From the earlier FilmySphere, kept as published on 2015-10-01. It has not been updated.
Review of Airavata
FilmySphere critic · Rating 3.5/5
ಐರಾವತ ಚಿತ್ರ ವಿಮರ್ಶೆ ಐರಾವತ: ಈತ ಆಕರ್ಷಕ ಆರಕ್ಷಕ ಐರಾವತದಲ್ಲಿ ದರ್ಶನ್ ಪೊಲೀಸ್ ಅಧಿಕಾರಿಯ ಪಾತ್ರವೆಂಬುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಆತ ನಿಜಕ್ಕೂ ಪೊಲೀಸ್ ಅಧಿಕಾರಿಯೇನಾ? ಅಲ್ಲವಾದರೆ ಆ ಹುದ್ದೆಗೆ ಹೇಗೆ ಬಂದ ಎಂಬುದನ್ನು ಹೇಳುವುದೇ ಚಿತ್ರದಲ್ಲಿನ ಟ್ವಿಸ್ಟು ಅಥವಾ ವಸ್ತು! ಐಪಿಎಸ್ ಅಧಿಕಾರಿ ಐರಾವತ ಅಧಿಕಾರ ಸ್ವೀಕರಿಸಿದ ಮೇಲೆ ಅದರ ವ್ಯಾಪ್ತಿಯನ್ನು ದಾಟಿ ತನ್ನದೇ ನಿಯಮಗಳನ್ನು ತರುತ್ತಾನೆ. ಆತ ರೈತರ ಪರವಾದ, ಖಾಸಗಿ ವಾಹನಗಳ ಚಾಲಕರ ಪರವಾದÀ, ಇಂಜಿನಿಯರ್‍ಗಳ ಪರವಾದ ಹೋರಾಟಕ್ಕೆ ನಿಂತಾಗಲೆಲ್ಲಾ ಈ ಎಲ್ಲಾ ವಿಭಾಗಗಳಲ್ಲಿಯೂ ಮಧ್ಯವರ್ತಿಯಂತೆ ದಂಧೆ ನಡೆಸುವ ಪ್ರತಾಪ್ ಕಾಳೆಯ ವಿರುದ್ಧ ಹೋರಾಡುವಂತಾಗುತ್ತದೆ. ರಾಜಕೀಯ ವಲಯದಲ್ಲಿ ದೊಡ್ಡ ಹಿಡಿತವಿಟ್ಟುಕೊಂಡಿರುವ ಪ್ರತಾಪ್ ಕಾಳೆ ಐರಾವತನನ್ನು ಜೈಲು ಸೇರಿಸುವಲ್ಲಿ ಯಶಸ್ವಿಯಾಗುತ್ತಾನೆ. ಆದರೆ ಅದಕ್ಕೆ ಕಾರಣ ಐರಾವತ ಒಬ್ಬ ನಕಲಿ ಪೊಲೀಸ್ ಅಧಿಕಾರಿ ಎಂಬುದಾಗಿರುತ್ತದೆ. ಸ್ವಾತಂತ್ರ್ಯ ಹೋರಾಟಗಾರನೋರ್ವನ ಮೊಮ್ಮಗನಾಗಿ ದೇಶ ಭಕ್ತಿಯೊಂದಿಗೆ ಹಳ್ಳಿಯಲ್ಲಿ ಬೆಳೆದ ಆತ ಪೊಲೀಸರಿಂದ ತನ್ನ ತಂಗಿಗಾದ ಅನ್ಯಾಯದಿಂದ ನೊಂದಿರುತ್ತಾನೆ. ಹಾಗಾಗಿ ಪೊಲೀಸ್ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ ನೀಗಿಸಿ ಸಾಮಾನ್ಯರ ಸೇವೆಗೆ ಸ್ಪಂದಿಸುವಂತೆ ಮಾಡುವುದೇ ಆತನ ಧ್ಯೇಯವಾಗಿರುತ್ತದೆ. ಒಟ್ಟಿನಲ್ಲಿ ನಕಲಿ ಪೊಲೀಸ್‍ಗೆ ಜೈಲು ಶಿಕ್ಷೆಯಾಗುತ್ತದೆ. ಸಾಮನ್ಯ ಸಂದರ್ಭವಾಗಿದ್ದರೆ ಸಿನೆಮಾ ಅಲ್ಲಿಗೆ ಕೊನೆಯಾಗುತ್ತಿತ್ತು. ಆದರೆ ಅಸಾಮಾನ್ಯ ನಾಯಕರಿಗಾಗಿ ತಯಾರಾದ ಕತೆಗಳು ಸಾಮಾನ್ಯವಾಗಿರುವುದಿಲ್ಲವಲ್ಲ? ಹಾಗಾಗಿ ಐರಾವತ ಮತ್ತೆ ಐಪಿಎಸ್ ಎಕ್ಸಾಮ್ ಬರೆದು ಜಯಿಸಿ ಅಧಿಕಾರಕ್ಕೆ ಬಂದು ಪ್ರತಾಪ್ ಕಾಳೆಯ ವಿರುದ್ಧ ಹೋರಾಡಿ ಗೆಲ್ಲುತ್ತಾನೆ ಎಂಬಲ್ಲಿಗೆ ಚಿತ್ರ ಕೊನೆಗೊಳ್ಳುತ್ತದೆ. ಹೇಗೆ ಗೆಲ್ಲುತ್ತಾನೆ ಮತ್ತು ಆತನ ತಂಗಿಗೆ ಪೊಲೀಸರಿಂದ ಆದ ಅನ್ಯಾಯವೇನು ಎಂಬುದು ತೆರೆಯ ಮೇಲಿನ ನೋಟಕ್ಕೆ ಮೀಸಲಾಗಿರಲಿ.
ಐರಾವತನಾಗಿ ದರ್ಶನ್ ಆಕರ್ಷಕ ಆರಕ್ಷಕ. ಆರಂಭದಲ್ಲೇ ಫ್ಲ್ಯಾಶ್ ಬ್ಯಾಕ್‍ಗೆ ಹೋಗುವ ಚಿತ್ರದೊಳಗೆ ಇಂಟರ್‍ವೆಲ್ ವೇಳೆಗೆ ಮತ್ತೊಂದು ಫ್ಲ್ಯಾಶ್ ಬ್ಯಾಕ್ ನುಸುಳಿಕೊಳ್ಳುತ್ತದೆ. ಹಳ್ಳಿಯ ಬದುಕಲ್ಲಿ ಸ್ವಾತಂತ್ರ್ಯ ಹೋರಾಟಗಾರನ ಮೊಮ್ಮಗನಾಗಿ ದರ್ಶನ್ ಕಾಣಿಸಿಕೊಳ್ಳುವ ಸನ್ನಿವೇಶಗಳು ಕಮಲಹಾಸನ್‍ರ ಇಂಡಿಯನ್ ಚಿತ್ರವನ್ನು ನೆನಪಿಸಿದರೆ ಅಚ್ಚರಿಯಿಲ್ಲ. ಮಧ್ಯಂತರದವರೆಗೆ ನಕಲಿ ಪೊಲೀಸ್ ಪಾತ್ರವಾದರೆ ಆನಂತರದಲ್ಲಿ£ ಪೊಲೀಸ್ ಕಾನೂನುಗಳೇ ನಕಲಿ! ಇತರರು ಕಾನೂನಿನ ವಿರುದ್ಧದ ಸಣ್ಣಪುಟ್ಟ ನಡವಳಿಕೆಯನ್ನೂ ಪ್ರಶ್ನಿಸುವ ಐರಾವತನಿಗೆ ಕಾನೂನಿನಲ್ಲಿ ಎಲ್ಲೆಗಳೇ ಇಲ್ಲ. ಹೆಲ್ಮೆಟ್ ಹಾಕದೆ ಬೈಕ್ ಓಡಿಸುತ್ತಾನೆ, ಅಜ್ಜಿ ತಾತನ ಚಿತೆಯ ಮುಂದೆಯೂ ಕ್ಯಾಪ್ ತೆಗೆಯುವುದಿಲ್ಲ. ಕನಿಷ್ಟ ಪಾತ್ರಕ್ಕಾಗಿ ಪೊಲೀಸ್ ಹೇರ್ ಸ್ಟೈಲನ್ನೂ ಮಾಡಿಸಲಾಗಿಲ್ಲವೆನ್ನುವುದು ದುರಂತ. ಸಂಭಾಷಣೆಯ ಮೂಲಕ ನಾಯಕನಿಗೆ ಬಿಲ್ಡಪ್ ಕೊಡುವ ಭರದಲ್ಲಿ ‘ಇಂದು ನಾನು ಕಾನೂನು ಕೈಗೆತ್ತಿಕೊಂಡಿರುವುದು ತಪ್ಪಾದಲ್ಲಿ ಅಂದು ಸ್ವಾತಂತ್ರ್ಯ ಹೋರಾಟ ಮಾಡಿದ ಗಾಂಧೀಜಿ, ನೇತಾಜಿಯವರದೂ ತಪ್ಪೇ’ ಎನ್ನುವ ಹೋಲಿಕೆ ನೀಡಿ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡಲಾಗಿದೆ. ಚಿತ್ರದ ಮೊದಲಾರ್ಧದಲ್ಲಿ ನಾಯಕನ ನಾಟಕೀಯ ಸಂಭಾಷಣೆಗಳೆದುರು ಮೌನವಾಗಿರುವ ಪ್ರಕಾಶ್ ರೈಯ ಪಾತ್ರ ದ್ವಿತೀಯಾರ್ಧದಲ್ಲಿ ಸರಿಯಾದ ಟಾಂಗ್ ನೀಡುವುದು ಮತ್ತು ಆಗ ನಾಯಕ ಭಾವ ತೀವ್ರತೆಯಿಂದ ಮೌನವಾಗಿಯೇ ಇರುವಂತೆ ತೋರಿಸುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ. ಪರಸ್ಪರ ‘ಮಗಾ ಮಗಾ’ ಎಂದು ಮಾತನಾಡಿಸುವಂತೆ ಅವರಿಬ್ಬರ ಸಂಭಾಷಣೆಗಳು ಚೆನ್ನಾಗಿ ಸಿಳ್ಳೆಗಿಟ್ಟಿಸುತ್ತವೆ. ಚಿತ್ರವೆಲ್ಲೋ ಸ್ವಲ್ಪ ನೀರಸವೆನಿಸುವಾಗಲೆಲ್ಲ ಪ್ರಕಾಶ್ ರೈ ಲವಲವಿಕೆಯ ಪ್ರತೀಕವಾಗಿ ಬರುತ್ತಾರೆ. ಚಿಕ್ಕಣ್ಣನೊಂದಿಗೆ ಇಂಟ್ರಡ್ಯೂಸಾಗುವ ನಾಯಕಿ ಊರ್ವಶಿ ರೌಟೆಲಾ ಅನಗತ್ಯವೆನಿಸುವಂತೆ ಬಂದು ಕುಣಿದು ಹೋಗುತ್ತಾರೆ. ಚಿಕ್ಕಣ್ಣ ಎರಡೇ ದೃಶ್ಯಗಳಲ್ಲಿ ಮಾಯವಾಗುತ್ತಾರೆ. ಅಷ್ಟೇನೂ ದ್ವಂದ್ವಾರ್ಥದ ಸಂಭಾಷಣೆಗೆ ಅವಕಾಶವಿಲ್ಲದ ಕಾರಣ ಸಾಧು ಕೋಕಿಲ ಅತಿಯಾಗಿ ಕಾಡುವುದಿಲ್ಲ. ಆದರೆ ಐಟಂ ಹಾಡೊಂದರ ಕಾಟವಿದೆ. ಸ್ವಾತಂತ್ರ್ಯ ಹೋರಾಗಾರ ತಾತನಾಗಿ ಅನಂತನಾಗ್‍ರ ಮೇಕಪ್ ನಲ್ಲಿ ಕಾಣುವ ವಯಸ್ಸು ಕಂಠದಲ್ಲಿ ಗೋಚರಿಸುವುದಿಲ್ಲ. ಬಿಳಿಯ ವಿಗ್ ಹಾಕಿಕೊಂಡು ತಾತನೊಂದಿಗೆ ನಡೆದಾಡುವ ಅಜ್ಜಿಯ ಪಾತ್ರಕ್ಕೆ ಸಿತಾರರನ್ನು ಕರೆಸುವ ಅಗತ್ಯವಿರಲಿಲ್ಲ. ಆದರೆ ದರ್ಶನ್ ರ ಮಾಸ್ ಲುಕ್ಕು, ಉತ್ತಮವಾದ ಛಾಯಾಗ್ರಹಣ, ಅದ್ಧೂರಿಯಾದ ಮೇಕಿಂಗ್ ಮತ್ತು ಫೈಟಿಂಗ್ ಗಳನ್ನು ನೋಡುವ ಆಕಾಂಕ್ಷೆ ನಿಮಗಿದ್ದಲ್ಲಿ ಖಂಡಿತಾ ಚಿತ್ರವನ್ನೊಮ್ಮೆ ನೋಡಬಹುದು.