From the earlier FilmySphere, kept as published on 2015-09-12. It has not been updated.
Review of Kendasampige
FilmySphere critic · Rating 3/5
ಕೆಂಡ ಸಂಪಿಗೆ ಚಿತ್ರ ವಿಮರ್ಶೆ ಕೆಂಡ ಹೆಚ್ಚು; ಸಂಪಿಗೆ ಸಣ್ಣಗೆ ಶ್ರೀಮಂತ ನಾಯಕಿಯೊಂದಿಗೆ ಪ್ರೇಮದಲ್ಲಿ ಬೀಳುವ ನಾಯಕ ತನ್ನ ಪ್ರೇಮದ ಸಾಕ್ಷತ್ಕಾರಕ್ಕೆ ಅಡ್ಡವಾಗಿ ನಿಲ್ಲುವ ಶ್ರೀಮಂತರ ವಿರುದ್ಧ ಹೋರಾಟಕ್ಕಿಳಿಯುವ ಕತೆ ತುಂಬ ಹಳೆಯದು. ಆದರೆ ಹಾಗೆ ಹೋರಾಡಲಾರದ ನಾಯಕನನ್ನು ಅಪರಾಧದೊಳಗೆ ಸಿಲುಕಿಸಿ ಬಿಡುವ ಶ್ರೀಮಂತರ ಯತ್ನವೇ ಇಲ್ಲಿ ಚಿತ್ರವಾಗಿದೆ. ನಾಯಕನನ್ನು ಅಪರಾಧಿಯನ್ನಾಗಿಸಲು ಮತ್ತು ನಿರಪರಾಧಿಯನ್ನಾಗಿಸಲು ನಡೆಸುವ ಇಬ್ಬರು ಪೊಲೀಸರ ಪ್ರಯತ್ನದಲ್ಲಿ ಯಾರು ಗೆಲ್ಲುತ್ತಾರೆ ಎಂಬುದೇ ಚಿತ್ರದ ಕತೆ.
ಚಿತ್ರದಲ್ಲಿ ಮುಗ್ದನೆಂದು ಒಬ್ಬನನ್ನು ಪರಿಚಯಿಸಬೇಕಾದರೆ ಆತನ ಮುಗ್ಧತೆಯ ಬಗ್ಗೆ ಸರಿಯಾದ ಇಂಟ್ರಡಕ್ಷನ್ ಕೊಟ್ಟಿರಬೇಕು. ಅಥವಾ ಆತ ಪ್ರೇಕ್ಷಕರಿಗೆ ಈಗಾಗಲೇ ಪರಿಚಿತ ನಟನಾಗಿರಬೇಕು. ಆಗ ಮಾತ್ರ ಆತನೊಂದಿಗೆ ನಾವೂ ಕೂಡ ಚಿತ್ರದೊಳಗೆ ಪ್ರವೇಶಿಸಲು ಸಾಧ್ಯ. ಆದರೆ ಸೂರಿ ತಮ್ಮ ನಾಯಕನಿಗೆ ಆ ಎರಡೂ ಅವಕಾಶಗಳನ್ನು ನೀಡಿಲ್ಲ. ಹಾಗಾಗಿಯೇ ಚಿತ್ರದ ಪೋಷಕ ಪಾತ್ರಗಳಾದ ಸದ್ಗುಣವಂತ ಪೊಲೀಸ್ ಅಧಿಕಾರಿ ಪುರಂಧರನಾಗಿ ನಟಿಸಿದ ನಟರಂಗ ರಾಜೇಶ್ ಮತ್ತು ದುಷ್ಟನಾಗಿ ಕಾಣಿಸಿರುವ ಪ್ರಕಾಶ್ ಬೆಳವಾಡಿ ಪಾತ್ರಗಳು ಮಾತ್ರವೇ ಚಿತ್ರದತ್ತ ಆಸಕ್ತಿ ಹುಟ್ಟಿಸುತ್ತವೆ. ಅಲ್ಲಿಗೆ ಕ್ರೈಮ್ ಮತ್ತು ಪ್ರೇಮವನ್ನು ತೂಗಿಸಲು ಹೊರಟು ಕ್ರೈಮ್ ನಲ್ಲಷ್ಟೇ ಸದ್ದು ಮಾಡಿದ್ದಾರೆ ಸೂರಿ. (ಅದರಲ್ಲೂ ಕಾರವಾರದ ತೀರದಲ್ಲಿ ನಡೆಯಿತೆಂಬಂತೆ ತೋರಿಸಲಾದ ಡ್ರಗ್ಸ್ ಮಾಫಿಯಾದ ಕೊಲೆಯಲ್ಲಿ ಸಿನಿಮೀಯತೆಯೇ ತುಂಬಿದೆ.) ಪ್ರೇಮದಲ್ಲಿ ಹರಿಕೃಷ್ಣ ಸಂಗೀತದಲ್ಲಿರುವ ಜಯಂತ್ ಕಾಯ್ಕಿಣಿ ಹಾಡೊಂದು ಮಾತ್ರ ಆಪ್ತವಾಗುತ್ತದೆ.
ಶೀತಲ್ ಶೆಟ್ಟಿ, ಚಂದ್ರಿಕಾ, ಪ್ರಶಾಂತ್ ಸಿದ್ದಿ ಜೊತೆಗೆ ಒಂದಷ್ಟು ಹೊಸಮುಖಗಳ ಪೋಷಕ ಪಾತ್ರಗಳು ಬೀರುವ ಪ್ರಭಾವವನ್ನು ನವನಾಯಕ ನಾಯಕಿಯರ ಪಾತ್ರಗಳು ನೀಡುವುದಿಲ್ಲ. ಆದರೆ ಸಿಕ್ಕ ಅವಕಾಶದಲ್ಲಿ ವಿಕ್ಕಿ ಮತ್ತು ಮನ್ವಿತಾ ಚೆನ್ನಾಗಿಯೇ ನಟಿಸಿದ್ದಾರೆ. ಸತ್ಯಹೆಗ್ಡೆ ಛಾಯಾಗ್ರಹಣ, ದೀಪು ಸಂಕಲನ ಮತ್ತು ಶಶಿಧರ ಅಡಪರ ಕಲೆಯೇ ಚಿತ್ರವನ್ನು ತಾಂತ್ರಿಕವಾಗಿ ಎದ್ದು ಕಾಣುವಂತೆ ಮಾಡಿದೆ. ಉಳಿದಂತೆ ಇದೊಂದು ಸಾಧಾರಣ ಚಿತ್ರವೆಂದಷ್ಟೇ ಹೇಳಬಹುದು.