From the earlier FilmySphere, kept as published on 2015-11-13. It has not been updated.
Review of Ram-Leela
FilmySphere critic · Rating 3.5/5
ರಾಮ್ ಲೀಲ ಚಿತ್ರ ವಿಮರ್ಶೆ ಆ್ಯಕ್ಷನ್, ಕಾಮಿಡಿಗಳೊಂದಿಗೆ ರಾಮನ ಪ್ರೇಮಲೀಲ
ರಾಮ್ ಲೀಲ ತೆಲುಗಿನ ಲೌಕ್ಯಂ ಚಿತ್ರದ ರಿಮೇಕ್. ಆದರೆ ಮೂಲ ಚಿತ್ರಕ್ಕೆ ಸಾಟಿಯಾಗುವ ರೀತಿಯಲ್ಲಿಯೇ ಕನ್ನಡಕ್ಕೆ ತರಲಾಗಿದೆ ಎಂಬುದು ಸಮಾಧಾನಕರ ವಿಚಾರ. ಚಿತ್ರದಲ್ಲಿ ನಾಯಕ ರಾಮ್ ತನ್ನ ಸ್ನೇಹಿತನಿಗಾಗಿ ಡಾನ್ ಒಬ್ಬನ ಮನೆಗೆ ನುಗ್ಗಿ ಆತನ ತಂಗಿಯನ್ನೇ ಅಪಹರಿಸಿ ತಂದು ಮದುವೆ ಮಾಡಿಸುತ್ತಾನೆ. ತಂಗಿಯನ್ನು ಅಪಹರಿಸಿದ ತನಗಾಗಿ ಹುಡುಕಾಡುತ್ತಿರುವ ಡಾನ್ ನ ಕಣ್ಣು ತಪ್ಪಿಸಿಕೊಂಡು ಓಡಾಡುತ್ತಿರುವಾಗಲೇ ತಾನು ಕೂಡ ಒಂದು ಹುಡುಗಿಯ ಪ್ರೀತಿಯಲ್ಲಿ ಬೀಳುತ್ತಾನೆ. ಆದರೆ ಅದು ಡಾನ್ ನ ಮತ್ತೊಬ್ಬಳು ತಂಗಿ ಎಂಬ ಸತ್ಯ ಬಳಿಕ ಗೊತ್ತಾಗುತ್ತದೆ. ಡಾನ್ ತನ್ನ ದೊಡ್ಡ ತಂಗಿಗೆ ಫಿಕ್ಸಾದ ಹುಡುಗನನ್ನು ಚಿಕ್ಕ ತಂಗಿಗೆ ವಿವಾಹ ಮಾಡಿಸುವ ಯೋಜನೆ ಹಾಕಿರುತ್ತಾನೆ. ಆದರೆ ಅದೆಲ್ಲವನ್ನೂ ದಾಟಿ ಡಾನ್ ನ ಚಿಕ್ಕ ತಂಗಿಯನ್ನು ಸ್ವತಃ ರಾಮ್ ಹೇಗೆ ಹಿಡಿಯುತ್ತಾನೆ? ಅದಕ್ಕಾಗಿ ರಾಮ್ ಮಾಡುವ ಉಪಾಯಗಳೇನು ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ನಾಯಕ ರಾಮ್ ಆಗಿ ಚಿರಂಜೀವಿ ಸರ್ಜಾ ಲವಲವಿಕೆಯಿಂದ ನಟಿಸಿದ್ದಾರೆ. ಡಾನ್ ನ ಚಿಕ್ಕ ತಂಗಿಯಾಗಿ ನಟಿಸಿರುವ ಅಮೂಲ್ಯ ಕೂಡ ಗಮನ ಸೆಳೆಯುತ್ತಾರೆ. ಡಾನ್ ಆಗಿ ಶೋಭರಾಜ್ ಚಿತ್ರಕ್ಕೆ ಕಳೆ ನೀಡಿದ್ದಾರೆ. ಸಾಧುಕೋಕಿಲ ಚಿತ್ರದ ಜೀವಾಳ. ಚಿಕ್ಕ ಪಾತ್ರವಾದರೂ ಚಿಕ್ಕಣ್ಣ ಮತ್ತು ಊರ್ವಶಿ ನಗಿಸುವಲ್ಲಿ ಯಶಸ್ವಿಯಾಗುತ್ತಾರೆ. ನಾಯಕನ ತಂದೆಯಾಗಿ ರಂಗಾಯಣ ರಘು ಮತ್ತು ತಾಯಿಯಾಗಿ ತಳಸಿ ನಟಿಸಿದ್ದಾರೆ. ಸೀರಿಯಲ್ ನಾಯಕನ ಪಾತ್ರದಲ್ಲಿ ಕಾಣಿಸಿರುವ ರವಿಶಂಕರ್ ಗೌಡ ಮತ್ತು ಹಾಸ್ಯ ನಟಿಯಾಗಿ ಸಂಜನಾ ತಮ್ಮ ಹಿಂದಿನ ಪಾತ್ರಗಳ ಸ್ಥಾನವನ್ನು ಮರೆತು ಪಾತ್ರ ನಿರ್ವಹಿಸಿದ್ದಾರೆನ್ನಬಹುದು. ಸಂಭಾಷಣೆಗಳು ಆಕರ್ಷಕವಾಗಿದೆ. ಅಡ್ಡಾದಿಡ್ಡಿ ಮೈ ಬೆಳೆಸಿಕೊಂಡ ಚಿರಂಜೀವಿ ಸರ್ಜಾನನ್ನು ಅರ್ಜುನ್ ಸರ್ಜಾಗೆ ಹೋಲಿಸಿದವರ ಮುಂದೆ, ಆತನ ಸಮಕ್ಷಮದಲ್ಲೇ ದೊಡ್ಡಣ್ಣನಿಗೆ ಹೋಲಿಸಲಾಗುತ್ತದೆ. ಸಂಜಾನಗಳನ್ನು ಎಕ್ಸ್ ಪ್ರೆಶನ್ಸ್ ಇಲ್ಲದ ಗ್ಲಾಮರ್ ಡಾಲ್ ಎಂದು ಕರೆಸಲಾಗಿದೆ! ಚಿತ್ರದ ಸಂಗೀತ ಕೂಡ ಮೂಲ ಚಿತ್ರದ್ದೇ ಆದರೂ ಹುರುಪು ನೀಡುತ್ತದೆ. ಪೆದ್ದು ಖಳನಾಯಕ ಮತ್ತು ತುಂಟ ನಾಯಕನ ಕತೆ ಹೇಳುವ ಈ ಚಿತ್ರ ಒಂದು ಟಿಪಿಕಲ್ ತೆಲುಗು ಶೈಲಿಯಲ್ಲಿದ್ದರೂ ಕೂಡ ಕನ್ನಡದ ಮನೆಮಂದಿಗೆ ಹಬ್ಬದ ಸಂಭ್ರಮದಲ್ಲಿ ಚಿತ್ರಮಂದಿರಲದಲ್ಲಿ ನೋಡಿ ಖುಷಿ ಪಡಬಹುದಾದ ಚಿತ್ರವೆಂದು ಖಂಡಿತಾ ಹೇಳಬಹುದು.