Skip to content
FilmySphere

From the earlier FilmySphere, kept as published on 2014-10-13. It has not been updated.

Muddu manase audio release

ಮುದ್ದು ಮನಸೇ ಆಡಿಯೋ ಬಿಡುಗಡೆ

Kannada

ಆಡಿಯೋ ಕ್ಯಾಸೆಟ್ ರಿಲೀಸ್ ಗೆ ಬಾಸ್ ಬರ್ತಾರೆ ಎಂದು ಸುದ್ದಿ ಹರಡಿ ಕುತೂಹಲ ಮೂಡಿಸಿತ್ತು ಚಿತ್ರತಂಡ. ಆದರೆ ಬಂದ ಬಾಸ್ ಯಾರು ಎಂದು ತಿಳಿಯುವ ಹೊತ್ತಿಗೆ ಬೇಸ್ತು ಬಿದ್ದಿದ್ದರು ಪ್ರೇಕ್ಷಕರು. ಯಾಕೆಂದರೆ ಸ್ಟೇಜ್ ಮೇಲೆ ಇದ್ದಿದ್ದು ಸಾಕ್ಷಾತ್ ಗಣೇಶ ಮೂರ್ತಿ! ನವನಾಯಕ ಅರುಣ್ ಗೆ ಜೋಡಿಯಾಗಿ ನಿತ್ಯಾರಾಮ್ ಮತ್ತು ಐಶ್ವರ್ಯಾ ನಾಗ್ ನಟಿಸಿದ್ದು ಅರುಣ್ ಎರಡು ಶೇಡ್ ನಲ್ಲಿನ ಕ್ಯಾರೆಕ್ಟರ್ ನಿರ್ವಹಿಸಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ನಿರ್ದೇಶಕ ಅನಂತ್ ಶೈನ್ ಹೇಗಾದರೂ ಗಿಮಿಕ್ ಮಾಡಿಯಾದರೂ ಚಿತ್ರಕ್ಕೊಂದು ಒಳ್ಳೆಯ ಪ್ರಚಾರ ನೀಡಬೇಕೆಂಬ ಗುರಿಯನ್ನು ಹೊಂದಿದ್ದು ಅದೇ ನಿಟ್ಟಿನಲ್ಲಿ ಚಿತ್ರದ ಆಡಿಯೋ ಬಿಡುಗಡೆಗೆ ಬಾಸ್ ಬರ್ತಾರೆ ಎಂಬುದು ಖುಷಿಯ ವಿಚಾರ ಎಂಬ ಮಾತುಗಳನ್ನು ಕನ್ನಡ ಚಿತ್ರರಂಗದ ಖ್ಯಾತ ತಾರೆಯರಾದ ಅಂಬರೀಶ್, ಶಿವರಾಜಕುಮಾರ್, ರಮೇಶ್ ಅರವಿಂದ್, ಪುನೀತ್ ರಾಜಕುಮಾರ್, ಸುದೀಪ್, ಶ್ರೀನಗರ ಕಿಟ್ಟಿ, ಗಣೇಶ್, ನೆನಪಿರಲಿ ಪ್ರೇಮ್, ದುನಿಯಾ ವಿಜಯ್ ಮೊದಲಾದವರಿಂದ ಹೇಳಿಸಿದ್ದರು. ಆದರೆ ಸಮಾರಂಭದಲ್ಲಿ ನಿರ್ದೇಶಕ ಅಲೆಮಾರಿ ಸಂತು, ಆನಂದ್ ಆಡಿಯೋನ ಶ್ಯಾಮ್, ನಟ ಅಜೇಯ ರಾವ್, ಶ್ರೀನಗರ ಕಿಟ್ಟಿ ಜೊತೆಗೆ ಚಿತ್ರಕ್ಕೆ ಸಾಹಿತ್ಯ ನೀಡಿದ ನಾಗೇಂದ್ರ ಪ್ರಸಾದ್, ಶಶಾಂಕ್, ಸಿಂಪಲ್ ಸುನಿ ಮೊದಲಾದವರಷ್ಟೇ ಉಪಸ್ಥಿತರಿದ್ದರು. ವಾಸ್ತವದಲ್ಲಿ ಸೀಡಿ ಬಿಡುಗಡೆಯಾದ ಆಡಿಟೋರಿಯಂ ತುಂಬಿ ತುಳುಕುವಂತೆ ಮಾಡಿದ್ದು ರಜನಿಕಾಂತ್ ಬರುತ್ತಾರೆಂಬ ನಿರೀಕ್ಷೆ ಮೂಡಿಸಿಕೊಂಡವರಿಂದಲೇ ಎಂಬುದು ನಿಸ್ಸಂದೇಹ. ಬಾಸ್ ಹೆಸರಲ್ಲಿ ಗಣೇಶನ ವಿಗ್ರಹವನ್ನು ವೇದಿಕೆ ತಂದವರು ರಜನಿಯನ್ನು ಸಂಧಿಸಿದ್ದು ಕೂಡ ಸತ್ಯವಿವೇನಾ ಎಂಬ ಬಗ್ಗೆ ಸಂದೇಹ ಮೂಡುವಂತಾಗಿದೆ. ಯಾಕೆಂದರೆ ಆ ಕುರಿತಾದ ಒಂದು ಫೊಟೋವನ್ನು ಕೂಡ ಅವರು ಮಾಧ್ಯಮಗಳ ಮುಂದೆ ಪ್ರಸ್ತುತ ಪಡಿಸುವಲ್ಲಿ ಯಶಸ್ವಿಯಾಗಿಲ್ಲ. ಒಟ್ಟಿನಲ್ಲಿ ಅಪಾರ ಪ್ರೇಕ್ಷಕರ ಮುಂದೆ ಸೀಡಿಯೇನೋ ಬಿಡುಗಡೆಯಾಗಿದೆ. ಆದರೆ ಚಿತ್ರದತ್ತ ಪ್ರೇಕ್ಷಕರನ್ನು ಸೆಳೆಯಲು ಅದೇನು ಗಿಮಿಕ್ ಮಾಡಲಿದ್ದಾರೆ ನಿರ್ದೇಶಕ ಅನಂತ್ ಶೈನ್ ಎಂಬುದನ್ನು ಕಾದು ನೋಡಬೇಕಾಗಿದೆ. ಸಮಾರಂಭದಲ್ಲಿ ಮಾಲ ಭಾಸ್ಕರ್ ತಂಡದ ಪ್ರಾರ್ಥನೆ, ಪೂಜಾಶ್ರೀಯ ಕೂಚುಪುಡಿ ಮತ್ತು ಚಿಕ್ಕ ಮಕ್ಕಳ ನೃತ್ಯ ಕಾರ್ಯಕ್ರಮವಿತ್ತು. ಚಿತ್ರಕ್ಕೆ ಹಾಡು ಬರೆದ ಸಾಹಿತಿಗಳಿಗೆ ಬೆಳ್ಳಿ ಪೆನ್ ನೀಡಿ ಸನ್ಮಾನಿಸಲಾಯಿತು.