Skip to content
FilmySphere

From the earlier FilmySphere, kept as published on 2015-10-23. It has not been updated.

Review of Ganga

FilmySphere critic · Rating 2.5/5

ಗಂಗಾ ಚಿತ್ರ ವಿಮರ್ಶೆ ಕುಟುಂಬ ಪಾಲಕಿ, ರಕ್ಷಕಿ ಈ ರಿಕ್ಷಾ ಚಾಲಕಿ

ಪಾತ್ರ ಪೊಲೀಸ್ ಅಧಿಕಾರಿಯದ್ದಾದರೂ ಕೌಟುಂಬಿಕ ಚಿತ್ರದಲ್ಲೇ ಕಾಣಿಸಿಕೊಳ್ಳುತ್ತಿದ್ದ ಮಾಲಾಶ್ರೀ ಈ ಬಾರಿ ಆಟೋರಾಣಿಯಾಗಿದ್ದಾರೆ. ಇಲ್ಲಿ ಸಮಾಜ ಸೇವೆಗಿಂತಲೂ ಕುಟುಂಬಕ್ಕಾಗಿ ಹೋರಾಡುವ ಹೆಣ್ಣುಮಗಳ ಪಾತ್ರವನ್ನೇ ನಿರ್ವಹಿಸಿದ್ದಾರೆ.

ಸ್ನೇಹಿತರಿಗೆ ಪರಿಚಿತರಿಗೆ ಸದಾ ಸಹಾಯಹಸ್ತವನ್ನು ಚಾಚುವ ಗಂಗಾಳ ಮನೆಯಲ್ಲಿ ಆಕೆಯ ಅಕ್ಕ ಮತ್ತು ಕಾಲೇಜು ಓದುತ್ತಿರುವ ಅಕ್ಕನ ಮಕ್ಕಳು ಮಾತ್ರವೇ ಇರುತ್ತಾರೆ. ಮಕ್ಕಳ ಓದು ಮತ್ತು ಮನೆಯ ಜವಾಬ್ದಾರಿಯನ್ನು ವಹಿಸಿಕೊಂಡು ಗಂಗಾ ರಿಕ್ಷಾ ಚಾಲಕಿಯಾಗಿ ದುಡಿಯುತ್ತಿರುತ್ತಾಳೆ. ದೇವಸ್ಥಾನದ ಪಕ್ಕದಲ್ಲೇ ಇರುವ ಎಂಎಲ್ ಎ ಕ್ಯಾಂಡಿಡೇಟ್ ಒಬ್ಬನ ಬಾರ್ ಅ್ಯಂಡ್ ರೆಸ್ಟೋರೆಂಟನ್ನು ಅಲ್ಲಿಂದ ಶಿಫ್ಟ್ ಮಾಡಿಸುವಲ್ಲಿ ಗಂಗಾ ಪ್ರಮುಖ ಪಾತ್ರವಹಿಸುತ್ತಾಳೆ. ಆತ ತನ್ನ ಸೇಡು ಸಾಧಿಸಲು ಸಮಯ ನೋಡುತ್ತಿರುತ್ತಾನೆ. ಇದೇ ವೇಳೆ ಎಂಬಿಬಿಎಸ್ ವಿದ್ಯಾರ್ಥಿಯಾದ ಗಂಗಾಳ ಅಕ್ಕನ ಮಗ ಹೆಚ್ಚಿನ ಮಾರ್ಕ್ಸ್ ಗಳಿಸಿ ಸುದ್ದಿಯಾಗುತ್ತಾನೆ. ಆತನನ್ನು ತನ್ನ ಮಗಳಿಗೆ ವರನಾಗಿಸಲು ಬಯಸಿ ವಿದೇಶದಿಂದ ಅಶೋಕ್ ಬಹದ್ದೂರ್ ಎಂಬಾತ ಬರುತ್ತಾನೆ. ಸ್ಲಂ ಏರಿಯಾದಲ್ಲಿದ್ದ ಗಂಗಾಳ ಕುಟುಂಬವನ್ನು ನಗರದ ತನ್ನ ಗೆಸ್ಟ್ ಹೌಸ್ ಗೆ ಕರೆದೊಯ್ಯುತ್ತಾನೆ. ಆದರೆ ಗಂಗಾ ಆತನ ಜೊತೆಗೆ ಹೋಗುವುದನ್ನು ನಿರಾಕರಿಸುತ್ತಾಳೆ. ಅಶೋಕ್ ಬಹದ್ದೂರ್ ನ ಹಿನ್ನೆಲೆಯೇನು? ಅಲ್ಲಿಗೆ ಹೋದ ಗಂಗಾಳ ಫ್ಯಾಮಿಲಿ ಎದುರಿಸುವ ಕಷ್ಟಗಳೇನು? ಇತರರ ಕಷ್ಟಗಳಿಗಾಗಿ ಹೋರಾಡಿದ ಗಂಗಾಳ ಆರೋಗ್ಯದಲ್ಲಿರುವ ಕಷ್ಟವೇನು? ಮದುವೆಯ ವಯಸ್ಸು ದಾಟಿದರೂ ಗಂಗಾ ತನ್ನ ಅಕ್ಕ ಮತ್ತು ಮಕ್ಕಳ ಸೇವೆಯಲ್ಲಷ್ಟೇ ನಿರತಳಾಗಿದ್ದೇಕೆ? ಮೊದಲಾದ ಪ್ರಶ್ನೆಗಳಿಗೆ ಚಿತ್ರ ಉತ್ತರ ನೀಡುತ್ತದೆ.

ಚಿತ್ರದಲ್ಲಿ ಮಾಲಾಶ್ರೀ ಎಂದಿನ ಲವಲವಿಕೆಯ ನಟನೆ ನೀಡಿದ್ದಾರೆ. ಫ್ಲ್ಯಾಶ್ ಬ್ಯಾಕ್ ಕತೆಯ ಮದುವಣಗಿತ್ತಿಯಾಗಿ ಮಾತ್ರ ಆಕೆಯನ್ನು ಒಪ್ಪುವುದು ಕಷ್ಟವಾಗುತ್ತದೆ. ಗಂಗಾಳ ಅಕ್ಕ ಯಮುನಾ ಪಾತ್ರದಲ್ಲಿ ಪವಿತ್ರಾ ಲೋಕೇಶ್ ಮತ್ತು ಆಕೆಯ ಪತಿಯಾಗಿ ಆಫ್ ಸ್ಕ್ರೀನ್ ಜೋಡಿ ಸುಚೇಂದ್ರ ಪ್ರಸಾದ್ ನಟಿಸಿದ್ದಾರೆ. ಬುಲೆಟ್ ಪ್ರಕಾಶ್ ಮತ್ತು ಸಾಧು ಕೋಕಿಲ ಹಾಸ್ಯವನ್ನು ಬೇರೆಯೇ ಟ್ರ್ಯಾಕ್ ನಲ್ಲಿ ಸೇರಿಸಿಕೊಳ್ಳಲಾಗಿದೆ. ಕೋಳಿಸ್ವಾಮಿಯಾಗಿ ರಂಗಾಯಣ ರಘು ನಟಿಸಿದ್ದಾರೆ. ಎಂಎಲ್ ಎ ಅಭ್ಯರ್ಥಿಯಾಗಿ ಶರತ್ ಲೋಹಿತಾಶ್ವ ನಟಿಸಿದ್ದು ಅಶೋಕ್ ಬಹದ್ದೂರ್ ಪಾತ್ರದಲ್ಲಿ ಮುಖ್ಯಮಂತ್ರಿ ಚಂದ್ರು ತಮ್ಮ ಹಳೆಯ ಖಳನ ಚಾರ್ಮ್ ಉಳಿಸಿಕೊಂಡಿರುವುದನ್ನು ರುಜುವಾತು ಪಡಿಸಿದ್ದಾರೆ. ಗಂಗಾಳ ಅತ್ತೆಯ ಪಾತ್ರದಲ್ಲಿರುವ ಹೇಮಾ ಚೌಧರಿ ನಟನೆಯೊಂದಿಗೆ ತಮ್ಮ ಸೊಬಗಿನಲ್ಲಿಯೂ ಗಮನ ಸೆಳೆಯುವುದು ವಿಶೇಷ. ಒಟ್ಟು ಚಿತ್ರಕತೆ ನೋಡಿದರೆ ಟಿಪಿಕಲ್ ಅಳುಮುಂಜಿ ನಾಯಕಿಯ ಹಳೆಯ ಕತೆ. ಆದರೆ ಮಾಲಾಶ್ರೀಗಾಗಿ ಚಿತ್ರದಲ್ಲಿ ಫೈಟುಗಳನ್ನು ತುರುಕಲಾಗಿದೆ ಎಂಬುದಷ್ಟೇ ಭಿನ್ನತೆ. ಛಾಯಾಗ್ರಹಣ ಮತ್ತು ಸಂಭಾಷಣೆ ಆಕರ್ಷಕ. ಆದರೆ ಅಷ್ಟಕ್ಕೆ ಮಾತ್ರ ದೀರ್ಘಾವಧಿಯ ಈ ಚಿತ್ರವನ್ನು ನೋಡುತ್ತಾ ಕೂರುವುದು ನಿರರ್ಥಕ.