Skip to content
FilmySphere

From the earlier FilmySphere, kept as published on 2015-10-23. It has not been updated.

Review of Ring Road

FilmySphere critic · Rating 2/5

ರಿಂಗ್ ರೋಡ್ ಚಿತ್ರ ವಿಮರ್ಶೆ ರಿಂಗ್ ರೋಡ್ ಹುಡುಗಿಯ ರಾಂಗ್ ರೂಟ್ ಸಂಕಟ

ಎಲ್ಲಾ ವಿಭಾಗದಲ್ಲಿಯೂ ಮಹಿಳೆಯರೇ ಕೆಲಸ ಮಾಡಿರುವ ಚಿತ್ರ ಎಂಬ ಕಾರಣಕ್ಕೆ ಸಾಕಷ್ಟು ಸುದ್ದಿ ಮಾಡಿದ್ದ ರಿಂಗ್ ರೋಡ್ ಬಿಡುಗಡೆಗೆ ಮುನ್ನ ಸುದ್ದಿಯಾಗಿದ್ದು ಅದರ ಕತೆಯ ಕುರಿತಾಗಿ. ಇದು ನೈಜ ಕತೆಯಲ್ಲ ಎಂದು ಹೇಳುತ್ತಲೇ ಬಂದರೂ ನೈಜ ಘಟನೆ ಮತ್ತು ಅದರ ಹಿನ್ನೆಲೆಗಳೊಂದಿಗೆ ಸಾಗುವ ಚಿತ್ರವೇ ರಿಂಗ್ ರೋಡ್. ಸುಮಾ ಕಾಲೇಜು ಹುಡುಗಿ. ಆಕೆ ಲಾಯರ್ ತಂದೆ ಮತ್ತು ಅಮ್ಮ ಅಜ್ಜಿಯರ ಮುದ್ದಿನ ಜೊತೆಗೆ ವಿಪರೀತ ಶಿಸ್ತಿನಲ್ಲಿ ಬೆಳೆದವಳು. ಮೈತುಂಬ ಮುಚ್ಚುವ ಬಟ್ಟೆಯನ್ನು ಬಿಟ್ಟು ಹೊರಗಡಿ ಇಡಲಾಗದ ಕಟ್ಟುನಿಟ್ಟು ಮನೆಯವರದು. ಆದರೆ ಅದನ್ನೇ ಒಪ್ಪಿಕೊಂಡವಳ ಮನದೊಳಗೆ ತುಂಡು ಬಟ್ಟೆಯಲ್ಲಿ ಕುಣಿಯುವ ಅದಮ್ಯ ಆಸೆ. ವಿದ್ಯಾರ್ಜನೆಯಲ್ಲಷ್ಟೇ ಗಮನ ಕೊಟ್ಟು ಕಾಲೇಜ್ ಗೆ ಟಾಪರಾಗುವ ಗುರಿಯಲ್ಲಿ ಯಾಂತ್ರಿಕ ಜಯ. ಆದರೆ ಮನದೊಳಗೆ ಸದಾ ತನ್ನ ಚೆಲುವಿನ ಬಗ್ಗೆ ಗುಣಗಾನ ನಡೆಸುವ ಹುಡುಗರದೇ ಧ್ಯಾನ. ಈ ದ್ವಂದ್ವದೊಳಗಿದ್ದಾಗಿಲೇ ಎದುರು ಮನೆ ಹುಡುಗನೊಂದಿಗೆ ನಿಶ್ಚಿತಾರ್ಥ. ಒಲ್ಲದ ಮದುವೆಯಿಂದ ಹೊರಬರಲು ಇನ್ನಿಲ್ಲದ ಪ್ರಯತ್ನಗಳಲ್ಲಿ ತೊಡಗುತ್ತಾಳೆ ಸುಮಾ. ತನ್ನನ್ನು ಪ್ರೀತಿಸುತ್ತಿದ್ದ ಜ್ಯೂನಿಯರ್ ವಿದ್ಯಾರ್ಥಿ ಕಿರಣ್ ನಲ್ಲಿ ತನ್ನನ್ನು ಈ ಮದುವೆಯಿಂದ ಪಾರಾಗಿಸಲು ಹೇಳುತ್ತಾಳೆ. ಆತ ಮತ್ತು ಸ್ನೇಹಿತರು ಸೇರಿ ಆ ಹುಡುಗನ ಕೊಲೆ ನಡೆಸುತ್ತಾರೆ. ಆದರೆ ನಿಜವಾಗಿಯೂ ಸುಮಾ ಮನದಲ್ಲಿ ಕಿರಣ್ ಜೊತೆ ಮದುವೆಯಾಗುವ ಯೋಜನೆಯಿತ್ತೇ? ಹಾಗಾದರೆ ಕಾಲೇಜ್ ನಲ್ಲಿ ಹೊಸದಾಗಿ ಬಂದ ಡಾನ್ಸ್ ಮಾಸ್ಟರ್ ಜೊತೆಗೆ ಮದುವೆಯ ಮಾತನಾಡಿದ್ದೇಕೆ? ಈ ಕೇಸ್ ವಿಚಾರಣೆ ಕೈಗೆತ್ತಿಕೊಂಡ ಪೊಲೀಸ್ ಅಧಿಕಾರಿ ಖಾನ್ ಸ್ವತಃ ತನ್ನ ಪತ್ನಿಗೆ ಡೈವೋರ್ಸ್ ನೀಡಬೇಕಾದ ಪರಿಸ್ಥಿತಿ ಉಂಟಾಗಿದ್ದೇಕೆ? ಮೊದಲಾದ ಪ್ರಶ್ನೆಗಳಿಗೆ ಚಿತ್ರತಂಡದವರು ಒಂದು ಅಂತ್ಯ ಹುಡುಕುವ ಯತ್ನ ಮಾಡಿದ್ದಾರೆ. ಅದೇನೆಂಬುದನ್ನು ಪರದೆಯ ಮೇಲೆ ನೋಡಬಹುದು.

ವರ್ಷಗಳ ಹಿಂದೆ ಬೆಂಗಳೂರಿನ ರಿಂಗ್ ರೋಡ್ ನಲ್ಲಿ ನಡೆದ ಘಟನೆಯನ್ನು ಸ್ಪೂರ್ತಿಯಾಗಿರಿಸಿದ ಚಿತ್ರವಾಗಿರುವುದರಿಂದ ಕತೆಯ ಹೂರಣವೇನು ಎಂಬುದು ಎಲ್ಲರಿಗೂ ತಿಳಿದರುವ ವಿಚಾರ. ಆದರೆ ಅದನ್ನೇ ಇಂಟರ್ ವೆಲ್ ತನಕ ಎಳೆದುಕೊಂಡು ಹೋಗಿರುವುದು ಇಂಟಲಿಜೆಂಟ್ ಅನಿಸುವುದಿಲ್ಲ. ಸುಮಳಾಗಿ ನಟಿಸಿರುವ ನವನಟಿ ಖುಷಿ ತನ್ನೊಳಗಿನ ಖುಷಿಯನ್ನು ಅಡಗಿಸುವ ಮತ್ತು ಹೊರಗಿಡುವ ಎರಡೂ ವೈವಿಧ್ಯತೆಗೆ ನ್ಯಾಯವೊದಗಿಸಿದ್ದಾರೆ. ಆಕೆಯ ದೇಹ ಪ್ರಕೃತಿಗೆ ಸಾಂಪ್ರಾದಾಯಿಕ ಮತ್ತು ಆಧುನಿಕದ ಎರಡೂ ರೀತಿಯ ವಸ್ತ್ರಶೈಲಿ ಹೊಂದಿಕೆಯಾಗುವುದು ಮತ್ತೊಂದು ಪಾಸಿಟಿವ್ ಅಂಶ. ಆದರೆ ಪದೇಪದೇ ಬರುವ ಅಂತರಂಗದ ಪಾತ್ರ ಮತ್ತು ಆಕೆಯೊಳಗಿನ ತುಮುಲದ ಚರ್ಚೆಗಳು ಪ್ರೇಕ್ಷಕರಿಗೆ ಕಿರಿಕಿರಿ ನೀಡುತ್ತವೆ. ಅವುಗಳನ್ನು ಇನ್ನಷ್ಟು ಸರಳವಾಗಿ ನಿರೂಪಿಸಬಹುದಿತ್ತು ಎನಿಸುವಂತೆ ಮಾಡುತ್ತದೆ. ಇದು ಬರೇ ಒಂದು ನೈಜ ಘಟನೆಯನ್ನಷ್ಟೇ ಆಧಾರವಾಗಿಟ್ಟುಕೊಂಡ ಚಿತ್ರವಲ್ಲ ಎಂಬುದನ್ನು ನಿರೂಪಿಸಲು ಖಾನ್ ಎಂಬ ಪೊಲೀಸ್ ಅಧಿಕಾರಿಯ ವೈಯಕ್ತಿಕ ಬದುಕನ್ನೂ ಕೂಡ ಚಿತ್ರದೊಳಗೆ ತುರುಕಲಾಗಿದೆ. ಖಾನ್ ದಂಪತಿಯಾಗಿ ದುನಿಯಾ ವಿಜಯ್ ಮತ್ತು ನಿಖಿತಾ ತುಕ್ರಾಲ್ ನಟಿಸಿದ್ದಾರೆ. ಆದರೆ ಚಿತ್ರದಲ್ಲಿರುವ ಯಾವುದೇ ಘಟನೆಗಳು ನಮಗೆ ವಿಶೇಷವೆನಿಸುವಂಥದ್ದಲ್ಲ ಮತ್ತು ಚಿತ್ರದಲ್ಲಿಯೂ ವಿಶೇಷ ಟ್ರೀಟ್ ಮೆಂಟ್ ನೀಡಲಾಗಿಲ್ಲವಾದ ಕಾರಣ ಸಹನೆಯನ್ನು ಪರೀಕ್ಷಿಸುತ್ತದೆ. ಇರುವುದರಲ್ಲಿ ಈ ಕತೆಯನ್ನು ಚಿತ್ರ ಮಾಡಲು ಯತ್ನಿಸುವ ನಿರ್ದೇಶಕಿ ಪ್ರಿಯಾ ಮತ್ತು ಕತೆಗಾರ್ತಿ ರೇಖಾರ ಪಾತ್ರದಲ್ಲಿ ನಟಿಸಿರುವ ಆರ್.ಜೆ ನೇತ್ರಾ ಮತ್ತು ನೀತು ನೈಜ ನಟನೆ ನೀಡಿದ್ದಾರೆ. ಸಂಭಾಷಣೆಗಳು ನೀರಸವೆನಿಸುತ್ತದೆ. ಗೀತನಾಟಕದಂತೆ ಪದೇ ಪದೇ ಬರುವ ಹಾಡಿನ ತುಣುಕುಗಳು ಮತ್ತು ವಾಣಿ ಹರಿಕೃಷ್ಣರ ಹಾಡುಗಳು ಚಿತ್ರಕ್ಕೆ ಅಗತ್ಯವಿರಲಿಲ್ಲ. ಆದರೆ ಹಿನ್ನೆಲೆ ಸಂಗೀತ ಕಲಾ ನಿರ್ದೇಶನ ಮತ್ತು ತಕ್ಕ ಮಟ್ಟಿಗೆ ಛಾಯಾಗ್ರಹಣವೂ ಚಿತ್ರಕ್ಕೆ ಒಳ್ಳೆಯ ಕಳೆ ನೀಡಿದೆ.

ಒಟ್ಟಿನಲ್ಲಿ ಹೆಣ್ಣಿನ ಅದಮ್ಯ ಭಾವನೆಗಳಿಗೆ ತಾತ್ವಿಕ, ಸಾತ್ವಿಕ ಅಂತ್ಯ ನೀಡಲು ಯತ್ನಿಸಿರುವ ನಿರ್ದೇಶಕಿ ಪ್ರಿಯಾ ಬೆಳ್ಳಿಯಪ್ಪರ ಪ್ರಯತ್ನವನ್ನು ಶ್ಲಾಘನೀಯವೆನ್ನಬಹುದು. ಮಹಿಳೆಯರ ಬಗೆಗಿನ ಮೀಸಲಾತಿ ಧೋರಣೆಯನ್ನಿಟ್ಟುಕೊಂಡು ಹೇಳುವುದಾದರೆ ಖಂಡಿತಾ ಚಿತ್ರವನ್ನೊಮ್ಮೆ ನೋಡಬಹುದು.