From the earlier FilmySphere, kept as published on 2015-10-31. It has not been updated.
Review of Mumtaz
FilmySphere critic · Rating 2.5/5
'ಮುಮ್ತಾಜ್' ಚಿತ್ರ ವಿಮರ್ಶೆ 'ಮುಮ್ತಾಜ್' ಚಿತ್ರದಲ್ಲಿ ತಾಜಾತನವೇ ಇಲ್ಲ
ಒಳ್ಳೆಯದೊಂದು ಪ್ರೇಮಕತೆಯ ಎಳೆಯನ್ನು ಹೇಗೆ ಎಳೆದೆಳೆದು ಹಾಳು ಮಾಡಬಹುದೆಂಬುದನ್ನು ತಿಳಿಯಲು ಮುಮ್ತಾಜ್ ಚಿತ್ರ ನೋಡಬಹುದು. ರಂಜಿತ್ ಮತ್ತು ಅಂಜಲಿ ಯುಕೆಜಿ ಮಕ್ಕಳಾಗಿದ್ದಾಗ ನಾಟಕವೊಂದರಲ್ಲಿ ಶಹಜಹಾನ್ ಮತ್ತು ಮುಮ್ತಾಜ್ ಪಾತ್ರಗಳನ್ನು ನಿರ್ವಹಿಸಿರುತ್ತಾರೆ. ಪಾತ್ರ ಮುಗಿದೊಡನೆ ಮುಮ್ತಾಜ್ ಪಾತ್ರ ಮಾಡಿದ್ದ ಹುಡುಗಿಯನ್ನು ಆಕೆಯ ತಾಯಿ ಕರೆದೊಯ್ಯುತ್ತಾರೆ. ಆದರೆ ಹುಡುಗನ ಮನದಲ್ಲಿ ಆ ಪ್ರೇಮ ಸಂಭಾಷಣೆ ಅಚ್ಚೊತ್ತಿ ನಿಲ್ಲುತ್ತದೆ. ವರ್ಷಗಳ ಬಳಿಕ ಕಾಲೇಜ್ ನಲ್ಲಿ ಮತ್ತೆ ಸಿಕ್ಕಾಗ ಹುಡುಗನ ಮನದಲ್ಲಿನ ಪ್ರೇಮಕ್ಕೆ ಮತ್ತೆ ಜೀವ ಬರುತ್ತದೆ. ಅದನ್ನು ಅಂಜಲಿಗೆ ನೇರವಾಗಿ ತಿಳಿಸಲು ಅಂಜಿಕೆ ಮೂಡಿ ಅನಾಮಧೇಯವಾಗಿ ಪತ್ರ ಬರೆಯುತ್ತಾನೆ. ಆಕೆಗೂ ರಂಜಿತ್ ನಲ್ಲಿ ಪ್ರೇಮವಾದರೂ ಆತನೂ ತನ್ನನ್ನೇ ಪ್ರೀತಿಸುತ್ತಿದ್ದಾನೆ ಎಂಬ ಬಗ್ಗೆ ಸಾಕ್ಷಿ ಸಿಗುವ ವೇಳೆಗೆ ಸಮಯ ದಾಟಿ ಹೋಗಿರುತ್ತದೆ. ಇಡೀ ಚಿತ್ರದಲ್ಲಿ ರಂಜಿತ್ ಮತ್ತು ಅಂಜಲಿ ಎಂಬ ಎರಡು ಪಾತ್ರಗಳಷ್ಟೇ ಪ್ರಮುಖ. ರಂಜಿತ್ ಆಗಿ ಕೀರ್ತಿರಾಜ್ ಪಾತ್ರಕ್ಕೆ ತಕ್ಕ ನಟನೆ ನೀಡಿದ್ದಾರೆ. ನಾಯಕಿಯಾಗಿ ಶರ್ಮಿಳಾ ಮಾಂಡ್ರೆ ಜಸ್ಟ್ ಪಾಸ್ ಅಂಕ ಗಳಿಸುತ್ತಾರೆ. ಇವರಿಬ್ಬರ ಪ್ರೀತಿ ಆರಂಭದಲ್ಲೇ ಒಂದಾಗದಂತೆ ತಡೆಯುವ ಸನ್ನಿವೇಶಗಳನ್ನು ಸೃಷ್ಠಿಸಿರುವ ಕತೆಗಾರ ತಮ್ಮ ಬುದ್ಧಿವಂತಿಕೆ ತೋರಿಸಿದ್ದಾರೆ. ಆದರೆ ಪದೇ ಪದೇ ಒಂದಾಗುವ ಅವಕಾಶದಿಂದ ವಂಚಿತರಾಗುವುದು ಅರ್ಥಹೀನವೆನಿಸುತ್ತದೆ. ಚಿತ್ರಕತೆಯ ಮೂಲಕ ನಾಯಕ ನಾಯಕಿಯ ಪಾತ್ರಗಳನ್ನು ವಿಪರೀತವಾಗಿ ಎಳೆದಾಡಲಾಗಿದೆ. ಜೊತೆಗೆ ಅವರ ನೋವಿನ ಸಂದರ್ಭಗಳುದ್ಧಕ್ಕೂ ಹಿನ್ನೆಲೆ ಸಂಗೀತ ಕರ್ಕಶವಾಗಿ ಕೊರೆಯುತ್ತದೆ. ಹಾಡುಗಳು ಮನಸೆಳೆಯುವುದಿಲ್ಲ. ಸಂಭಾಷಣೆಗಳು ಲಾಜಿಕ್ ರಹಿತವಾದರೂ ತಕ್ಕ ಮಟ್ಟಿಗೆ ಆಕರ್ಷಕ. ಪಾತ್ರಗಳು ಮೊಬೈಲ್ ಬಳಸದೆ, ಪತ್ರಗಳ ಮೂಲಕ, ಲ್ಯಾಂಡ್ ಲೈನ್ ಫೋನ್ ಗಳಲ್ಲಿ ಪ್ರೇಮ ಸಂಭಾಷಣೆ ನಡೆಸುವುದನ್ನು ಕಂಡಾಗ ಇದು ಯಾವ ಕಾಲಘಟ್ಟದ ಕತೆ ಎಂಬ ಬಗ್ಗೆ ಸಂದೇಹ ಮೂಡುತ್ತದೆ. ದರ್ಶನ್ ಗೆಸ್ಟ್ ರೋಲಲ್ಲಿ ಬಂದು ಫೈಟ್ ಜೊತೆಗೆ ಪಂಚ್ ಡೈಲಾಗ್ ಕೂಡ ಹೊಡೆಯುತ್ತಾರೆ. ಅವರ ಸಂಭಾಷಣೆ ಅಥವಾ ಆಗಮನದಿಂದ ನಾಯಕ ನಾಯಕಿ ಪಾತ್ರಗಳು ಸುಖಾಂತ್ಯ ಕಾಣುವಂತಾಗಿದ್ದರೆ ಇನ್ನಷ್ಟು ತೂಕವಿರುತ್ತಿತ್ತೆಂದು ಅಭಿಮಾನಿ ಮನಸ್ಸುಗಳು ಆಗ್ರಹಿಸುತ್ತದೆ.