From the earlier FilmySphere, kept as published on 2015-09-12. It has not been updated.
Review of Namak Haraam
FilmySphere critic · Rating 2.5/5
ನಮಕ್ ಹರಾಮ್ ಚಿತ್ರ ವಿಮರ್ಶೆ ಫೈಟು, ವಂಚನೆ ಜೊತೆಗೆ ಕ್ರೈಮ್
ಗೋಲ್ಡನ್ ಸ್ಟಾರ್ ಗಣೇಶ್ ನ ಕಿರಿಯ ಸಹೋದರ ಕೃಷ್ಣ ಮಹೇಶ್ ನಾಯಕರಾಗಿರುವ ಚಿತ್ರವೆಂಬ ಕಾರಣಕ್ಕೆ ಒಂದಷ್ಟು ನಿರೀಕ್ಷೆ ಮೂಡಿಸಿದ್ದ ನಮಕ್ ಹರಾಮ್ ಕೊನೆಗೂ ಪರದೆಯ ಮೇಲೆ ಬಂದಿದೆ.
ಚಿತ್ರದಲ್ಲಿ ನಾಯಕ ಜಗ್ಗಿಯೆಂಬ ರೌಡಿ. ಆತನನ್ನು ರೌಡಿಯಾಗಿ ಬೆಳೆಸಿದಾತ ಜೈಲಲ್ಲಿರುತ್ತಾನೆ. ಉಳಿದ ರೌಡಿಗಳು ಆತನ ಹವಾಗೆ ಬೆದರಿ ಸ್ನೇಹ ಹಸ್ತ ಚಾಚಿರುತ್ತಾರೆ. ಆದರೆ ಒಳಗಿಂದೊಳಗೆ ಜಗ್ಗಿಯನ್ನೇ ಮುಗಿಸುವ ತಂತ್ರ ಹೂಡಿರುತ್ತಾರೆ. ಜಗ್ಗಿಯ ಸ್ನೇಹಿತರಲ್ಲಿ ಒಬ್ಬೊಬ್ಬರದೇ ಕೊಲೆಯಾಗತೊಡಗುತ್ತದೆ. ಅದಕ್ಕೆ ಕಾರಣ ಯಾರೆಂದು ಜಗ್ಗಿ ಹುಡುಕುವ ಹೊತ್ತಿಗೆ ತನ್ನನ್ನು ಹುಡುಕಿ ಬಂದ ಹುಡುಗಿಯೋರ್ವಳ ಪ್ರೀತಿಗೆ ಮನಸೋಲುತ್ತಾನೆ, ಪ್ರೀತಿಯಲ್ಲಿ ಬಿದ್ದ ಜಗ್ಗಿ ನಮ್ಮ ವಿರುದ್ಧವೇ ನಿಲ್ಲಬಹುದೆಂದುಕೊಂಡ ರೌಡಿಗಳು ಆತನ ವಿರುದ್ಧವೇ ಸ್ಕೆಚ್ ಹಾಕುತ್ತಾರೆ. ಜಗ್ಗಿಯನ್ನು ಬೆಳೆಸಿದ್ದ ರೌಡಿಯೂ ಜೈಲಿನಿಂದ ಹೊರಬಂದು ಅವರೊಂದಿಗೆ ಸೇರಿಕೊಂಡು ಜಗ್ಗಿಯ ವಿರುದ್ಧ ಸ್ಕೆಚ್ ಹಾಕುವುದು ವಿಶೇಷ. ಆದರೆ ಜಗ್ಗಿ ನಿಜಕ್ಕೂ ಬಲಿಯಾಗುತ್ತಾನ? ಅದಕ್ಕೆ ಯಾರು ಕಾರಣ? ಎಂಬ ಪ್ರಶ್ನೆಗಳಿಗೆ ಚಿತ್ರದ ಕ್ಲೈಮ್ಯಾಕ್ಸ್ ಉತ್ತರ ನೀಡುತ್ತದೆ.
ನಾಯಕ ಮಹೇಶ್ ನ ಸದೃಢ ಶರೀರ ಹೊಡೆದಾಡುವ ನಾಯಕನಿಗೆ ಹೇಳಿ ಮಾಡಿಸಿದಂತಿದೆ. ಆದರೆ ಚಿತ್ರದಲ್ಲಿ ಜಗ್ಗಿ ಪಾತ್ರಕ್ಕೆ ನೀಡಲಾಗಿರುವ ಬಿಲ್ಡಪ್ ಗೆ ತಕ್ಕಂತೆ ಆತನ ಹವಾ ತೋರಿಸುವ ಸನ್ನಿವೇಶಗಳೇ ಇಲ್ಲ. ಖಳನಟ ರಾಜೇಂದ್ರ ಕಾರಂತ್ ಜೊತೆ ಮಾತನಾಡುವ ದೃಶ್ಯವೊಂದರಲ್ಲಂತೂ ನಿಮಿಷಗಳ ಕಾಲ ನಾಯಕನ ಮುಖದ ಹಿಂಭಾಗವನ್ನಷ್ಟೇ ತೆರೆಯ ಮೇಲೆ ತೋರಿಸಿರುವುದು ಛಾಯಾಗ್ರಾಹಕನ ಅಪಕ್ವತೆಗೆ ಸಾಕ್ಷಿಯಾಗಿದೆ. ರೌಡಿಗಳಲ್ಲೊಬ್ಬರಾಗಿ ಗೌರೀಶ್ ಅಕ್ಕಿ ಲಾಂಗ್ ಹಿಡಿದುಕೊಂಡರೂ ಕೂಡ ಕಾರ್ಪೊರೇಟ್ ಸ್ಮಗ್ಲರ್ ನಂತೆ ಕಾಣಿಸಿದ್ದಾರೆ. ನಾಯಕನ ನಿಷ್ಠಾವಂತ ಕುಡುಕ ಸ್ನೇಹಿತನಾಗಿ ಯತಿರಾಜ್ ತಮ್ಮ ಪಾತ್ರಕ್ಕೂ ನಿಷ್ಠವಾಗಿದ್ದಾರೆ. ಸ್ಕೆಚ್ಚು, ಮತ್ತು ಹೊಡೆದಾಟದ ನಡುವೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಬಂದು ಹೋಗುವ ನಾಯಕಿಯಾಗಿ ರ್ಯಾಪಿಡ್ ರಶ್ಮಿ ಸಂಭಾಷಣೆಗಳನ್ನು ಕೇಳುತ್ತಿದ್ದರೆ ಎಫೆಮ್ಮಿನ ಮಾತುಗಳೇ ನೆನಪಾಗಿ ಪಾತ್ರದ ಗಂಭೀರತೆ ಗೊತ್ತಾಗುವುದಿಲ್ಲ. ಕೊನೆಯಲ್ಲಿ ಆಕೆಯ ಪಾತ್ರಕ್ಕಿರುವ ತಿರುವು ಸಿನೆಮಾಗಳಲ್ಲಿ ಹೊಸದಲ್ಲದಿದ್ದರೂ ಅಲ್ಲಿನ ಸಂದರ್ಭಕ್ಕೆ ಅನಿರೀಕ್ಷಿತವಾಗಿರುತ್ತದೆ. ಒಟ್ಟಿನಲ್ಲಿ ಚಿತ್ರದಲ್ಲಿ ಹೇಳಿಕೊಳ್ಳುವಂಥ ಕತೆಯಿಲ್ಲ; ತೋರಿಸುವ ಘಟನೆಗಳಲ್ಲಿ ನಾಯಕನನ್ನು ಬಿಟ್ಟು ಎಲ್ಲರೂ ನಮಕ್ ಹರಾಮ್ ವ್ಯಕ್ತಿತ್ವದವರೇ. ಕ್ಲೈಮ್ಯಾಕ್ಸ್ ನಲ್ಲಿ ನೀತಿಯಿದೆ ಎಂಬುದನ್ನು ಬಿಟ್ಟರೆ ಉಳಿದೆಡೆಗಳಲ್ಲಿ ನ್ಯಾಯ ಸಲ್ಲಿಸುವಲ್ಲಿ ನಿರ್ದೇಶಕ ಪೀಣ್ಯನಾಗರಾಜ್ ಸೋತಿದ್ದಾರೆ. ಚಿತ್ರದ ಗೆಲುವು ಪ್ರೇಕ್ಷಕರ ಕೈಯ್ಯಲ್ಲಿದೆ.