From the earlier FilmySphere, kept as published on 2014-10-27. It has not been updated.
Prem launches mamu tea angadi trailer
ಪ್ರೇಮ್ ನಿಂದ ಮಾಮು ಟೀ ಅಂಗಡಿ ಟ್ರೇಲರ್ ಬಿಡುಗಡೆ
Kannada
ಪ್ರೇಮ್ ನಿಂದ ಮಾಮು ಟೀ ಅಂಗಡಿ ಟ್ರೇಲರ್ ಬಿಡುಗಡೆ
ಕೊನೆಗೂ ಮಾಮು ಟೀ ಅಂಗಡಿ ಬಿಡುಗಡೆಯ ಹಂತ ತಲುಪಿದೆ. ಅದರ ಪೂರ್ವಭಾವಿಯಾಗಿ ಮಲ್ಲೇಶ್ವರಂನ ರೇಣುಕಾಂಬ ಸ್ಟುಡಿಯೋನಲ್ಲಿ ಮಾಧ್ಯಮದ ಮುಂದೆ ಚಿತ್ರದ ಟ್ರೇಲರ್ ಮತ್ತು ಹಾಡುಗಳನ್ನು ಪ್ರದರ್ಶಿಸಲಾಯಿತು.
ನಿರ್ದೇಶಕ ಪರಮೇಶ್ ಈ ಸಂದರ್ಭದಲ್ಲಿ ಚಿತ್ರದ ಬಗ್ಗೆ ಮಾತನಾಡುತ್ತಾ 'ನಾನೊಂದು ಚಿತ್ರವನ್ನು ನಿರ್ದೇಶಿಸಲು ಮುಂದೆ ಬಂದಾಗ ಮಿತ್ರ ನೆನಪಿರಲಿ ಪ್ರೇಮ್ ನೀಡಿರುವ ಸಹಕಾರ ದೊಡ್ಡದು. ಆತ ನೆನಪಿರಲಿ ಚಿತ್ರದಲ್ಲಿ ನಟಿಸುವುದಕ್ಕೂ ಮುನ್ನವೇ ನನಗೆ ಸ್ನೇಹಿತ. ಇದೀಗ ನಮ್ಮ ಚಿತ್ರ ಪೂರ್ಣಗೊಳ್ಳುತ್ತಿರುವ ಹೊತ್ತಿನಲ್ಲಿಯೂ ನಮ್ಮ ಜೊತೆಗಿದ್ದು ಸಹಕರಿಸಿರುವುದು ಖಷಿ ತಂದಿದೆ ಎಂದರು. ಅವರ ನಮ್ಮ ಸ್ನೇಹದಲ್ಲಿ ನಡೆದ ಘಟನೆಗಳು ಸೇರಿದಂತೆ ಹಿಂದೆ ಪ್ರೇಮ್ ನಡೆಸಿದ ತುಂಟಾಟಗಳಿಂದ ಸ್ಪೂರ್ತಿಗೊಂಡ ದೃಶ್ಯಗಳು ಚಿತ್ರದಲ್ಲಿವೆ ಎಂದರು ಪರಮೇಶ್. ಟ್ರೇಲರ್ ಪ್ರದರ್ಶಿಸುವ ಮುನ್ನ ಮಾತನಾಡಿದ ಲವ್ಲಿಸ್ಟಾರ್ ಪ್ರೇಮ್ 'ನನಗೆ ಸ್ನೇಹಿತನಾಗಿ ಪರಮೇಶ್ ತುಂಬಾ ಆತ್ಮೀಯ. ಸಿನೆಮಾರಂಗಕ್ಕೆ ಬರುವ ಮುನ್ನ ಜೊತೆಯಾಗಿ ಸೈಕಲ್ ಹೊಡೆದ ಗೆಳೆಯರು ನಾವು. ದಿನದ ಖರ್ಚಿಗೆ ಕಷ್ಟಪಡುತ್ತಿದ್ದ ದಿನಗಳಲ್ಲಿ ಪರಮೇಶ್ ನ ಸೀಡಿ ಅಂಗಡಿಯಲ್ಲಿ ಕೆಲಸಕ್ಕಿದ್ದೆ. ಅಂಥ ಋಣದ ದಿನಗಳನ್ನು ಮರೆಯಲಾಗದು. ನನ್ನ ಮಗ ಏಕಾಂತ್ ನನ್ನು ಈಗಲೇ ಚಿತ್ರರಂಗಕ್ಕೆ ಕರೆತರುವ ಯೋಜನೆ ನನ್ನದಾಗಿರಲಿಲ್ಲ. ಆದರೆ ಪರಮೇಶ್ ಆತನನ್ನು ಬಾಲನಟನಾಗಿ ಪರಿಚಯಿಸಿದ ಕೀರ್ತಿ ಎಂದಿಗೂ ಗೆಳೆಯನದ್ದಾಗಿರುತ್ತದೆ' ಎಂದು ಪರಮೇಶ್ ನತ್ತ ನೋಡಿದರು ಪ್ರೇಮ್. ಅತಿಥಿಯಾಗಿ ಆಗಮಿಸಿದ ನಿರ್ಮಾಪಕ ಎನ್ ಎಂ ಸುರೇಶ್ ಪರದೆಯ ಮೇಲೆಯೂ ಕಾಣಿಸಿದ್ದಾರಂತೆ. ಮಾಮು ಟೀ ಅಂಗಡಿ ಚಿತ್ರ ಮೋದಿ ಟೀ ಅಂಗಡಿಯಂತೆ ಜನಪ್ರಿಯಗೊಳ್ಳಲಿ ಎಂದು ಅವರು ಹೇಳಿದರು. ನಾಯಕಿಯರಾದ ಅರ್ಚನಾ ತನಗಿದು ಮೊದಲ ಚಿತ್ರ ಎಂದರೆ, ಇನ್ನೋರ್ವ ನಾಯಕಿ ಸಂಗೀತಾ ಇದು ನಾನು ಮೊದಲು ಆರಂಭಿಸಿದ ಚಿತ್ರ.ಇದರಲ್ಲಿ ನನ್ನದು ಸಂಪ್ರದಾಯಸ್ಥ ಹುಡುಗಿಯ ಪಾತ್ರ ಎಂದರು. ಚಿತ್ರದಲ್ಲಿ ಅಜೇಯ ರಾವ್, ಶ್ರೀನಗರ ಕಿಟ್ಟಿ, ಪ್ರೇಮ್ ಮೊದಲಾದವರು ನಟಿಸಿದ್ದು ಮಾತ್ರವಲ್ಲ ಲೂಸ್ ಮಾದ ಯೋಗಿಯೊಂದಿಗೆ ಸೇರಿ ಹಾಡುಗಳನ್ನೂ ಹಾಡಿರುವುದು ವಿಶೇಷ. ಚಿತ್ರದ ನಾಯಕರಾದ ವರುಣ್ ತನಗೆ ಡ್ಯಾನ್ಸರ್ ನಿಂದ ಆ್ಯಕ್ಟರ್ ಆಗಲು ಕಾರಣವಾದ ನಿರ್ದೇಶಕ ಪರಮೇಶ್ ಗೆ ವಂದನೆ ಹೇಳಿದರು. ಉಳಿದ ನಾಯಕರಾದ ಅಭಿಷೇಕ್ , ರಿತೇಶ್, ಮಹೇಶ್ ರಾಜ್ ಕೂಡ ಚಿತ್ರವನ್ನು ನೋಡುವಂತೆ ವಿಂತಿಸಿದರು. ಭಾವಿಷ್ ಭಫ್ನ, ನೃತ್ಯ ನಿರ್ದೇಶಕರುಗಳಾದ ಮಂಜು ಮಾಸ್ಟರ್, ನಾಗರಾಜ್ , ಹಿನ್ನೆಲೆ ಸಂಗೀತ ನೀಡಿರುವ ಸತೀಶ್ ಮೊದಲಾದವರು ಪ್ರತಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.