Archive.
News and reviews from the earlier FilmySphere, 2013 to 2019. They are kept as they were published and are not updated. For current stories, see the journal.
- Review of First Rank Raju · 4/5
ತುಂಬಾ ದಿನದಿಂದ ಅದೇ ಹಳೆ ಕಥೆಗಳನ್ನೂ ನೋಡಿ ಕಂಗಾಲಾಗಿದ್ದ ಮನಸಿಗೆ ಮುದ ನೀಡಿದ "First Rank ರಾಜು" - 4 / 5. Storyline : ಅತೀ ಸೂಕ್ಷ್ಮ ವಿಚಾರಗಳನ್ನು ಹಾಸ್ಯಾಸ್ಪದ ರೀತಿಯಲ್ಲಿ ಹೇಳಿ ಪ್ರೇಕ್ಷಕನ ಮನ ಒಲೈಸುವುದರಲ್ಲಿ ಗೆದ್ದಿದೆ ಚಿತ್ರ ತಂಡ. ಸದಾ ಜೀವನದುದ್ದಕು ಬರಿ ಗೆಲುವಿನ ಮೆಟ್ಟಿಲೇರುವ ಗೆಲುವಿನ ರುವಾರಿಗೆ ಸೋಲಿನ ರುಚಿ ಉಂಡೊಡನೆ ಸಾವಿಗೆ ಶರಣಾಗೋ ಮೂರ್ಖರಾಗದ್ದಿರಿ, ಮನುಜನ ಬಾಳೆಮ್ಬುದು ಸುಖ - ದುಃಖಗಳ, ಏಳು-ಬೀಳುಗಳ ಸೋಪಾನ. ತಂದೆ ತಾಯಿ ತಾವು ಹೆತ್ತ ಕಂದಮ್ಮನ ಮನದ ಆಸೆ ಅರಿತು ಅವನ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕು ಹೊರತ್ತು ಜಗತ್ತಿನಲ್ಲಿ ಲಂಗಿಲ್ಲದೆ ಲಗಾಮಿಲ್ಲದ್ದೆ ಬಂಧ ಮರೆತು ಪ್ರೀತಿ ತೊರೆದು ಹಣದ ವ್ಯಾಮೋಹದಿಂದ ಓಡುತಿರೋ ಕುದುರೆ ನೀನಾಗೆಂದು ದೂಡಬಾರದು. ಇಂದಿನ education systemನಲ್ಲಿ ಇರೋ ಎಲ್ಲಾ ಕುಂದುಕೊರತೆ ಅಪ್ಪಾ ದೇವ್ರೇ ನಾ ಯಾಕೆ ಇಷ್ಟೊಂದು serious ಆಗಿ ಮಾತಾಡ್ತಿದೀನಿ. Well ಡಾರ್ಲಿಂಗ್ 's ಈ ಕಥೆ ಎಳೆನೆ ನಮ್ಮ ನಿರ್ದೇಶಕರು ಆರಿಸಕೊಂದಿರೋದು ಆದ್ರೆ ತುಂಬಾನೇ ಹಾಸ್ಯಮಯವಾಗಿ ಹೇಳ್ತಾರೆ. Well movie ನೋಡ್ತಿರೋದು First Rank ರಾಜು ಜಾತಿಗೆ ಸೇರ್ದೊರಾದ್ರೆ ನಿದ್ದೆ ಮಾಡ್ತಾರೆ ಯಾಕಂದ್ರೆ ಅವರು ನೋಡ್ತಿರೋ ಕೇಳ್ತಿರೋ ಡೈಲಾಗ್ syllabus ನಲ್ಲಿ ಇರೋಲ್ಲ. Acting : ದೂದ್ ಪೇಡ ದಿಗಂತ್ ಥರ ಕಾಣೋ ಗುರುನಂದನ್ ಪ್ರಥಮ ಪ್ರಯತ್ನದಲ್ಲೇ ಫಸ್ಟ್ Rank. ನಾಯಕಿಯರು ತುಂಬಾನೇ ಡಬ್ಬಾ ಥರ ಇದ್ದಾರೆ. ಸೆಕೆಂಡ್ heroine ಬೆಸ್ಟ್ compared to ಫಸ್ಟ್ heroine. ಇನ್ನು ಸ್ವಲ್ಪ ಖಾರವಾಗಿ ಮಾತಾಡೊದಾದ್ರೆ ಫಸ್ಟ್ heroine ಫ್ರೆಂಡ್ ಸೂಪರ್ ಇದ್ದಾರೆ. ಆಕ್ಟಿಂಗ್ ಓಕೆ ಓಕೆ ಯಾಕಂದ್ರೆ ಅವರ ಪಾತ್ರಕ್ಕೆ ಅಷ್ಟ importance ಇಲ್ಲ. ತಂದೆ- ತಾಯಿ ಪಾತ್ರದಲ್ಲಿ Achyuth Kumar and Sudha Belawadi Super. ಸುಮ್ನೆ ಹಾಗೆ ಬಂದ್ರು ಸೂಪರ್ message ಕೊಡು Ananth Nag Sir ನಟನೆ ಸೂಪರ್ but could have Utilized ಬೆಟರ್ ಅನಿಸ್ತು. ಸಾದು ಮಹಾರಾಜ್ ನಿಜಕ್ಕೂ ಅದ್ಭುತ ಅಭಿನಯ ನ್ಯೂ characterization ಅನ್ನಿಸ್ತು. ಇನ್ನು ಪ್ರಾಂಶುಪಾಲರ ಪಾತ್ರ ಮಾಡಿರೋ ಮನದೀಪ್ ರೈ ಅದ್ಭುತ ಅಭಿನಯ. ಇನ್ನು ಅವರ ಗೆಳೆಯರ ಬಳಗ ಅಮಿತ್ ಅಂಡ್ ಫ್ರೆಂಡ್ಸ್ ಒಳ್ಳೆ ಅಭಿನಯ. Technically : ಚಿತ್ರದ ಸಾರಥಿ ನಿಜಕ್ಕೂ ಚೊಚ್ಚಲ ಪ್ರಯತ್ನದಲ್ಲೇ ಗೆದ್ದಿದ್ದಾರೆ. ಸಂಕಲನಾ ಕಾರರು ಚೂರು ಕತ್ರಿ ಹಾಕ್ಬೋದಿತ್ತು. Climax ಇನ್ನು ಚೆನ್ನಾಗಿ ಇರ್ಬೋದಿತ್ತು. ಸಾಂಗ್ಸ್ ಎಲ್ಲಾ ಕಥೆ ಜೊತೆ ಸಾಗುತ್ತೆ ಹಾಗೆ ಅದ್ಭುತವಾಗಿದೆ. Technically ಸ್ವಲ್ಪ dull ಅನ್ನಿಸ್ತು. Conclusion : ನಿಮ್ಮ ಜೀವನದ ಜಾಂಜಾಟಗಳನೆಲ್ಲ ಮರೆತು ಹೊಟ್ಟೆ ಹುಣಾಗುವಷ್ಟು ನಗುವ category ಗೆ ಸೇರ್ತಾನೆ ನಮ್ಮ "First Rank ರಾಜು". Must Watch :)
2015-12-24 · FilmySphere critic
- Review of Sharpshooter · 5/5
Refreshing Entertainer..Charming Diganth and Sangeetha and everyone else..Critics were bad.I don't understand what is the benchmark for critics..but the movie is purely entertaining .One simple word for the mover is
2015-12-14
- Review of Jaathre · 4/5
ಜಾತ್ ಚಿತ್ರ ವಿಮರ್ಶೆ ಜಾತ್ರೆ; ಪಯಣದ ನಡುವೆ ಬದುಕಿನ ಕವನ ಪ್ರಥಮ ಬಾರಿಗೆ ಚಿತ್ರವೊಂದನ್ನು ನಿರ್ದೇಶಿಸಿದಾತ ಇಷ್ಟೊಂದು ಚೆನ್ನಾಗಿ ಫಲಿತಾಂಶ ನೀಡಬಹುದೇ ಎಂದು ಅಚ್ಚರಿ ಮೂಡಿಸುವ ರೀತಿಯಲ್ಲಿ ಜಾತ್ರೆ ಚಿತ್ರವನ್ನು ನೀಡಿದ್ದಾರೆ ನಿರ್ದೇಶಕ ರವಿತೇಜ. ಮೂಡಿಗೆರೆಯಿಂದ ಬೆಂಗಳೂರಿಗೆ ಬರುವ ಯುವಕನೋರ್ವನ ಬದುಕಿನಲ್ಲಿ ನಡೆಯುವ ಎರಡು ದಿನಗಳ ಕತೆಯನ್ನಿಟ್ಟುಕೊಂಡು ಮೂಡಿ ಬಂದಿರುವ ಚಿತ್ರ ಆಕರ್ಷಕವಾಗಿ ಮೂಡಿ ಬಂದಿದೆ. ಚಿತ್ರದಲ್ಲಿ ನಾಯಕ ಕಿರಣ್ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುವ ಕಿರುತೆರೆ ವಾರ್ತಾವಾಹಿನಿಯ ನಿರೂಪಕಿ ಕಿರಣಳ ಅಭಿಮಾನಿಯಾಗಿರುತ್ತಾನೆ. ಇಂಟರ್ ವ್ಯೂ ಒಂದರಲ್ಲಿ ಪಾಲ್ಗೊಳ್ಳಲು ತಾನಿದ್ದ ಚಿಕ್ಕಮಗಳೂರಿನ ಮೂಡಿಗೆರೆಯಿಂದ ಬೆಂಗಳೂರಿಗೆ ಬರುತ್ತಾನೆ. ಇಂಟರ್ ವ್ಯೂ ಮುಗಿದ ಬಳಿಕ ಬೆಂಗಳೂರು ಹೇಗಿದೆ ಎಂದು ಸುತ್ತಿ ನೋಡಲು ಬಯಸುತ್ತಾನೆ. ಕಾಕಾತಾಳೀಯವಾಗಿ ಆತನಿಗೆ ಕಿರಣಳ ಪರಿಚಯವಾಗುತ್ತದೆ. ಭೇಟಿಯಾದ ಕೆಲವೇ ನಿಮಿಷಗಳಲ್ಲಿ ಆತನ ಒಳ್ಳೆಯತನದ ಬಗ್ಗೆ ಅರಿತುಕೊಳ್ಳುವ ಕಿರಣಳು ತನ್ನ ಸ್ನೇಹಿತರನ್ನು ಕಳುಹಿಸಿ ಆತನಿಗೆ ಬೆಂಗಳೂರು ತಿರುಗಾಟ ಮಾಡಿಸಿಕೊಡುವಂತೆ ಹೇಳುತ್ತಾಳೆ. ಹಾಗೆ ಸಿಗುವ ಸ್ನೇಹಿತರು ಅನಿವಾರ್ಯವಾಗಿ ದೂರಾದ ಬಳಿಕ ಕಿರಣ್ ನಡೆಸುವ ಸ್ಟಿಂಗ್ ಆಪರೇಶನ್ ಒಂದರಲ್ಲಿ ಪಾಲ್ಗೊಳ್ಳುವ ಅವಕಾಶ ನಾಯಕ ಕಿರಣ್ ಗೆ ಸಿಗುತ್ತದೆ. ಆಕೆ ಅದರಲ್ಲಿ ಯಶಸ್ಸಾಗುವಂತೆ ಮಾಡಿದಾಗ ಆಕೆ ಆತನಿಗೆ ಉಂಗುರವೊಂದನ್ನು ತೊಡಿಸುತ್ತಾಳೆ. ಆ ರಾತ್ರಿ ಆತ ತನ್ನ ಊರಿಗೆ ಮರಳುವಾಗ ಮನಸ್ಸನ್ನು ಆಕೆಗೆ ಕೊಟ್ಟಿರುತ್ತಾನೆ.ಯಶಸ್ವಿಯಾಗಿ ಸ್ಟಿಂಗ್ ಆಪರೇಷನ್ ಮಾಡಿದ್ದಕ್ಕಾಗಿ ಆಕೆಗೆ ಬೆಂಗಳೂರಿನಲ್ಲಿ ಸನ್ಮಾನ ಕಾರ್ಯಕ್ರಮವಿರುವುದನ್ನು ತಿಳಿದು ತಾಯಿಯ ಆಶೀರ್ವಾದ ಪಡೆದು ಆಕೆಯನ್ನು ಭೇಟಿಯಾಗಲು ಮತ್ತೆಸ್ನೇಹಿತನೊಂದಿಗೆ ಬೆಂಗಳೂರಿಗೆ ಮರಳುತ್ತಾನೆ. ಆತ ಆಕೆಯನ್ನು ಭೇಟಿಯಾಗುತ್ತಾನ? ಆಕೆ ಆತನನ್ನು ನೆನಪಿಸಿಕೊಳ್ಳುತ್ತಾಳ ಎಂಬುದೇ ಚಿತ್ರದ ಕ್ಲೈಮ್ಯಾಕ್ಸ್.ನಾಯಕ ಕಿರಣನಾಗಿ ಚೇತನ್ ಚಂದ್ರ ಎಯ್ಟ್ ಪ್ಯಾಕ್ ಚೆಲುವ. ನಾಯಕಿಯಾಗಿ ಐಶ್ವರ್ಯಾನಾಗ್ ಚುರುಕಿನ ಚೆಲುವೆ. ಒಂದೇ ದಿನದಲ್ಲಿ ಕೆಂಪೇಗೌಡರ ಬೆಂಗಳೂರನ್ನು ನೋಡಲು ಬಯಸುವ ನಾಯಕ. ಅದು ಉಳಿದಿಲ್ಲ ಎಂದು ಹೇಳುವ ಪಾತ್ರಗಳ ಮೂಲಕವೇ ಬದಲಾಗಿರುವ ಬೆಂಗಳೂರನ್ನು ಪರಿಚಯಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಲಾಲ್ ಭಾಗ್, ವಿಧಾನ ಸೌಧಗಳನ್ನು ತೋರಿಸದೆ ವಾಸ್ತವಿಕ ಬೆಂಗಳೂರನ್ನು ಯಾವುದೇ ಪೂರ್ವಾಗ್ರಹಗಳಿಲ್ಲದ ರೀತಿಯಲ್ಲಿ ಪ್ರಸ್ತುತ ಪಡಿಸಿರುವ ನಿರ್ದೇಶಕರು ಕತೆ, ಚಿತ್ರಕತೆಯಲ್ಲಿ ತೋರಿರುವ ಜಾಣ್ಮೆಯನ್ನು ಮೆಚ್ಚಲೇಬೇಕು. ನೈಜ ನಿರೂಪಣೆ ಜೊತೆಗೆ ಸೇರಿರುವ ಪಂಚಿಂಗ್ ಸಂಭಾಷಣೆ ಚಿತ್ರದ ಪ್ರಮುಖ ಆಕರ್ಷಣೆ. ಛಾಯಾಗ್ರಹಣ ಮತ್ತು ಕಲಾನಿರ್ದೇಶನದಿಂದ ಚಿತ್ರಕ್ಕೆ ವಿಶೇಷ ಕಳೆ ಪಡೆದುಕೊಂಡಿದೆ. ಅತಿಥಿ ಪಾತ್ರಗಳಾಗಿ ಬರುವ ರಕ್ಷಿತ್ ಶೆಟ್ಟಿ, ಅಕ್ಷಯ್, ವೀಣಾ ಪೊನ್ನಪ್ಪ, ಶ್ರವಂತ್ ಮೊದಲಾದವರು ನಾಯಕನ ಪ್ರಯಾಣದ ನಡುವೆ ಸಹಜವಾಗಿ ಸೇರಿಕೊಳ್ಳುತ್ತಾರೆ. ಸ್ನೇಹಿತನಾಗಿ ಶೋಭರಾಜ್ ಭರವಸೆಯ ಹಾಸ್ಯನಟನೆನಿಸುತ್ತಾರೆ. ಆದರೂ ಕೂಡ ಚಿತ್ರವನ್ನು ಇನ್ನಷ್ಟು ಚಿಕ್ಕದಾಗಿಸಬಹುದಿತ್ತು ಅನಿಸದಿರದು. ಆಗ ಮಾತ್ರ ಎರಡನೆ ಭಾಗಕ್ಕೆ ಕಾಯುವ ತಾಳ್ಮೆ ಪ್ರೇಕ್ಷಕರಲ್ಲಿ ಉಳಿದಿರುತ್ತಿತ್ತು.
2015-12-12 · FilmySphere critic
- Review of Maja Talkies · 5/5
Maja talkies simply the best entertaining program.Looks the best talented had grouped for the interest of public.We all wish for the long lasting episode not only two daysa week but on daily basis.Srujesh Lokesh ur just exordinary.
2015-12-09
- Review of Rathaavara · 3/5
ರಥಾವರ ಚಿತ್ರ ವಿಮರ್ಶೆ ರಥಾವರ: ವರವಲ್ಲ; ಶಾಪವೇ ಹೆಚ್ಚು! ದುಷ್ಟ ಎಂಎಲ್ ಎಯೊಬ್ಬ ಸಾಕಿ ಬೆಳೆಸಿದ ರೌಡಿಯೇ ರಥ; ಆತನೇ ಚಿತ್ರದ ನಾಯಕ. ಮಂಗಳಮುಖಿಯ ಶವದ ಮುಖವನ್ನು ನೋಡಿದರೆ ಮುಖ್ಯಮಂತ್ರಿಯಾಗುವ ಅದೃಷ್ಟ ತನ್ನದಾಗುತ್ತದೆ ಎಂದು ನಂಬಿದ ಎಮ್ಮೆಲ್ಲೆ ಶವ ತರಿಸುವ ಕೆಲಸವನ್ನು ರಥನಿಗೆ ವಹಿಸುತ್ತಾನೆ. ಶವ ತರುವ ಯತ್ನದಲ್ಲಿ ಮಂಗಳಮುಖಿ ಮಹಾದೇವಿಯೊಂದಿಗೆ ಹೊಡೆದಾಡುತ್ತಾನೆ. ರಥ ತನ್ನ ಬಳಿಯಿದ್ದ ಶವವನ್ನು ಅಪಹರಿಸಿ ಎಮ್ಮಲ್ಲೆಗೆ ತಲುಪಿಸಿ ಆತನ ಆತ್ಮೀಯರಾಗಲೆತ್ನಿಸುವ ಮತ್ತೊಂದು ಬಣದವರೊಂದಿಗೂ ಹೊಡೆದಾಡುತ್ತಾನೆ. ಶವವನ್ನು ತಲುಪಿಸದಿದ್ದ ಕಾರಣ ಎಮ್ಮೆಲ್ಲೆಯ ಬಳಿಯಲ್ಲೂ ವಿರೋಧ ಕಟ್ಟಿಕೊಳ್ಳುತ್ತಾನೆ. ತನ್ನ ದಾರಿಯಿಂದ ತಿದ್ದಿಕೊಂಡು ಎಮ್ಮೆಲ್ಲೆಯ ಸಹವಾಸದಿಂದ ದೂರಾಗುತ್ತಾನೆ. ಆದರೆ ಮಂಗಳಮುಖಿ, ಎಮ್ಮೆಲ್ಲೆ ಮತ್ತು ಆತನ ನೂತನ ಬಂಟರು ಸೇರಿ ರಥನನ್ನು ಅವಿರತ ಕಾಡಿ ಮುಗಿಸುವುದೇ ಚಿತ್ರದ ಕತೆ. ಮಂಗಳಮುಖಿ ಜೊತೆಗಿನ ವೈಷಮ್ಯ ಎಂಬುದನ್ನು ಬಿಟ್ಟರೆ ಪೂರ್ತಿ ಕತೆಯಲ್ಲಿ ಯಾವುದೇ ಹೊಸತನವಿಲ್ಲ. ಸುಲಭದಲ್ಲಿ ಮುಗಿಸಬಹುದಾದ ಚಿತ್ರಕ್ಕೆ ಅನಗತ್ಯ ದೃಶ್ಯಗಳನ್ನು ತುರುಕಿ ಹಿಗ್ಗಿಸಿದ್ದಾರೆ ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ. ಅಬ್ಬರದ ಹಿನ್ನೆಲೆ ಸಂಗೀತದಿಂದ ತಲೆ ಚಿಟ್ಟು ಹಿಡಿಯುವಂತಾಗುತ್ತದೆ. ನಾಯಕನಾಗಿ ಶ್ರೀಮುರಳಿ ಹೊಡೆದಾಟದ ದೃಶ್ಯಗಳಲ್ಲಿ ಮಿಂಚಿದ್ದಾರೆ. ಎಮ್ಮೆಲ್ಲೆಯಾಗಿ ನಟಿಸಿರುವ ರವಿಶಂಕರ್ ಸಪ್ಪೆಯೆನಿಸುತ್ತಾರೆ. ಪಂಚ್ ಡೈಲಾಗ್ ಗಳಿಗೆ ಖ್ಯಾತರಾದ ರವಿಶಂಕರ್ ಗೆ ಅಂಥ ಅವಕಾಶ ನೀಡಿಲ್ಲವೆಂಬುದು ವಿಶೇಷ. ಪೊಲೀಸ್ ಅಧಿಕಾರಿಯಾಗಿ ಚರಣ್ ರಾಜ್ ತೋರುವ ಪಾತ್ರದ ಬಿಲ್ಡಪ್ ಗೆ ತಕ್ಕುದಾದ ಅಂತ್ಯವನ್ನು ನೀಡಲಾಗಿಲ್ಲ! ಇರುವುದರಲ್ಲಿ ರಥನ ಸ್ನೇಹಿತನಾಗಿ ಚಿಕ್ಕಣ್ಣ ಮತ್ತು ಎರಡು ದೃಶ್ಯಗಳಲ್ಲಿ ಬರುವ ಸಾಧುಕೋಕಿಲ ಒಂದಷ್ಟು ನಗಿಸುವಲ್ಲಿ ಯಶಸ್ವಿಯಾಗುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಚಿತ್ರದಲ್ಲಿ ಗಮನ ಸೆಳೆಯುವುದು ಭಜರಂಗಿ ಲೋಕಿಯ ಮಂಗಳಮುಖಿ ಪಾತ್ರ. ಅವರು ಆಕರ್ಷಕವಾಗಿಯೇ ನಟಿಸಿದ್ದಾರೆನ್ನಬಹುದು. ನಾಯಕಿಯಾಗಿ ರಚಿತಾಗೆ ಹೇಳಿಕೊಳ್ಳುವಂಥ ಅವಕಾಶವಿಲ್ಲ. ಚಿತ್ರಾಂತ್ಯದಲ್ಲಿ ನಾಯಕ ತನ್ನ ಒಂದು ಕಣ್ಣನ್ನು ಸ್ನೇಹಿತನಿಗೆ ದಾನ ನೀಡುವುದು; ಅದನ್ನು ರೌಡಿಗಳು ಕಿತ್ತು ಹಾಕುವುದು ಮೊದಲಾದ ಭಯಾನಕ ಡ್ರಾಮಾಟಿಕ್ ಸನ್ನಿವೇಶಗಳಿವೆ. ಒಟ್ಟಿನಲ್ಲಿ ಉಗ್ರಂ ಚಿತ್ರ ನೋಡಿ ಮೆಚ್ಚಿದ ನಿರೀಕ್ಷೆಯಲ್ಲಿ ರಥಾವರ ನೋಡಲು ಬರುವ ಪ್ರೇಕ್ಷಕರು ನಿರಾಶರಾಗುವುದು ಖಚಿತ.
2015-12-04 · FilmySphere critic
- Review of Maja Talkies · 4.5/5
excellent show.... awaiting next Saturdays episode proud to sea our mangalore MAJA kings
2015-12-02
- Review of Mamu Tea Angadi · 3/5
ಮಾಮು ಟೀ ಅಂಗಡಿ ಚಿತ್ರ ವಿಮರ್ಶೆ ಮಾಮು ಟೀ ಅಂಗಡಿ ಇದು ಸ್ನೇಹಿತರ ಸಂಗತಿ ಇದು ಮಾಮು ಟೀ ಅಂಗಡಿಯ ಮುಂದೆ ಸೇರುವ ನಾಲ್ಕು ಮಂದಿ ಹುಡುಗರ ಕತೆ. ಒಬ್ಬಾತ ತಮಟೆ ಬಾರಿಸುವವನ ಪುತ್ರ. ನಟನಾಗುವುದು ಆತನ ಕನಸು. ಎರಡನೆಯವನು ಮೋರಿ ಕ್ಲೀನ್ ಮಾಡುವವನ ಮಗ. ಆತನೋರ್ವ ಚಿತ್ರ ಕಲಾವಿದ. ಮೂರನೆಯವನು ಪೊಲೀಸ್ ಕಾನ್ಸ್ಟೇಬಲ್ ಪುತ್ರ. ಮತ್ತು ನಾಲ್ಕನೆಯವನು ಒಬ್ಬ ಮುಸ್ಲಿಂ ಹುಡುಗನಾಗಿದ್ದು ಆತನ ತಂದೆ ರೋಗಾವಸ್ಥೆಯಲ್ಲಿರುತ್ತಾರೆ.ಕಾನ್ಸ್ಟೇಬಲ್ ಮನೆಯಲ್ಲಿ ಬಾಡಿಗೆಗೆ ಬಂದ ಹುಡುಗಿಯನ್ನು ಆತನ ಪುತ್ರ ಮತ್ತು ಕಲಾವಿದ ಹೀಗೆ ಇಬ್ಬರು ಪ್ರೀತಿಸುತ್ತಾರೆ. ಇದೇ ವಿಷಯದಲ್ಲಿ ಸ್ನೇಹಿತರ ನಡುವೆ ಮನಸ್ತಾಪ ಮೂಡಿ ನಾಲ್ಕು ಮಂದಿಯೂ ಮಾತುಬಿಟ್ಟು ದೂರಾಗುತ್ತಾರೆ. ಕೊನೆಯಲ್ಲಿ ಮುಸ್ಲಿಂ ಹುಡುಗನಿಗೆ ಆಪತ್ತಾದಾಗ ಎಲ್ಲರೂ ಒಂದಾಗುತ್ತಾರೆ ಎಂಬಲ್ಲಿಗೆ ಚಿತ್ರ ಕೊನೆಯಾಗುತ್ತದೆ. ತೆಲುಗಿನ ಹ್ಯಾಪಿಡೇಸ್, ತಮಿಳಿನ ಬಾಯ್ಸ್ ಚಿತ್ರಗಳನ್ನು ನೆನಪಿಸುವ ಚಿತ್ರವಾದರೂ ಹಲವು ವ್ಯತ್ಯಾಸಗಳಿವೆ. ಮುಖ್ಯವಾಗಿ ಇಲ್ಲಿ ಎಲ್ಲ ಹುಡುಗರು ಕಾಲೇಜ್ ಫ್ರೆಂಡ್ಸ್ ಗಳಲ್ಲ. ಮಕ್ಕಳ ವಿಷಯದಲ್ಲಿ ತಂದೆ ತಾಯಿಗಳು ಪರಸ್ಪರ ಭೇಟಿಯಾಗುವ ಅಥವಾ ಜಗಳವಾಡುವ ದೃಶ್ಯಗಳಿಲ್ಲ. ಕ್ಲಾಸ್ ರೂಮೊಳಗಿನ ಕಾಮಿಡಿಗಳಿಲ್ಲ. ಹೀಗೆ ಇಷ್ಟೆಲ್ಲ ಚರ್ವಿತ ಚರ್ವಣ ವಿಷಯಗಳಿಂದ ಪ್ರೇಕ್ಷಕರನ್ನು ಪಾರು ಮಾಡಿದರೂ ಕೂಡ ಚಿತ್ರ ಹೊಸದೇನನ್ನೂ ಹೇಳುವುದಿಲ್ಲ. ಪ್ರೀತಿಯಲ್ಲಿ ಹುಡುಗಿಯರು ವಂಚಿಸುತ್ತಾರೆ; ಹುಡುಗರ ನಡುವಿನ ಸ್ನೇಹ ಚಿರಕಾಲವಿರುತ್ತದೆ ಎಂಬುದು ಚಿತ್ರ ನೀಡುವ ಸಂದೇಶ. ಯುವ ಪ್ರೇಕ್ಷಕರಲ್ಲಿ ಅದನ್ನು ನಂಬುವವರ ಸಂಖ್ಯೆ ಜಾಸ್ತಿಯಿರುವದರಿಂದ ಚಿತ್ರಕ್ಕೆ ಒಳ್ಳೆಯ ಬೆಂಬಲ ಸಿಗುತ್ತದೆ. ನೃತ್ಯಗಾರನಾಗಿ ವರುಣ್, ಮುಸ್ಲಿಂ ಹುಡುಗ ಅನ್ವರಾಗಿ ರಿತೇಶ್ ಮತ್ತು ಕಾನ್ಸ್ಟೇಬಲ್ ಮನೆಗೆ ಬಾಡಿಗೆಗೆ ಬಂದ ಹುಡುಗಿಯಾಗಿ ಸಂಗೀತ ಚಿತ್ರದಲ್ಲಿ ನೆನಪು ಉಳಿಸುವಂಥ ನಟನೆ ನೀಡಿದ್ದಾರೆ. ಟೀ ಅಂಗಡಿ ಮಾಮುವಾಗಿ ಗುರುರಾಜ್ ಗಮನ ಸೆಳೆಯುತ್ತಾರೆ. ಉಳಿದಂತೆ ಅತಿಥಿ ಕಲಾವಿದರಾಗಿ ನಟಿಸಿರುವ ಶ್ರೀನಗರ ಕಿಟ್ಟಿ ಕತೆಗಾರನಾಗಿದ್ದಾರೆ. ಆದರೆ ಅವರೇ ಬರೆದ ಕರೆಯಿದು ಎಂಬುದನ್ನು ಸರಿಯಾಗಿ ತೋರಿಸಿಲ್ಲ. ಪ್ರೇಮ್ ಮತ್ತು ಅಜೇಯ ರಾವ್ ಆಗಮನದಿಂದ ಚಿತ್ರಕ್ಕೆ ತೂಕ ನೀಡುವುದು ಸಂದೇಹದ ವಿಚಾರ. ಹಾಡುಗಳಲ್ಲಿ ಪ್ರೇಮಗೀತೆಯೊಂದು ಆಲಿಸುವಂತಿದೆ. ಹಾಸ್ಯ ಸಂಭಾಷಣೆ ಮತ್ತು ಒಂದು ಮೈಮ್ ಕಾಮಿಡಿ ದೃಶ್ಯ ಸೇರಿದಂತೆ ನಗುವಿಗೆ ಅವಕಾಶವಿದೆ. ನಿರ್ದೇಶಕರಾಗಿ ಪರಮೇಶ್ ಮಾಡಿದ ಪ್ರಥಮ ಪ್ರಯತ್ನ ಪರವಾಗಿಲ್ಲ ಎಂಬಂಥ ರಿಸಲ್ಟ್ ನೀಡಿದೆ.
2015-11-21 · FilmySphere critic
- Review of Boxer · 2.5/5
ಬಾಕ್ಸರ್ ಚಿತ್ರ ವಿಮರ್ಶೆ ಬಾಕ್ಸರ್ : ಇದು 'ಅಂಧ'ಗಾತಿಯ ಕತೆ ಬಾಕ್ಸರ್ ಎಂದು ಹೆಸರಿಟ್ಟ ಮೇಲೆ ಒಂದೋ ನಾಯಕನ ಬಾಕ್ಸಿಂಗ್ ನೋಡ್ಬೇಕು ಅಥವಾ ಬಾಕ್ಸಿಂಗ್ ನೊಳಗಿರುವ ಗಟ್ಟಿಯಾದ ಕತೆಯನ್ನು ನೋಡಬೇಕು ಎಂಬುದು ಪ್ರೇಕ್ಷಕರ ನಿರೀಕ್ಷೆಯಾಗಿರುತ್ತದೆ. ಆ ಎರಡೂ ಅಂಶಗಳು ಚಿತ್ರದಲ್ಲಿಲ್ಲ ಮಾತ್ರವಲ್ಲ ಮನರಂಜನೆಗೆಂದು ಬಂದವರನ್ನು ಕೂಡ ತೃಪ್ತಿ ಪಡಿಸಲಾಗದ ಚಿತ್ರವಿದು. ದುಡ್ಡಿಗಾಗಿ ನಗರದೊಳಗೆ ಬಾಕ್ಸಿಂಗ್ ಮಾಡುವುದು ಮತ್ತು ಆ ದುಡ್ಡನ್ನು ಸೇವಾಶ್ರಮಕ್ಕೆ ನೀಡುವುದು ನಾಯಕನ ಹವ್ಯಾಸ. ರಾತ್ರಿ ಹೊತ್ತಲ್ಲಿ ಟೋಲ್ ಗೇಟ್ ಕ್ಯಾಶ್ ನಲ್ಲಿ ಕೆಲಸ ಮಾಡುವುದು ಆತನ ವೃತ್ತಿ. ಟಿವಿ ಧಾರಾವಾಹಿಗೆಂದೇ ಆತನ ಕಚೇರಿಗೆ ಬರುತ್ತಿರುತ್ತಾಳೆ ಒಬ್ಬಳು ಹುಡುಗಿ. ಆದರೆ ಆಕೆ ಕುರುಡಿಯಾದ ಕಾರಣ ಧಾರಾವಾಹಿಯನ್ನು ಕೇಳಿಸಿಕೊಂಡು ಹೋಗಬಲ್ಲಳು ಮಾತ್ರ. ಹಾಗೆ ಚಿತ್ರದ ಆರಂಭ ಧಾರಾವಾಹಿಯಂತೆ ಸಾಗುತ್ತದೆ. ನಿರೀಕ್ಷೆಯಂತೆ ಕ್ಲೈಮ್ಯಾಕ್ಸ್ ನಲ್ಲಿ ಆಕೆಯ ಕಣ್ಣು ಆಪರೇಶನ್ ಗಾಗಿ ಆತ ಪ್ರಯತ್ನಿಸುತ್ತಾನೆ. ಅದಕ್ಕೆ ದುಡ್ಡು ಹೊಂದಿಸಿ ಕರಾರಿನಂತೆ ಬಾಕ್ಸಿಂಗ್ ಗೆಂದು ಬ್ಯಾಂಕಾಕ್ ಗೆ ಹೋದವನು ಅವರ ಜಾಲಕ್ಕೆ ಅದರಿಂದ ಹೊರಬೀಳಲು ಕಷ್ಟಪಡುತ್ತಾನೆ. ಕಣ್ಣು ಬಂದ ಮೇಲೆ ಹುಡುಗಿಗೆ ಬಾಕ್ಸರ್ ಸಿಗುತ್ತಾನ ಎಂಬುದೇ ಕ್ಲೈಮ್ಯಾಕ್ಸ್. ಒಂದು ಕಿರುಚಿತ್ರಕ್ಕಾಗಬಹುದಾದ ಸರಕನ್ನು ಹಿರಿಚಿತ್ರದ ಕತೆಯಾಗಿಸಿದ್ದಾರೆ ಪ್ರೀತಮ್. ನಾಯಕನಾಗಿ ಧನಂಜಯ್ ತೀರಾ ಸಪ್ಪೆಯಾಗಿದ್ದಾರೆ. ಕೊನೆಯಲ್ಲೇನೋ ಒಂದು ಫ್ಲ್ಯಾಶ್ ಬ್ಯಾಕ್ ಸ್ಟೋರಿ ಆರಂಭವಾದಾಗ ದೊಡ್ಡ ತಿರುವುದ ಸಿಕ್ಕಿತೇನೋ ಎಂಬ ಸಂದೇಹವಾಗುತ್ತದೆ. ಆದರೆ ನಾಯಕನ ದೇಹವನ್ನು ಹೊರತು ಪಡಿಸಿ ಆತನ ಬಾಡಿ ಲ್ಯಾಂಗ್ವೇಜ್ ನಿಂದ ಆತನೊಬ್ಬ ಬಾಕ್ಸರ್ ಎಂದು ತೋರಿಸುವಲ್ಲಿ ನಿರ್ದೇಶಕರು ಸೋತಿದ್ದಾರೆ. ನಾಯಕಿಯಾಗಿ ಕೃತ್ತಿಕಾ ಎಂಬ ನವನಟಿಗೆ ಪ್ರಥಮ ಚಿತ್ರದಲ್ಲೇ ನಟನೆಗೆ ಅವಕಾಶವಿರುವ ಅಂಧೆಯ ಪಾತ್ರ ದೊರಕಿದ್ದು ಅದನ್ನು ಈ ಅಂದಗಾತಿ ಅಂದವಾಗಿಯೇ ನಿರ್ವಹಿಸಿದ್ದಾರೆ. ರಂಗಾಯಣ ರಘುವಿನ ಆಗಮನವಾಗುವ ದೃಶ್ಯಗಳಲ್ಲಿ ಲವಲವಿಕೆಯಿದೆ. ಅರವಿಂದ್ ನ ಆಕರ್ಷಕ ಖಳನಟನೆಗೆ ಇನ್ನಷ್ಟು ದೃಶ್ಯಗಳು ಬೇಕಿತ್ತು ಎಂಬಂತಿತ್ತು. ಕ್ಲೈಮ್ಯಾಕ್ಸ್ ನಲ್ಲಿ ಆಸಕ್ತಿ ಮೂಡಿಸುತ್ತದೆ ಎಂಬ ಕಾರಣಕ್ಕಾಗಿ ಚಿತ್ರವನ್ನೊಮ್ಮೆ ನೋಡಬಹುದು.
2015-11-21 · FilmySphere critic
- Review of Octopus · 3/5
'ಅಕ್ಟೋಪಸ್' ಚಿತ್ರ ವಿಮರ್ಶೆ 'ಅಕ್ಟೋಪಸ್' ಜಸ್ಟ್ ಟೈಮ್ ಪಾಸ್ ವೈದ್ಯಲೋಕದ ಹೊಸ ಸಾಧ್ಯತೆಗಳನ್ನು ತೆರೆದಿಟ್ಟು ಬಡರೋಗಿಗಳಿಗೆ ಸಹಾಯಕವೆನಿಸುವ ಚಿತ್ರವಿದು ಎಂದು ಚಿತ್ರದ ಕುರಿತು ಪ್ರಚಾರಗೈಯುತ್ತಿರುವುದನ್ನು ಕಂಡರೆ ಅಚ್ಚರಿಯುಂಟಾಗುತ್ತದೆ. ಯಾಕೆಂದರೆ ಇದೊಂದು ಸಾಮಾನ್ಯ ಸೇಡಿನ ಕತೆ ಹೇಳುವ ಚಿತ್ರ. ನಾಯಕ ಕಿಶೋರ್ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗೆ ಟ್ಯಾಬ್ಲೆಟ್ ಕಂಡುಹಿಡಿಯುವ ವಿಜ್ಞಾನಿ. ಅವರು ಅದನ್ನು ಪತ್ತೆ ಹಚ್ಚಿದ ಮೇಲೆ ಮಾರುಕಟ್ಟೆಗೆ ತಲುಪಿಸಲು ಮಧ್ಯವರ್ತಿಯನ್ನು ಸಮೀಪಿಸುತ್ತಾರೆ. ಆದರೆ ಆತ ಅದನ್ನು ದೊಡ್ಡಮೊತ್ತ ನೀಡಿ ಕೊಂಡು ದಂಧೆ ನಡೆಸಲು ಯತ್ನಿಸುತ್ತಾನೆ. ಅದಕ್ಕೆ ಒಪ್ಪದೆ ವಾಪಾಸಾಗುತ್ತಾರೆ ವಿಜ್ಞಾನಿ. ಆದರೆ ಈತನನ್ನು ಮಣಿಸಲಿಕ್ಕಾಗಿ ಪತ್ನಿಯ ಕೊಲೆ ನಡೆಸಲಾಗುತ್ತದೆ. ಅದರ ಬಳಿಕ ತನ್ನ ಪತ್ನಿಯನ್ನು ಕೊಂದಾತನ ವಿರುದ್ಧ ಸೇಡಿಗೆ ಮುಂದಾಗುತ್ತಾರೆ. ಹಾಗೆ ತನ್ನವರನೆಸಿಕೊಂಡವರನ್ನು ಕೊಲೆಗೈದವರ ವಿರುದ್ಧ ತನ್ನ ವೈಜ್ಞಾನಿಕ ಬುದ್ಧಿಯನ್ನು ಬಳಸಿಕೊಂಡು ಚಾಣಾಕ್ಷವಾಗಿ ಸೇಡು ತೀರಿಸುವುದೇ ಅಕ್ಟೋಪಸ್. ಚಿತ್ರದಲ್ಲಿ ನಾಯಕ ಕಿಶೋರ್ ನಿಂದ ಇನ್ನಷ್ಟು ಅಭಿನಯವನ್ನು ಬಳಸಿಕೊಳ್ಳಬಹುದಿತ್ತು. ಆತನ ಒಂಟಿ ಮನೆಗೆ ಗೆಳತಿಯಾಗಿ ಪ್ರವೇಶಿಸುವ ಅಶ್ವಿನಿಯ ಲವಲವಿಕೆಯ ಪಾತ್ರ ಪೇಲವವೆನಿಸಿದೆ. ಪತ್ನಿಯಾಗಿ ನಟಿಸಿದ ಯಜ್ಞಾಶೆಟ್ಟಿ ಆಕರ್ಷಕವೆನಿಸುತ್ತಾರೆ. ಖಳ ಲಾಯರಾಗಿ ಶರತ್ ಲೋಹಿತಾಶ್ವ ಪಾತ್ರಕ್ಕೆ ಜೀವತುಂಬಿದ್ದಾರೆ. ಆತನ ಪತ್ನಿಯಾಗಿ ಮೂರೇ ದೃಶ್ಯದಲ್ಲಿ ಬಂದರೂ ಕೊನೆಯಲ್ಲಿ ಪ್ರಧಾನ ಭೂಮಿಕೆಗೆ ಸೇರುತ್ತಾರೆ. ಮಧ್ಯವರ್ತಿಯಾಗಿ ಜೈಜಗದೀಶ್ ಸರಳ ಸೈಲೆಂಟ್ ಕಿಲ್ಲರ್. ವೈದ್ಯಲೋಕವನ್ನು ತನ್ನ ಅಕ್ಟೋಪಸ್ ಬಾಹುಗಳಲ್ಲಿ ಹಿಡಿದಿಟ್ಟುಕೊಂಡು ಬಡ ರೋಗಿಗಳನ್ನು ಕಾಡುವ ಮಧ್ಯವರ್ತಿಗಳ ಬಗ್ಗೆ ಕತೆ ಶುರುಮಾಡುವ ನಿರ್ದೇಶಕ ಅಣ್ಣಯ್ಯ ಮಧ್ಯಂತರದ ಬಳಿಕ ಹೇಳುವುದೆಲ್ಲ ಆ ಮಧ್ಯವರ್ತಿಗಳ ವಿರುದ್ಧ ಹೋರಾಡುವ ಕಿಶೋರ್ ನ ಅಕ್ಟೋಪಸ್ ಚಾಣಾಕ್ಷತೆಯ ಬಗ್ಗೆ. ಒಂದು ಕಡೆ ನಿಶ್ಯಬ್ಧ ಚಿತ್ರವನ್ನು ಕೂಡ ನೆನಪಿಸುವ ಈ ಕತೆಯನ್ನು ಇನ್ನಷ್ಟು ಹಿಡಿತಕ್ಕೊಳಪಡಿಸಿ ನಿರ್ದೇಶಿಸಿದ್ದರೆ ಕನ್ನಡದ ಮಟ್ಟಿಗೆ ಖಂಡಿತಾ ವಿಭಿನ್ನವೆನಿಸುವ ಯಶಸ್ವಿ ಚಿತ್ರವಾಗಿರುತ್ತಿತ್ತು ಎಂಬುದರಲ್ಲಿ ಸಂದೇಹವಿಲ್ಲ.
2015-11-20 · FilmySphere critic
- Review of Ram-Leela · 3.5/5
ರಾಮ್ ಲೀಲ ಚಿತ್ರ ವಿಮರ್ಶೆ ಆ್ಯಕ್ಷನ್, ಕಾಮಿಡಿಗಳೊಂದಿಗೆ ರಾಮನ ಪ್ರೇಮಲೀಲ ರಾಮ್ ಲೀಲ ತೆಲುಗಿನ ಲೌಕ್ಯಂ ಚಿತ್ರದ ರಿಮೇಕ್. ಆದರೆ ಮೂಲ ಚಿತ್ರಕ್ಕೆ ಸಾಟಿಯಾಗುವ ರೀತಿಯಲ್ಲಿಯೇ ಕನ್ನಡಕ್ಕೆ ತರಲಾಗಿದೆ ಎಂಬುದು ಸಮಾಧಾನಕರ ವಿಚಾರ. ಚಿತ್ರದಲ್ಲಿ ನಾಯಕ ರಾಮ್ ತನ್ನ ಸ್ನೇಹಿತನಿಗಾಗಿ ಡಾನ್ ಒಬ್ಬನ ಮನೆಗೆ ನುಗ್ಗಿ ಆತನ ತಂಗಿಯನ್ನೇ ಅಪಹರಿಸಿ ತಂದು ಮದುವೆ ಮಾಡಿಸುತ್ತಾನೆ. ತಂಗಿಯನ್ನು ಅಪಹರಿಸಿದ ತನಗಾಗಿ ಹುಡುಕಾಡುತ್ತಿರುವ ಡಾನ್ ನ ಕಣ್ಣು ತಪ್ಪಿಸಿಕೊಂಡು ಓಡಾಡುತ್ತಿರುವಾಗಲೇ ತಾನು ಕೂಡ ಒಂದು ಹುಡುಗಿಯ ಪ್ರೀತಿಯಲ್ಲಿ ಬೀಳುತ್ತಾನೆ. ಆದರೆ ಅದು ಡಾನ್ ನ ಮತ್ತೊಬ್ಬಳು ತಂಗಿ ಎಂಬ ಸತ್ಯ ಬಳಿಕ ಗೊತ್ತಾಗುತ್ತದೆ. ಡಾನ್ ತನ್ನ ದೊಡ್ಡ ತಂಗಿಗೆ ಫಿಕ್ಸಾದ ಹುಡುಗನನ್ನು ಚಿಕ್ಕ ತಂಗಿಗೆ ವಿವಾಹ ಮಾಡಿಸುವ ಯೋಜನೆ ಹಾಕಿರುತ್ತಾನೆ. ಆದರೆ ಅದೆಲ್ಲವನ್ನೂ ದಾಟಿ ಡಾನ್ ನ ಚಿಕ್ಕ ತಂಗಿಯನ್ನು ಸ್ವತಃ ರಾಮ್ ಹೇಗೆ ಹಿಡಿಯುತ್ತಾನೆ? ಅದಕ್ಕಾಗಿ ರಾಮ್ ಮಾಡುವ ಉಪಾಯಗಳೇನು ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ನಾಯಕ ರಾಮ್ ಆಗಿ ಚಿರಂಜೀವಿ ಸರ್ಜಾ ಲವಲವಿಕೆಯಿಂದ ನಟಿಸಿದ್ದಾರೆ. ಡಾನ್ ನ ಚಿಕ್ಕ ತಂಗಿಯಾಗಿ ನಟಿಸಿರುವ ಅಮೂಲ್ಯ ಕೂಡ ಗಮನ ಸೆಳೆಯುತ್ತಾರೆ. ಡಾನ್ ಆಗಿ ಶೋಭರಾಜ್ ಚಿತ್ರಕ್ಕೆ ಕಳೆ ನೀಡಿದ್ದಾರೆ. ಸಾಧುಕೋಕಿಲ ಚಿತ್ರದ ಜೀವಾಳ. ಚಿಕ್ಕ ಪಾತ್ರವಾದರೂ ಚಿಕ್ಕಣ್ಣ ಮತ್ತು ಊರ್ವಶಿ ನಗಿಸುವಲ್ಲಿ ಯಶಸ್ವಿಯಾಗುತ್ತಾರೆ. ನಾಯಕನ ತಂದೆಯಾಗಿ ರಂಗಾಯಣ ರಘು ಮತ್ತು ತಾಯಿಯಾಗಿ ತಳಸಿ ನಟಿಸಿದ್ದಾರೆ. ಸೀರಿಯಲ್ ನಾಯಕನ ಪಾತ್ರದಲ್ಲಿ ಕಾಣಿಸಿರುವ ರವಿಶಂಕರ್ ಗೌಡ ಮತ್ತು ಹಾಸ್ಯ ನಟಿಯಾಗಿ ಸಂಜನಾ ತಮ್ಮ ಹಿಂದಿನ ಪಾತ್ರಗಳ ಸ್ಥಾನವನ್ನು ಮರೆತು ಪಾತ್ರ ನಿರ್ವಹಿಸಿದ್ದಾರೆನ್ನಬಹುದು. ಸಂಭಾಷಣೆಗಳು ಆಕರ್ಷಕವಾಗಿದೆ. ಅಡ್ಡಾದಿಡ್ಡಿ ಮೈ ಬೆಳೆಸಿಕೊಂಡ ಚಿರಂಜೀವಿ ಸರ್ಜಾನನ್ನು ಅರ್ಜುನ್ ಸರ್ಜಾಗೆ ಹೋಲಿಸಿದವರ ಮುಂದೆ, ಆತನ ಸಮಕ್ಷಮದಲ್ಲೇ ದೊಡ್ಡಣ್ಣನಿಗೆ ಹೋಲಿಸಲಾಗುತ್ತದೆ. ಸಂಜಾನಗಳನ್ನು ಎಕ್ಸ್ ಪ್ರೆಶನ್ಸ್ ಇಲ್ಲದ ಗ್ಲಾಮರ್ ಡಾಲ್ ಎಂದು ಕರೆಸಲಾಗಿದೆ! ಚಿತ್ರದ ಸಂಗೀತ ಕೂಡ ಮೂಲ ಚಿತ್ರದ್ದೇ ಆದರೂ ಹುರುಪು ನೀಡುತ್ತದೆ. ಪೆದ್ದು ಖಳನಾಯಕ ಮತ್ತು ತುಂಟ ನಾಯಕನ ಕತೆ ಹೇಳುವ ಈ ಚಿತ್ರ ಒಂದು ಟಿಪಿಕಲ್ ತೆಲುಗು ಶೈಲಿಯಲ್ಲಿದ್ದರೂ ಕೂಡ ಕನ್ನಡದ ಮನೆಮಂದಿಗೆ ಹಬ್ಬದ ಸಂಭ್ರಮದಲ್ಲಿ ಚಿತ್ರಮಂದಿರಲದಲ್ಲಿ ನೋಡಿ ಖುಷಿ ಪಡಬಹುದಾದ ಚಿತ್ರವೆಂದು ಖಂಡಿತಾ ಹೇಳಬಹುದು.
2015-11-13 · FilmySphere critic
- Review of Mumtaz · 2.5/5
'ಮುಮ್ತಾಜ್' ಚಿತ್ರ ವಿಮರ್ಶೆ 'ಮುಮ್ತಾಜ್' ಚಿತ್ರದಲ್ಲಿ ತಾಜಾತನವೇ ಇಲ್ಲ ಒಳ್ಳೆಯದೊಂದು ಪ್ರೇಮಕತೆಯ ಎಳೆಯನ್ನು ಹೇಗೆ ಎಳೆದೆಳೆದು ಹಾಳು ಮಾಡಬಹುದೆಂಬುದನ್ನು ತಿಳಿಯಲು ಮುಮ್ತಾಜ್ ಚಿತ್ರ ನೋಡಬಹುದು. ರಂಜಿತ್ ಮತ್ತು ಅಂಜಲಿ ಯುಕೆಜಿ ಮಕ್ಕಳಾಗಿದ್ದಾಗ ನಾಟಕವೊಂದರಲ್ಲಿ ಶಹಜಹಾನ್ ಮತ್ತು ಮುಮ್ತಾಜ್ ಪಾತ್ರಗಳನ್ನು ನಿರ್ವಹಿಸಿರುತ್ತಾರೆ. ಪಾತ್ರ ಮುಗಿದೊಡನೆ ಮುಮ್ತಾಜ್ ಪಾತ್ರ ಮಾಡಿದ್ದ ಹುಡುಗಿಯನ್ನು ಆಕೆಯ ತಾಯಿ ಕರೆದೊಯ್ಯುತ್ತಾರೆ. ಆದರೆ ಹುಡುಗನ ಮನದಲ್ಲಿ ಆ ಪ್ರೇಮ ಸಂಭಾಷಣೆ ಅಚ್ಚೊತ್ತಿ ನಿಲ್ಲುತ್ತದೆ. ವರ್ಷಗಳ ಬಳಿಕ ಕಾಲೇಜ್ ನಲ್ಲಿ ಮತ್ತೆ ಸಿಕ್ಕಾಗ ಹುಡುಗನ ಮನದಲ್ಲಿನ ಪ್ರೇಮಕ್ಕೆ ಮತ್ತೆ ಜೀವ ಬರುತ್ತದೆ. ಅದನ್ನು ಅಂಜಲಿಗೆ ನೇರವಾಗಿ ತಿಳಿಸಲು ಅಂಜಿಕೆ ಮೂಡಿ ಅನಾಮಧೇಯವಾಗಿ ಪತ್ರ ಬರೆಯುತ್ತಾನೆ. ಆಕೆಗೂ ರಂಜಿತ್ ನಲ್ಲಿ ಪ್ರೇಮವಾದರೂ ಆತನೂ ತನ್ನನ್ನೇ ಪ್ರೀತಿಸುತ್ತಿದ್ದಾನೆ ಎಂಬ ಬಗ್ಗೆ ಸಾಕ್ಷಿ ಸಿಗುವ ವೇಳೆಗೆ ಸಮಯ ದಾಟಿ ಹೋಗಿರುತ್ತದೆ. ಇಡೀ ಚಿತ್ರದಲ್ಲಿ ರಂಜಿತ್ ಮತ್ತು ಅಂಜಲಿ ಎಂಬ ಎರಡು ಪಾತ್ರಗಳಷ್ಟೇ ಪ್ರಮುಖ. ರಂಜಿತ್ ಆಗಿ ಕೀರ್ತಿರಾಜ್ ಪಾತ್ರಕ್ಕೆ ತಕ್ಕ ನಟನೆ ನೀಡಿದ್ದಾರೆ. ನಾಯಕಿಯಾಗಿ ಶರ್ಮಿಳಾ ಮಾಂಡ್ರೆ ಜಸ್ಟ್ ಪಾಸ್ ಅಂಕ ಗಳಿಸುತ್ತಾರೆ. ಇವರಿಬ್ಬರ ಪ್ರೀತಿ ಆರಂಭದಲ್ಲೇ ಒಂದಾಗದಂತೆ ತಡೆಯುವ ಸನ್ನಿವೇಶಗಳನ್ನು ಸೃಷ್ಠಿಸಿರುವ ಕತೆಗಾರ ತಮ್ಮ ಬುದ್ಧಿವಂತಿಕೆ ತೋರಿಸಿದ್ದಾರೆ. ಆದರೆ ಪದೇ ಪದೇ ಒಂದಾಗುವ ಅವಕಾಶದಿಂದ ವಂಚಿತರಾಗುವುದು ಅರ್ಥಹೀನವೆನಿಸುತ್ತದೆ. ಚಿತ್ರಕತೆಯ ಮೂಲಕ ನಾಯಕ ನಾಯಕಿಯ ಪಾತ್ರಗಳನ್ನು ವಿಪರೀತವಾಗಿ ಎಳೆದಾಡಲಾಗಿದೆ. ಜೊತೆಗೆ ಅವರ ನೋವಿನ ಸಂದರ್ಭಗಳುದ್ಧಕ್ಕೂ ಹಿನ್ನೆಲೆ ಸಂಗೀತ ಕರ್ಕಶವಾಗಿ ಕೊರೆಯುತ್ತದೆ. ಹಾಡುಗಳು ಮನಸೆಳೆಯುವುದಿಲ್ಲ. ಸಂಭಾಷಣೆಗಳು ಲಾಜಿಕ್ ರಹಿತವಾದರೂ ತಕ್ಕ ಮಟ್ಟಿಗೆ ಆಕರ್ಷಕ. ಪಾತ್ರಗಳು ಮೊಬೈಲ್ ಬಳಸದೆ, ಪತ್ರಗಳ ಮೂಲಕ, ಲ್ಯಾಂಡ್ ಲೈನ್ ಫೋನ್ ಗಳಲ್ಲಿ ಪ್ರೇಮ ಸಂಭಾಷಣೆ ನಡೆಸುವುದನ್ನು ಕಂಡಾಗ ಇದು ಯಾವ ಕಾಲಘಟ್ಟದ ಕತೆ ಎಂಬ ಬಗ್ಗೆ ಸಂದೇಹ ಮೂಡುತ್ತದೆ. ದರ್ಶನ್ ಗೆಸ್ಟ್ ರೋಲಲ್ಲಿ ಬಂದು ಫೈಟ್ ಜೊತೆಗೆ ಪಂಚ್ ಡೈಲಾಗ್ ಕೂಡ ಹೊಡೆಯುತ್ತಾರೆ. ಅವರ ಸಂಭಾಷಣೆ ಅಥವಾ ಆಗಮನದಿಂದ ನಾಯಕ ನಾಯಕಿ ಪಾತ್ರಗಳು ಸುಖಾಂತ್ಯ ಕಾಣುವಂತಾಗಿದ್ದರೆ ಇನ್ನಷ್ಟು ತೂಕವಿರುತ್ತಿತ್ತೆಂದು ಅಭಿಮಾನಿ ಮನಸ್ಸುಗಳು ಆಗ್ರಹಿಸುತ್ತದೆ.
2015-10-31 · FilmySphere critic
- Review of Vascodigama · 3.5/5
ವಾಸ್ಕೋಡಿಗಾಮ ಚಿತ್ರ ವಿಮರ್ಶೆ ವಾಸ್ಕೋಡಿಗಾಮ:ವಾಸು ಪ್ರಕಾರ ಶಿಕ್ಷಣ ವ್ಯವಸ್ಥೆ ಅದು ಒಂದು ಕನಸಿನ ಕಾಲೇಜು. ಅದನ್ನು ಸ್ಥಾಪನೆ ಮಾಡಿರುವವರು ವಿದೇಶದಲ್ಲಿದ್ದಾರೆ. ಅವರು ಸ್ಥಾಪಿಸಿದಾಗ ಇದ್ದ ಹೆಸರು ಈಗ ಕಾಲೇಜಿಗಿಲ್ಲ. ವಿದ್ಯಾ ಸಂಸ್ಥೆ ಕುಲಗೆಟ್ಟು ಹೋಗಿದ್ದರೂ ದೊಡ್ಡ ಹೆಸರು ಪಡೆದಿದೆ ಎಂಬಂತೆ ಸುಳ್ಳುಸುಳ್ಳಾಗಿ ಚಿತ್ರೀಕರಣ ನಡೆಸಿ ಅದರ ಸಂಸ್ಥಾಪಕರಿಗೆ ಸೀಡಿ ಕ್ಯಾಸೆಟ್ ಕಳಿಸಿರುತ್ತಾರೆ. ಆದರೆ ಒಮ್ಮೆ ಅನಿರೀಕ್ಷಿತವಾಗಿ ವಾಪಾಸಾದಾಗ ಕಾಲೇಜಲ್ಲಿ ನಡೆಯುವ ಅನಾಹುತಗಳ ಸಂಪೂರ್ಣ ದರ್ಶನವಾಗುತ್ತದೆ. ತಕ್ಷಣವೇ ಪ್ರಾಂಶುಪಾಲರನ್ನೇ ಅಮಾನತು ಮಾಡಿ ಕಾಲೇಜು ಮುಚ್ಚಲು ಮುಂದಾಗುತ್ತಾರೆ ಅವರು. ಆದರೆ ಮುಚ್ಚುವ ಮೊದಲು ತಮಗೆ ಒಂದು ವರ್ಷದ ಅವಕಾಶ ನೀಡಿದಲ್ಲಿ ಮತ್ತೆ ಕಾಲೇಜಿಗೆ ಉತ್ತಮ ಹೆಸರು ತಂದು ಕೊಡುವ ಭರವಸೆ ಕೊಡುತ್ತಾಳೆ ಶಾಂತಿ ಎಂಬ ಉಪನ್ಯಾಸಕಿ. ಆಕೆಯನ್ನೇ ಪ್ರಾಂಶುಪಾಲೆಯನ್ನಾಗಿಸಿ ಒಂದು ವರ್ಷದ ಅಂತ್ಯಕ್ಕೆ ಕಾಯುತ್ತಾರೆ ಸಂಸ್ಥಾಪಕರು. ಇಲ್ಲಿನ ಮಕ್ಕಳ ಕುಡಿತ, ಸಿಗರೇಟು, ಇಸ್ಪೀಟುಗಳಿಗೆ ಸಾಥ್ ನೀಡಿ ಅವರನ್ನು ತನ್ನೆಡೆಗೆ ಸೆಳೆದುಕೊಂಡ ಉಪನ್ಯಾಸಕನೇ ವಾಸು ಎಂಬ ವಾಸ್ಕೋಡಿಗಾಮ. ಶಾಂತಿ ಕಾಲೇಜಿಗೆ ಬಂದ ಹೊಸದರಲ್ಲಿ ತನ್ನ ವಿದ್ಯಾರ್ಥಿ ಮಿತ್ರರ ಮೂಲಕ ತಾನು ಒಬ್ಬ ಶ್ರೇಷ್ಠ ಉಪನ್ಯಾಸಕ ಎಂಬ ಬಿಲ್ಡಪ್ ನೀಡಿರುತ್ತಾನೆ. ಆಗ ಆತನಿಗೆ ಮನಸೋತಿದ್ದ ಶಾಂತಿ ಸತ್ಯ ತಿಳಿದಾಗ ಆತನ ಬಗ್ಗೆ ಅಶಾಂತಿಗೊಳ್ಳುತ್ತಾಳೆ. ಶಾಂತಿ ಪ್ರಾಂಶುಪಾಲೆಯಾದ ಮೇಲೆ ವಾಸ್ಕೋಡಿಗಾಮನ ಸ್ಥಿತಿಯೇನಾಗುತ್ತದೆ? ಚಿತ್ರದ ಆರಂಭದಲ್ಲೇ ವಾಸ್ಕೋಡಿಗಾಮ ಕಾಲೇಜು ವಿದ್ಯಾರ್ಥಿಗಳನ್ನು ಅಪಹರಿಸಿದ್ದಾಗಿ ಹರಡುವ ಸುದ್ದಿಗೆ ಕಾರಣವೇನು ಎಂಬುದಕ್ಕೆ ಉತ್ತರ ಬೇಕಾದರೆ ಚಿತ್ರ ನೋಡಬಹುದು. ಚಿತ್ರದಲ್ಲಿ ವಾಸ್ಕೋಡಿಗಾಮ ಯಾನೇ ವಾಸುವಾಗಿ ಕಿಶೋರ್ ವಿಭಿನ್ನವಾಗಿ ಕಾಣಿಸಿದ್ದಾರೆ. ಶಾಂತಿಯಾಗಿ ಪಾರ್ವತಿ ನಾಯರ್ ಭರವಸೆಯ ನಟಿಯೆನಿಸುತ್ತಾರೆ. ಹೆಚ್ಚಿನ ದೃಶ್ಯ ಮತ್ತು ಸಂಭಾಷಣೆಗಳು ಸಹಜತೆಯೊಂದಿಗೆ ನಗುವನ್ನು ಸೃಷ್ಠಿಸುತ್ತವೆ. ಛಾಯಾಗ್ರಹಣ ಆಕರ್ಷಕವಾಗಿದೆ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಯಾಗಬೇಕಿರುವುದನ್ನು ಮತ್ತು ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರವನ್ನೇ ಆಯ್ದುಕೊಳ್ಳಬೇಕೆಂಬ ಸಂದೇಶವನ್ನು ಚಿತ್ರ ನೀಡುತ್ತದೆ. ಚಿತ್ರದಲ್ಲಿ ವಿದ್ಯಾರ್ಥಿಗಳನ್ನು ವಾಸ್ಕೋಡಿಗಾಮ ಅಪಹರಿಸುವ ವಿಚಾರ ಪರಿಣಾಮಕಾರಿಯಾಗಿ ತೆರೆಕಂಡಿಲ್ಲ ಎಂಬುದೇ ಒಟ್ಟು ಚಿತ್ರದ ಪ್ರಮುಖ ನೆಗೆಟಿವ್ ಅಂಶವೆನ್ನಬಹುದು. ಉಳಿದಂತೆ ಇದೊಂದು ಭಿನ್ನ ಪ್ರಯೋಗದ ಚಿತ್ರವೆಂಬುದರಲ್ಲಿ ಎರಡು ಮಾತಿಲ್ಲ.
2015-10-24 · FilmySphere critic
- Review of Ganga · 2.5/5
ಗಂಗಾ ಚಿತ್ರ ವಿಮರ್ಶೆ ಕುಟುಂಬ ಪಾಲಕಿ, ರಕ್ಷಕಿ ಈ ರಿಕ್ಷಾ ಚಾಲಕಿ ಪಾತ್ರ ಪೊಲೀಸ್ ಅಧಿಕಾರಿಯದ್ದಾದರೂ ಕೌಟುಂಬಿಕ ಚಿತ್ರದಲ್ಲೇ ಕಾಣಿಸಿಕೊಳ್ಳುತ್ತಿದ್ದ ಮಾಲಾಶ್ರೀ ಈ ಬಾರಿ ಆಟೋರಾಣಿಯಾಗಿದ್ದಾರೆ. ಇಲ್ಲಿ ಸಮಾಜ ಸೇವೆಗಿಂತಲೂ ಕುಟುಂಬಕ್ಕಾಗಿ ಹೋರಾಡುವ ಹೆಣ್ಣುಮಗಳ ಪಾತ್ರವನ್ನೇ ನಿರ್ವಹಿಸಿದ್ದಾರೆ. ಸ್ನೇಹಿತರಿಗೆ ಪರಿಚಿತರಿಗೆ ಸದಾ ಸಹಾಯಹಸ್ತವನ್ನು ಚಾಚುವ ಗಂಗಾಳ ಮನೆಯಲ್ಲಿ ಆಕೆಯ ಅಕ್ಕ ಮತ್ತು ಕಾಲೇಜು ಓದುತ್ತಿರುವ ಅಕ್ಕನ ಮಕ್ಕಳು ಮಾತ್ರವೇ ಇರುತ್ತಾರೆ. ಮಕ್ಕಳ ಓದು ಮತ್ತು ಮನೆಯ ಜವಾಬ್ದಾರಿಯನ್ನು ವಹಿಸಿಕೊಂಡು ಗಂಗಾ ರಿಕ್ಷಾ ಚಾಲಕಿಯಾಗಿ ದುಡಿಯುತ್ತಿರುತ್ತಾಳೆ. ದೇವಸ್ಥಾನದ ಪಕ್ಕದಲ್ಲೇ ಇರುವ ಎಂಎಲ್ ಎ ಕ್ಯಾಂಡಿಡೇಟ್ ಒಬ್ಬನ ಬಾರ್ ಅ್ಯಂಡ್ ರೆಸ್ಟೋರೆಂಟನ್ನು ಅಲ್ಲಿಂದ ಶಿಫ್ಟ್ ಮಾಡಿಸುವಲ್ಲಿ ಗಂಗಾ ಪ್ರಮುಖ ಪಾತ್ರವಹಿಸುತ್ತಾಳೆ. ಆತ ತನ್ನ ಸೇಡು ಸಾಧಿಸಲು ಸಮಯ ನೋಡುತ್ತಿರುತ್ತಾನೆ. ಇದೇ ವೇಳೆ ಎಂಬಿಬಿಎಸ್ ವಿದ್ಯಾರ್ಥಿಯಾದ ಗಂಗಾಳ ಅಕ್ಕನ ಮಗ ಹೆಚ್ಚಿನ ಮಾರ್ಕ್ಸ್ ಗಳಿಸಿ ಸುದ್ದಿಯಾಗುತ್ತಾನೆ. ಆತನನ್ನು ತನ್ನ ಮಗಳಿಗೆ ವರನಾಗಿಸಲು ಬಯಸಿ ವಿದೇಶದಿಂದ ಅಶೋಕ್ ಬಹದ್ದೂರ್ ಎಂಬಾತ ಬರುತ್ತಾನೆ. ಸ್ಲಂ ಏರಿಯಾದಲ್ಲಿದ್ದ ಗಂಗಾಳ ಕುಟುಂಬವನ್ನು ನಗರದ ತನ್ನ ಗೆಸ್ಟ್ ಹೌಸ್ ಗೆ ಕರೆದೊಯ್ಯುತ್ತಾನೆ. ಆದರೆ ಗಂಗಾ ಆತನ ಜೊತೆಗೆ ಹೋಗುವುದನ್ನು ನಿರಾಕರಿಸುತ್ತಾಳೆ. ಅಶೋಕ್ ಬಹದ್ದೂರ್ ನ ಹಿನ್ನೆಲೆಯೇನು? ಅಲ್ಲಿಗೆ ಹೋದ ಗಂಗಾಳ ಫ್ಯಾಮಿಲಿ ಎದುರಿಸುವ ಕಷ್ಟಗಳೇನು? ಇತರರ ಕಷ್ಟಗಳಿಗಾಗಿ ಹೋರಾಡಿದ ಗಂಗಾಳ ಆರೋಗ್ಯದಲ್ಲಿರುವ ಕಷ್ಟವೇನು? ಮದುವೆಯ ವಯಸ್ಸು ದಾಟಿದರೂ ಗಂಗಾ ತನ್ನ ಅಕ್ಕ ಮತ್ತು ಮಕ್ಕಳ ಸೇವೆಯಲ್ಲಷ್ಟೇ ನಿರತಳಾಗಿದ್ದೇಕೆ? ಮೊದಲಾದ ಪ್ರಶ್ನೆಗಳಿಗೆ ಚಿತ್ರ ಉತ್ತರ ನೀಡುತ್ತದೆ. ಚಿತ್ರದಲ್ಲಿ ಮಾಲಾಶ್ರೀ ಎಂದಿನ ಲವಲವಿಕೆಯ ನಟನೆ ನೀಡಿದ್ದಾರೆ. ಫ್ಲ್ಯಾಶ್ ಬ್ಯಾಕ್ ಕತೆಯ ಮದುವಣಗಿತ್ತಿಯಾಗಿ ಮಾತ್ರ ಆಕೆಯನ್ನು ಒಪ್ಪುವುದು ಕಷ್ಟವಾಗುತ್ತದೆ. ಗಂಗಾಳ ಅಕ್ಕ ಯಮುನಾ ಪಾತ್ರದಲ್ಲಿ ಪವಿತ್ರಾ ಲೋಕೇಶ್ ಮತ್ತು ಆಕೆಯ ಪತಿಯಾಗಿ ಆಫ್ ಸ್ಕ್ರೀನ್ ಜೋಡಿ ಸುಚೇಂದ್ರ ಪ್ರಸಾದ್ ನಟಿಸಿದ್ದಾರೆ. ಬುಲೆಟ್ ಪ್ರಕಾಶ್ ಮತ್ತು ಸಾಧು ಕೋಕಿಲ ಹಾಸ್ಯವನ್ನು ಬೇರೆಯೇ ಟ್ರ್ಯಾಕ್ ನಲ್ಲಿ ಸೇರಿಸಿಕೊಳ್ಳಲಾಗಿದೆ. ಕೋಳಿಸ್ವಾಮಿಯಾಗಿ ರಂಗಾಯಣ ರಘು ನಟಿಸಿದ್ದಾರೆ. ಎಂಎಲ್ ಎ ಅಭ್ಯರ್ಥಿಯಾಗಿ ಶರತ್ ಲೋಹಿತಾಶ್ವ ನಟಿಸಿದ್ದು ಅಶೋಕ್ ಬಹದ್ದೂರ್ ಪಾತ್ರದಲ್ಲಿ ಮುಖ್ಯಮಂತ್ರಿ ಚಂದ್ರು ತಮ್ಮ ಹಳೆಯ ಖಳನ ಚಾರ್ಮ್ ಉಳಿಸಿಕೊಂಡಿರುವುದನ್ನು ರುಜುವಾತು ಪಡಿಸಿದ್ದಾರೆ. ಗಂಗಾಳ ಅತ್ತೆಯ ಪಾತ್ರದಲ್ಲಿರುವ ಹೇಮಾ ಚೌಧರಿ ನಟನೆಯೊಂದಿಗೆ ತಮ್ಮ ಸೊಬಗಿನಲ್ಲಿಯೂ ಗಮನ ಸೆಳೆಯುವುದು ವಿಶೇಷ. ಒಟ್ಟು ಚಿತ್ರಕತೆ ನೋಡಿದರೆ ಟಿಪಿಕಲ್ ಅಳುಮುಂಜಿ ನಾಯಕಿಯ ಹಳೆಯ ಕತೆ. ಆದರೆ ಮಾಲಾಶ್ರೀಗಾಗಿ ಚಿತ್ರದಲ್ಲಿ ಫೈಟುಗಳನ್ನು ತುರುಕಲಾಗಿದೆ ಎಂಬುದಷ್ಟೇ ಭಿನ್ನತೆ. ಛಾಯಾಗ್ರಹಣ ಮತ್ತು ಸಂಭಾಷಣೆ ಆಕರ್ಷಕ. ಆದರೆ ಅಷ್ಟಕ್ಕೆ ಮಾತ್ರ ದೀರ್ಘಾವಧಿಯ ಈ ಚಿತ್ರವನ್ನು ನೋಡುತ್ತಾ ಕೂರುವುದು ನಿರರ್ಥಕ.
2015-10-23 · FilmySphere critic
- Review of Ring Road · 2/5
ರಿಂಗ್ ರೋಡ್ ಚಿತ್ರ ವಿಮರ್ಶೆ ರಿಂಗ್ ರೋಡ್ ಹುಡುಗಿಯ ರಾಂಗ್ ರೂಟ್ ಸಂಕಟ ಎಲ್ಲಾ ವಿಭಾಗದಲ್ಲಿಯೂ ಮಹಿಳೆಯರೇ ಕೆಲಸ ಮಾಡಿರುವ ಚಿತ್ರ ಎಂಬ ಕಾರಣಕ್ಕೆ ಸಾಕಷ್ಟು ಸುದ್ದಿ ಮಾಡಿದ್ದ ರಿಂಗ್ ರೋಡ್ ಬಿಡುಗಡೆಗೆ ಮುನ್ನ ಸುದ್ದಿಯಾಗಿದ್ದು ಅದರ ಕತೆಯ ಕುರಿತಾಗಿ. ಇದು ನೈಜ ಕತೆಯಲ್ಲ ಎಂದು ಹೇಳುತ್ತಲೇ ಬಂದರೂ ನೈಜ ಘಟನೆ ಮತ್ತು ಅದರ ಹಿನ್ನೆಲೆಗಳೊಂದಿಗೆ ಸಾಗುವ ಚಿತ್ರವೇ ರಿಂಗ್ ರೋಡ್. ಸುಮಾ ಕಾಲೇಜು ಹುಡುಗಿ. ಆಕೆ ಲಾಯರ್ ತಂದೆ ಮತ್ತು ಅಮ್ಮ ಅಜ್ಜಿಯರ ಮುದ್ದಿನ ಜೊತೆಗೆ ವಿಪರೀತ ಶಿಸ್ತಿನಲ್ಲಿ ಬೆಳೆದವಳು. ಮೈತುಂಬ ಮುಚ್ಚುವ ಬಟ್ಟೆಯನ್ನು ಬಿಟ್ಟು ಹೊರಗಡಿ ಇಡಲಾಗದ ಕಟ್ಟುನಿಟ್ಟು ಮನೆಯವರದು. ಆದರೆ ಅದನ್ನೇ ಒಪ್ಪಿಕೊಂಡವಳ ಮನದೊಳಗೆ ತುಂಡು ಬಟ್ಟೆಯಲ್ಲಿ ಕುಣಿಯುವ ಅದಮ್ಯ ಆಸೆ. ವಿದ್ಯಾರ್ಜನೆಯಲ್ಲಷ್ಟೇ ಗಮನ ಕೊಟ್ಟು ಕಾಲೇಜ್ ಗೆ ಟಾಪರಾಗುವ ಗುರಿಯಲ್ಲಿ ಯಾಂತ್ರಿಕ ಜಯ. ಆದರೆ ಮನದೊಳಗೆ ಸದಾ ತನ್ನ ಚೆಲುವಿನ ಬಗ್ಗೆ ಗುಣಗಾನ ನಡೆಸುವ ಹುಡುಗರದೇ ಧ್ಯಾನ. ಈ ದ್ವಂದ್ವದೊಳಗಿದ್ದಾಗಿಲೇ ಎದುರು ಮನೆ ಹುಡುಗನೊಂದಿಗೆ ನಿಶ್ಚಿತಾರ್ಥ. ಒಲ್ಲದ ಮದುವೆಯಿಂದ ಹೊರಬರಲು ಇನ್ನಿಲ್ಲದ ಪ್ರಯತ್ನಗಳಲ್ಲಿ ತೊಡಗುತ್ತಾಳೆ ಸುಮಾ. ತನ್ನನ್ನು ಪ್ರೀತಿಸುತ್ತಿದ್ದ ಜ್ಯೂನಿಯರ್ ವಿದ್ಯಾರ್ಥಿ ಕಿರಣ್ ನಲ್ಲಿ ತನ್ನನ್ನು ಈ ಮದುವೆಯಿಂದ ಪಾರಾಗಿಸಲು ಹೇಳುತ್ತಾಳೆ. ಆತ ಮತ್ತು ಸ್ನೇಹಿತರು ಸೇರಿ ಆ ಹುಡುಗನ ಕೊಲೆ ನಡೆಸುತ್ತಾರೆ. ಆದರೆ ನಿಜವಾಗಿಯೂ ಸುಮಾ ಮನದಲ್ಲಿ ಕಿರಣ್ ಜೊತೆ ಮದುವೆಯಾಗುವ ಯೋಜನೆಯಿತ್ತೇ? ಹಾಗಾದರೆ ಕಾಲೇಜ್ ನಲ್ಲಿ ಹೊಸದಾಗಿ ಬಂದ ಡಾನ್ಸ್ ಮಾಸ್ಟರ್ ಜೊತೆಗೆ ಮದುವೆಯ ಮಾತನಾಡಿದ್ದೇಕೆ? ಈ ಕೇಸ್ ವಿಚಾರಣೆ ಕೈಗೆತ್ತಿಕೊಂಡ ಪೊಲೀಸ್ ಅಧಿಕಾರಿ ಖಾನ್ ಸ್ವತಃ ತನ್ನ ಪತ್ನಿಗೆ ಡೈವೋರ್ಸ್ ನೀಡಬೇಕಾದ ಪರಿಸ್ಥಿತಿ ಉಂಟಾಗಿದ್ದೇಕೆ? ಮೊದಲಾದ ಪ್ರಶ್ನೆಗಳಿಗೆ ಚಿತ್ರತಂಡದವರು ಒಂದು ಅಂತ್ಯ ಹುಡುಕುವ ಯತ್ನ ಮಾಡಿದ್ದಾರೆ. ಅದೇನೆಂಬುದನ್ನು ಪರದೆಯ ಮೇಲೆ ನೋಡಬಹುದು. ವರ್ಷಗಳ ಹಿಂದೆ ಬೆಂಗಳೂರಿನ ರಿಂಗ್ ರೋಡ್ ನಲ್ಲಿ ನಡೆದ ಘಟನೆಯನ್ನು ಸ್ಪೂರ್ತಿಯಾಗಿರಿಸಿದ ಚಿತ್ರವಾಗಿರುವುದರಿಂದ ಕತೆಯ ಹೂರಣವೇನು ಎಂಬುದು ಎಲ್ಲರಿಗೂ ತಿಳಿದರುವ ವಿಚಾರ. ಆದರೆ ಅದನ್ನೇ ಇಂಟರ್ ವೆಲ್ ತನಕ ಎಳೆದುಕೊಂಡು ಹೋಗಿರುವುದು ಇಂಟಲಿಜೆಂಟ್ ಅನಿಸುವುದಿಲ್ಲ. ಸುಮಳಾಗಿ ನಟಿಸಿರುವ ನವನಟಿ ಖುಷಿ ತನ್ನೊಳಗಿನ ಖುಷಿಯನ್ನು ಅಡಗಿಸುವ ಮತ್ತು ಹೊರಗಿಡುವ ಎರಡೂ ವೈವಿಧ್ಯತೆಗೆ ನ್ಯಾಯವೊದಗಿಸಿದ್ದಾರೆ. ಆಕೆಯ ದೇಹ ಪ್ರಕೃತಿಗೆ ಸಾಂಪ್ರಾದಾಯಿಕ ಮತ್ತು ಆಧುನಿಕದ ಎರಡೂ ರೀತಿಯ ವಸ್ತ್ರಶೈಲಿ ಹೊಂದಿಕೆಯಾಗುವುದು ಮತ್ತೊಂದು ಪಾಸಿಟಿವ್ ಅಂಶ. ಆದರೆ ಪದೇಪದೇ ಬರುವ ಅಂತರಂಗದ ಪಾತ್ರ ಮತ್ತು ಆಕೆಯೊಳಗಿನ ತುಮುಲದ ಚರ್ಚೆಗಳು ಪ್ರೇಕ್ಷಕರಿಗೆ ಕಿರಿಕಿರಿ ನೀಡುತ್ತವೆ. ಅವುಗಳನ್ನು ಇನ್ನಷ್ಟು ಸರಳವಾಗಿ ನಿರೂಪಿಸಬಹುದಿತ್ತು ಎನಿಸುವಂತೆ ಮಾಡುತ್ತದೆ. ಇದು ಬರೇ ಒಂದು ನೈಜ ಘಟನೆಯನ್ನಷ್ಟೇ ಆಧಾರವಾಗಿಟ್ಟುಕೊಂಡ ಚಿತ್ರವಲ್ಲ ಎಂಬುದನ್ನು ನಿರೂಪಿಸಲು ಖಾನ್ ಎಂಬ ಪೊಲೀಸ್ ಅಧಿಕಾರಿಯ ವೈಯಕ್ತಿಕ ಬದುಕನ್ನೂ ಕೂಡ ಚಿತ್ರದೊಳಗೆ ತುರುಕಲಾಗಿದೆ. ಖಾನ್ ದಂಪತಿಯಾಗಿ ದುನಿಯಾ ವಿಜಯ್ ಮತ್ತು ನಿಖಿತಾ ತುಕ್ರಾಲ್ ನಟಿಸಿದ್ದಾರೆ. ಆದರೆ ಚಿತ್ರದಲ್ಲಿರುವ ಯಾವುದೇ ಘಟನೆಗಳು ನಮಗೆ ವಿಶೇಷವೆನಿಸುವಂಥದ್ದಲ್ಲ ಮತ್ತು ಚಿತ್ರದಲ್ಲಿಯೂ ವಿಶೇಷ ಟ್ರೀಟ್ ಮೆಂಟ್ ನೀಡಲಾಗಿಲ್ಲವಾದ ಕಾರಣ ಸಹನೆಯನ್ನು ಪರೀಕ್ಷಿಸುತ್ತದೆ. ಇರುವುದರಲ್ಲಿ ಈ ಕತೆಯನ್ನು ಚಿತ್ರ ಮಾಡಲು ಯತ್ನಿಸುವ ನಿರ್ದೇಶಕಿ ಪ್ರಿಯಾ ಮತ್ತು ಕತೆಗಾರ್ತಿ ರೇಖಾರ ಪಾತ್ರದಲ್ಲಿ ನಟಿಸಿರುವ ಆರ್.ಜೆ ನೇತ್ರಾ ಮತ್ತು ನೀತು ನೈಜ ನಟನೆ ನೀಡಿದ್ದಾರೆ. ಸಂಭಾಷಣೆಗಳು ನೀರಸವೆನಿಸುತ್ತದೆ. ಗೀತನಾಟಕದಂತೆ ಪದೇ ಪದೇ ಬರುವ ಹಾಡಿನ ತುಣುಕುಗಳು ಮತ್ತು ವಾಣಿ ಹರಿಕೃಷ್ಣರ ಹಾಡುಗಳು ಚಿತ್ರಕ್ಕೆ ಅಗತ್ಯವಿರಲಿಲ್ಲ. ಆದರೆ ಹಿನ್ನೆಲೆ ಸಂಗೀತ ಕಲಾ ನಿರ್ದೇಶನ ಮತ್ತು ತಕ್ಕ ಮಟ್ಟಿಗೆ ಛಾಯಾಗ್ರಹಣವೂ ಚಿತ್ರಕ್ಕೆ ಒಳ್ಳೆಯ ಕಳೆ ನೀಡಿದೆ. ಒಟ್ಟಿನಲ್ಲಿ ಹೆಣ್ಣಿನ ಅದಮ್ಯ ಭಾವನೆಗಳಿಗೆ ತಾತ್ವಿಕ, ಸಾತ್ವಿಕ ಅಂತ್ಯ ನೀಡಲು ಯತ್ನಿಸಿರುವ ನಿರ್ದೇಶಕಿ ಪ್ರಿಯಾ ಬೆಳ್ಳಿಯಪ್ಪರ ಪ್ರಯತ್ನವನ್ನು ಶ್ಲಾಘನೀಯವೆನ್ನಬಹುದು. ಮಹಿಳೆಯರ ಬಗೆಗಿನ ಮೀಸಲಾತಿ ಧೋರಣೆಯನ್ನಿಟ್ಟುಕೊಂಡು ಹೇಳುವುದಾದರೆ ಖಂಡಿತಾ ಚಿತ್ರವನ್ನೊಮ್ಮೆ ನೋಡಬಹುದು.
2015-10-23 · FilmySphere critic
- Review of Plus · 3/5
ಪ್ಲಸ್ ಚಿತ್ರ ವಿಮರ್ಶೆ ಸ್ವಲ್ಪ ಮೈನಸ್ ಜೊತೆಗೆ ಹೆಚ್ಚು ಪ್ಲಸ್ ಕನ್ನಡದಲ್ಲೀಗ ಬರುತ್ತಿರುವುದು ದೆವ್ವದ ಚಿತ್ರಗಳು ಅಥವಾ ವ್ಯಕ್ತಿಯೊಬ್ಬ ಕಾನೂನು ಕೈಗೆತ್ತಿಕೊಂಡು ಅಪರಾಧಿಗಳೆನಿಸಿಕೊಂಡ ಒಂದಷ್ಟು ಮಂದಿಗೆ ಶಿಕ್ಷೆ ವಿಧಿಸುವ ಚಿತ್ರಗಳು. ಅವುಗಳಲ್ಲಿ ಎರಡನೆಯ ವಿಭಾಗಕ್ಕೆ ಸೇರಿದ ಪ್ಲಸ್ ನಲ್ಲಿ ಅನಂತನಾಗ್ ಮತ್ತೊಮ್ಮೆ ಆಟಗಾರನಾಗಿದ್ದಾರೆ. ಚಿತ್ರದಲ್ಲಿ ಅನಂತನಾಗ್ ಶ್ರೀಮಂತ ಶಾಸ್ತ್ರಜ್ಞ. ಜೊತೆಗೆ ಸಮಾಜ ಸೇವಕನೂ ಹೌದು. ಒಬ್ಬ ಲಾಯರ್ ಮತ್ತೋರ್ವ ಡಾಕ್ಟರ್ ಸೇರಿದಂತೆ ದಶಕಗಳಿಂದ ಆತನಿಗೆ ಆತ್ಮೀಯರಾಗಿರುವ ನಾಲ್ಕು ಜನ ಸ್ನೇಹಿತರಿರುತ್ತಾರೆ. ಒಂದು ಬಾರಿ ಅನಂತನಾಗ್ ಮೇಲೆ ಮಾರಣಾಂತಿಕ ಹಲ್ಲೆ ನಡೆಯುತ್ತದೆ. ಅದರ ಬಳಿಕ ಈ ಮೂರು ಮಂದಿ ಸ್ನೇಹಿತರು ಕೂಡ ಕೊಲೆಯಾಗುತ್ತಾರೆ. ಈ ಕೊಲೆಗಳನ್ನು ಅನಂತನಾಗ್ ಸ್ವತಃ ತನ್ನ ಮಗ ಮತ್ತು ದತ್ತು ಪುತ್ರನಿಂದ ಮಾಡಿಸಿರುತ್ತಾರೆ ಎಂಬುದು ವಿಶೇಷ. ಆದರೆ ಅದಕ್ಕೆ ಬಲವಾದ ಕಾರಣವೊಂದು ಫ್ಲ್ಯಾಶ್ ಬ್ಯಾಕ್ ನಲ್ಲಿದೆ. ಅದರಲ್ಲಿ ಲಾಯರ್ ,ಡಾಕ್ಟರ್ ಜೊತೆಗೆ ಇಬ್ಬರು ಸೇರಿ ಮಾಡಿದ ಅಪರಾಧವೇನೆಂಬುದನ್ನು ತೋರಿಸಲಾಗುತ್ತದೆ. ಅದರ ಜೊತೆಗೆ ಅನಂತನಾಗ್, ರವಿಶಂಕರ್ ಮೊದಲಾದವರು ಪೂರ್ವ ಜನ್ಮದಲ್ಲಿ ಯಾವ ಲೋಕದಲ್ಲಿ ಏನಾಗಿರುತ್ತಾರೆ ಎಂಬುದನ್ನು ಕೂಡ ತೋರಿಸಲಾಗುತ್ತದೆ! ಅವೆಲ್ಲವುಗಳ ಸ್ವಾರಸ್ಯ ನೋಡಬೇಕಾದರೆ ಚಿತ್ರಮಂದಿರದತ್ತ ಹೋಗಬಹುದು. ಚಿತ್ರದ ಆರಂಭ ಆಸಕ್ತಿಕರವಲ್ಲ. ಆದರೆ ಕತೆಯಲ್ಲಿನ ತಿರುವು ಮತ್ತು ತಮಾಷೆಗಳು ಅಂತ್ಯವನ್ನು ಕುತೂಹಲ ಭರಿತವೆನಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಅನಂತನಾಗ್ ಎಂದಿನಂತೆ ಮತ್ತೊಮ್ಮೆ ಮನಸೆಳೆಯುವ ನಟನೆಯೊಂದಿಗೆ ಗ್ಲಾಮರ್ ಫುಲ್ಲಾಗಿಯೂ ಕಾಣಿಸಿದ್ದಾರೆನ್ನುವುದು ವಿಶೇಷ. ಆತನ ಹಿತಶತ್ರುಗಳಾಗಿ ಕರಿಸುಬ್ಬು ಆಕರ್ಷಕ ನಟನೆ ನೀಡಿದ್ದಾರೆ. ಮುಖ್ಯ ಖಳ ರಂಕಾಸುರನ ಅಬ್ಬರಕ್ಕೆ ರವಿಶಂಕರ್ ತಕ್ಕ ನ್ಯಾಯವೊದಗಿಸಿದ್ದಾರೆ. ಫ್ಲ್ಯಾಶ್ ಬ್ಯಾಕ್ ಕತೆಯಲ್ಲಿ ವಿಗ್ ಧರಿಸಿರುವ ಬಿ.ಸುರೇಶ್ ನಿಜಕ್ಕೂ ಯುವಕರೇನೋ ಎಂಬಂತೆ ಕಾಣಿಸುತ್ತಾರೆ. ಬಾಡಿ ಬಿಲ್ಡರ್ ಚೇತನ್ ಚಂದ್ರನಿಗಿಂತ ನವನಟ ರಿತೇಶ್ ನಟನೆ ಹೆಚ್ಚು ಗಮನ ಸೆಳೆಯುತ್ತದೆ. ನಾಯಕಿ ಶಾಲಿನಿ ಸಿಕ್ಕ ಅವಕಾಶವನ್ನು ಚೊಕ್ಕವಾಗಿ ಬಳಸಿಕೊಂಡಿದ್ದಾರೆ. ಸುಚೇಂದ್ರ ಪ್ರಸಾದ್, ಅಚ್ಯುತ ಕುಮಾರ್, ಸುಧಾರಾಣಿ ಮೊದಲಾದವರು ಎಂದಿನಂತೆ ಪಾತ್ರವಾಗಿ ಬಾಳಿದ್ದಾರೆ. ಒಟ್ಟಿನಲ್ಲಿ ಪ್ಲಸ್ ನಲ್ಲಿ ಪಾಸಿಟಿವ್ ಅಂಶಗಳು ಖಂಡಿತಾ ಇವೆಯೆನ್ನಬಹುದು.
2015-10-17 · FilmySphere critic
- Review of Titlu Beka · 5/5
Awesome Movie No boring at all , perfect for college students I enjoyed a lot Background Score and songs sooopeeeer Paisa Vasool
2015-10-12
- Review of Dove · 3.5/5
ಡವ್ ಚಿತ್ರ ವಿಮರ್ಶೆ ರಿಂಗ್ ರೋಡ್ ರಂಗಿನೊಂದಿಗೆ 'ಡವ್' ಬೆಂಗಳೂರಿನಲ್ಲಿ ನಡೆದ ನೈಜ ಕೊಲೆಯೊಂದನ್ನು ಆಧಾರವಾಗಿಟ್ಟುಕೊಂಡು ನಿರ್ದೇಶಕ ಸಂತು ಮಾಡಿರುವ ಚಿತ್ರವೇ ಡವ್. ಚಿತ್ರದ ಮೂಲಕ ಪ್ರಥಮ ಬಾರಿಗೆ ನಾಯಕನಾಗಿರುವ ಅನೂಪ್ ಗೆ ಕಾಲೇಜು ಹುಡುಗನ ಪಾತ್ರ. ಈತನ ಪ್ರೇಯಸಿ ವಕೀಲರೊಬ್ಬರ ಮಗಳು. ಇಬ್ಬರ ಮನೆಯಲ್ಲಿಯೂ ಮದುವೆಗೆ ವಿರೋಧವಿಲ್ಲ ಎಂದ ಮೇಲೆ ಆ ಕತೆಯಲ್ಲಿ ವಿಶೇಷವೂ ಇಲ್ಲ ಬಿಡಿ. ಆದರೆ ನಾಯಕ ಕೊಲೆಯ ಪ್ರಕರಣವೊಂದರಲ್ಲಿ ಸಿಕ್ಕಿಕೊಳ್ಳುತ್ತಾನೆ. ಬಳಿಕ ಆತನೇ ನಿಜವಾದ ಕೊಲೆಗಾರರ ಗುರುತು ಪತ್ತೆ ಮಾಡಿ ಅವರಿಗೆ ಶಿಕ್ಷೆ ಕೊಡುವಲ್ಲಿಗೆ ಚಿತ್ರ ಮುಗಿಯುತ್ತದೆ. ಅಲ್ಲಿಗೆ ಅದೊಂದು ಸಾಧಾರಣ ಕತೆ. ಆದರೆ ನಾಯಕನ ಪಾತ್ರವನ್ನೂ ದಾಟಿ ಚಿತ್ರ ಕತೆಯ ವ್ಯಾಪ್ತಿ ದೊಡ್ಡದಾಗಿ ಸಾಗುತ್ತದೆ. ನಾಯಕನನ್ನು ಅಪರಾಧಿಯನ್ನಾಗಿಸಿದ ಆ ಕೊಲೆ ಹೇಗೆ ನಡೆದಿರುತ್ತದೆ ಎಂಬುದೇ ಚಿತ್ರದ ಪ್ರಮುಖ ಭಾಗ. ಶ್ರೀಮಂತ ಹುಡುಗಿಯೊಬ್ಬಳಿಗೆ ಸಿಸಿಬಿ ಅಧಿಕಾರಿಯ ಪುತ್ರನೊಂದಿಗೆ ವಿವಾಹ ನಿಶ್ಚಿತಾರ್ಥವಾಗುತ್ತದೆ. ಆದರೆ ಅದಕ್ಕೂ ಮೊದಲು ಆಕೆ ತನ್ನ ಪ್ರಿಯಕರನಾಗಿದ್ದಾತನನ್ನೇ ಸೇರಲು ಬಯಸುತ್ತಾಳೆ. ಅದಕ್ಕಾಗಿ ಪ್ರಿಯಕರನೊಂದಿಗೆ ಸೇರಿ ಹಾಕುವ ಯೋಜನೆಯೇ ಈ ಕೊಲೆಯಾಗಿರುತ್ತದೆ. ಮೊದಲೇ ಹೇಳಿದಂತೆ ಚಿತ್ರದ ನಾಯಕ ಮತ್ತು ನಾಯಕಿ ಈ ಘಟನೆಯೊಳಗೆ ನೇರ ಸಂಬಂಧಪಟ್ಟವರಲ್ಲ. ಹಾಗಾಗಿಯೇ ಅವರಿಬ್ಬರ ನಟನೆಗೆ ಅವಕಾಶ ಕಡಿಮೆ. ಇರುವುದರಲ್ಲಿ ನಾಯಕಿಯೇ ಹೆಚ್ಚು ನೈಜ ನಟನೆ ನೀಡಿದ್ದಾರೆ. ನಾಯಕನಲ್ಲಿ ಫೈಟ್ ಸೀನ್ ಗಳಲ್ಲಿ ಕಾಣಿಸುವ ಲವಲವಿಕೆ ಉಳಿದ ದೃಶ್ಯಗಳಲ್ಲಿ ಉಳಿದಿಲ್ಲ. ಶ್ರೀಮಂತ ಹುಡುಗಿಯಾಗಿ ಮದಾಲಸಾ ಗ್ಲಾಮರ್ ಗೆ ಮೀಸಲಾಗಿದ್ದಾರೆ. ಅವರ ಜೋಡಿಯಾಗಿ ಕುಮಾರ್ ಪಾತ್ರದಲ್ಲಿ ರಾಕೇಶ್ ಅಡಿಗ ಪಕ್ಕಾ ಕ್ರಿಮಿನಲ್ ಲವ್ವರಾಗಿ ಕಾಣಿಸಿದ್ದಾರೆ. ಮದಾಲಸಾಗೆ ಕ್ರೈಮ್ ಮಾಡುವ ಉದ್ದೇಶವಿರಲಿಲ್ಲವೆಂಬುದನ್ನು ತೋರಿಸಿರುವುದು ನಿರ್ದೇಶಕರು ಪಾತ್ರಕ್ಕೆ ನೀಡಿರುವ ನೀತಿ. ಅರ್ಜುನ್ ಜನ್ಯಾ ಹಾಡು ಮತ್ತು ಹಿನ್ನೆಲೆ ಸಂಗೀತ ಆಕರ್ಷಕ. ನಾಯಕ ತಂದೆಯನ್ನು ಪದೇ ಪದೇ 'ಮಗಾ.. ಮಗಾ' ಎಂದು ಕರೆಯುವುದನ್ನು ಅರಗಿಸಿಕೊಳ್ಳುವುದು ಕಷ್ಟ. ತಾಯಿಯಾಗಿ ವೀಣಾ ಸುಂದರ್ ಮೊದಲ ದೃಶ್ಯದಿಂದಲೇ ಇಷ್ಟ. ಐಟಂ ಹಾಡೊಂದರ ಮೂಲಕ ಅನಗತ್ಯವಾಗಿ ಬಂದು ಹೋಗುತ್ತಾರೆ ಜಗ್ಗೇಶ್. ಜೈಗದೀಶ್, ಪವಿತ್ರಾ ಲೋಕೇಶ್, ಅವಿನಾಶ್ ಪಾತ್ರಗಳು ಆಟಕ್ಕೆ ಮಾತ್ರ. ಶರತ್ ಲೋಹಿತಾಶ್ವ ಮತ್ತು ಕರಿಸುಬ್ಬು ಪಾತ್ರಗಳು ಲೆಕ್ಕದಲ್ಲೂ ಲುಕ್ಕಿನಲ್ಲೂ ಗಮನ ಸೆಳೆಯುತ್ತವೆ. ಒಟ್ಟಿನಲ್ಲಿ ಚಿತ್ರ ನೋಡಿದವರಿಗೆ ನಿರ್ದೇಶಕರು ಖಂಡಿತಾ ನಿರಾಶೆ ಮೂಡಿಸುವು
2015-10-11 · FilmySphere critic
- Review of Ring Master · 2/5
ರಿಂಗ್ ಮಾಸ್ಟರ್ ಚಿತ್ರ ವಿಮರ್ಶೆ ರಾಂಗ್ ರಾಂಗ್ ಆಡುವ ರಿಂಗ್ ಮಾಸ್ಟರ್ ಹಿಂದೆಂದೂ ನಟಿಸಿರದ ಪಾತ್ರದಲ್ಲಿ ಅರುಣ್ ಸಾಗರ್ ಕಾಣಿಸಿಕೊಳ್ಳಲಿರುವುದಾಗಿ ನಿರ್ದೇಶಕ ವಿಶ್ರುತ್ ನಾಯಕ್ ಹೇಳಿದ್ದರು. ಆದರೆ ಹಿಂದೆ ನಟಿಸಿದ ಒಟ್ಟು ಚಿತ್ರಗಳ ಪಾತ್ರಗಳನ್ನು ಇದೊಂದರಲ್ಲೇ ಕೊಟ್ಟು ತಲೆ ಚಿಟ್ಟು ಹಿಡಿಸಿದ್ದಾರೆಂದು ಪ್ರೇಕ್ಷಕಕರು ಹೇಳುವಂತಿದೆ ಚಿತ್ರ. ಫ್ಲಾಟ್ ಒಂದರಲ್ಲಿ ವಾಸವಾಗಿರುವ ಒಬ್ಬ ಯುವಕ ಮತ್ತು ಇಬ್ಬರು ಯುವತಿಯರು ಗಾಂಜಾ ಸೇದಿ ಹೊಸ ವರ್ಷಾಚರಣೆ ಮಾಡಲು ಬಯಸುತ್ತಾರೆ. ಆದರೆ ಇವರಿಗೆ ಗಾಂಜಾ ವಿತರಿಸಲೆಂದು ಬರುವ ಭಂಗೀರಂಗ ಅವರನ್ನು ಇನ್ನಿಲ್ಲದಂತೆ ಕಾಡುತ್ತಾನೆ. ಅಂದರೆ ಅವರ ಸ್ವೇಚ್ಛಾಚಾರದ ಬದುಕಿನ ತಪ್ಪುಗಳೇನು ಎಂದು ಮನವರಿಕೆ ಮಾಡುತ್ತಾನೆ. ಆದರೆ ಅವರಿಗಿಂತ ಮೊದಲೇ ಚಿತ್ರ ನೋಡಲು ಬಂದವರು ಪ್ರಾಯಶ್ಚಿತ್ತ ಪಡುವಂತಿದೆ. ಅದು ಹೇಗೆ ಎಂಬುದನ್ನು ತಿಳಿಯಬೇಕಾದರೆ ಪ್ರತಿಯೊಬ್ಬರೂ ಚಿತ್ರ ಮಂದಿರಕ್ಕೆ ಹೋಗಿಯೇ ಅನುಭವಿಸಲು ಸಾಧ್ಯ! ಚಿತ್ರವನ್ನು 'ಮಿಸ್ ಬಿಹೇವಿಯರ್' ಎಂಬ ಆಂಗ್ಲ ಚಿತ್ರದ ಸ್ಪೂರ್ತಿಯಿಂದ ಮಾಡಿದ್ದಾಗಿ ನಿರ್ದೇಶಕರು ಹೇಳುತ್ತಾರೆ. ಆದರೆ ಪೂರ್ತಿ ಚಿತ್ರದ ಕತೆ 'ಕೌಂಟ್ ಡೌನ್' ಸಿನೆಮಾದಂತಿದೆ ಎಂದು ಥಾಯ್ ಚಿತ್ರ ನೋಡಿದವರು ಹೇಳುತ್ತಾರೆ. ಇತ್ತೀಚೆಗಷ್ಟೇ ಒರಿಜಿನಲ್ ಎಂದು ಸುಳ್ಳು ಹೇಳಿಕೊಂಡು ಬಂದ ರಿಮೇಕ್ ಚಿತ್ರ 'ಆಟಗಾರ'ದ ಮತ್ತೊಂದು ರೂಪವಿದು ಎಂಬುದು ಅಚ್ಛ ಕನ್ನಡಿಗ ಪ್ರೇಕ್ಷಕರ ಅಭಿಪ್ರಾಯ! ಅದರಲ್ಲಿ ದ್ವೀಪದಲ್ಲಿ ತೋರಿಸಿರುವುದನ್ನು ಇದರಲ್ಲಿ ಒಂದು ಕೋಣೆಗೆ ಸೀಮಿತಗೊಳಿಸಲಾಗಿದೆ. ಅರಣ್ ಸಾಗರ್ ನ ಅರಳುಗಣ್ಣು, ಕೆರಳು ನೋಟಕ್ಕೆ ತಕ್ಕದಾಗಿ ಹಿನ್ನೆಲೆ ಸಂಗೀತವೂ ಅಬ್ಬರದಿಂದ ಕಾಡುತ್ತದೆ. ಅದೇ ಕಾರಣದಿಂದಲೇ ಇರಬಹುದು; ಅನುಶ್ರೀ, ಶ್ವೇತಾ, ಶೃಂಗ ಸಹ್ಯವೆನಿಸುತ್ತಾರೆ. ಜೊತೆಗೆ ಹಾಡುಗಳು ಆಲಿಸುವಂತಿವೆ. ತಪ್ಪಿಗೆ ಶಿಕ್ಷೆ ನೀಡುವಾಗಲೂ ತಪ್ಪು ತಪ್ಪಾಗಿ ವರ್ತಿಸುವ ಭಂಗಿರಂಗನ ಪಾತ್ರ ಭಜರಂಗಿ ಸೇನೆ ಸಂಚಾಲಕನೋ ಎಂಬ ಸಂದೇಹ ಕಾಡದಿರದು. ರಿಂಗ್ ಮಾಸ್ಟರ್ ನ ಅಗತ್ಯ ಪ್ರಾಣಿಗಳಿಗೆ ಮಾತ್ರ ಎಂಬುದು ಶೀರ್ಷಿಕೆಗೆ ಸಲ್ಲುವ ನ್ಯಾಯ.
2015-10-10 · FilmySphere critic
- Review of Airavata · 2.5/5
ನಾ ಕಂಡ ಐರಾವತ, ಚಿತ್ರ ವಿಮರ್ಶೆ 2.5 / 5 ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ಪ್ರಕಾಶ್ ರಾಜ್ ನಡುವಿನ ಜುಗಲ್ಬಂದಿ ಈ ಬಹುನಿರೀಕ್ಷಿತ "ಐರಾವತ". ಓರ್ವ ಪೋಲಿಸ್ ಇನ್ಸ್ಪೆಕ್ಟರ್ 'ನ ಆಶಯ, ಕನಸ್ಸು, ಅವನ ಕನಸ್ಸಿಗೆ ತಣ್ಣಿರೆರೆಚುವ ಖಳನಾಯಕ. ಈ ಮಧ್ಯೆ ನಾಯಕನು ನಕಲಿ ಪೋಲಿಸ್ ಎಂದು ತಿಳಿದು ಬರುತ್ತೆ, ನಂತರ ಒಂದು ಫ್ಲಾಶ್ ಬ್ಯಾಕ್. ಇದು ನಾಯಕ ಪೋಲಿಸ್ ವೇಷ ಧರಿಸಲು ಕಾರಣ ಎನ್ನುವುದಕ್ಕೆ ಹಿಡಿದಿರುವ ಕನ್ನಡಿ. ನಂತರ ಮತ್ತೆ ಪೋಲಿಸ್ exam ನಲ್ಲಿ ತೇರ್ಗಡೆಯಾಗಿ ನಿಜವಾಗಿಯೂ ಪೋಲಿಸ್ ಹುದ್ದೆ ಸೇರಿ ಖಳನಾಯಕನ ಬಗ್ಗಿ ಬಡಿಯುವ ನಟ, ಇಷ್ಟೇ ಐರಾವಾತ. Performance: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ಪ್ರಕಾಶ್ ರಾಜ್ ನಡುವಿನ ಜುಗಲ್ಬಂದಿ ಇಷ್ಟೇ ಸಾಕು ಸಿನಿಮಾ ನೋಡಲು, ಬಹಳ ಅದ್ಭುತವಾಗಿ ಈ ಇಬ್ಬರ ನಟನೆ ಮೂಡಿಬಂದಿಂದೆ. ಇನ್ನು ನಾಯಕಿ ಆಟಕ್ಕೆ ಉಂಟ್ಟು ಲೆಕ್ಕಕ್ಕೆ ಇಲ್ಲ. ಚಿಕ್ಕಣ್ಣ ಕೊಟ್ಟಿರುವ 10 ನಿಮಿಷದಲ್ಲಿ ಎಲ್ಲರನ್ನು ಮನೊರಂಜಿಸಿ ಮರೆಯಾಗುತ್ತಾರೆ. ಸಾದು ಮಹಾರಾಜ್ ಪಾತ್ರ ಓಕೆ. ಉಳಿದಂತೆ ಯಾರು ನೆನಪಿಗೆ ಉಳಿಯುವಂತೆ ನಟಿಸಿಲ್ಲ well ಪಾತ್ರ ದೊರೆತಿಲ್ಲ ಅಂದ್ರೆ ತಪ್ಪಾಗಲಾರದು. ಏಕೆಂದರೆ ಚಿತ್ರವಿಡಿ ಇದು ಪ್ರಕಾಶ್ - ದರ್ಶನ್ ಮಯ. Technically: ನಿರ್ದೇಶನದ ಕೊರತೆ ಎದ್ದು ಕಾಣುತ್ತೆ, ಸಂಕಲನ ಇನ್ನು ಚೆನ್ನಾಗಿ ಇರಬಹುದಿತ್ತು. ಮ್ಯೂಸಿಕ್ ಸೂಪರ್ ಹರಿ ಕೃಷ್ಣ ಪಾಸ್. Conclusion: ಕಪ್ಪು ಆನೆಗೆ ಬಿಳಿ ಸುಣ್ಣ ಬಳಿದು "ಐರಾವತ" ಎಂದು ಕರೆದಂತಿದೆ. Watch it for ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ಪ್ರಕಾಶ್ ರಾಜ್ ನಡುವಿನ ಜುಗಲ್ಬಂದಿ.
2015-10-05
- Review of Airavata · 3.5/5
ಐರಾವತ ಚಿತ್ರ ವಿಮರ್ಶೆ ಐರಾವತ: ಈತ ಆಕರ್ಷಕ ಆರಕ್ಷಕ ಐರಾವತದಲ್ಲಿ ದರ್ಶನ್ ಪೊಲೀಸ್ ಅಧಿಕಾರಿಯ ಪಾತ್ರವೆಂಬುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಆತ ನಿಜಕ್ಕೂ ಪೊಲೀಸ್ ಅಧಿಕಾರಿಯೇನಾ? ಅಲ್ಲವಾದರೆ ಆ ಹುದ್ದೆಗೆ ಹೇಗೆ ಬಂದ ಎಂಬುದನ್ನು ಹೇಳುವುದೇ ಚಿತ್ರದಲ್ಲಿನ ಟ್ವಿಸ್ಟು ಅಥವಾ ವಸ್ತು! ಐಪಿಎಸ್ ಅಧಿಕಾರಿ ಐರಾವತ ಅಧಿಕಾರ ಸ್ವೀಕರಿಸಿದ ಮೇಲೆ ಅದರ ವ್ಯಾಪ್ತಿಯನ್ನು ದಾಟಿ ತನ್ನದೇ ನಿಯಮಗಳನ್ನು ತರುತ್ತಾನೆ. ಆತ ರೈತರ ಪರವಾದ, ಖಾಸಗಿ ವಾಹನಗಳ ಚಾಲಕರ ಪರವಾದÀ, ಇಂಜಿನಿಯರ್ಗಳ ಪರವಾದ ಹೋರಾಟಕ್ಕೆ ನಿಂತಾಗಲೆಲ್ಲಾ ಈ ಎಲ್ಲಾ ವಿಭಾಗಗಳಲ್ಲಿಯೂ ಮಧ್ಯವರ್ತಿಯಂತೆ ದಂಧೆ ನಡೆಸುವ ಪ್ರತಾಪ್ ಕಾಳೆಯ ವಿರುದ್ಧ ಹೋರಾಡುವಂತಾಗುತ್ತದೆ. ರಾಜಕೀಯ ವಲಯದಲ್ಲಿ ದೊಡ್ಡ ಹಿಡಿತವಿಟ್ಟುಕೊಂಡಿರುವ ಪ್ರತಾಪ್ ಕಾಳೆ ಐರಾವತನನ್ನು ಜೈಲು ಸೇರಿಸುವಲ್ಲಿ ಯಶಸ್ವಿಯಾಗುತ್ತಾನೆ. ಆದರೆ ಅದಕ್ಕೆ ಕಾರಣ ಐರಾವತ ಒಬ್ಬ ನಕಲಿ ಪೊಲೀಸ್ ಅಧಿಕಾರಿ ಎಂಬುದಾಗಿರುತ್ತದೆ. ಸ್ವಾತಂತ್ರ್ಯ ಹೋರಾಟಗಾರನೋರ್ವನ ಮೊಮ್ಮಗನಾಗಿ ದೇಶ ಭಕ್ತಿಯೊಂದಿಗೆ ಹಳ್ಳಿಯಲ್ಲಿ ಬೆಳೆದ ಆತ ಪೊಲೀಸರಿಂದ ತನ್ನ ತಂಗಿಗಾದ ಅನ್ಯಾಯದಿಂದ ನೊಂದಿರುತ್ತಾನೆ. ಹಾಗಾಗಿ ಪೊಲೀಸ್ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ ನೀಗಿಸಿ ಸಾಮಾನ್ಯರ ಸೇವೆಗೆ ಸ್ಪಂದಿಸುವಂತೆ ಮಾಡುವುದೇ ಆತನ ಧ್ಯೇಯವಾಗಿರುತ್ತದೆ. ಒಟ್ಟಿನಲ್ಲಿ ನಕಲಿ ಪೊಲೀಸ್ಗೆ ಜೈಲು ಶಿಕ್ಷೆಯಾಗುತ್ತದೆ. ಸಾಮನ್ಯ ಸಂದರ್ಭವಾಗಿದ್ದರೆ ಸಿನೆಮಾ ಅಲ್ಲಿಗೆ ಕೊನೆಯಾಗುತ್ತಿತ್ತು. ಆದರೆ ಅಸಾಮಾನ್ಯ ನಾಯಕರಿಗಾಗಿ ತಯಾರಾದ ಕತೆಗಳು ಸಾಮಾನ್ಯವಾಗಿರುವುದಿಲ್ಲವಲ್ಲ? ಹಾಗಾಗಿ ಐರಾವತ ಮತ್ತೆ ಐಪಿಎಸ್ ಎಕ್ಸಾಮ್ ಬರೆದು ಜಯಿಸಿ ಅಧಿಕಾರಕ್ಕೆ ಬಂದು ಪ್ರತಾಪ್ ಕಾಳೆಯ ವಿರುದ್ಧ ಹೋರಾಡಿ ಗೆಲ್ಲುತ್ತಾನೆ ಎಂಬಲ್ಲಿಗೆ ಚಿತ್ರ ಕೊನೆಗೊಳ್ಳುತ್ತದೆ. ಹೇಗೆ ಗೆಲ್ಲುತ್ತಾನೆ ಮತ್ತು ಆತನ ತಂಗಿಗೆ ಪೊಲೀಸರಿಂದ ಆದ ಅನ್ಯಾಯವೇನು ಎಂಬುದು ತೆರೆಯ ಮೇಲಿನ ನೋಟಕ್ಕೆ ಮೀಸಲಾಗಿರಲಿ. ಐರಾವತನಾಗಿ ದರ್ಶನ್ ಆಕರ್ಷಕ ಆರಕ್ಷಕ. ಆರಂಭದಲ್ಲೇ ಫ್ಲ್ಯಾಶ್ ಬ್ಯಾಕ್ಗೆ ಹೋಗುವ ಚಿತ್ರದೊಳಗೆ ಇಂಟರ್ವೆಲ್ ವೇಳೆಗೆ ಮತ್ತೊಂದು ಫ್ಲ್ಯಾಶ್ ಬ್ಯಾಕ್ ನುಸುಳಿಕೊಳ್ಳುತ್ತದೆ. ಹಳ್ಳಿಯ ಬದುಕಲ್ಲಿ ಸ್ವಾತಂತ್ರ್ಯ ಹೋರಾಟಗಾರನ ಮೊಮ್ಮಗನಾಗಿ ದರ್ಶನ್ ಕಾಣಿಸಿಕೊಳ್ಳುವ ಸನ್ನಿವೇಶಗಳು ಕಮಲಹಾಸನ್ರ ಇಂಡಿಯನ್ ಚಿತ್ರವನ್ನು ನೆನಪಿಸಿದರೆ ಅಚ್ಚರಿಯಿಲ್ಲ. ಮಧ್ಯಂತರದವರೆಗೆ ನಕಲಿ ಪೊಲೀಸ್ ಪಾತ್ರವಾದರೆ ಆನಂತರದಲ್ಲಿ£ ಪೊಲೀಸ್ ಕಾನೂನುಗಳೇ ನಕಲಿ! ಇತರರು ಕಾನೂನಿನ ವಿರುದ್ಧದ ಸಣ್ಣಪುಟ್ಟ ನಡವಳಿಕೆಯನ್ನೂ ಪ್ರಶ್ನಿಸುವ ಐರಾವತನಿಗೆ ಕಾನೂನಿನಲ್ಲಿ ಎಲ್ಲೆಗಳೇ ಇಲ್ಲ. ಹೆಲ್ಮೆಟ್ ಹಾಕದೆ ಬೈಕ್ ಓಡಿಸುತ್ತಾನೆ, ಅಜ್ಜಿ ತಾತನ ಚಿತೆಯ ಮುಂದೆಯೂ ಕ್ಯಾಪ್ ತೆಗೆಯುವುದಿಲ್ಲ. ಕನಿಷ್ಟ ಪಾತ್ರಕ್ಕಾಗಿ ಪೊಲೀಸ್ ಹೇರ್ ಸ್ಟೈಲನ್ನೂ ಮಾಡಿಸಲಾಗಿಲ್ಲವೆನ್ನುವುದು ದುರಂತ. ಸಂಭಾಷಣೆಯ ಮೂಲಕ ನಾಯಕನಿಗೆ ಬಿಲ್ಡಪ್ ಕೊಡುವ ಭರದಲ್ಲಿ ‘ಇಂದು ನಾನು ಕಾನೂನು ಕೈಗೆತ್ತಿಕೊಂಡಿರುವುದು ತಪ್ಪಾದಲ್ಲಿ ಅಂದು ಸ್ವಾತಂತ್ರ್ಯ ಹೋರಾಟ ಮಾಡಿದ ಗಾಂಧೀಜಿ, ನೇತಾಜಿಯವರದೂ ತಪ್ಪೇ’ ಎನ್ನುವ ಹೋಲಿಕೆ ನೀಡಿ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡಲಾಗಿದೆ. ಚಿತ್ರದ ಮೊದಲಾರ್ಧದಲ್ಲಿ ನಾಯಕನ ನಾಟಕೀಯ ಸಂಭಾಷಣೆಗಳೆದುರು ಮೌನವಾಗಿರುವ ಪ್ರಕಾಶ್ ರೈಯ ಪಾತ್ರ ದ್ವಿತೀಯಾರ್ಧದಲ್ಲಿ ಸರಿಯಾದ ಟಾಂಗ್ ನೀಡುವುದು ಮತ್ತು ಆಗ ನಾಯಕ ಭಾವ ತೀವ್ರತೆಯಿಂದ ಮೌನವಾಗಿಯೇ ಇರುವಂತೆ ತೋರಿಸುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ. ಪರಸ್ಪರ ‘ಮಗಾ ಮಗಾ’ ಎಂದು ಮಾತನಾಡಿಸುವಂತೆ ಅವರಿಬ್ಬರ ಸಂಭಾಷಣೆಗಳು ಚೆನ್ನಾಗಿ ಸಿಳ್ಳೆಗಿಟ್ಟಿಸುತ್ತವೆ. ಚಿತ್ರವೆಲ್ಲೋ ಸ್ವಲ್ಪ ನೀರಸವೆನಿಸುವಾಗಲೆಲ್ಲ ಪ್ರಕಾಶ್ ರೈ ಲವಲವಿಕೆಯ ಪ್ರತೀಕವಾಗಿ ಬರುತ್ತಾರೆ. ಚಿಕ್ಕಣ್ಣನೊಂದಿಗೆ ಇಂಟ್ರಡ್ಯೂಸಾಗುವ ನಾಯಕಿ ಊರ್ವಶಿ ರೌಟೆಲಾ ಅನಗತ್ಯವೆನಿಸುವಂತೆ ಬಂದು ಕುಣಿದು ಹೋಗುತ್ತಾರೆ. ಚಿಕ್ಕಣ್ಣ ಎರಡೇ ದೃಶ್ಯಗಳಲ್ಲಿ ಮಾಯವಾಗುತ್ತಾರೆ. ಅಷ್ಟೇನೂ ದ್ವಂದ್ವಾರ್ಥದ ಸಂಭಾಷಣೆಗೆ ಅವಕಾಶವಿಲ್ಲದ ಕಾರಣ ಸಾಧು ಕೋಕಿಲ ಅತಿಯಾಗಿ ಕಾಡುವುದಿಲ್ಲ. ಆದರೆ ಐಟಂ ಹಾಡೊಂದರ ಕಾಟವಿದೆ. ಸ್ವಾತಂತ್ರ್ಯ ಹೋರಾಗಾರ ತಾತನಾಗಿ ಅನಂತನಾಗ್ರ ಮೇಕಪ್ ನಲ್ಲಿ ಕಾಣುವ ವಯಸ್ಸು ಕಂಠದಲ್ಲಿ ಗೋಚರಿಸುವುದಿಲ್ಲ. ಬಿಳಿಯ ವಿಗ್ ಹಾಕಿಕೊಂಡು ತಾತನೊಂದಿಗೆ ನಡೆದಾಡುವ ಅಜ್ಜಿಯ ಪಾತ್ರಕ್ಕೆ ಸಿತಾರರನ್ನು ಕರೆಸುವ ಅಗತ್ಯವಿರಲಿಲ್ಲ. ಆದರೆ ದರ್ಶನ್ ರ ಮಾಸ್ ಲುಕ್ಕು, ಉತ್ತಮವಾದ ಛಾಯಾಗ್ರಹಣ, ಅದ್ಧೂರಿಯಾದ ಮೇಕಿಂಗ್ ಮತ್ತು ಫೈಟಿಂಗ್ ಗಳನ್ನು ನೋಡುವ ಆಕಾಂಕ್ಷೆ ನಿಮಗಿದ್ದಲ್ಲಿ ಖಂಡಿತಾ ಚಿತ್ರವನ್ನೊಮ್ಮೆ ನೋಡಬಹುದು.
2015-10-01 · FilmySphere critic
- Review of Future and Goa Alla Gokarna Kannada Short Movies Show · 5/5
#Future reviews from Reva university Director, principal and students. http://www.youtube.com/watch?v=-H362CNLA3o
2015-09-30
- Review of Arjuna · 3.5/5
ಅರ್ಜುನ ಚಿತ್ರವಿಮರ್ಶೆ ಉಜ್ವಲ ನಟನೆಗೆ ಪ್ರಜ್ವಲ್ ಪ್ರಯತ್ನ ಚಿತ್ರದ ಬಗ್ಗೆ ಯಾವುದೇ ವಿಶೇಷ ರೀತಿಯ ನಿರೀಕ್ಷೆಗಳನ್ನು ಇಟ್ಟುಕೊಳ್ಳದೆ ಚಿತ್ರಮಂದಿರ ಸೇರಿಕೊಂಡವರಿಗೆ ಒಂದು ಸಮಾಧಾನ ನೀಡಬಲ್ಲ ಚಿತ್ರ ಅರ್ಜುನ. ಪ್ರಥಮದಲ್ಲೇ ಜಿಲ್ಲಾಧಿಕಾರಿಯೊಬ್ಬನ ಕೊಲೆಯಾಗುತ್ತದೆ. ಕೊಲೆಯ ತನಿಖೆಗೆ ನೇಮಿಸಲ್ಪಡುವ ದಕ್ಷ ಅಧಿಕಾರಿಯಾಗಿ ಶರ್ಮನ ಆಗಮನ. ಆತ ಇನ್ನೇನು ಅಪರಾಧಿ ಅರ್ಜುನನನ್ನು ಬಂಧಿಸುತ್ತಾರೆ ಎಂಬಂಥ ಸಮಯದಲ್ಲಿ ಪ್ರಕರಣ ಕೈ ಬಿಡುವಂತೆ ಮೇಲಧಿಕಾರಿಗಳಿಂದ ಆದೇಶ ಬರುತ್ತದೆ. ಆಗ ಖುದ್ದು ಡಿಪಾರ್ಟ್ ಮೆಂಟ್ ನ ಮೇಲೆಯೇ ಸಂದೇಹಕ್ಕೊಳಗಾಗುವ ಶರ್ಮ ಅದರ ಮರ್ಮವನ್ನು ಬೇಧಿಸಲು ಮುಂದಾದಾಗ ಕೊಲೆಯ ಹಿಂದಿನ ಫ್ಲ್ಯಾಶ್ ಬ್ಯಾಕ್ ಸ್ಟೋರಿ ಬಿಚ್ಚಿಕೊಳ್ಳುತ್ತದೆ. ಹಾಗೆ ಮಧ್ಯಂತರದ ಬಳಿಕ ಹೊಸ ರೂಪ ಪಡೆದುಕೊಳ್ಳುವ ಕತೆಯಲ್ಲಿ ಅರ್ಜುನನ ಪಾತ್ರವೇನು ಎಂಬುದನ್ನು ಪರದೆಯ ಮೇಲೆ ನೋಡಬಹುದು. ಚಿತ್ರದಲ್ಲಿ ಶರ್ಮನಾಗಿ ದೇವರಾಜ್ ನಟಿಸಿದ್ದಾರೆ. ವಾಹನದೊಳಗಿದ್ದುಕೊಂಡೇ ತನಿಖೆ ನಡೆಸುತ್ತಾರೆ ಎಂಬುದನ್ನು ಬಿಟ್ಟರೆ ಅವರ ತನಿಖಾ ಶೈಲಿಯಲ್ಲಿ ವಿಶೇಷತೆಗಳಿಲ್ಲ. ಆದರೆ ಅರ್ಜುನನ ಪಾತ್ರಧಾರಿ ಪ್ರಜ್ವಲ್ ಜೊತೆಗಿನ ಪ್ರಥಮ ಭೇಟಿಯ ಸನ್ನಿವೇಶ ಚೆನ್ನಾಗಿ ಮೂಡಿ ಬಂದಿದೆ. ಪ್ರಜ್ವಲ್ ಕಂಗಳಲ್ಲಿನ ಆವೇಶ ಮತ್ತು ಕ್ಲೈಮ್ಯಾಕ್ಸ್ ನಲ್ಲಿ ಸೈಕೋ ಲುಕ್ ಅವರು ಒಬ್ಬ ಉತ್ತಮ ನಟನೆಂದು ನಿರೂಪಿಸುವಂತಿದೆ. ನಾಯಕಿಯಾಗಿ ಭಾಮ ಮುಗ್ಧತೆಯ ಪಾತ್ರಗಳಿಂದ ವಿಭಿನ್ನವಾಗಿಯೂ ನಟಿಸಿಗೆಲ್ಲಬಲ್ಲೆ ಎಂದು ತೋರಿಸಿ ಕೊಟ್ಟಿದ್ದಾರೆ. ಭಾಮಾ ಸಹೋದರಿ ಪಾತ್ರದಲ್ಲಿ ಶೀತಲ್ ಶೆಟ್ಟಿ ಕನ್ವಿನ್ಸಿಂಗ್ ನಟನೆ ನೀಡಿದ್ದಾರೆ. ರಮೇಶ್ ಭಟ್ ದಂಪತಿಯ ಪಾತ್ರಗಳ ನಟನೆ ಮತ್ತು ಸಂಭಾಷಣೆ ನಾಟಕೀಯವೆನಿಸುತ್ತದೆ. ಕಡ್ಡಿಪುಡಿ ಚಂದ್ರು ಖಳನಟನಾಗಿ ಚಿತ್ರಕ್ಕೆ ತೂಕದ ಅಭೀನಯ ನೀಡಿದ್ದಾರೆ. ಕಾನೂನನ್ನು ಕೈಗೆತ್ತಿಕೊಳ್ಳುವುದು ತಪ್ಪಾದರೂ ನ್ಯಾಯದ ವಿಚಾರ ಬಂದಾಗ ಅದು ಸರಿಯಾಗಿರುತ್ತದೆ ಎಂಬ ಹಳೆಯ ವಾದ; ಸ್ವತಃ ಪೊಲೀಸ್ ಅಧಿಕಾರಿಗಳೇ ಎಲ್ಲೆಡೆ ಮೂಗು ತೂರಿಸುವ ಹಳೆಯ ಶೈಲಿ ಇಲ್ಲಿಯೂ ಇದೆ. ಆದರೆ ನಾಯಕ ಪ್ರಜ್ವಲ್ ನಟಿಸಿದ ಮತ್ತು ಈ ಹಿಂದೆ ಶೇಖರ್ ನಟಿಸಿದ ಚಿತ್ರಗಳಿಗೆ ಹೋಲಿಸಿದರೆ ಅರ್ಜುನ ಖಂಡಿತಾ ಶ್ರೇಷ್ಠವಾಗಿದೆ ಎಂದು ಹೇಳಬಹುದು.
2015-09-25 · FilmySphere critic
- Review of Love You Aaliya · 4/5
ಲವ್ ಯು ಆಲಿಯಾ ಚಿತ್ರ ವಿಮರ್ಶೆ ದಾಂಪತ್ಯದಂದಕೆ ಭಾಷ್ಯ; ಲವ್ ಯು ಆಲಿಯಾ ಸದ್ಯದ ಮಟ್ಟಿಗೆ ಬರೇ ಸುದೀಪ್ ಗಾಗಿ ಮಾತ್ರ ಈ ಚಿತ್ರವನ್ನು ನೋಡಿದರೂ ಅಡ್ಡಿಯಿಲ್ಲ. ಯಾಕೆಂದರೆ ಬರೇ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ, ಪತ್ನಿ ಮತ್ತು ಮಗುವಿನ ಬಗ್ಗೆಯೇ ಚಿತ್ರದಲ್ಲಿ ಹತ್ತು ನಿಮಿಷ ಮಾತನಾಡಿದ್ದಾರೆ ಸುದೀಪ್. ಚಿತ್ರದ ಅರಂಭದಲ್ಲಿಯೇ ಇಂದ್ರಜಿತ್ ನಡೆಸುವ ಸಂದರ್ಶನವೊಂದರಲ್ಲಿ ಸುದೀಪ್ ಹೀಗೆ ಮನ ಬಿಚ್ಚಿಡುತ್ತಾರೆ. ಮಧ್ಯಂತರದ ಬಳಿಕ ಚಿತ್ರ ಆರಂಭವಾದಾಗಲೂ ಮತ್ತೆ ಇದೇ ಸಂದರ್ಶನ ಮುಂದುವರಿಯುತ್ತದೆ. ಕೊನೆಯಲ್ಲಿ ಸುದೀಪ್ 'ನಾನು ಇನ್ನು ಮುಂದೆಯಾದರೂ ನನ್ನ ವೈಯಕ್ತಿಕ ಬದುಕಿಗೆ ಹೆಚ್ಚು ಸಮಯ ನೀಡಿ ಒಳ್ಳೆಯ ಗಂಡ, ಒಳ್ಳೆಯ ತಂದೆಯಾಗಿ ಗುರುತಿಸಿಕೊಳ್ಳಬೇಕು ಎಂದುಕೊಂಡಿದ್ದೇನೆ' ಎಂಬಲ್ಲಿಗೆ ಸಂದರ್ಶನ ಪೂರ್ತಿಯಾಗುತ್ತದೆ. ಬಹುಶಃ ನಮಗೆ ಅನಿಸುವುದೇನೆಂದರೆ ಈ ಸಂದರ್ಶನಕ್ಕೆ ಇಂದ್ರಜಿತ್ ಒಂದು ತಾತ್ವಿಕ ಎಂಡಿಂಗ್ ಕೂಡ ನೀಡಿರುತ್ತಾರೆ. 'ಹೀಗೆ ವೃತ್ತಿ ಬದುಕಿನಲ್ಲಿ ಎಷ್ಟೇ ಒತ್ತಡಗಳಿದ್ದರೂ ಅವುಗಳನ್ನು ಮೀರಿ, ತಮ್ಮ ಪತ್ನಿ, ಮಗುವಿಗೆ ಸಮಯ ಕಂಡುಕೊಳ್ಳಲು ಮುಂದಾಗಿರುವ ಸುದೀಪ್ ಒಬ್ಬ ಆದರ್ಶ ಗಂಡ' ಎಂದು ಸಂದರ್ಶನವನ್ನು ಕೊನೆಗೊಳಿಸಿರಬಹುದು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಆ ಮುಕ್ತಾಯಕ್ಕೆ ಕತ್ತರಿ ಹಾಕಿದ್ದಾರೆ. ಹಾಗಾಗಿ ಸಂದರ್ಶನ ಸುದೀಪ್ ಮಾತಿನಲ್ಲೇ ಕೊನೆಯಾಗಿದೆ. ಯಾಕೆಂದರೆ ಚಿತ್ರದ ಮುಖ್ಯ ಕಾನ್ಸೆಪ್ಟ್ ಎಂಬುದೇ ವಿಚ್ಛೇದನವೆಂಬುದು ಹೆಚ್ಚುತ್ತಿದ್ದು ಇದನ್ನು ದಂಪತಿಗಳು ಹೇಗೆ ಪರಸ್ಪರ ಅರ್ಥೈಸಿಕೊಂಡು ತಡೆಯಬಹುದು, ಮಕ್ಕಳ ಮನಸ್ಸಿಗೆ ನೋವಾಗಂತೆ ನಡೆದುಕೊಳ್ಳಬಹುದು ಮತ್ತು ಲಿವಿಂಗ್ ಟುಗೆದರ್ ನಂಥ ಅರ್ಥಹೀನ ಬದುಕನ್ನು ತಡೆಗಟ್ಟಬಹುದು ಎಂಬುದನ್ನು ಪ್ರಭಾವಯುತವಾಗಿ ತಲುಪಿಸುವುದೇ ಆಗಿದೆ. ಬಹುಶಃ ಇದೇ ಚಿತ್ರ ಕೆಲವೇ ತಿಂಗಳುಗಳ ಹಿಂದೆಯೇ ತೆರೆಕಂಡಿದ್ದರೆ ಖುದ್ದು ಪ್ರಿಯಾ ಕೂಡ ಮನಸ್ಸು ಬದಲಿಸುತ್ತಿದ್ದರೇನೋ ಎಂಬಷ್ಟು ಪರಿಣಾಮಕಾರಿಯಾಗಿ ಚಿತ್ರ ಮೂಡಿ ಬಂದಿದೆ ಎಂಬುದು ಸತ್ಯ. ಚಿತ್ರದಲ್ಲಿ ಹೈಫೈ ಫ್ಯಾಮಿಲಿಗಳ ಮದುವೆಗಳನ್ನು ನಡೆಸುವ ಮತ್ತು ಮುರಿಯುವ ಬ್ರೋಕರ್ ಮತ್ತು ಬ್ರೇಕರ್ ಕಿರಣ್ ಆಗಿ ಚಂದನ್ ಕಾಣಿಸಿದ್ದಾರೆ. ಈ ನಡುವೆ ಪರಿಚಯಗೊಂಡು ಇಷ್ಟವಾಗುವ ಆಲಿಯಾ ಆತನ ಪ್ರೀತಿಯನ್ನು ಒಪ್ಪಿದರೂ ಮದುವೆಗೆ ಒಪ್ಪುವುದಿಲ್ಲ. ಅದಕ್ಕೆ ಆಕೆಯ ತಂದೆ ತಾಯಿ ವಿಚ್ಛೇದಿತರಾಗಿರುತ್ತಾರೆ ಎಂಬುದೇ ಕಾರಣವಾಗಿರುತ್ತದೆ. ನಾಯಕ ಅವರನ್ನು ಒಂದು ಮಾಡಲು ಪ್ರಯತ್ನಿಸುತ್ತಾನೆ. ಅದರಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾನೆ ಎಂಬುದನ್ನು ಪರದೆಯ ಮೇಲೆ ನೋಡುವುದೇ ಸೊಗಸು. ಯಾಕೆಂದರೆ ಲೊಕೇಶನ್ ವೈಭವಗಳು ಹಾಗಿವೆ. ಆಲಿಯಾಳ ತಂದೆಯ ಪಾತ್ರದಲ್ಲಿ ನಟಿಸಿರುವ ಕ್ರೇಜಿಸ್ಟಾರ್ ಚಿತ್ರದಲ್ಲಿ ವೈದ್ಯರಾಗಿದ್ದಾರೆ. ಡಾಕ್ಟರ್ ಗೆ ವೈಯಕ್ತಿಕ ಬದುಕಿನಲ್ಲಿ ಸಮಯ ಸಿಗದೆ ದಾಂಪತ್ಯ ವಿಚ್ಛೇದನಕ್ಕೆಡೆ ಮಾಡುವ ಬಗ್ಗೆ 'ಮನೆಮನೆ ರಾಮಾಯಣ' ಚಿತ್ರದಿಂದಲೇ ನೋಡಿದ್ದೇವೆ. ಇಲ್ಲಿ ತನ್ನ ಡಾಕ್ಟರ್ ಮಾವ ಮತ್ತು ಡಾನ್ಸರ್ ಅತ್ತೆಯನ್ನು ಒಂದಾಗಿಸಲು ರವಿಚಂದ್ರನ್ ಜೊತೆಗೆ ಲೇಡಿ ನರ್ಸಾಗಿ ಮತ್ತು ಭೂಮಿಕಾ ಜೊತೆಗೆ ನೃತ್ಯ ಕಲಿಯುವ ಶಿಷ್ಯನಾಗಿ ನಟಿಸಿದ್ದಾರೆ ಚಂದನ್. ಹಾಗಂತ 'ಅವ್ವೈ ಷಣ್ಮುಖಿ' ಚಿತ್ರ ನೆನಪಾದರೂ ಅದಕ್ಕೂ ಇದಕ್ಕೂ ಸಂಬಂಧವಿಲ್ಲ. ವೈದ್ಯರಾಗಿ ರವಿಚಂದ್ರನ್ ನಟನೆಯಲ್ಲಿ ವೃತ್ತಿಪರತೆ ಕಾಣಿಸದಿದ್ದರೂ ಕೂಡ ವಿಚ್ಛೇದಿತ ಪತಿಯಾಗಿ ಮನಸೆಳೆಯುತ್ತಾರೆ. ಭೂಮಿಕಾ ಚಾವ್ಲಾರ ನೈಜ ಭಾವಾಭಿನಯಕ್ಕೆ ಪ್ರಿಯಾಂಕ ಉಪೇಂದ್ರ ನೀಡಿರುವ ಕಂಠ ಪೂರಕವಾಗಿದೆ. ನಾಯಕನಾಗಿ ಚಂದನ್ ಸೌಂದರ್ಯ, ನಟನೆ ಗಮನಾರ್ಹ. ಆತನ ಜೋಡಿಯಾಗಿ ಸಂಗೀತಾ ಚೌಹಾನ್ ಸೈಯೆನ್ನಿಸಿದರೂ ರವಿ-ಭೂಮಿಕಾ ಪುತ್ರಿಯಾಗಿ ಆಕೆಯನ್ನು ಕಲ್ಪಿಸುವುದು ಕಷ್ಟವಾಗುತ್ತದೆ. ಚಂದನ್ ತಾಯಿಯಾಗಿ ಸುಧಾರಾಣಿ ನಟಿಸಿದ್ದಾರೆ. ಚಿತ್ರದ ಪೂರ್ವಾರ್ಧದಲ್ಲಿ ಬರುವ ಸುಲ್ಫಿ ಎಂಬ ಡಾನ್ ಪಾತ್ರಧಾರಿ ರವಿಶಂಕರ್ ನಟನೆ ಮತ್ತು ಆತನ ಚೇಲಾಗಳಿಗೆ ಮೋಹನ್ ಬರೆದಿರುವ ಸಂಭಾಷಣೆ ಚಿತ್ರವನ್ನು ಲವಲವಿಕೆಯಿಂದ ನೋಡುವಂತೆ ಮಾಡುತ್ತದೆ. ಆದರೆ ಸಾಧುಕೋಕಿಲ ಮತ್ತು ಶಕೀಲ ಬಂದ ತಪ್ಪಿಗೆ ಎಲ್ಲರ ಬಾಯಿಯಿಂದಲೂ ಡಬಲ್ ಮೀನಿಂಗ್ ಸಂಭಾಷಣೆ ಕೇಳುವ ಸೌಭಾಗ್ಯವೂ ಇದೆ. ಚಿತ್ರದ ಆರಂಭದಲ್ಲಿ 'ಆಲಿಯಾ ನಿನ್ನ ಹೃದಯ ಖಾಲಿಯಾ' ಎಂದು ಕೇಳಿದ್ದ ನಾಯಕ ಮಧ್ಯಂತರದ ಬಳಿಕ 'ಆಲಿಯಾ ನಿನ್ನ ಬೆಡ್ ಖಾಲಿಯಾ' ಎನ್ನುವಲ್ಲಿಗೆ ತಲುಪುತ್ತಾನೆ. ಆದರೆ ಇಂದ್ರಜಿತ್ ನಿರ್ದೇಶನದ ಈ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ ಅವೆಲ್ಲವುಗಳಿಗಿಂತ ಉತ್ತಮವಾದ ಕತೆ, ಸಂಗೀತ, ಲೊಕೇಶನ್ ಗಳು ಈ ಚಿತ್ರದಲ್ಲಿವೆ. ಸನ್ನಿ ಲಿಯೋನ್ ಗ್ಲಾಮರ್ ಕಣ್ಣು ಕುಕ್ಕುತ್ತದೆ. ಸೃಜನ್, ಧ್ಯಾನ್ ಹೀಗೆ ಎಷ್ಟೇ ಪಾತ್ರಗಳು ಬಂದರೂ, ಅವುಗಳಿಗೊಂದು ಸ್ಥಾನ ಮತ್ತು ಒಂದಕ್ಕೊಂದು ಸಂಬಂಧ ಕಲ್ಪಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಸಂಬಂಧಗಳ ಬಗ್ಗೆ ಮಾತನಾಡುವ ಈ ಚಿತ್ರವನ್ನು ಸಂಬಂಧಿಕರ ಜೊತೆಗೆ ಹೋಗಿ ಇಂದೇ ನೋಡಬಹುದು.
2015-09-18 · FilmySphere critic
- Review of Charlie · 2.5/5
ಚಾರ್ಲಿ ಚಿತ್ರ ವಿಮರ್ಶೆ ಗಾಯತ್ರಿ ಮತ್ತು ಅವಳ ಗಾಯದಲ್ಲಿ ಮಾಯವಾದ ಚಾರ್ಲಿ ಪ್ರೋಮೋ ಮತ್ತು ಟ್ರೈಲರ್ ಗಳ ಮೂಲಕ ಈ ಚಿತ್ರದಲ್ಲೇನೋ ಇದೆ ಎಂಬಂತೆ ಆಸಕ್ತಿ ಮೂಡಿಸಿದ್ದ ಚಾರ್ಲಿಯನ್ನು ನೋಡಲು ಚಿತ್ರಮಂದಿರದೊಳಗೆ ಕಾಲಿಟ್ಟರೆ ನಿರಾಶೆಗೊಳಿಸುತ್ತದೆ ಚಿತ್ರ. ನಾಯಕ ಕೃಷ್ಣ ಒಂದು ಮಟ್ಟಿಗೆ ಶ್ರೀಮಂತನೆಂದೇ ಹೇಳಬಹುದಾದ ಯುವಕ ಚಾರ್ಲಿಯಾಗಿದ್ದಾರೆ. ತನ್ನ ವಠಾರದ ಮನೆಯನ್ನು ಬಾಡಿಗೆಗೆ ಕೊಟ್ಟಿರುವುದರೊಂದಿಗೆ ಹವ್ಯಾಸಿ ಛಾಯಾಚಿತ್ರಗ್ರಾಹಕನಾಗಿಯೂ ಕೆಲಸ ಮಾಡುತ್ತಿರುತ್ತಾನೆ. ಅದರ ನಡುವೆಯೇ ಇಬ್ಬರು ಹುಡುಗಿಯರಿಂದ ಆಕರ್ಷಿತನಾಗುತ್ತಾನೆ. ಜಮೀನ್ದಾರನಾಗಿ ಶರತ್ ಲೋಹಿತಾಶ್ವ ನಟಿಸಿದ್ದು ಆತನ ಹೆಸರು ಹೇಳಿ ಜನರನ್ನು ಬೆದರಿಸಿ ಜಾಗ ಒಳಗೆ ಹಾಕುವ ಗೂಂಡಾಗಳ ಬಗ್ಗೆ ಜಮೀನ್ದಾರನ ಗಮನ ಸೆಳೆಯುತ್ತಾನೆ ಚಾರ್ಲಿ. ಇಷ್ಟನ್ನು ಹೇಳಲು ಬರೋಬ್ಬರಿ ಮಧ್ಯಂತರದ ವರೆಗಿನ ಸಮಯವನ್ನು ಹಾಳು ಮಾಡಿದ್ದಾರೆ ನಿರ್ದೇಶಕರು. ತಾನು ಹಂಪಿಗೆ ಹೋಗಿದ್ದಾಗ ಅಲ್ಲಿ ತನ್ನನ್ನು ಆಕರ್ಷಿಸಿದ್ದ ಹುಡುಗಿ ಗಾಯತ್ರಿಗೆ ಆಕೆಯ ತಂದೆ ಬಲವಂತದ ಮದುವೆಗೆ ತಯಾರಿ ಮಾಡಿರುವುದನ್ನು ತಿಳಿದು ಅಲ್ಲಿಂದ ಆಕೆಯನ್ನು ಪಾರುಮಾಡಿ ಹಾಸ್ಟೆಲ್ ಸೇರಿಸುತ್ತಾನೆ ಚಾರ್ಲಿ. ಗಾಯತ್ರಿಯ ಜನ್ಮದಿನದಂದು ತನ್ನ ಪ್ರೀತಿಯನ್ನು ಹೇಳಲು ಹೊರಟಾಗ ಆಕೆ ಬೇರೊಬ್ಬನನ್ನು ಪ್ರೀತಿಸುವುದನ್ನು ಅರಿತು ಕೊರಗುತ್ತಾನೆ. ಈ ನಡುವೆ ಗಾಯತ್ರಿಯ ಪ್ರಿಯಕರನನ್ನು ಆಕೆಯ ತಂದೆ ನೋಡಿದ್ದ ಹುಡುಗನೇ ಹತ್ಯೆಗೈಯ್ಯುತ್ತಾನೆ. ಈ ಸಂದರ್ಭದಲ್ಲಿ ಹತ್ಯೆಗೀಡಾದ ಗಾಯತ್ರಿಯ ಪ್ರಿಯಕರ ಜಮೀನ್ದಾರನ ಪುತ್ರನೆಂಬುದು ಅರಿವಾಗುತ್ತದೆ. ಘಟನೆಯ ಬಳಿಕ ಬದುಕುಳಿದ ಪಾತ್ರಗಳು ಸಾಯುವ ತನಕ ಹೇಗೆಲ್ಲಾ ರಿಯಾಕ್ಟ್ ಮಾಡುತ್ತವೆ ಎಂಬುದನ್ನು ತಿಳಿಯಬೇಕಾದರೆ ಚಿತ್ರ ಮಂದಿರಕ್ಕೊಮ್ಮೆ ಭೇಟಿಕೊಡಿ. ನಾಯಕನಾಗಿ ಕೃಷ್ಣ ನಾಟ್ಯ, ನೋಟ, ಹೊಡೆದಾಟ ಮತ್ತು ನಗುವಿಲ್ಲಷ್ಟೇ ಇಷ್ಟವಾಗುತ್ತಾರೆ. ಸಂಭಾಷಣೆಯಲ್ಲಿ ಸುದೀಪನ್ನು ಅನುಕರಿಸಲೋ ಯಶ್ ನನ್ನು ಅನುಕರಿಸಲೋ ಎಂದು ದ್ವಂದ್ವಕ್ಕೆ ಬಿದ್ದು ನಟಿಸಿದಂತಿದೆ. ಅಥವಾ ನಿರ್ದೇಶಕರು ಆತನಿಂದ ಅಷ್ಟನ್ನೇ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರದ ಕತೆಯಲ್ಲಿ ಆರಂಭದಿಂದ ಕೊನೆಯ ತನಕ ನಾಯಕನ ಗೆಳತಿಯಾಗಿ ಹಾಗೂ ಗಾಯತ್ರಿ ಕೈ ಕೊಟ್ಟಮೇಲೆ ನಾಯಕನ ಪ್ರೇಯಸಿಯಾಗಿ ನಟಿಸಿರುವ ಮಿಲನ ನಾಗರಾಜ್ ಹಾಡಲ್ಲಿ ಬಂದು, ಕುಣಿದು ಹೋಗುತ್ತಾರೆ. ಕಿಲ್ಲರ್ ವೆಂಕಟೇಶ್ ಮತ್ತು ಉಗ್ರಂ ಮಂಜು ಖಳರಾಗಿ ಗಮನ ಸೆಳೆದರೆ ಉದಯ್ಗೆ ಕ್ಲಾಸ್ ವಿಲನ್ ಪಾತ್ರ ವರ್ಕೌಟಾಗಿಲ್ಲ. ಸಂಭಾಷಣೆಗಾರರು ಪಂಚ್ ಗಿಂತ ಪ್ರಾಸಕ್ಕೆ ಹೆಚ್ಚು ಒತ್ತು ಕೊಟ್ಟಂತಿದೆ. ಹಿರಿಯ ನಟ ಉಮೇಶ್, ಕಾಶಿ, ಸುಚಿತ್ರಾ ಪಾತ್ರಗಳು ಸುಮ್ಮನೇ ಬಂದು ಹೋಗುತ್ತವೆ. ಇಡೀ ಕತೆ ಗಾಯತ್ರಿಯಾಗಿ ನಟಿಸಿದ ವೈಶಾಲಿಯ ಸುತ್ತ ಸುತ್ತುತ್ತದೆ. ಮುಗ್ದ ಯುವತಿಯಾಗಿ ಆಕೆ ಗಮನಾರ್ಹ ನಟನೆ ನೀಡಿದ್ದಾರೆ. ಪ್ರಿಯಕರನಾಗಿ ಗುರುನಂದನ್ ಕೂಡ ಮನಸೆಳೆಯುತ್ತಾರೆ. ಆರಂಭದಲ್ಲಿ ತೋರಿಸಲಾದ ಚಾರ್ಲಿ ಹೆಸರಿನ ಹಿನ್ನೆಲೆಯೇ ಕತೆಗೆ ಅನಗತ್ಯವೆನಿಸುತ್ತದೆ. ಅದೇ ರೀತಿ ಅನಾವಶ್ಯಕ ಸಸ್ಪೆನ್ಸ್ ಗಳೂ ಚಿತ್ರದಲ್ಲಿವೆ. ಉಳಿದಂತೆ ವೀರ ಸಮರ್ಥ್ ಸಂಗೀತವಷ್ಟೇ ಚಿತ್ರದಲ್ಲಿ ಮೆಚ್ಚಬಹುದಾದ ಅಂಶ. ಒಟ್ಟಿನಲ್ಲಿ ಚಾರ್ಲಿ ನಿರೀಕ್ಷೆಗಳ ಧ್ವಂಸ.
2015-09-17 · FilmySphere critic
- Review of Namak Haraam · 2.5/5
ನಮಕ್ ಹರಾಮ್ ಚಿತ್ರ ವಿಮರ್ಶೆ ಫೈಟು, ವಂಚನೆ ಜೊತೆಗೆ ಕ್ರೈಮ್ ಗೋಲ್ಡನ್ ಸ್ಟಾರ್ ಗಣೇಶ್ ನ ಕಿರಿಯ ಸಹೋದರ ಕೃಷ್ಣ ಮಹೇಶ್ ನಾಯಕರಾಗಿರುವ ಚಿತ್ರವೆಂಬ ಕಾರಣಕ್ಕೆ ಒಂದಷ್ಟು ನಿರೀಕ್ಷೆ ಮೂಡಿಸಿದ್ದ ನಮಕ್ ಹರಾಮ್ ಕೊನೆಗೂ ಪರದೆಯ ಮೇಲೆ ಬಂದಿದೆ. ಚಿತ್ರದಲ್ಲಿ ನಾಯಕ ಜಗ್ಗಿಯೆಂಬ ರೌಡಿ. ಆತನನ್ನು ರೌಡಿಯಾಗಿ ಬೆಳೆಸಿದಾತ ಜೈಲಲ್ಲಿರುತ್ತಾನೆ. ಉಳಿದ ರೌಡಿಗಳು ಆತನ ಹವಾಗೆ ಬೆದರಿ ಸ್ನೇಹ ಹಸ್ತ ಚಾಚಿರುತ್ತಾರೆ. ಆದರೆ ಒಳಗಿಂದೊಳಗೆ ಜಗ್ಗಿಯನ್ನೇ ಮುಗಿಸುವ ತಂತ್ರ ಹೂಡಿರುತ್ತಾರೆ. ಜಗ್ಗಿಯ ಸ್ನೇಹಿತರಲ್ಲಿ ಒಬ್ಬೊಬ್ಬರದೇ ಕೊಲೆಯಾಗತೊಡಗುತ್ತದೆ. ಅದಕ್ಕೆ ಕಾರಣ ಯಾರೆಂದು ಜಗ್ಗಿ ಹುಡುಕುವ ಹೊತ್ತಿಗೆ ತನ್ನನ್ನು ಹುಡುಕಿ ಬಂದ ಹುಡುಗಿಯೋರ್ವಳ ಪ್ರೀತಿಗೆ ಮನಸೋಲುತ್ತಾನೆ, ಪ್ರೀತಿಯಲ್ಲಿ ಬಿದ್ದ ಜಗ್ಗಿ ನಮ್ಮ ವಿರುದ್ಧವೇ ನಿಲ್ಲಬಹುದೆಂದುಕೊಂಡ ರೌಡಿಗಳು ಆತನ ವಿರುದ್ಧವೇ ಸ್ಕೆಚ್ ಹಾಕುತ್ತಾರೆ. ಜಗ್ಗಿಯನ್ನು ಬೆಳೆಸಿದ್ದ ರೌಡಿಯೂ ಜೈಲಿನಿಂದ ಹೊರಬಂದು ಅವರೊಂದಿಗೆ ಸೇರಿಕೊಂಡು ಜಗ್ಗಿಯ ವಿರುದ್ಧ ಸ್ಕೆಚ್ ಹಾಕುವುದು ವಿಶೇಷ. ಆದರೆ ಜಗ್ಗಿ ನಿಜಕ್ಕೂ ಬಲಿಯಾಗುತ್ತಾನ? ಅದಕ್ಕೆ ಯಾರು ಕಾರಣ? ಎಂಬ ಪ್ರಶ್ನೆಗಳಿಗೆ ಚಿತ್ರದ ಕ್ಲೈಮ್ಯಾಕ್ಸ್ ಉತ್ತರ ನೀಡುತ್ತದೆ. ನಾಯಕ ಮಹೇಶ್ ನ ಸದೃಢ ಶರೀರ ಹೊಡೆದಾಡುವ ನಾಯಕನಿಗೆ ಹೇಳಿ ಮಾಡಿಸಿದಂತಿದೆ. ಆದರೆ ಚಿತ್ರದಲ್ಲಿ ಜಗ್ಗಿ ಪಾತ್ರಕ್ಕೆ ನೀಡಲಾಗಿರುವ ಬಿಲ್ಡಪ್ ಗೆ ತಕ್ಕಂತೆ ಆತನ ಹವಾ ತೋರಿಸುವ ಸನ್ನಿವೇಶಗಳೇ ಇಲ್ಲ. ಖಳನಟ ರಾಜೇಂದ್ರ ಕಾರಂತ್ ಜೊತೆ ಮಾತನಾಡುವ ದೃಶ್ಯವೊಂದರಲ್ಲಂತೂ ನಿಮಿಷಗಳ ಕಾಲ ನಾಯಕನ ಮುಖದ ಹಿಂಭಾಗವನ್ನಷ್ಟೇ ತೆರೆಯ ಮೇಲೆ ತೋರಿಸಿರುವುದು ಛಾಯಾಗ್ರಾಹಕನ ಅಪಕ್ವತೆಗೆ ಸಾಕ್ಷಿಯಾಗಿದೆ. ರೌಡಿಗಳಲ್ಲೊಬ್ಬರಾಗಿ ಗೌರೀಶ್ ಅಕ್ಕಿ ಲಾಂಗ್ ಹಿಡಿದುಕೊಂಡರೂ ಕೂಡ ಕಾರ್ಪೊರೇಟ್ ಸ್ಮಗ್ಲರ್ ನಂತೆ ಕಾಣಿಸಿದ್ದಾರೆ. ನಾಯಕನ ನಿಷ್ಠಾವಂತ ಕುಡುಕ ಸ್ನೇಹಿತನಾಗಿ ಯತಿರಾಜ್ ತಮ್ಮ ಪಾತ್ರಕ್ಕೂ ನಿಷ್ಠವಾಗಿದ್ದಾರೆ. ಸ್ಕೆಚ್ಚು, ಮತ್ತು ಹೊಡೆದಾಟದ ನಡುವೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಬಂದು ಹೋಗುವ ನಾಯಕಿಯಾಗಿ ರ್ಯಾಪಿಡ್ ರಶ್ಮಿ ಸಂಭಾಷಣೆಗಳನ್ನು ಕೇಳುತ್ತಿದ್ದರೆ ಎಫೆಮ್ಮಿನ ಮಾತುಗಳೇ ನೆನಪಾಗಿ ಪಾತ್ರದ ಗಂಭೀರತೆ ಗೊತ್ತಾಗುವುದಿಲ್ಲ. ಕೊನೆಯಲ್ಲಿ ಆಕೆಯ ಪಾತ್ರಕ್ಕಿರುವ ತಿರುವು ಸಿನೆಮಾಗಳಲ್ಲಿ ಹೊಸದಲ್ಲದಿದ್ದರೂ ಅಲ್ಲಿನ ಸಂದರ್ಭಕ್ಕೆ ಅನಿರೀಕ್ಷಿತವಾಗಿರುತ್ತದೆ. ಒಟ್ಟಿನಲ್ಲಿ ಚಿತ್ರದಲ್ಲಿ ಹೇಳಿಕೊಳ್ಳುವಂಥ ಕತೆಯಿಲ್ಲ; ತೋರಿಸುವ ಘಟನೆಗಳಲ್ಲಿ ನಾಯಕನನ್ನು ಬಿಟ್ಟು ಎಲ್ಲರೂ ನಮಕ್ ಹರಾಮ್ ವ್ಯಕ್ತಿತ್ವದವರೇ. ಕ್ಲೈಮ್ಯಾಕ್ಸ್ ನಲ್ಲಿ ನೀತಿಯಿದೆ ಎಂಬುದನ್ನು ಬಿಟ್ಟರೆ ಉಳಿದೆಡೆಗಳಲ್ಲಿ ನ್ಯಾಯ ಸಲ್ಲಿಸುವಲ್ಲಿ ನಿರ್ದೇಶಕ ಪೀಣ್ಯನಾಗರಾಜ್ ಸೋತಿದ್ದಾರೆ. ಚಿತ್ರದ ಗೆಲುವು ಪ್ರೇಕ್ಷಕರ ಕೈಯ್ಯಲ್ಲಿದೆ.
2015-09-12 · FilmySphere critic
- Review of Geetha Bangle Store · 4/5
ಗೀತಾ ಬ್ಯಾಂಗಲ್ ಸ್ಟೋರ್ ಚಿತ್ರ ವಿಮರ್ಶೆ ಇದು ಗೀತಾ ಬಳೆಯಂಗಡಿ ಸ್ಟೋರಿ ಚಿತ್ರದಲ್ಲಿ ನಾಯಕ ಪಿಯುಸಿ ಹುಡುಗ ಆದರೆ ಅದೇ ವೇಳೆ ಹಳ್ಳಿಯ ಶ್ರಮಜೀವಿಯೂ ಹೌದು. ರೇಶ್ಮೆಹುಳ ಸಾಕಾಣಿಕೆ ನಡೆಸುವ ಮೂಲಕ ಕುಟುಂಬವನ್ನು ಸಾಕುತ್ತಾನೆ. ತಂದೆ ಸದಾ ಕಡಿತದ ನಶೆ ಬಯಸುವ ಬೇಜವಬ್ದಾರಿ ಮನುಷ್ಯ. ತಾಯಿಯ ಮೇಲೆ ಮಗನಿಗೆ ತುಂಬಾ ಪ್ರೀತಿ. ಇದೇ ವೇಳೆ ಕಾಲೇಜಿನಲ್ಲಿ ಸಹಪಾಠಿ ಹುಡುಗಿಯನ್ನು ಪ್ರೀತಿಸುತ್ತಾನೆ. ಬೀದಿಬದಿಯಲ್ಲಿ ವ್ಯಾಪಾರ ನಡೆಸುವ ಆಕೆಯ ತಾಯಿ ಪೊಲೀಸರ ದೌರ್ಜನ್ಯದಿಂದ ಗಾಯಗೊಂಡಾಗ ಮನೆ ಸೇರಿಸಿ ತಾಯಿಮಗಳ ಪ್ರೀತಿಗೆ ಪಾತ್ರವಾಗುತ್ತಾನೆ. ಬೀದಿ ಬದಿಯಲ್ಲಿ ವ್ಯಾಪಾರ ನಡೆಸಲಾಗದ ಆ ತಾಯಿಗೆ ಆಕೆಯ ಮಗಳ ಹೆಸರಿನಲ್ಲಿ ಗೀತಾ ಬ್ಯಾಂಗಲ್ ಸ್ಟೋರ್ ಎಂಬ ಅಂಗಡಿ ಹಾಕಿಕೊಡುತ್ತಾನೆ. ಅಲ್ಲಿಂದ ನಿಜವಾದ ಕತೆ ಶುರುವಾಗುತ್ತದೆ. ತನ್ನ ಮನೆಯಿಂದ ಚೀಟಿಗೆ ಹಾಕಿ ಎತ್ತಿಟ್ಟಿದ್ದ ದುಡ್ಡನ್ನೇ ಅಂಗಡಿ ಕೊಳ್ಳಲು ಬಳಸಿರುತ್ತಾನೆ ನಾಯಕ. ಆದರೆ ಈ ವಿಚಾರ ನಾಯಕನ ಮನೆಯಲ್ಲಿ ತಿಳಿದಿರುವುದಿಲ್ಲ; ತಿಳಿದಾಗ ಅವರ ಪ್ರತಿಕ್ರಿಯೆ ಏನಾಗಿರುತ್ತದೆ? ನಾಯಕ ಮತ್ತು ನಾಯಕಿಯ ಪ್ರಾಣಕ್ಕೆ ಕುತ್ತಾಗುವಂಥ ವಿಷಯ ಅದರಲ್ಲೇನಿರುತ್ತದೆ? ಎಂಬುದನ್ನು ಚಿತ್ರನೋಡಿ ತಿಳಿದುಕೊಂಡರೆ ಚೆನ್ನಾಗಿರುತ್ತದೆ. ನಿರ್ದೇಶಕ ಮಂಜುಮಿತ್ರ ಕತೆ ಮತ್ತು ಲೊಕೇಶನ್ ಗಳ ಆಯ್ಕೆಯಲ್ಲಿ ಸಹಜತೆ ತೋರಿಸಿದ್ದಾರೆ. ನವ ನಾಯಕ ನಟ ಪ್ರಮೋದ್ ನ ಗಂಭೀರ ಕಂಠ ಆತನ ಪಾತ್ರಕ್ಕೆ ಅಷ್ಟೇನೂ ಹೊಂದಾಣಿಕೆಯಾಗುವುದಿಲ್ಲ. ಥಟ್ಟನೆ ಋಷಿಕುಮಾರ ಸ್ವಾಮಿಯನ್ನು ನೆನಪಿಸುವ ಈತನದು ಕೂಡ ತುಸು ಓವರ್ ಆ್ಯಕ್ಟಿಂಗ್ ಅನಿಸುವಂಥ ನಟನೆ. ನಾಯಕಿಯಾಗಿ ಸುಶ್ಮಿತಾ ಶಿಂಧೆ ಚೆಲುವಿನ ಬೊಂಬೆಯಷ್ಟೇ. ಅನಗತ್ಯವಾಗಿ ಆಕೆಗೆ ಓವರ್ ಎಕ್ಸ್ ಪೋಸಿಂಗ್ ಹಾಡುಗಳನ್ನು ನೀಡಲಾಗಿದೆ. ವಿ.ಮನೋಹರ್ ನೀಡಿರುವ ಸಂಗೀತಕ್ಕಿಂತ ಚಿತ್ರದಲ್ಲಿ ಅವರು ನಟಿಸಿರುವ ಉಪನ್ಯಾಸಕರ ಪಾತ್ರ ನೆನಪಲ್ಲಿ ಉಳಿಯುತ್ತದೆ. ನಾಯಕನ ತಂದೆಯಾಗಿ ಅಚ್ಯುತ ಕುಮಾರ್ ಮತ್ತು ತಾಯಿಯಾಗಿ ವಿನಯಾಪ್ರಕಾಶ್ ನಟನೆ ಪಾತ್ರಕ್ಕೆ ತಕ್ಕಂತೆ ಮೂಡಿ ಬಂದಿದೆ. ಆರಂಭದಿಂದ ಅಂತ್ಯದೊಳಗೆ ಪದೇಪದೇ ನುಸುಳಿ ಬರುವ ಟಾಯ್ಲೆಟ್ ಹಾಸ್ಯವನ್ನು ಅವಾಯ್ಡ್ ಮಾಡಿದ್ದರೆ ಚೆನ್ನಾಗಿರುತ್ತಿತ್ತು. ಚಿತ್ರದ ಕಲಾನಿರ್ದೇಶನ ಹಲವು ಬಾರಿ ಕೃತಕತೆಯನ್ನು ನೆನಪಿಸುವಂತೆ ಮಾಡಿದ್ದು; ಅದಕ್ಕೆ ತಕ್ಕಂತೆ ಛಾಯಾಗ್ರಹಣ ಕೂಡ ಚಿತ್ರವನ್ನು ಪೇಲವವನ್ನಾಗಿಸಿದೆ. ಗಿರಿರಾಜ್ ಗೆ ನೀಡಿದ ರಾಜಖಳನ ಬಿಲ್ಡಪ್ ಕೊನೆಯ ತನಕ ಉಳಿಯುವುದಿಲ್ಲ. ಗೀತಾ ಬ್ಯಾಂಗಲ್ ಸ್ಟೋರ್ ನ ಒಡತಿಯಾಗಿ ಭವ್ಯಾ ಒಳ್ಳೆಯದೊಂದು ಪಾತ್ರವನ್ನೇ ನಿರ್ವಹಿಸಿದ್ದಾರೆ. ಗ್ರಾಮೀಣ ಸೊಗಡು ಮತ್ತೊಂದಷ್ಟು ಕತೆಯೊಂದಿಗೆ ಚಿತ್ರ ನೀಡಿರುವ ಮಂಜುಮಿತ್ರ ಭವಿಷ್ಯದಲ್ಲಿ ನಿರ್ದೇಶಕ ಆರ್.ಚಂದ್ರುವಿನಂತೆ ಹೆಸರು ಮಾಡಿದರೆ ಅಚ್ಚರಿಯಿಲ್ಲ.
2015-09-12 · FilmySphere critic
- Review of Kendasampige · 3/5
ಕೆಂಡ ಸಂಪಿಗೆ ಚಿತ್ರ ವಿಮರ್ಶೆ ಕೆಂಡ ಹೆಚ್ಚು; ಸಂಪಿಗೆ ಸಣ್ಣಗೆ ಶ್ರೀಮಂತ ನಾಯಕಿಯೊಂದಿಗೆ ಪ್ರೇಮದಲ್ಲಿ ಬೀಳುವ ನಾಯಕ ತನ್ನ ಪ್ರೇಮದ ಸಾಕ್ಷತ್ಕಾರಕ್ಕೆ ಅಡ್ಡವಾಗಿ ನಿಲ್ಲುವ ಶ್ರೀಮಂತರ ವಿರುದ್ಧ ಹೋರಾಟಕ್ಕಿಳಿಯುವ ಕತೆ ತುಂಬ ಹಳೆಯದು. ಆದರೆ ಹಾಗೆ ಹೋರಾಡಲಾರದ ನಾಯಕನನ್ನು ಅಪರಾಧದೊಳಗೆ ಸಿಲುಕಿಸಿ ಬಿಡುವ ಶ್ರೀಮಂತರ ಯತ್ನವೇ ಇಲ್ಲಿ ಚಿತ್ರವಾಗಿದೆ. ನಾಯಕನನ್ನು ಅಪರಾಧಿಯನ್ನಾಗಿಸಲು ಮತ್ತು ನಿರಪರಾಧಿಯನ್ನಾಗಿಸಲು ನಡೆಸುವ ಇಬ್ಬರು ಪೊಲೀಸರ ಪ್ರಯತ್ನದಲ್ಲಿ ಯಾರು ಗೆಲ್ಲುತ್ತಾರೆ ಎಂಬುದೇ ಚಿತ್ರದ ಕತೆ. ಚಿತ್ರದಲ್ಲಿ ಮುಗ್ದನೆಂದು ಒಬ್ಬನನ್ನು ಪರಿಚಯಿಸಬೇಕಾದರೆ ಆತನ ಮುಗ್ಧತೆಯ ಬಗ್ಗೆ ಸರಿಯಾದ ಇಂಟ್ರಡಕ್ಷನ್ ಕೊಟ್ಟಿರಬೇಕು. ಅಥವಾ ಆತ ಪ್ರೇಕ್ಷಕರಿಗೆ ಈಗಾಗಲೇ ಪರಿಚಿತ ನಟನಾಗಿರಬೇಕು. ಆಗ ಮಾತ್ರ ಆತನೊಂದಿಗೆ ನಾವೂ ಕೂಡ ಚಿತ್ರದೊಳಗೆ ಪ್ರವೇಶಿಸಲು ಸಾಧ್ಯ. ಆದರೆ ಸೂರಿ ತಮ್ಮ ನಾಯಕನಿಗೆ ಆ ಎರಡೂ ಅವಕಾಶಗಳನ್ನು ನೀಡಿಲ್ಲ. ಹಾಗಾಗಿಯೇ ಚಿತ್ರದ ಪೋಷಕ ಪಾತ್ರಗಳಾದ ಸದ್ಗುಣವಂತ ಪೊಲೀಸ್ ಅಧಿಕಾರಿ ಪುರಂಧರನಾಗಿ ನಟಿಸಿದ ನಟರಂಗ ರಾಜೇಶ್ ಮತ್ತು ದುಷ್ಟನಾಗಿ ಕಾಣಿಸಿರುವ ಪ್ರಕಾಶ್ ಬೆಳವಾಡಿ ಪಾತ್ರಗಳು ಮಾತ್ರವೇ ಚಿತ್ರದತ್ತ ಆಸಕ್ತಿ ಹುಟ್ಟಿಸುತ್ತವೆ. ಅಲ್ಲಿಗೆ ಕ್ರೈಮ್ ಮತ್ತು ಪ್ರೇಮವನ್ನು ತೂಗಿಸಲು ಹೊರಟು ಕ್ರೈಮ್ ನಲ್ಲಷ್ಟೇ ಸದ್ದು ಮಾಡಿದ್ದಾರೆ ಸೂರಿ. (ಅದರಲ್ಲೂ ಕಾರವಾರದ ತೀರದಲ್ಲಿ ನಡೆಯಿತೆಂಬಂತೆ ತೋರಿಸಲಾದ ಡ್ರಗ್ಸ್ ಮಾಫಿಯಾದ ಕೊಲೆಯಲ್ಲಿ ಸಿನಿಮೀಯತೆಯೇ ತುಂಬಿದೆ.) ಪ್ರೇಮದಲ್ಲಿ ಹರಿಕೃಷ್ಣ ಸಂಗೀತದಲ್ಲಿರುವ ಜಯಂತ್ ಕಾಯ್ಕಿಣಿ ಹಾಡೊಂದು ಮಾತ್ರ ಆಪ್ತವಾಗುತ್ತದೆ. ಶೀತಲ್ ಶೆಟ್ಟಿ, ಚಂದ್ರಿಕಾ, ಪ್ರಶಾಂತ್ ಸಿದ್ದಿ ಜೊತೆಗೆ ಒಂದಷ್ಟು ಹೊಸಮುಖಗಳ ಪೋಷಕ ಪಾತ್ರಗಳು ಬೀರುವ ಪ್ರಭಾವವನ್ನು ನವನಾಯಕ ನಾಯಕಿಯರ ಪಾತ್ರಗಳು ನೀಡುವುದಿಲ್ಲ. ಆದರೆ ಸಿಕ್ಕ ಅವಕಾಶದಲ್ಲಿ ವಿಕ್ಕಿ ಮತ್ತು ಮನ್ವಿತಾ ಚೆನ್ನಾಗಿಯೇ ನಟಿಸಿದ್ದಾರೆ. ಸತ್ಯಹೆಗ್ಡೆ ಛಾಯಾಗ್ರಹಣ, ದೀಪು ಸಂಕಲನ ಮತ್ತು ಶಶಿಧರ ಅಡಪರ ಕಲೆಯೇ ಚಿತ್ರವನ್ನು ತಾಂತ್ರಿಕವಾಗಿ ಎದ್ದು ಕಾಣುವಂತೆ ಮಾಡಿದೆ. ಉಳಿದಂತೆ ಇದೊಂದು ಸಾಧಾರಣ ಚಿತ್ರವೆಂದಷ್ಟೇ ಹೇಳಬಹುದು.
2015-09-12 · FilmySphere critic
- Review of Comma · 5/5
comma......life is comma , full stop is death .
2015-09-10
- Review of Uppi 2 · 4.5/5
Superb movie...watched 2 times to understand :)
2015-09-05
- Review of Aatagara · 3.5/5
Good attempt by team...Suspense was nice..They have taken current issues and given a good message...but suspense could have been more....they shortened Sadhu's part...I can say another hit movie to kannada
2015-09-05