From the earlier FilmySphere, kept as published on 2015-09-17. It has not been updated.
Review of Charlie
FilmySphere critic · Rating 2.5/5
ಚಾರ್ಲಿ ಚಿತ್ರ ವಿಮರ್ಶೆ ಗಾಯತ್ರಿ ಮತ್ತು ಅವಳ ಗಾಯದಲ್ಲಿ ಮಾಯವಾದ ಚಾರ್ಲಿ
ಪ್ರೋಮೋ ಮತ್ತು ಟ್ರೈಲರ್ ಗಳ ಮೂಲಕ ಈ ಚಿತ್ರದಲ್ಲೇನೋ ಇದೆ ಎಂಬಂತೆ ಆಸಕ್ತಿ ಮೂಡಿಸಿದ್ದ ಚಾರ್ಲಿಯನ್ನು ನೋಡಲು ಚಿತ್ರಮಂದಿರದೊಳಗೆ ಕಾಲಿಟ್ಟರೆ ನಿರಾಶೆಗೊಳಿಸುತ್ತದೆ ಚಿತ್ರ.
ನಾಯಕ ಕೃಷ್ಣ ಒಂದು ಮಟ್ಟಿಗೆ ಶ್ರೀಮಂತನೆಂದೇ ಹೇಳಬಹುದಾದ ಯುವಕ ಚಾರ್ಲಿಯಾಗಿದ್ದಾರೆ. ತನ್ನ ವಠಾರದ ಮನೆಯನ್ನು ಬಾಡಿಗೆಗೆ ಕೊಟ್ಟಿರುವುದರೊಂದಿಗೆ ಹವ್ಯಾಸಿ ಛಾಯಾಚಿತ್ರಗ್ರಾಹಕನಾಗಿಯೂ ಕೆಲಸ ಮಾಡುತ್ತಿರುತ್ತಾನೆ. ಅದರ ನಡುವೆಯೇ ಇಬ್ಬರು ಹುಡುಗಿಯರಿಂದ ಆಕರ್ಷಿತನಾಗುತ್ತಾನೆ. ಜಮೀನ್ದಾರನಾಗಿ ಶರತ್ ಲೋಹಿತಾಶ್ವ ನಟಿಸಿದ್ದು ಆತನ ಹೆಸರು ಹೇಳಿ ಜನರನ್ನು ಬೆದರಿಸಿ ಜಾಗ ಒಳಗೆ ಹಾಕುವ ಗೂಂಡಾಗಳ ಬಗ್ಗೆ ಜಮೀನ್ದಾರನ ಗಮನ ಸೆಳೆಯುತ್ತಾನೆ ಚಾರ್ಲಿ. ಇಷ್ಟನ್ನು ಹೇಳಲು ಬರೋಬ್ಬರಿ ಮಧ್ಯಂತರದ ವರೆಗಿನ ಸಮಯವನ್ನು ಹಾಳು ಮಾಡಿದ್ದಾರೆ ನಿರ್ದೇಶಕರು. ತಾನು ಹಂಪಿಗೆ ಹೋಗಿದ್ದಾಗ ಅಲ್ಲಿ ತನ್ನನ್ನು ಆಕರ್ಷಿಸಿದ್ದ ಹುಡುಗಿ ಗಾಯತ್ರಿಗೆ ಆಕೆಯ ತಂದೆ ಬಲವಂತದ ಮದುವೆಗೆ ತಯಾರಿ ಮಾಡಿರುವುದನ್ನು ತಿಳಿದು ಅಲ್ಲಿಂದ ಆಕೆಯನ್ನು ಪಾರುಮಾಡಿ ಹಾಸ್ಟೆಲ್ ಸೇರಿಸುತ್ತಾನೆ ಚಾರ್ಲಿ. ಗಾಯತ್ರಿಯ ಜನ್ಮದಿನದಂದು ತನ್ನ ಪ್ರೀತಿಯನ್ನು ಹೇಳಲು ಹೊರಟಾಗ ಆಕೆ ಬೇರೊಬ್ಬನನ್ನು ಪ್ರೀತಿಸುವುದನ್ನು ಅರಿತು ಕೊರಗುತ್ತಾನೆ. ಈ ನಡುವೆ ಗಾಯತ್ರಿಯ ಪ್ರಿಯಕರನನ್ನು ಆಕೆಯ ತಂದೆ ನೋಡಿದ್ದ ಹುಡುಗನೇ ಹತ್ಯೆಗೈಯ್ಯುತ್ತಾನೆ. ಈ ಸಂದರ್ಭದಲ್ಲಿ ಹತ್ಯೆಗೀಡಾದ ಗಾಯತ್ರಿಯ ಪ್ರಿಯಕರ ಜಮೀನ್ದಾರನ ಪುತ್ರನೆಂಬುದು ಅರಿವಾಗುತ್ತದೆ. ಘಟನೆಯ ಬಳಿಕ ಬದುಕುಳಿದ ಪಾತ್ರಗಳು ಸಾಯುವ ತನಕ ಹೇಗೆಲ್ಲಾ ರಿಯಾಕ್ಟ್ ಮಾಡುತ್ತವೆ ಎಂಬುದನ್ನು ತಿಳಿಯಬೇಕಾದರೆ ಚಿತ್ರ ಮಂದಿರಕ್ಕೊಮ್ಮೆ ಭೇಟಿಕೊಡಿ.
ನಾಯಕನಾಗಿ ಕೃಷ್ಣ ನಾಟ್ಯ, ನೋಟ, ಹೊಡೆದಾಟ ಮತ್ತು ನಗುವಿಲ್ಲಷ್ಟೇ ಇಷ್ಟವಾಗುತ್ತಾರೆ. ಸಂಭಾಷಣೆಯಲ್ಲಿ ಸುದೀಪನ್ನು ಅನುಕರಿಸಲೋ ಯಶ್ ನನ್ನು ಅನುಕರಿಸಲೋ ಎಂದು ದ್ವಂದ್ವಕ್ಕೆ ಬಿದ್ದು ನಟಿಸಿದಂತಿದೆ. ಅಥವಾ ನಿರ್ದೇಶಕರು ಆತನಿಂದ ಅಷ್ಟನ್ನೇ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರದ ಕತೆಯಲ್ಲಿ ಆರಂಭದಿಂದ ಕೊನೆಯ ತನಕ ನಾಯಕನ ಗೆಳತಿಯಾಗಿ ಹಾಗೂ ಗಾಯತ್ರಿ ಕೈ ಕೊಟ್ಟಮೇಲೆ ನಾಯಕನ ಪ್ರೇಯಸಿಯಾಗಿ ನಟಿಸಿರುವ ಮಿಲನ ನಾಗರಾಜ್ ಹಾಡಲ್ಲಿ ಬಂದು, ಕುಣಿದು ಹೋಗುತ್ತಾರೆ. ಕಿಲ್ಲರ್ ವೆಂಕಟೇಶ್ ಮತ್ತು ಉಗ್ರಂ ಮಂಜು ಖಳರಾಗಿ ಗಮನ ಸೆಳೆದರೆ ಉದಯ್‍ಗೆ ಕ್ಲಾಸ್ ವಿಲನ್ ಪಾತ್ರ ವರ್ಕೌಟಾಗಿಲ್ಲ. ಸಂಭಾಷಣೆಗಾರರು ಪಂಚ್ ಗಿಂತ ಪ್ರಾಸಕ್ಕೆ ಹೆಚ್ಚು ಒತ್ತು ಕೊಟ್ಟಂತಿದೆ. ಹಿರಿಯ ನಟ ಉಮೇಶ್, ಕಾಶಿ, ಸುಚಿತ್ರಾ ಪಾತ್ರಗಳು ಸುಮ್ಮನೇ ಬಂದು ಹೋಗುತ್ತವೆ. ಇಡೀ ಕತೆ ಗಾಯತ್ರಿಯಾಗಿ ನಟಿಸಿದ ವೈಶಾಲಿಯ ಸುತ್ತ ಸುತ್ತುತ್ತದೆ. ಮುಗ್ದ ಯುವತಿಯಾಗಿ ಆಕೆ ಗಮನಾರ್ಹ ನಟನೆ ನೀಡಿದ್ದಾರೆ. ಪ್ರಿಯಕರನಾಗಿ ಗುರುನಂದನ್ ಕೂಡ ಮನಸೆಳೆಯುತ್ತಾರೆ. ಆರಂಭದಲ್ಲಿ ತೋರಿಸಲಾದ ಚಾರ್ಲಿ ಹೆಸರಿನ ಹಿನ್ನೆಲೆಯೇ ಕತೆಗೆ ಅನಗತ್ಯವೆನಿಸುತ್ತದೆ. ಅದೇ ರೀತಿ ಅನಾವಶ್ಯಕ ಸಸ್ಪೆನ್ಸ್ ಗಳೂ ಚಿತ್ರದಲ್ಲಿವೆ. ಉಳಿದಂತೆ ವೀರ ಸಮರ್ಥ್ ಸಂಗೀತವಷ್ಟೇ ಚಿತ್ರದಲ್ಲಿ ಮೆಚ್ಚಬಹುದಾದ ಅಂಶ. ಒಟ್ಟಿನಲ್ಲಿ ಚಾರ್ಲಿ ನಿರೀಕ್ಷೆಗಳ ಧ್ವಂಸ.