Skip to content
FilmySphere

From the earlier FilmySphere, kept as published on 2015-10-10. It has not been updated.

Review of Ring Master

FilmySphere critic · Rating 2/5

ರಿಂಗ್ ಮಾಸ್ಟರ್ ಚಿತ್ರ ವಿಮರ್ಶೆ

ರಾಂಗ್ ರಾಂಗ್ ಆಡುವ ರಿಂಗ್ ಮಾಸ್ಟರ್

ಹಿಂದೆಂದೂ ನಟಿಸಿರದ ಪಾತ್ರದಲ್ಲಿ ಅರುಣ್ ಸಾಗರ್ ಕಾಣಿಸಿಕೊಳ್ಳಲಿರುವುದಾಗಿ ನಿರ್ದೇಶಕ ವಿಶ್ರುತ್ ನಾಯಕ್ ಹೇಳಿದ್ದರು. ಆದರೆ ಹಿಂದೆ ನಟಿಸಿದ ಒಟ್ಟು ಚಿತ್ರಗಳ ಪಾತ್ರಗಳನ್ನು ಇದೊಂದರಲ್ಲೇ ಕೊಟ್ಟು ತಲೆ ಚಿಟ್ಟು ಹಿಡಿಸಿದ್ದಾರೆಂದು ಪ್ರೇಕ್ಷಕಕರು ಹೇಳುವಂತಿದೆ ಚಿತ್ರ.

ಫ್ಲಾಟ್ ಒಂದರಲ್ಲಿ ವಾಸವಾಗಿರುವ ಒಬ್ಬ ಯುವಕ ಮತ್ತು ಇಬ್ಬರು ಯುವತಿಯರು ಗಾಂಜಾ ಸೇದಿ ಹೊಸ ವರ್ಷಾಚರಣೆ ಮಾಡಲು ಬಯಸುತ್ತಾರೆ. ಆದರೆ ಇವರಿಗೆ ಗಾಂಜಾ ವಿತರಿಸಲೆಂದು ಬರುವ ಭಂಗೀರಂಗ ಅವರನ್ನು ಇನ್ನಿಲ್ಲದಂತೆ ಕಾಡುತ್ತಾನೆ. ಅಂದರೆ ಅವರ ಸ್ವೇಚ್ಛಾಚಾರದ ಬದುಕಿನ ತಪ್ಪುಗಳೇನು ಎಂದು ಮನವರಿಕೆ ಮಾಡುತ್ತಾನೆ. ಆದರೆ ಅವರಿಗಿಂತ ಮೊದಲೇ ಚಿತ್ರ ನೋಡಲು ಬಂದವರು ಪ್ರಾಯಶ್ಚಿತ್ತ ಪಡುವಂತಿದೆ. ಅದು ಹೇಗೆ ಎಂಬುದನ್ನು ತಿಳಿಯಬೇಕಾದರೆ ಪ್ರತಿಯೊಬ್ಬರೂ ಚಿತ್ರ ಮಂದಿರಕ್ಕೆ ಹೋಗಿಯೇ ಅನುಭವಿಸಲು ಸಾಧ್ಯ!

ಚಿತ್ರವನ್ನು 'ಮಿಸ್ ಬಿಹೇವಿಯರ್' ಎಂಬ ಆಂಗ್ಲ ಚಿತ್ರದ ಸ್ಪೂರ್ತಿಯಿಂದ ಮಾಡಿದ್ದಾಗಿ ನಿರ್ದೇಶಕರು ಹೇಳುತ್ತಾರೆ. ಆದರೆ ಪೂರ್ತಿ ಚಿತ್ರದ ಕತೆ 'ಕೌಂಟ್ ಡೌನ್' ಸಿನೆಮಾದಂತಿದೆ ಎಂದು ಥಾಯ್ ಚಿತ್ರ ನೋಡಿದವರು ಹೇಳುತ್ತಾರೆ. ಇತ್ತೀಚೆಗಷ್ಟೇ ಒರಿಜಿನಲ್ ಎಂದು ಸುಳ್ಳು ಹೇಳಿಕೊಂಡು ಬಂದ ರಿಮೇಕ್ ಚಿತ್ರ 'ಆಟಗಾರ'ದ ಮತ್ತೊಂದು ರೂಪವಿದು ಎಂಬುದು ಅಚ್ಛ ಕನ್ನಡಿಗ ಪ್ರೇಕ್ಷಕರ ಅಭಿಪ್ರಾಯ! ಅದರಲ್ಲಿ ದ್ವೀಪದಲ್ಲಿ ತೋರಿಸಿರುವುದನ್ನು ಇದರಲ್ಲಿ ಒಂದು ಕೋಣೆಗೆ ಸೀಮಿತಗೊಳಿಸಲಾಗಿದೆ. ಅರಣ್ ಸಾಗರ್ ನ ಅರಳುಗಣ್ಣು, ಕೆರಳು ನೋಟಕ್ಕೆ ತಕ್ಕದಾಗಿ ಹಿನ್ನೆಲೆ ಸಂಗೀತವೂ ಅಬ್ಬರದಿಂದ ಕಾಡುತ್ತದೆ. ಅದೇ ಕಾರಣದಿಂದಲೇ ಇರಬಹುದು; ಅನುಶ್ರೀ, ಶ್ವೇತಾ, ಶೃಂಗ ಸಹ್ಯವೆನಿಸುತ್ತಾರೆ. ಜೊತೆಗೆ ಹಾಡುಗಳು ಆಲಿಸುವಂತಿವೆ. ತಪ್ಪಿಗೆ ಶಿಕ್ಷೆ ನೀಡುವಾಗಲೂ ತಪ್ಪು ತಪ್ಪಾಗಿ ವರ್ತಿಸುವ ಭಂಗಿರಂಗನ ಪಾತ್ರ ಭಜರಂಗಿ ಸೇನೆ ಸಂಚಾಲಕನೋ ಎಂಬ ಸಂದೇಹ ಕಾಡದಿರದು. ರಿಂಗ್ ಮಾಸ್ಟರ್ ನ ಅಗತ್ಯ ಪ್ರಾಣಿಗಳಿಗೆ ಮಾತ್ರ ಎಂಬುದು ಶೀರ್ಷಿಕೆಗೆ ಸಲ್ಲುವ ನ್ಯಾಯ.