From the earlier FilmySphere, kept as published on 2015-10-17. It has not been updated.
Review of Plus
FilmySphere critic · Rating 3/5
ಪ್ಲಸ್ ಚಿತ್ರ ವಿಮರ್ಶೆ ಸ್ವಲ್ಪ ಮೈನಸ್ ಜೊತೆಗೆ ಹೆಚ್ಚು ಪ್ಲಸ್
ಕನ್ನಡದಲ್ಲೀಗ ಬರುತ್ತಿರುವುದು ದೆವ್ವದ ಚಿತ್ರಗಳು ಅಥವಾ ವ್ಯಕ್ತಿಯೊಬ್ಬ ಕಾನೂನು ಕೈಗೆತ್ತಿಕೊಂಡು ಅಪರಾಧಿಗಳೆನಿಸಿಕೊಂಡ ಒಂದಷ್ಟು ಮಂದಿಗೆ ಶಿಕ್ಷೆ ವಿಧಿಸುವ ಚಿತ್ರಗಳು. ಅವುಗಳಲ್ಲಿ ಎರಡನೆಯ ವಿಭಾಗಕ್ಕೆ ಸೇರಿದ ಪ್ಲಸ್ ನಲ್ಲಿ ಅನಂತನಾಗ್ ಮತ್ತೊಮ್ಮೆ ಆಟಗಾರನಾಗಿದ್ದಾರೆ.
ಚಿತ್ರದಲ್ಲಿ ಅನಂತನಾಗ್ ಶ್ರೀಮಂತ ಶಾಸ್ತ್ರಜ್ಞ. ಜೊತೆಗೆ ಸಮಾಜ ಸೇವಕನೂ ಹೌದು. ಒಬ್ಬ ಲಾಯರ್ ಮತ್ತೋರ್ವ ಡಾಕ್ಟರ್ ಸೇರಿದಂತೆ ದಶಕಗಳಿಂದ ಆತನಿಗೆ ಆತ್ಮೀಯರಾಗಿರುವ ನಾಲ್ಕು ಜನ ಸ್ನೇಹಿತರಿರುತ್ತಾರೆ. ಒಂದು ಬಾರಿ ಅನಂತನಾಗ್ ಮೇಲೆ ಮಾರಣಾಂತಿಕ ಹಲ್ಲೆ ನಡೆಯುತ್ತದೆ. ಅದರ ಬಳಿಕ ಈ ಮೂರು ಮಂದಿ ಸ್ನೇಹಿತರು ಕೂಡ ಕೊಲೆಯಾಗುತ್ತಾರೆ. ಈ ಕೊಲೆಗಳನ್ನು ಅನಂತನಾಗ್ ಸ್ವತಃ ತನ್ನ ಮಗ ಮತ್ತು ದತ್ತು ಪುತ್ರನಿಂದ ಮಾಡಿಸಿರುತ್ತಾರೆ ಎಂಬುದು ವಿಶೇಷ. ಆದರೆ ಅದಕ್ಕೆ ಬಲವಾದ ಕಾರಣವೊಂದು ಫ್ಲ್ಯಾಶ್ ಬ್ಯಾಕ್ ನಲ್ಲಿದೆ. ಅದರಲ್ಲಿ ಲಾಯರ್ ,ಡಾಕ್ಟರ್ ಜೊತೆಗೆ ಇಬ್ಬರು ಸೇರಿ ಮಾಡಿದ ಅಪರಾಧವೇನೆಂಬುದನ್ನು ತೋರಿಸಲಾಗುತ್ತದೆ. ಅದರ ಜೊತೆಗೆ ಅನಂತನಾಗ್, ರವಿಶಂಕರ್ ಮೊದಲಾದವರು ಪೂರ್ವ ಜನ್ಮದಲ್ಲಿ ಯಾವ ಲೋಕದಲ್ಲಿ ಏನಾಗಿರುತ್ತಾರೆ ಎಂಬುದನ್ನು ಕೂಡ ತೋರಿಸಲಾಗುತ್ತದೆ! ಅವೆಲ್ಲವುಗಳ ಸ್ವಾರಸ್ಯ ನೋಡಬೇಕಾದರೆ ಚಿತ್ರಮಂದಿರದತ್ತ ಹೋಗಬಹುದು. ಚಿತ್ರದ ಆರಂಭ ಆಸಕ್ತಿಕರವಲ್ಲ. ಆದರೆ ಕತೆಯಲ್ಲಿನ ತಿರುವು ಮತ್ತು ತಮಾಷೆಗಳು ಅಂತ್ಯವನ್ನು ಕುತೂಹಲ ಭರಿತವೆನಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಅನಂತನಾಗ್ ಎಂದಿನಂತೆ ಮತ್ತೊಮ್ಮೆ ಮನಸೆಳೆಯುವ ನಟನೆಯೊಂದಿಗೆ ಗ್ಲಾಮರ್ ಫುಲ್ಲಾಗಿಯೂ ಕಾಣಿಸಿದ್ದಾರೆನ್ನುವುದು ವಿಶೇಷ. ಆತನ ಹಿತಶತ್ರುಗಳಾಗಿ ಕರಿಸುಬ್ಬು ಆಕರ್ಷಕ ನಟನೆ ನೀಡಿದ್ದಾರೆ. ಮುಖ್ಯ ಖಳ ರಂಕಾಸುರನ ಅಬ್ಬರಕ್ಕೆ ರವಿಶಂಕರ್ ತಕ್ಕ ನ್ಯಾಯವೊದಗಿಸಿದ್ದಾರೆ. ಫ್ಲ್ಯಾಶ್ ಬ್ಯಾಕ್ ಕತೆಯಲ್ಲಿ ವಿಗ್ ಧರಿಸಿರುವ ಬಿ.ಸುರೇಶ್ ನಿಜಕ್ಕೂ ಯುವಕರೇನೋ ಎಂಬಂತೆ ಕಾಣಿಸುತ್ತಾರೆ. ಬಾಡಿ ಬಿಲ್ಡರ್ ಚೇತನ್ ಚಂದ್ರನಿಗಿಂತ ನವನಟ ರಿತೇಶ್ ನಟನೆ ಹೆಚ್ಚು ಗಮನ ಸೆಳೆಯುತ್ತದೆ. ನಾಯಕಿ ಶಾಲಿನಿ ಸಿಕ್ಕ ಅವಕಾಶವನ್ನು ಚೊಕ್ಕವಾಗಿ ಬಳಸಿಕೊಂಡಿದ್ದಾರೆ. ಸುಚೇಂದ್ರ ಪ್ರಸಾದ್, ಅಚ್ಯುತ ಕುಮಾರ್, ಸುಧಾರಾಣಿ ಮೊದಲಾದವರು ಎಂದಿನಂತೆ ಪಾತ್ರವಾಗಿ ಬಾಳಿದ್ದಾರೆ. ಒಟ್ಟಿನಲ್ಲಿ ಪ್ಲಸ್ ನಲ್ಲಿ ಪಾಸಿಟಿವ್ ಅಂಶಗಳು ಖಂಡಿತಾ ಇವೆಯೆನ್ನಬಹುದು.