From the earlier FilmySphere, kept as published on 2015-09-18. It has not been updated.
Review of Love You Aaliya
FilmySphere critic · Rating 4/5
ಲವ್ ಯು ಆಲಿಯಾ ಚಿತ್ರ ವಿಮರ್ಶೆ ದಾಂಪತ್ಯದಂದಕೆ ಭಾಷ್ಯ; ಲವ್ ಯು ಆಲಿಯಾ
ಸದ್ಯದ ಮಟ್ಟಿಗೆ ಬರೇ ಸುದೀಪ್ ಗಾಗಿ ಮಾತ್ರ ಈ ಚಿತ್ರವನ್ನು ನೋಡಿದರೂ ಅಡ್ಡಿಯಿಲ್ಲ. ಯಾಕೆಂದರೆ ಬರೇ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ, ಪತ್ನಿ ಮತ್ತು ಮಗುವಿನ ಬಗ್ಗೆಯೇ ಚಿತ್ರದಲ್ಲಿ ಹತ್ತು ನಿಮಿಷ ಮಾತನಾಡಿದ್ದಾರೆ ಸುದೀಪ್. ಚಿತ್ರದ ಅರಂಭದಲ್ಲಿಯೇ ಇಂದ್ರಜಿತ್ ನಡೆಸುವ ಸಂದರ್ಶನವೊಂದರಲ್ಲಿ ಸುದೀಪ್ ಹೀಗೆ ಮನ ಬಿಚ್ಚಿಡುತ್ತಾರೆ. ಮಧ್ಯಂತರದ ಬಳಿಕ ಚಿತ್ರ ಆರಂಭವಾದಾಗಲೂ ಮತ್ತೆ ಇದೇ ಸಂದರ್ಶನ ಮುಂದುವರಿಯುತ್ತದೆ. ಕೊನೆಯಲ್ಲಿ ಸುದೀಪ್ 'ನಾನು ಇನ್ನು ಮುಂದೆಯಾದರೂ ನನ್ನ ವೈಯಕ್ತಿಕ ಬದುಕಿಗೆ ಹೆಚ್ಚು ಸಮಯ ನೀಡಿ ಒಳ್ಳೆಯ ಗಂಡ, ಒಳ್ಳೆಯ ತಂದೆಯಾಗಿ ಗುರುತಿಸಿಕೊಳ್ಳಬೇಕು ಎಂದುಕೊಂಡಿದ್ದೇನೆ' ಎಂಬಲ್ಲಿಗೆ ಸಂದರ್ಶನ ಪೂರ್ತಿಯಾಗುತ್ತದೆ. ಬಹುಶಃ ನಮಗೆ ಅನಿಸುವುದೇನೆಂದರೆ ಈ ಸಂದರ್ಶನಕ್ಕೆ ಇಂದ್ರಜಿತ್ ಒಂದು ತಾತ್ವಿಕ ಎಂಡಿಂಗ್ ಕೂಡ ನೀಡಿರುತ್ತಾರೆ. 'ಹೀಗೆ ವೃತ್ತಿ ಬದುಕಿನಲ್ಲಿ ಎಷ್ಟೇ ಒತ್ತಡಗಳಿದ್ದರೂ ಅವುಗಳನ್ನು ಮೀರಿ, ತಮ್ಮ ಪತ್ನಿ, ಮಗುವಿಗೆ ಸಮಯ ಕಂಡುಕೊಳ್ಳಲು ಮುಂದಾಗಿರುವ ಸುದೀಪ್ ಒಬ್ಬ ಆದರ್ಶ ಗಂಡ' ಎಂದು ಸಂದರ್ಶನವನ್ನು ಕೊನೆಗೊಳಿಸಿರಬಹುದು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಆ ಮುಕ್ತಾಯಕ್ಕೆ ಕತ್ತರಿ ಹಾಕಿದ್ದಾರೆ. ಹಾಗಾಗಿ ಸಂದರ್ಶನ ಸುದೀಪ್ ಮಾತಿನಲ್ಲೇ ಕೊನೆಯಾಗಿದೆ. ಯಾಕೆಂದರೆ ಚಿತ್ರದ ಮುಖ್ಯ ಕಾನ್ಸೆಪ್ಟ್ ಎಂಬುದೇ ವಿಚ್ಛೇದನವೆಂಬುದು ಹೆಚ್ಚುತ್ತಿದ್ದು ಇದನ್ನು ದಂಪತಿಗಳು ಹೇಗೆ ಪರಸ್ಪರ ಅರ್ಥೈಸಿಕೊಂಡು ತಡೆಯಬಹುದು, ಮಕ್ಕಳ ಮನಸ್ಸಿಗೆ ನೋವಾಗಂತೆ ನಡೆದುಕೊಳ್ಳಬಹುದು ಮತ್ತು ಲಿವಿಂಗ್ ಟುಗೆದರ್ ನಂಥ ಅರ್ಥಹೀನ ಬದುಕನ್ನು ತಡೆಗಟ್ಟಬಹುದು ಎಂಬುದನ್ನು ಪ್ರಭಾವಯುತವಾಗಿ ತಲುಪಿಸುವುದೇ ಆಗಿದೆ. ಬಹುಶಃ ಇದೇ ಚಿತ್ರ ಕೆಲವೇ ತಿಂಗಳುಗಳ ಹಿಂದೆಯೇ ತೆರೆಕಂಡಿದ್ದರೆ ಖುದ್ದು ಪ್ರಿಯಾ ಕೂಡ ಮನಸ್ಸು ಬದಲಿಸುತ್ತಿದ್ದರೇನೋ ಎಂಬಷ್ಟು ಪರಿಣಾಮಕಾರಿಯಾಗಿ ಚಿತ್ರ ಮೂಡಿ ಬಂದಿದೆ ಎಂಬುದು ಸತ್ಯ.
ಚಿತ್ರದಲ್ಲಿ ಹೈಫೈ ಫ್ಯಾಮಿಲಿಗಳ ಮದುವೆಗಳನ್ನು ನಡೆಸುವ ಮತ್ತು ಮುರಿಯುವ ಬ್ರೋಕರ್ ಮತ್ತು ಬ್ರೇಕರ್ ಕಿರಣ್ ಆಗಿ ಚಂದನ್ ಕಾಣಿಸಿದ್ದಾರೆ. ಈ ನಡುವೆ ಪರಿಚಯಗೊಂಡು ಇಷ್ಟವಾಗುವ ಆಲಿಯಾ ಆತನ ಪ್ರೀತಿಯನ್ನು ಒಪ್ಪಿದರೂ ಮದುವೆಗೆ ಒಪ್ಪುವುದಿಲ್ಲ. ಅದಕ್ಕೆ ಆಕೆಯ ತಂದೆ ತಾಯಿ ವಿಚ್ಛೇದಿತರಾಗಿರುತ್ತಾರೆ ಎಂಬುದೇ ಕಾರಣವಾಗಿರುತ್ತದೆ. ನಾಯಕ ಅವರನ್ನು ಒಂದು ಮಾಡಲು ಪ್ರಯತ್ನಿಸುತ್ತಾನೆ. ಅದರಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾನೆ ಎಂಬುದನ್ನು ಪರದೆಯ ಮೇಲೆ ನೋಡುವುದೇ ಸೊಗಸು. ಯಾಕೆಂದರೆ ಲೊಕೇಶನ್ ವೈಭವಗಳು ಹಾಗಿವೆ.
ಆಲಿಯಾಳ ತಂದೆಯ ಪಾತ್ರದಲ್ಲಿ ನಟಿಸಿರುವ ಕ್ರೇಜಿಸ್ಟಾರ್ ಚಿತ್ರದಲ್ಲಿ ವೈದ್ಯರಾಗಿದ್ದಾರೆ. ಡಾಕ್ಟರ್ ಗೆ ವೈಯಕ್ತಿಕ ಬದುಕಿನಲ್ಲಿ ಸಮಯ ಸಿಗದೆ ದಾಂಪತ್ಯ ವಿಚ್ಛೇದನಕ್ಕೆಡೆ ಮಾಡುವ ಬಗ್ಗೆ 'ಮನೆಮನೆ ರಾಮಾಯಣ' ಚಿತ್ರದಿಂದಲೇ ನೋಡಿದ್ದೇವೆ. ಇಲ್ಲಿ ತನ್ನ ಡಾಕ್ಟರ್ ಮಾವ ಮತ್ತು ಡಾನ್ಸರ್ ಅತ್ತೆಯನ್ನು ಒಂದಾಗಿಸಲು ರವಿಚಂದ್ರನ್ ಜೊತೆಗೆ ಲೇಡಿ ನರ್ಸಾಗಿ ಮತ್ತು ಭೂಮಿಕಾ ಜೊತೆಗೆ ನೃತ್ಯ ಕಲಿಯುವ ಶಿಷ್ಯನಾಗಿ ನಟಿಸಿದ್ದಾರೆ ಚಂದನ್. ಹಾಗಂತ 'ಅವ್ವೈ ಷಣ್ಮುಖಿ' ಚಿತ್ರ ನೆನಪಾದರೂ ಅದಕ್ಕೂ ಇದಕ್ಕೂ ಸಂಬಂಧವಿಲ್ಲ. ವೈದ್ಯರಾಗಿ ರವಿಚಂದ್ರನ್ ನಟನೆಯಲ್ಲಿ ವೃತ್ತಿಪರತೆ ಕಾಣಿಸದಿದ್ದರೂ ಕೂಡ ವಿಚ್ಛೇದಿತ ಪತಿಯಾಗಿ ಮನಸೆಳೆಯುತ್ತಾರೆ. ಭೂಮಿಕಾ ಚಾವ್ಲಾರ ನೈಜ ಭಾವಾಭಿನಯಕ್ಕೆ ಪ್ರಿಯಾಂಕ ಉಪೇಂದ್ರ ನೀಡಿರುವ ಕಂಠ ಪೂರಕವಾಗಿದೆ. ನಾಯಕನಾಗಿ ಚಂದನ್ ಸೌಂದರ್ಯ, ನಟನೆ ಗಮನಾರ್ಹ. ಆತನ ಜೋಡಿಯಾಗಿ ಸಂಗೀತಾ ಚೌಹಾನ್ ಸೈಯೆನ್ನಿಸಿದರೂ ರವಿ-ಭೂಮಿಕಾ ಪುತ್ರಿಯಾಗಿ ಆಕೆಯನ್ನು ಕಲ್ಪಿಸುವುದು ಕಷ್ಟವಾಗುತ್ತದೆ. ಚಂದನ್ ತಾಯಿಯಾಗಿ ಸುಧಾರಾಣಿ ನಟಿಸಿದ್ದಾರೆ. ಚಿತ್ರದ ಪೂರ್ವಾರ್ಧದಲ್ಲಿ ಬರುವ ಸುಲ್ಫಿ ಎಂಬ ಡಾನ್ ಪಾತ್ರಧಾರಿ ರವಿಶಂಕರ್ ನಟನೆ ಮತ್ತು ಆತನ ಚೇಲಾಗಳಿಗೆ ಮೋಹನ್ ಬರೆದಿರುವ ಸಂಭಾಷಣೆ ಚಿತ್ರವನ್ನು ಲವಲವಿಕೆಯಿಂದ ನೋಡುವಂತೆ ಮಾಡುತ್ತದೆ. ಆದರೆ ಸಾಧುಕೋಕಿಲ ಮತ್ತು ಶಕೀಲ ಬಂದ ತಪ್ಪಿಗೆ ಎಲ್ಲರ ಬಾಯಿಯಿಂದಲೂ ಡಬಲ್ ಮೀನಿಂಗ್ ಸಂಭಾಷಣೆ ಕೇಳುವ ಸೌಭಾಗ್ಯವೂ ಇದೆ. ಚಿತ್ರದ ಆರಂಭದಲ್ಲಿ 'ಆಲಿಯಾ ನಿನ್ನ ಹೃದಯ ಖಾಲಿಯಾ' ಎಂದು ಕೇಳಿದ್ದ ನಾಯಕ ಮಧ್ಯಂತರದ ಬಳಿಕ 'ಆಲಿಯಾ ನಿನ್ನ ಬೆಡ್ ಖಾಲಿಯಾ' ಎನ್ನುವಲ್ಲಿಗೆ ತಲುಪುತ್ತಾನೆ. ಆದರೆ ಇಂದ್ರಜಿತ್ ನಿರ್ದೇಶನದ ಈ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ ಅವೆಲ್ಲವುಗಳಿಗಿಂತ ಉತ್ತಮವಾದ ಕತೆ, ಸಂಗೀತ, ಲೊಕೇಶನ್ ಗಳು ಈ ಚಿತ್ರದಲ್ಲಿವೆ. ಸನ್ನಿ ಲಿಯೋನ್ ಗ್ಲಾಮರ್ ಕಣ್ಣು ಕುಕ್ಕುತ್ತದೆ. ಸೃಜನ್, ಧ್ಯಾನ್ ಹೀಗೆ ಎಷ್ಟೇ ಪಾತ್ರಗಳು ಬಂದರೂ, ಅವುಗಳಿಗೊಂದು ಸ್ಥಾನ ಮತ್ತು ಒಂದಕ್ಕೊಂದು ಸಂಬಂಧ ಕಲ್ಪಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಸಂಬಂಧಗಳ ಬಗ್ಗೆ ಮಾತನಾಡುವ ಈ ಚಿತ್ರವನ್ನು ಸಂಬಂಧಿಕರ ಜೊತೆಗೆ ಹೋಗಿ ಇಂದೇ ನೋಡಬಹುದು.