From the earlier FilmySphere, kept as published on 2015-11-20. It has not been updated.
Review of Octopus
FilmySphere critic · Rating 3/5
'ಅಕ್ಟೋಪಸ್' ಚಿತ್ರ ವಿಮರ್ಶೆ
'ಅಕ್ಟೋಪಸ್' ಜಸ್ಟ್ ಟೈಮ್ ಪಾಸ್
ವೈದ್ಯಲೋಕದ ಹೊಸ ಸಾಧ್ಯತೆಗಳನ್ನು ತೆರೆದಿಟ್ಟು ಬಡರೋಗಿಗಳಿಗೆ ಸಹಾಯಕವೆನಿಸುವ ಚಿತ್ರವಿದು ಎಂದು ಚಿತ್ರದ ಕುರಿತು ಪ್ರಚಾರಗೈಯುತ್ತಿರುವುದನ್ನು ಕಂಡರೆ ಅಚ್ಚರಿಯುಂಟಾಗುತ್ತದೆ. ಯಾಕೆಂದರೆ ಇದೊಂದು ಸಾಮಾನ್ಯ ಸೇಡಿನ ಕತೆ ಹೇಳುವ ಚಿತ್ರ. ನಾಯಕ ಕಿಶೋರ್ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗೆ ಟ್ಯಾಬ್ಲೆಟ್ ಕಂಡುಹಿಡಿಯುವ ವಿಜ್ಞಾನಿ. ಅವರು ಅದನ್ನು ಪತ್ತೆ ಹಚ್ಚಿದ ಮೇಲೆ ಮಾರುಕಟ್ಟೆಗೆ ತಲುಪಿಸಲು ಮಧ್ಯವರ್ತಿಯನ್ನು ಸಮೀಪಿಸುತ್ತಾರೆ. ಆದರೆ ಆತ ಅದನ್ನು ದೊಡ್ಡಮೊತ್ತ ನೀಡಿ ಕೊಂಡು ದಂಧೆ ನಡೆಸಲು ಯತ್ನಿಸುತ್ತಾನೆ. ಅದಕ್ಕೆ ಒಪ್ಪದೆ ವಾಪಾಸಾಗುತ್ತಾರೆ ವಿಜ್ಞಾನಿ. ಆದರೆ ಈತನನ್ನು ಮಣಿಸಲಿಕ್ಕಾಗಿ ಪತ್ನಿಯ ಕೊಲೆ ನಡೆಸಲಾಗುತ್ತದೆ. ಅದರ ಬಳಿಕ ತನ್ನ ಪತ್ನಿಯನ್ನು ಕೊಂದಾತನ ವಿರುದ್ಧ ಸೇಡಿಗೆ ಮುಂದಾಗುತ್ತಾರೆ. ಹಾಗೆ ತನ್ನವರನೆಸಿಕೊಂಡವರನ್ನು ಕೊಲೆಗೈದವರ ವಿರುದ್ಧ ತನ್ನ ವೈಜ್ಞಾನಿಕ ಬುದ್ಧಿಯನ್ನು ಬಳಸಿಕೊಂಡು ಚಾಣಾಕ್ಷವಾಗಿ ಸೇಡು ತೀರಿಸುವುದೇ ಅಕ್ಟೋಪಸ್. ಚಿತ್ರದಲ್ಲಿ ನಾಯಕ ಕಿಶೋರ್ ನಿಂದ ಇನ್ನಷ್ಟು ಅಭಿನಯವನ್ನು ಬಳಸಿಕೊಳ್ಳಬಹುದಿತ್ತು. ಆತನ ಒಂಟಿ ಮನೆಗೆ ಗೆಳತಿಯಾಗಿ ಪ್ರವೇಶಿಸುವ ಅಶ್ವಿನಿಯ ಲವಲವಿಕೆಯ ಪಾತ್ರ ಪೇಲವವೆನಿಸಿದೆ. ಪತ್ನಿಯಾಗಿ ನಟಿಸಿದ ಯಜ್ಞಾಶೆಟ್ಟಿ ಆಕರ್ಷಕವೆನಿಸುತ್ತಾರೆ. ಖಳ ಲಾಯರಾಗಿ ಶರತ್ ಲೋಹಿತಾಶ್ವ ಪಾತ್ರಕ್ಕೆ ಜೀವತುಂಬಿದ್ದಾರೆ. ಆತನ ಪತ್ನಿಯಾಗಿ ಮೂರೇ ದೃಶ್ಯದಲ್ಲಿ ಬಂದರೂ ಕೊನೆಯಲ್ಲಿ ಪ್ರಧಾನ ಭೂಮಿಕೆಗೆ ಸೇರುತ್ತಾರೆ. ಮಧ್ಯವರ್ತಿಯಾಗಿ ಜೈಜಗದೀಶ್ ಸರಳ ಸೈಲೆಂಟ್ ಕಿಲ್ಲರ್. ವೈದ್ಯಲೋಕವನ್ನು ತನ್ನ ಅಕ್ಟೋಪಸ್ ಬಾಹುಗಳಲ್ಲಿ ಹಿಡಿದಿಟ್ಟುಕೊಂಡು ಬಡ ರೋಗಿಗಳನ್ನು ಕಾಡುವ ಮಧ್ಯವರ್ತಿಗಳ ಬಗ್ಗೆ ಕತೆ ಶುರುಮಾಡುವ ನಿರ್ದೇಶಕ ಅಣ್ಣಯ್ಯ ಮಧ್ಯಂತರದ ಬಳಿಕ ಹೇಳುವುದೆಲ್ಲ ಆ ಮಧ್ಯವರ್ತಿಗಳ ವಿರುದ್ಧ ಹೋರಾಡುವ ಕಿಶೋರ್ ನ ಅಕ್ಟೋಪಸ್ ಚಾಣಾಕ್ಷತೆಯ ಬಗ್ಗೆ. ಒಂದು ಕಡೆ ನಿಶ್ಯಬ್ಧ ಚಿತ್ರವನ್ನು ಕೂಡ ನೆನಪಿಸುವ ಈ ಕತೆಯನ್ನು ಇನ್ನಷ್ಟು ಹಿಡಿತಕ್ಕೊಳಪಡಿಸಿ ನಿರ್ದೇಶಿಸಿದ್ದರೆ ಕನ್ನಡದ ಮಟ್ಟಿಗೆ ಖಂಡಿತಾ ವಿಭಿನ್ನವೆನಿಸುವ ಯಶಸ್ವಿ ಚಿತ್ರವಾಗಿರುತ್ತಿತ್ತು ಎಂಬುದರಲ್ಲಿ ಸಂದೇಹವಿಲ್ಲ.