From the earlier FilmySphere, kept as published on 2015-12-04. It has not been updated.
Review of Rathaavara
FilmySphere critic · Rating 3/5
ರಥಾವರ ಚಿತ್ರ ವಿಮರ್ಶೆ
ರಥಾವರ: ವರವಲ್ಲ; ಶಾಪವೇ ಹೆಚ್ಚು!
ದುಷ್ಟ ಎಂಎಲ್ ಎಯೊಬ್ಬ ಸಾಕಿ ಬೆಳೆಸಿದ ರೌಡಿಯೇ ರಥ; ಆತನೇ ಚಿತ್ರದ ನಾಯಕ. ಮಂಗಳಮುಖಿಯ ಶವದ ಮುಖವನ್ನು ನೋಡಿದರೆ ಮುಖ್ಯಮಂತ್ರಿಯಾಗುವ ಅದೃಷ್ಟ ತನ್ನದಾಗುತ್ತದೆ ಎಂದು ನಂಬಿದ ಎಮ್ಮೆಲ್ಲೆ ಶವ ತರಿಸುವ ಕೆಲಸವನ್ನು ರಥನಿಗೆ ವಹಿಸುತ್ತಾನೆ. ಶವ ತರುವ ಯತ್ನದಲ್ಲಿ ಮಂಗಳಮುಖಿ ಮಹಾದೇವಿಯೊಂದಿಗೆ ಹೊಡೆದಾಡುತ್ತಾನೆ. ರಥ ತನ್ನ ಬಳಿಯಿದ್ದ ಶವವನ್ನು ಅಪಹರಿಸಿ ಎಮ್ಮಲ್ಲೆಗೆ ತಲುಪಿಸಿ ಆತನ ಆತ್ಮೀಯರಾಗಲೆತ್ನಿಸುವ ಮತ್ತೊಂದು ಬಣದವರೊಂದಿಗೂ ಹೊಡೆದಾಡುತ್ತಾನೆ. ಶವವನ್ನು ತಲುಪಿಸದಿದ್ದ ಕಾರಣ ಎಮ್ಮೆಲ್ಲೆಯ ಬಳಿಯಲ್ಲೂ ವಿರೋಧ ಕಟ್ಟಿಕೊಳ್ಳುತ್ತಾನೆ. ತನ್ನ ದಾರಿಯಿಂದ ತಿದ್ದಿಕೊಂಡು ಎಮ್ಮೆಲ್ಲೆಯ ಸಹವಾಸದಿಂದ ದೂರಾಗುತ್ತಾನೆ. ಆದರೆ ಮಂಗಳಮುಖಿ, ಎಮ್ಮೆಲ್ಲೆ ಮತ್ತು ಆತನ ನೂತನ ಬಂಟರು ಸೇರಿ ರಥನನ್ನು ಅವಿರತ ಕಾಡಿ ಮುಗಿಸುವುದೇ ಚಿತ್ರದ ಕತೆ. ಮಂಗಳಮುಖಿ ಜೊತೆಗಿನ ವೈಷಮ್ಯ ಎಂಬುದನ್ನು ಬಿಟ್ಟರೆ ಪೂರ್ತಿ ಕತೆಯಲ್ಲಿ ಯಾವುದೇ ಹೊಸತನವಿಲ್ಲ. ಸುಲಭದಲ್ಲಿ ಮುಗಿಸಬಹುದಾದ ಚಿತ್ರಕ್ಕೆ ಅನಗತ್ಯ ದೃಶ್ಯಗಳನ್ನು ತುರುಕಿ ಹಿಗ್ಗಿಸಿದ್ದಾರೆ ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ. ಅಬ್ಬರದ ಹಿನ್ನೆಲೆ ಸಂಗೀತದಿಂದ ತಲೆ ಚಿಟ್ಟು ಹಿಡಿಯುವಂತಾಗುತ್ತದೆ. ನಾಯಕನಾಗಿ ಶ್ರೀಮುರಳಿ ಹೊಡೆದಾಟದ ದೃಶ್ಯಗಳಲ್ಲಿ ಮಿಂಚಿದ್ದಾರೆ. ಎಮ್ಮೆಲ್ಲೆಯಾಗಿ ನಟಿಸಿರುವ ರವಿಶಂಕರ್ ಸಪ್ಪೆಯೆನಿಸುತ್ತಾರೆ. ಪಂಚ್ ಡೈಲಾಗ್ ಗಳಿಗೆ ಖ್ಯಾತರಾದ ರವಿಶಂಕರ್ ಗೆ ಅಂಥ ಅವಕಾಶ ನೀಡಿಲ್ಲವೆಂಬುದು ವಿಶೇಷ. ಪೊಲೀಸ್ ಅಧಿಕಾರಿಯಾಗಿ ಚರಣ್ ರಾಜ್ ತೋರುವ ಪಾತ್ರದ ಬಿಲ್ಡಪ್ ಗೆ ತಕ್ಕುದಾದ ಅಂತ್ಯವನ್ನು ನೀಡಲಾಗಿಲ್ಲ! ಇರುವುದರಲ್ಲಿ ರಥನ ಸ್ನೇಹಿತನಾಗಿ ಚಿಕ್ಕಣ್ಣ ಮತ್ತು ಎರಡು ದೃಶ್ಯಗಳಲ್ಲಿ ಬರುವ ಸಾಧುಕೋಕಿಲ ಒಂದಷ್ಟು ನಗಿಸುವಲ್ಲಿ ಯಶಸ್ವಿಯಾಗುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಚಿತ್ರದಲ್ಲಿ ಗಮನ ಸೆಳೆಯುವುದು ಭಜರಂಗಿ ಲೋಕಿಯ ಮಂಗಳಮುಖಿ ಪಾತ್ರ. ಅವರು ಆಕರ್ಷಕವಾಗಿಯೇ ನಟಿಸಿದ್ದಾರೆನ್ನಬಹುದು. ನಾಯಕಿಯಾಗಿ ರಚಿತಾಗೆ ಹೇಳಿಕೊಳ್ಳುವಂಥ ಅವಕಾಶವಿಲ್ಲ. ಚಿತ್ರಾಂತ್ಯದಲ್ಲಿ ನಾಯಕ ತನ್ನ ಒಂದು ಕಣ್ಣನ್ನು ಸ್ನೇಹಿತನಿಗೆ ದಾನ ನೀಡುವುದು; ಅದನ್ನು ರೌಡಿಗಳು ಕಿತ್ತು ಹಾಕುವುದು ಮೊದಲಾದ ಭಯಾನಕ ಡ್ರಾಮಾಟಿಕ್ ಸನ್ನಿವೇಶಗಳಿವೆ. ಒಟ್ಟಿನಲ್ಲಿ ಉಗ್ರಂ ಚಿತ್ರ ನೋಡಿ ಮೆಚ್ಚಿದ ನಿರೀಕ್ಷೆಯಲ್ಲಿ ರಥಾವರ ನೋಡಲು ಬರುವ ಪ್ರೇಕ್ಷಕರು ನಿರಾಶರಾಗುವುದು ಖಚಿತ.