From the earlier FilmySphere, kept as published on 2015-10-24. It has not been updated.
Review of Vascodigama
FilmySphere critic · Rating 3.5/5
ವಾಸ್ಕೋಡಿಗಾಮ ಚಿತ್ರ ವಿಮರ್ಶೆ ವಾಸ್ಕೋಡಿಗಾಮ:ವಾಸು ಪ್ರಕಾರ ಶಿಕ್ಷಣ ವ್ಯವಸ್ಥೆ
ಅದು ಒಂದು ಕನಸಿನ ಕಾಲೇಜು. ಅದನ್ನು ಸ್ಥಾಪನೆ ಮಾಡಿರುವವರು ವಿದೇಶದಲ್ಲಿದ್ದಾರೆ. ಅವರು ಸ್ಥಾಪಿಸಿದಾಗ ಇದ್ದ ಹೆಸರು ಈಗ ಕಾಲೇಜಿಗಿಲ್ಲ. ವಿದ್ಯಾ ಸಂಸ್ಥೆ ಕುಲಗೆಟ್ಟು ಹೋಗಿದ್ದರೂ ದೊಡ್ಡ ಹೆಸರು ಪಡೆದಿದೆ ಎಂಬಂತೆ ಸುಳ್ಳುಸುಳ್ಳಾಗಿ ಚಿತ್ರೀಕರಣ ನಡೆಸಿ ಅದರ ಸಂಸ್ಥಾಪಕರಿಗೆ ಸೀಡಿ ಕ್ಯಾಸೆಟ್ ಕಳಿಸಿರುತ್ತಾರೆ. ಆದರೆ ಒಮ್ಮೆ ಅನಿರೀಕ್ಷಿತವಾಗಿ ವಾಪಾಸಾದಾಗ ಕಾಲೇಜಲ್ಲಿ ನಡೆಯುವ ಅನಾಹುತಗಳ ಸಂಪೂರ್ಣ ದರ್ಶನವಾಗುತ್ತದೆ. ತಕ್ಷಣವೇ ಪ್ರಾಂಶುಪಾಲರನ್ನೇ ಅಮಾನತು ಮಾಡಿ ಕಾಲೇಜು ಮುಚ್ಚಲು ಮುಂದಾಗುತ್ತಾರೆ ಅವರು. ಆದರೆ ಮುಚ್ಚುವ ಮೊದಲು ತಮಗೆ ಒಂದು ವರ್ಷದ ಅವಕಾಶ ನೀಡಿದಲ್ಲಿ ಮತ್ತೆ ಕಾಲೇಜಿಗೆ ಉತ್ತಮ ಹೆಸರು ತಂದು ಕೊಡುವ ಭರವಸೆ ಕೊಡುತ್ತಾಳೆ ಶಾಂತಿ ಎಂಬ ಉಪನ್ಯಾಸಕಿ. ಆಕೆಯನ್ನೇ ಪ್ರಾಂಶುಪಾಲೆಯನ್ನಾಗಿಸಿ ಒಂದು ವರ್ಷದ ಅಂತ್ಯಕ್ಕೆ ಕಾಯುತ್ತಾರೆ ಸಂಸ್ಥಾಪಕರು. ಇಲ್ಲಿನ ಮಕ್ಕಳ ಕುಡಿತ, ಸಿಗರೇಟು, ಇಸ್ಪೀಟುಗಳಿಗೆ ಸಾಥ್ ನೀಡಿ ಅವರನ್ನು ತನ್ನೆಡೆಗೆ ಸೆಳೆದುಕೊಂಡ ಉಪನ್ಯಾಸಕನೇ ವಾಸು ಎಂಬ ವಾಸ್ಕೋಡಿಗಾಮ. ಶಾಂತಿ ಕಾಲೇಜಿಗೆ ಬಂದ ಹೊಸದರಲ್ಲಿ ತನ್ನ ವಿದ್ಯಾರ್ಥಿ ಮಿತ್ರರ ಮೂಲಕ ತಾನು ಒಬ್ಬ ಶ್ರೇಷ್ಠ ಉಪನ್ಯಾಸಕ ಎಂಬ ಬಿಲ್ಡಪ್ ನೀಡಿರುತ್ತಾನೆ. ಆಗ ಆತನಿಗೆ ಮನಸೋತಿದ್ದ ಶಾಂತಿ ಸತ್ಯ ತಿಳಿದಾಗ ಆತನ ಬಗ್ಗೆ ಅಶಾಂತಿಗೊಳ್ಳುತ್ತಾಳೆ. ಶಾಂತಿ ಪ್ರಾಂಶುಪಾಲೆಯಾದ ಮೇಲೆ ವಾಸ್ಕೋಡಿಗಾಮನ ಸ್ಥಿತಿಯೇನಾಗುತ್ತದೆ? ಚಿತ್ರದ ಆರಂಭದಲ್ಲೇ ವಾಸ್ಕೋಡಿಗಾಮ ಕಾಲೇಜು ವಿದ್ಯಾರ್ಥಿಗಳನ್ನು ಅಪಹರಿಸಿದ್ದಾಗಿ ಹರಡುವ ಸುದ್ದಿಗೆ ಕಾರಣವೇನು ಎಂಬುದಕ್ಕೆ ಉತ್ತರ ಬೇಕಾದರೆ ಚಿತ್ರ ನೋಡಬಹುದು. ಚಿತ್ರದಲ್ಲಿ ವಾಸ್ಕೋಡಿಗಾಮ ಯಾನೇ ವಾಸುವಾಗಿ ಕಿಶೋರ್ ವಿಭಿನ್ನವಾಗಿ ಕಾಣಿಸಿದ್ದಾರೆ. ಶಾಂತಿಯಾಗಿ ಪಾರ್ವತಿ ನಾಯರ್ ಭರವಸೆಯ ನಟಿಯೆನಿಸುತ್ತಾರೆ. ಹೆಚ್ಚಿನ ದೃಶ್ಯ ಮತ್ತು ಸಂಭಾಷಣೆಗಳು ಸಹಜತೆಯೊಂದಿಗೆ ನಗುವನ್ನು ಸೃಷ್ಠಿಸುತ್ತವೆ. ಛಾಯಾಗ್ರಹಣ ಆಕರ್ಷಕವಾಗಿದೆ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಯಾಗಬೇಕಿರುವುದನ್ನು ಮತ್ತು ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರವನ್ನೇ ಆಯ್ದುಕೊಳ್ಳಬೇಕೆಂಬ ಸಂದೇಶವನ್ನು ಚಿತ್ರ ನೀಡುತ್ತದೆ. ಚಿತ್ರದಲ್ಲಿ ವಿದ್ಯಾರ್ಥಿಗಳನ್ನು ವಾಸ್ಕೋಡಿಗಾಮ ಅಪಹರಿಸುವ ವಿಚಾರ ಪರಿಣಾಮಕಾರಿಯಾಗಿ ತೆರೆಕಂಡಿಲ್ಲ ಎಂಬುದೇ ಒಟ್ಟು ಚಿತ್ರದ ಪ್ರಮುಖ ನೆಗೆಟಿವ್ ಅಂಶವೆನ್ನಬಹುದು. ಉಳಿದಂತೆ ಇದೊಂದು ಭಿನ್ನ ಪ್ರಯೋಗದ ಚಿತ್ರವೆಂಬುದರಲ್ಲಿ ಎರಡು ಮಾತಿಲ್ಲ.