Skip to content
FilmySphere

From the earlier FilmySphere, kept as published on 2015-09-25. It has not been updated.

Review of Arjuna

FilmySphere critic · Rating 3.5/5

ಅರ್ಜುನ ಚಿತ್ರವಿಮರ್ಶೆ

ಉಜ್ವಲ ನಟನೆಗೆ ಪ್ರಜ್ವಲ್ ಪ್ರಯತ್ನ

ಚಿತ್ರದ ಬಗ್ಗೆ ಯಾವುದೇ ವಿಶೇಷ ರೀತಿಯ ನಿರೀಕ್ಷೆಗಳನ್ನು ಇಟ್ಟುಕೊಳ್ಳದೆ ಚಿತ್ರಮಂದಿರ ಸೇರಿಕೊಂಡವರಿಗೆ ಒಂದು ಸಮಾಧಾನ ನೀಡಬಲ್ಲ ಚಿತ್ರ ಅರ್ಜುನ.

ಪ್ರಥಮದಲ್ಲೇ ಜಿಲ್ಲಾಧಿಕಾರಿಯೊಬ್ಬನ ಕೊಲೆಯಾಗುತ್ತದೆ. ಕೊಲೆಯ ತನಿಖೆಗೆ ನೇಮಿಸಲ್ಪಡುವ ದಕ್ಷ ಅಧಿಕಾರಿಯಾಗಿ ಶರ್ಮನ ಆಗಮನ. ಆತ ಇನ್ನೇನು ಅಪರಾಧಿ ಅರ್ಜುನನನ್ನು ಬಂಧಿಸುತ್ತಾರೆ ಎಂಬಂಥ ಸಮಯದಲ್ಲಿ ಪ್ರಕರಣ ಕೈ ಬಿಡುವಂತೆ ಮೇಲಧಿಕಾರಿಗಳಿಂದ ಆದೇಶ ಬರುತ್ತದೆ. ಆಗ ಖುದ್ದು ಡಿಪಾರ್ಟ್ ಮೆಂಟ್ ನ ಮೇಲೆಯೇ ಸಂದೇಹಕ್ಕೊಳಗಾಗುವ ಶರ್ಮ ಅದರ ಮರ್ಮವನ್ನು ಬೇಧಿಸಲು ಮುಂದಾದಾಗ ಕೊಲೆಯ ಹಿಂದಿನ ಫ್ಲ್ಯಾಶ್ ಬ್ಯಾಕ್ ಸ್ಟೋರಿ ಬಿಚ್ಚಿಕೊಳ್ಳುತ್ತದೆ. ಹಾಗೆ ಮಧ್ಯಂತರದ ಬಳಿಕ ಹೊಸ ರೂಪ ಪಡೆದುಕೊಳ್ಳುವ ಕತೆಯಲ್ಲಿ ಅರ್ಜುನನ ಪಾತ್ರವೇನು ಎಂಬುದನ್ನು ಪರದೆಯ ಮೇಲೆ ನೋಡಬಹುದು. ಚಿತ್ರದಲ್ಲಿ ಶರ್ಮನಾಗಿ ದೇವರಾಜ್ ನಟಿಸಿದ್ದಾರೆ. ವಾಹನದೊಳಗಿದ್ದುಕೊಂಡೇ ತನಿಖೆ ನಡೆಸುತ್ತಾರೆ ಎಂಬುದನ್ನು ಬಿಟ್ಟರೆ ಅವರ ತನಿಖಾ ಶೈಲಿಯಲ್ಲಿ ವಿಶೇಷತೆಗಳಿಲ್ಲ. ಆದರೆ ಅರ್ಜುನನ ಪಾತ್ರಧಾರಿ ಪ್ರಜ್ವಲ್ ಜೊತೆಗಿನ ಪ್ರಥಮ ಭೇಟಿಯ ಸನ್ನಿವೇಶ ಚೆನ್ನಾಗಿ ಮೂಡಿ ಬಂದಿದೆ. ಪ್ರಜ್ವಲ್ ಕಂಗಳಲ್ಲಿನ ಆವೇಶ ಮತ್ತು ಕ್ಲೈಮ್ಯಾಕ್ಸ್ ನಲ್ಲಿ ಸೈಕೋ ಲುಕ್ ಅವರು ಒಬ್ಬ ಉತ್ತಮ ನಟನೆಂದು ನಿರೂಪಿಸುವಂತಿದೆ. ನಾಯಕಿಯಾಗಿ ಭಾಮ ಮುಗ್ಧತೆಯ ಪಾತ್ರಗಳಿಂದ ವಿಭಿನ್ನವಾಗಿಯೂ ನಟಿಸಿಗೆಲ್ಲಬಲ್ಲೆ ಎಂದು ತೋರಿಸಿ ಕೊಟ್ಟಿದ್ದಾರೆ. ಭಾಮಾ ಸಹೋದರಿ ಪಾತ್ರದಲ್ಲಿ ಶೀತಲ್ ಶೆಟ್ಟಿ ಕನ್ವಿನ್ಸಿಂಗ್ ನಟನೆ ನೀಡಿದ್ದಾರೆ. ರಮೇಶ್ ಭಟ್ ದಂಪತಿಯ ಪಾತ್ರಗಳ ನಟನೆ ಮತ್ತು ಸಂಭಾಷಣೆ ನಾಟಕೀಯವೆನಿಸುತ್ತದೆ. ಕಡ್ಡಿಪುಡಿ ಚಂದ್ರು ಖಳನಟನಾಗಿ ಚಿತ್ರಕ್ಕೆ ತೂಕದ ಅಭೀನಯ ನೀಡಿದ್ದಾರೆ. ಕಾನೂನನ್ನು ಕೈಗೆತ್ತಿಕೊಳ್ಳುವುದು ತಪ್ಪಾದರೂ ನ್ಯಾಯದ ವಿಚಾರ ಬಂದಾಗ ಅದು ಸರಿಯಾಗಿರುತ್ತದೆ ಎಂಬ ಹಳೆಯ ವಾದ; ಸ್ವತಃ ಪೊಲೀಸ್ ಅಧಿಕಾರಿಗಳೇ ಎಲ್ಲೆಡೆ ಮೂಗು ತೂರಿಸುವ ಹಳೆಯ ಶೈಲಿ ಇಲ್ಲಿಯೂ ಇದೆ. ಆದರೆ ನಾಯಕ ಪ್ರಜ್ವಲ್ ನಟಿಸಿದ ಮತ್ತು ಈ ಹಿಂದೆ ಶೇಖರ್ ನಟಿಸಿದ ಚಿತ್ರಗಳಿಗೆ ಹೋಲಿಸಿದರೆ ಅರ್ಜುನ ಖಂಡಿತಾ ಶ್ರೇಷ್ಠವಾಗಿದೆ ಎಂದು ಹೇಳಬಹುದು.