From the earlier FilmySphere, kept as published on 2014-10-26. It has not been updated.
vamshodharaka vijay raghavendra
ವಂಶೋದ್ಧಾರಕ ವಿಜಯ ರಾಘವೇಂದ್ರ!
Kannada
ವಿಜಯರಾಘವೇಂದ್ರ ವಂಶೋದ್ಧಾರಕರಾಗಿದ್ದಾರೆ. ಸಿನೆಮಾದಲ್ಲಿ ಅವರನ್ನು ವಂಶೋದ್ಧಾರಕನನ್ನಾಗಿಸಲು ಹೊರಟವರು ಹಿರಿಯ ನಿರ್ದೇಶಕ ಚಿಕ್ಕಣ್ಣ. ಅವರಿಗೆ ಸಾಥ್ ನೀಡಿ ಪ್ರಥಮ ಬಾರಿಗೆ ಚಿತ್ರ ನಿರ್ಮಾಣ ಮಾಡುವ ಹೊಣೆ ಹೊತ್ತಿರುವವರು ನಟ ಅರವಿಂದ್.
'ಕಳೆದ 35 ವರ್ಷಗಳಿಂದ ಚಿತ್ರರಂಗದಲ್ಲಿರುವ ನನಗೆ ಸಿನೆಮಾಗಳ ನಾಡಿ ಮಿಡಿತ ಚೆನ್ನಾಗಿ ಗೊತ್ತಾಗಿದೆ. ಮಚ್ಚಿನ ಚಿತ್ರಗಳ ನಡುವೆಯೂ ಹಳ್ಳಿಯ ಬದುಕಿನ ಒಳ್ಳೆಯ ಚಿತ್ರಗಳನ್ನು ಸ್ವೀಕರಿಸುವ ಪ್ರೇಕ್ಷಕರಿರುವುದನ್ನು ಅರಿತುಕೊಂಡಿದ್ದೇನೆ. ಹಾಗಾಗಿಯೇ ಎಲ್ಲರೂ ನೋಡುವಂಥ ಚಿತ್ರವೊಂದನ್ನು ನಿರ್ಮಿಸುವ ನಿರ್ಧಾರಕ್ಕೆ ಬಂದೆ' ಎನ್ನುತ್ತಾರೆ ಅರವಿಂದ್. ಕಳೆದ ದಶಕಗಳಲ್ಲಿ ಕನ್ನಡ ಚಿತ್ರರಂಗದ ಖಳನಾಯಕರಲ್ಲೊಬ್ಬನಾಗಿ ಹೆಸರು ಮಾಡಿದ್ದ ಅರವಿಂದ್ ಗೆ ಇದು ಹೊಸ ಅನುಭವವಾದರೂ ಚಿತ್ರದ ಬಗ್ಗೆ ತುಂಬು ಭರವಸೆಯನ್ನು ಅವರಲ್ಲಿ ಕಾಣಬಹುದಿತ್ತು. ಅದಕ್ಕೆ ಪೂರಕವಾಗಿ ಚಿತ್ರದಲ್ಲಿ ಕಾಮಿಡಿ, ಸೆಂಟಿಮೆಂಟ್, ಸಸ್ಪೆನ್ಸ್, ಲವ್ ಎಲ್ಲವೂ ಒಳಗೊಂಡಿರುವುದಾಗಿ ತಿಳಿಸಿದರು. ಡಾ.ರಾಜ್ ರ ವಜ್ರೇಶ್ವರಿ ಸಂಸ್ಥೆಯ ಹಲವಾರು ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ತಾನು ಇಂದು ನಿರ್ದೇಶಕನಾಗಿ ಹೆಸರು ಮಾಡಿದ್ದರೆ ಅದಕ್ಕೆ ಅವರೇ ಕಾರಣ ಎಂದ ಚಿಕ್ಕಣ್ಣ ಪ್ರಸ್ತುತ ಚಿತ್ರದಲ್ಲಿ ಜಮೀನ್ದಾರ ಕುಟುಂಬದ ಕತೆಯನ್ನು ಹೇಳ ಹೊರಟಿರುವುದಾಗಿ ತಿಳಿಸಿದರು. ಸೇವಂತಿ ಸೇವಂತಿಯ ಬಳಿಕ ಪಕ್ಕಾ ಹಳ್ಳಿ ಸಬ್ಜೆಕ್ಟ್ ನಲ್ಲಿ ವಿಜಯರಾಘವೇಂದ್ರ ನಟಿಸುತ್ತಿದ್ದು, ಇಲ್ಲಿ ನಗರದಿಂದ ಹಳ್ಳಿಗೆ ಬಂದು ಕೃಷಿಯಲ್ಲಿ ಯಶಸ್ಸು ಸಾಧಿಸುವ ಮಾದರಿ ಪುರುಷನಾಗಿ ಕಾಣಿಸಲಿದ್ದೇನೆಂದು ಅವರು ಹೇಳಿದರು. ನಾಯಕಿ ಮೇಘನಾ ರಾಜ್ ಮಾತನಾಡಿ ಇದರಲ್ಲಿ ತಾನು ಸಮಾಜ ಸೇವಕಿಯ ಪಾತ್ರ ನಿರ್ವಹಿಸುತ್ತಿದ್ದೇನೆ ಎಂದರು. ಹಾಗಂತ ರಾಜಾಹುಲಿ ಮಾದರಿಯಲ್ಲಿ ನೈಜ ಪಾತ್ರವಲ್ಲ, ಕಮರ್ಷಿಯಲ್ಲಾಗಿ ಕಲರ್ ಫುಲ್ಲಾಗಿರುತ್ತದೆ ಎಂದರು. ಚಿತ್ರಕ್ಕೆ ಖ್ಯಾತ ಕಾದಂಬರಿಕಾರ ಬಿಎಲ್ ವೇಣು ಸಂಭಾಷಣೆಯಿದ್ದು ವಿ.ಮನೋಹರ್ ಸಂಗೀತವಿದೆಯಂತೆ. ಅಪರೂಪಕ್ಕೆಂಬಂತೆ ಛಾಯಾಗ್ರಾಹಕ ಪಿಕೆಎಚ್ ದಾಸ್ ಮಾತನಾಡಿ ಪ್ರಕೃತಿ ಮತ್ತು ರೈತನ ಸಂಬಂಧದ ಬಗ್ಗೆ ಚಿತ್ರದಲ್ಲಿ ತೋರಿಸಲಿರುವುದಾಗಿ ಹೇಳಿದರು. ಮೈಸೂರು ಸುತ್ತಮುತ್ತ ಸೇರಿದಂತೆ ಮಡಿಕೇರಿ, ಚಿಕ್ಕಮಗಳೂರು, ಬಾಬಾ ಬುಡನ್ ಗಿರಿ ಮೊದಲಾದೆಡೆಗಳಲ್ಲಿ ಚಿತ್ರೀಕರಣ ನಡೆಸಲಾಗುವುದಂತೆ. ಕಾಲೇಜುಕಲಿತ ನಾಯಕ ಬಳಿಕ ಹಳ್ಳಿಗೆ ಮರಳಿ ಕೃಷಿ ಮಾಡುವ ಕತೆಯಿದು ಎಂದರು ಕತೆಗಾರ ಕುಮಾರ್. ಒಟ್ಟಿನಲ್ಲಿ ಬಂಗಾರದ ಮನುಷ್ಯದಂಥ ಚಿತ್ರವೊಂದರ ನಿರೀಕ್ಷೆ ಮಾಡುವ ರೀತಿಯಲ್ಲಿ ಚಿತ್ರತಂಡ ಕಾರ್ಯೋನ್ಮುಖವಾಗಿದೆ.