From the earlier FilmySphere, kept as published on 2015-11-21. It has not been updated.
Review of Boxer
FilmySphere critic · Rating 2.5/5
ಬಾಕ್ಸರ್ ಚಿತ್ರ ವಿಮರ್ಶೆ ಬಾಕ್ಸರ್ : ಇದು 'ಅಂಧ'ಗಾತಿಯ ಕತೆ
ಬಾಕ್ಸರ್ ಎಂದು ಹೆಸರಿಟ್ಟ ಮೇಲೆ ಒಂದೋ ನಾಯಕನ ಬಾಕ್ಸಿಂಗ್ ನೋಡ್ಬೇಕು ಅಥವಾ ಬಾಕ್ಸಿಂಗ್ ನೊಳಗಿರುವ ಗಟ್ಟಿಯಾದ ಕತೆಯನ್ನು ನೋಡಬೇಕು ಎಂಬುದು ಪ್ರೇಕ್ಷಕರ ನಿರೀಕ್ಷೆಯಾಗಿರುತ್ತದೆ. ಆ ಎರಡೂ ಅಂಶಗಳು ಚಿತ್ರದಲ್ಲಿಲ್ಲ ಮಾತ್ರವಲ್ಲ ಮನರಂಜನೆಗೆಂದು ಬಂದವರನ್ನು ಕೂಡ ತೃಪ್ತಿ ಪಡಿಸಲಾಗದ ಚಿತ್ರವಿದು. ದುಡ್ಡಿಗಾಗಿ ನಗರದೊಳಗೆ ಬಾಕ್ಸಿಂಗ್ ಮಾಡುವುದು ಮತ್ತು ಆ ದುಡ್ಡನ್ನು ಸೇವಾಶ್ರಮಕ್ಕೆ ನೀಡುವುದು ನಾಯಕನ ಹವ್ಯಾಸ. ರಾತ್ರಿ ಹೊತ್ತಲ್ಲಿ ಟೋಲ್ ಗೇಟ್ ಕ್ಯಾಶ್ ನಲ್ಲಿ ಕೆಲಸ ಮಾಡುವುದು ಆತನ ವೃತ್ತಿ. ಟಿವಿ ಧಾರಾವಾಹಿಗೆಂದೇ ಆತನ ಕಚೇರಿಗೆ ಬರುತ್ತಿರುತ್ತಾಳೆ ಒಬ್ಬಳು ಹುಡುಗಿ. ಆದರೆ ಆಕೆ ಕುರುಡಿಯಾದ ಕಾರಣ ಧಾರಾವಾಹಿಯನ್ನು ಕೇಳಿಸಿಕೊಂಡು ಹೋಗಬಲ್ಲಳು ಮಾತ್ರ. ಹಾಗೆ ಚಿತ್ರದ ಆರಂಭ ಧಾರಾವಾಹಿಯಂತೆ ಸಾಗುತ್ತದೆ. ನಿರೀಕ್ಷೆಯಂತೆ ಕ್ಲೈಮ್ಯಾಕ್ಸ್ ನಲ್ಲಿ ಆಕೆಯ ಕಣ್ಣು ಆಪರೇಶನ್ ಗಾಗಿ ಆತ ಪ್ರಯತ್ನಿಸುತ್ತಾನೆ. ಅದಕ್ಕೆ ದುಡ್ಡು ಹೊಂದಿಸಿ ಕರಾರಿನಂತೆ ಬಾಕ್ಸಿಂಗ್ ಗೆಂದು ಬ್ಯಾಂಕಾಕ್ ಗೆ ಹೋದವನು ಅವರ ಜಾಲಕ್ಕೆ ಅದರಿಂದ ಹೊರಬೀಳಲು ಕಷ್ಟಪಡುತ್ತಾನೆ. ಕಣ್ಣು ಬಂದ ಮೇಲೆ ಹುಡುಗಿಗೆ ಬಾಕ್ಸರ್ ಸಿಗುತ್ತಾನ ಎಂಬುದೇ ಕ್ಲೈಮ್ಯಾಕ್ಸ್. ಒಂದು ಕಿರುಚಿತ್ರಕ್ಕಾಗಬಹುದಾದ ಸರಕನ್ನು ಹಿರಿಚಿತ್ರದ ಕತೆಯಾಗಿಸಿದ್ದಾರೆ ಪ್ರೀತಮ್. ನಾಯಕನಾಗಿ ಧನಂಜಯ್ ತೀರಾ ಸಪ್ಪೆಯಾಗಿದ್ದಾರೆ. ಕೊನೆಯಲ್ಲೇನೋ ಒಂದು ಫ್ಲ್ಯಾಶ್ ಬ್ಯಾಕ್ ಸ್ಟೋರಿ ಆರಂಭವಾದಾಗ ದೊಡ್ಡ ತಿರುವುದ ಸಿಕ್ಕಿತೇನೋ ಎಂಬ ಸಂದೇಹವಾಗುತ್ತದೆ. ಆದರೆ ನಾಯಕನ ದೇಹವನ್ನು ಹೊರತು ಪಡಿಸಿ ಆತನ ಬಾಡಿ ಲ್ಯಾಂಗ್ವೇಜ್ ನಿಂದ ಆತನೊಬ್ಬ ಬಾಕ್ಸರ್ ಎಂದು ತೋರಿಸುವಲ್ಲಿ ನಿರ್ದೇಶಕರು ಸೋತಿದ್ದಾರೆ. ನಾಯಕಿಯಾಗಿ ಕೃತ್ತಿಕಾ ಎಂಬ ನವನಟಿಗೆ ಪ್ರಥಮ ಚಿತ್ರದಲ್ಲೇ ನಟನೆಗೆ ಅವಕಾಶವಿರುವ ಅಂಧೆಯ ಪಾತ್ರ ದೊರಕಿದ್ದು ಅದನ್ನು ಈ ಅಂದಗಾತಿ ಅಂದವಾಗಿಯೇ ನಿರ್ವಹಿಸಿದ್ದಾರೆ. ರಂಗಾಯಣ ರಘುವಿನ ಆಗಮನವಾಗುವ ದೃಶ್ಯಗಳಲ್ಲಿ ಲವಲವಿಕೆಯಿದೆ. ಅರವಿಂದ್ ನ ಆಕರ್ಷಕ ಖಳನಟನೆಗೆ ಇನ್ನಷ್ಟು ದೃಶ್ಯಗಳು ಬೇಕಿತ್ತು ಎಂಬಂತಿತ್ತು. ಕ್ಲೈಮ್ಯಾಕ್ಸ್ ನಲ್ಲಿ ಆಸಕ್ತಿ ಮೂಡಿಸುತ್ತದೆ ಎಂಬ ಕಾರಣಕ್ಕಾಗಿ ಚಿತ್ರವನ್ನೊಮ್ಮೆ ನೋಡಬಹುದು.