From the earlier FilmySphere, kept as published on 2015-09-12. It has not been updated.
Review of Geetha Bangle Store
FilmySphere critic · Rating 4/5
ಗೀತಾ ಬ್ಯಾಂಗಲ್ ಸ್ಟೋರ್ ಚಿತ್ರ ವಿಮರ್ಶೆ
ಇದು ಗೀತಾ ಬಳೆಯಂಗಡಿ ಸ್ಟೋರಿ
ಚಿತ್ರದಲ್ಲಿ ನಾಯಕ ಪಿಯುಸಿ ಹುಡುಗ ಆದರೆ ಅದೇ ವೇಳೆ ಹಳ್ಳಿಯ ಶ್ರಮಜೀವಿಯೂ ಹೌದು. ರೇಶ್ಮೆಹುಳ ಸಾಕಾಣಿಕೆ ನಡೆಸುವ ಮೂಲಕ ಕುಟುಂಬವನ್ನು ಸಾಕುತ್ತಾನೆ. ತಂದೆ ಸದಾ ಕಡಿತದ ನಶೆ ಬಯಸುವ ಬೇಜವಬ್ದಾರಿ ಮನುಷ್ಯ. ತಾಯಿಯ ಮೇಲೆ ಮಗನಿಗೆ ತುಂಬಾ ಪ್ರೀತಿ. ಇದೇ ವೇಳೆ ಕಾಲೇಜಿನಲ್ಲಿ ಸಹಪಾಠಿ ಹುಡುಗಿಯನ್ನು ಪ್ರೀತಿಸುತ್ತಾನೆ. ಬೀದಿಬದಿಯಲ್ಲಿ ವ್ಯಾಪಾರ ನಡೆಸುವ ಆಕೆಯ ತಾಯಿ ಪೊಲೀಸರ ದೌರ್ಜನ್ಯದಿಂದ ಗಾಯಗೊಂಡಾಗ ಮನೆ ಸೇರಿಸಿ ತಾಯಿಮಗಳ ಪ್ರೀತಿಗೆ ಪಾತ್ರವಾಗುತ್ತಾನೆ. ಬೀದಿ ಬದಿಯಲ್ಲಿ ವ್ಯಾಪಾರ ನಡೆಸಲಾಗದ ಆ ತಾಯಿಗೆ ಆಕೆಯ ಮಗಳ ಹೆಸರಿನಲ್ಲಿ ಗೀತಾ ಬ್ಯಾಂಗಲ್ ಸ್ಟೋರ್ ಎಂಬ ಅಂಗಡಿ ಹಾಕಿಕೊಡುತ್ತಾನೆ. ಅಲ್ಲಿಂದ ನಿಜವಾದ ಕತೆ ಶುರುವಾಗುತ್ತದೆ. ತನ್ನ ಮನೆಯಿಂದ ಚೀಟಿಗೆ ಹಾಕಿ ಎತ್ತಿಟ್ಟಿದ್ದ ದುಡ್ಡನ್ನೇ ಅಂಗಡಿ ಕೊಳ್ಳಲು ಬಳಸಿರುತ್ತಾನೆ ನಾಯಕ. ಆದರೆ ಈ ವಿಚಾರ ನಾಯಕನ ಮನೆಯಲ್ಲಿ ತಿಳಿದಿರುವುದಿಲ್ಲ; ತಿಳಿದಾಗ ಅವರ ಪ್ರತಿಕ್ರಿಯೆ ಏನಾಗಿರುತ್ತದೆ? ನಾಯಕ ಮತ್ತು ನಾಯಕಿಯ ಪ್ರಾಣಕ್ಕೆ ಕುತ್ತಾಗುವಂಥ ವಿಷಯ ಅದರಲ್ಲೇನಿರುತ್ತದೆ? ಎಂಬುದನ್ನು ಚಿತ್ರನೋಡಿ ತಿಳಿದುಕೊಂಡರೆ ಚೆನ್ನಾಗಿರುತ್ತದೆ.
ನಿರ್ದೇಶಕ ಮಂಜುಮಿತ್ರ ಕತೆ ಮತ್ತು ಲೊಕೇಶನ್ ಗಳ ಆಯ್ಕೆಯಲ್ಲಿ ಸಹಜತೆ ತೋರಿಸಿದ್ದಾರೆ. ನವ ನಾಯಕ ನಟ ಪ್ರಮೋದ್ ನ ಗಂಭೀರ ಕಂಠ ಆತನ ಪಾತ್ರಕ್ಕೆ ಅಷ್ಟೇನೂ ಹೊಂದಾಣಿಕೆಯಾಗುವುದಿಲ್ಲ. ಥಟ್ಟನೆ ಋಷಿಕುಮಾರ ಸ್ವಾಮಿಯನ್ನು ನೆನಪಿಸುವ ಈತನದು ಕೂಡ ತುಸು ಓವರ್ ಆ್ಯಕ್ಟಿಂಗ್ ಅನಿಸುವಂಥ ನಟನೆ. ನಾಯಕಿಯಾಗಿ ಸುಶ್ಮಿತಾ ಶಿಂಧೆ ಚೆಲುವಿನ ಬೊಂಬೆಯಷ್ಟೇ. ಅನಗತ್ಯವಾಗಿ ಆಕೆಗೆ ಓವರ್ ಎಕ್ಸ್ ಪೋಸಿಂಗ್ ಹಾಡುಗಳನ್ನು ನೀಡಲಾಗಿದೆ. ವಿ.ಮನೋಹರ್ ನೀಡಿರುವ ಸಂಗೀತಕ್ಕಿಂತ ಚಿತ್ರದಲ್ಲಿ ಅವರು ನಟಿಸಿರುವ ಉಪನ್ಯಾಸಕರ ಪಾತ್ರ ನೆನಪಲ್ಲಿ ಉಳಿಯುತ್ತದೆ. ನಾಯಕನ ತಂದೆಯಾಗಿ ಅಚ್ಯುತ ಕುಮಾರ್ ಮತ್ತು ತಾಯಿಯಾಗಿ ವಿನಯಾಪ್ರಕಾಶ್ ನಟನೆ ಪಾತ್ರಕ್ಕೆ ತಕ್ಕಂತೆ ಮೂಡಿ ಬಂದಿದೆ. ಆರಂಭದಿಂದ ಅಂತ್ಯದೊಳಗೆ ಪದೇಪದೇ ನುಸುಳಿ ಬರುವ ಟಾಯ್ಲೆಟ್ ಹಾಸ್ಯವನ್ನು ಅವಾಯ್ಡ್ ಮಾಡಿದ್ದರೆ ಚೆನ್ನಾಗಿರುತ್ತಿತ್ತು. ಚಿತ್ರದ ಕಲಾನಿರ್ದೇಶನ ಹಲವು ಬಾರಿ ಕೃತಕತೆಯನ್ನು ನೆನಪಿಸುವಂತೆ ಮಾಡಿದ್ದು; ಅದಕ್ಕೆ ತಕ್ಕಂತೆ ಛಾಯಾಗ್ರಹಣ ಕೂಡ ಚಿತ್ರವನ್ನು ಪೇಲವವನ್ನಾಗಿಸಿದೆ. ಗಿರಿರಾಜ್ ಗೆ ನೀಡಿದ ರಾಜಖಳನ ಬಿಲ್ಡಪ್ ಕೊನೆಯ ತನಕ ಉಳಿಯುವುದಿಲ್ಲ. ಗೀತಾ ಬ್ಯಾಂಗಲ್ ಸ್ಟೋರ್ ನ ಒಡತಿಯಾಗಿ ಭವ್ಯಾ ಒಳ್ಳೆಯದೊಂದು ಪಾತ್ರವನ್ನೇ ನಿರ್ವಹಿಸಿದ್ದಾರೆ. ಗ್ರಾಮೀಣ ಸೊಗಡು ಮತ್ತೊಂದಷ್ಟು ಕತೆಯೊಂದಿಗೆ ಚಿತ್ರ ನೀಡಿರುವ ಮಂಜುಮಿತ್ರ ಭವಿಷ್ಯದಲ್ಲಿ ನಿರ್ದೇಶಕ ಆರ್.ಚಂದ್ರುವಿನಂತೆ ಹೆಸರು ಮಾಡಿದರೆ ಅಚ್ಚರಿಯಿಲ್ಲ.