಿನಲ್ಲಿ ಮನೆಯವರು ಮಾಡುವ ಮದುವೆಗೆ ಇಬ್ಬರೂ ಒಪ್ಪಿಕೊಳ್ಳಲೇಬೇಕಾಗುತ್ತದೆ. ಆದರೆ ಮನೆಯವರು ನಡೆಸುತ್ತಿರುವುದು ಕೂಡ ತಮ್ಮಿಬ್ಬರದೇ ಮದುವೆಯನ್ನು ಎಂಬ ಸತ್ಯ ಅವರಿಗೆ ಗೊತ್ತಿರುವುದಿಲ್ಲ. ಕೊನೆಯಲ್ಲಿ ಯಾವ ರೀತಿ ಒಂದಾಗುತ್ತಾರೆ ಎಂಬುದೇ ಚಿತ್ರದ ಮುಖ್ಯ ಕತೆ.

ತಮ್ಮದೇ ಮದುವೆ ಮಾಡುವುದೆಂದು ಗೊತ್ತಿದ್ದರೂ ಕೂಡ ಅದನ್ನರಿಯದೆ ಪರಸ್ಪರ ಭೇಟಿಗಾಗಿ ಒದ್ದಾಡುವ ಜೋಡಿಯನ್ನು ಮಲಯಾಳಂನ ಡಾರ್ಲಿಂಗ್ ಡಾರ್ಲಿಂಗ್ ಚಿತ್ರದಲ್ಲಿ ಈ ಹಿಂದೆಯೇ ತೋರಿಸಲಾಗಿತ್ತು. ಆದರೆ ಅಲ್ಲಿ ನಾಯಕ ಮತ್ತು ನಾಯಕಿಯನ್ನು ಬೇರೆ ಮಾಡುವ ಶಕ್ತಿಗಳೂ ಇದ್ದವು. ಆದರೆ ಇಂದು ಪರಸ್ಪರರ ಪತ್ತೆಗೆ ಅತ್ಯಧಿಕ ಸಾಧ್ಯತೆಗಳಿರುವ ಕಾಲದಲ್ಲಿ ಹುಡುಗನನ್ನು ಹುಡುಕ ಬಯಸುವ ಹುಡುಗಿಯ ಎಲ್ಲ ಪ್ರಯತ್ನಗಳು ವಿಫಲವಾಗುವಂತೆ ತೋರಿಸಿರುವುದನ್ನು ಕಂಡರೆ ಅದಕ್ಕೆ ಆಕೆಯ ಮೂರ್ಖತನವೊಂದೇ ಕಾರಣವೆನ್ನಬೇಕಾದೀತು. ಸಿಕ್ಕ ಮೊಬೈಲ್ ನಲ್ಲಿರುವ ಸಿಮ್ ನಂಬರ್ ತಿಳಿಯಲಾಗದೆ ಹೋಗುವುದು, ಕರೆ ಮಾಡುವವನ ಊರು ಗೊತ್ತಿದ್ದರೂ, ಆತನ ಸಂಪರ್ಕದಲ್ಲಿರುವ ಹೋಟೆಲ್ ತಿಳಿದರೂ ಅಲ್ಲಿ ಇನ್ನಷ್ಟು ವಿಚಾರಣೆ ಮಾಡದಿರುವುದು ಅವಳ ತಪ್ಪೆನಿಸಿದೆರೆ, ಆಕೆಯನ್ನು ಭೇಟಿಯಾಗಲೇಬೇಕೆಂದು ತೀರ್ಮಾನಿಸಿದ ಮೇಲೆಯೂ ತನ್ನ ಕಡೆಯಿಂದ ಒಂದು ಪರ್ಮನೆಂಟ್ ಸಂಪರ್ಕ ಸಂಖ್ಯೆಯನ್ನು ನಾಯಕಿಗೆ ಒದಗಿಸಲಾಗದೆ ಹೋಗುವ ನಾಯಕನ ಬುದ್ಧಿಹೀನತೆಯೂ ಕತೆಗೆಂದೇ ಸೃಷ್ಠಿಸಲ್ಪಟ್ಟಂತಿದೆ. ಆದರೆ ಇಷ್ಟೆಲ್ಲ ಕೊರತೆಗಳ ನಡುವೆಯೂ ಜೋಡಿಗಳಿಬ್ಬರೂ ಒಂದಾಗುವ ಕ್ಲೈಮ್ಯಾಕ್ಸ್ ಸನ್ನಿವೇಶ ಸಾಮಾನ್ಯ ಪ್ರೇಕ್ಷಕರ ಕಣ್ಣಲ್ಲಿ ಆನಂದ ಭಾಷ್ಪ ಸುರಿಯುವಂತೆ ಮಾಡುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ. ನಾಯಕನಾಗಿ ಜುಗಾರಿ ಅವಿನಾಶ್ ರದ್ದು ನೈಜ ನಟನೆ. ನಾಯಕಿಯ ಪಾತ್ರಕ್ಕೆ ಶ್ರೀಶ್ರುತಿ ನ್ಯಾಯವೊದಗಿಸಿದ್ದಾರೆ. ಒಂದೆರಡು ದುಃಖದ ಸನ್ನಿವೇಶದ ಮಾತುಗಳಲ್ಲಿ ನಾಟಕೀಯತೆ ಕಂಡದ್ದು ಬಿಟ್ಟರೆ ಚಿತ್ರದ ಆಕೆಯನ್ನೇ ಚಿತ್ರದ ಪ್ರಮುಖ ಆಕರ್ಷಣೆ ಎನ್ನಬಹುದು. ಇಬ್ಬರಿಗೆ ಕಾಯಿನ್ ಫೋನ್ ಸಂಪರ್ಕವಾಗಿ ಬರುವ ಮಿತ್ರನ ಪಾತ್ರ ಯಾರೇ ನೀನು ಚೆಲುವೆಯ ಸಾಧು ಕೋಕಿಲರ ಪಾತ್ರವನ್ನು ನೆನನಪಿಸುತ್ತದೆ. ಆದರೆ ಸಂಭಾಷಣೆಯ ಶೈಲಿ 'ದುನಿಯಾ'ದಲ್ಲಿನ ರಂಗಾಯಣ ರಘುವಿನದ್ದು. ಚಿತ್ರದಲ್ಲಿ ನಾಗೇಂದ್ರ ಶಾ, ಸುರೇಶ್ ಮಂಗಳೂರು ಮೊದಲಾದ ಹಿರಿಯ ಪೋಷಕ ನಟರ ಸದ್ಬಳಕೆಯಾಗಿದೆ. ನಿರ್ದೇಶಕರು ಚಿತ್ರಕ್ಕೆ ಅನಾವಶ್ಯಕ ದೃಶ್ಯಗಳು ನುಸುಳದಂತೆ ಜಾಗ್ರತೆ ವಹಿಸಿದ್ದಾರೆ. ಆದರೂ ಋಷಿಕುಮಾರರ ಕುಡಿತದ ಗೀತೆ ಮೈಕಡಿತ ನೀಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಚಿತ್ರದ ಛಾಯಾಗ್ರಹಣ ಮತ್ತು ಸಂಗೀತ ಆಕರ್ಷಕ. ಅದರಲ್ಲೂ ರೀರೆಕಾರ್ಡಿಂಗ್ ಇಫೆಕ್ಟ್ ಗಳು ತುಂಬಾ ನೈಜತೆಯೊದಗಿಸಿವೆ. ಮುಖ ಕಾಣದೆ ಮಾತನಾಡುವ ಎಷ್ಟೋ ಗಂಡು ಹೆಣ್ಣುಗಳು ಒಂದಾಗಬೇಕೆಂದುಕೊಳ್ಳುವುದು ಈ ಮೊಬೈಲ್ ಯುಗದ ಸಹಜ ಬೆಳವಣಿಗೆ. ಆದರೆ ಅದೆಲ್ಲವನ್ನೂ ಮೀರಿ ಚಿತ್ರದಲ್ಲಿನ ನಾಯಕಿಗೆ ನಾಯಕನಲ್ಲಿನ ನಿಸ್ವಾರ್ಥ ಸಮಾಜ ಸೇವೆ ಪ್ರಮುಖ ಆಕರ್ಷಣೆಯಾಗುತ್ತದೆ. ಜೊತೆಗೆ ಮತ್ತೊಂದು ಮುಖ್ಯ ಅಂಶವಾಗಿ ತನಗಷ್ಟೇ ಸಂಬಂಧಿಸಿದ ವಿಚಾರವೊಂದು ಆತನಲ್ಲಿನ ಆತ್ಮೀಯತೆಯನ್ನು ಹೆಚ್ಚಿಸುತ್ತದೆ. ಅದು ಏನು ಎಂಬುದನ್ನು ಚಿತ್ರಮಂದಿರದಲ್ಲಿ ಕುಳಿತು ನೋಡುವುದೇ ಆನಂದ, ಆಹ್ಲಾದದಾಯಕ.