From the earlier FilmySphere, kept as published on 2015-08-30. It has not been updated.
Review of Aatagara
FilmySphere critic · Rating 3/5
ಆಟಗಾರ ಸಸ್ಪೆನ್ಸೇ ಚಿತ್ರ ಸಾರ
ಕಿರುತೆರೆಯಲ್ಲಿ ರಿಯಾಲಿಟಿ ಶೋಗಳು ಅತಿ ಹೆಚ್ಚು ಜನಪ್ರಿಯತೆ ಪಡೆದಿರುವ ಕಾಲವಿದು. ಬಿಗ್ ಬಾಸ್ ಮಾದರಿಯ ರಿಯಾಲಿಟಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾದ ಅಷ್ಟೂ ಕಂಟೆಸ್ಟಂಟ್ ಗಳನ್ನು ಹೈಜಾಕ್ ಮಾಡಿದರೆ ಹೇಗಿರುತ್ತದೆ ಎಂಬುದನ್ನು ಹೇಳುವ ಚಿತ್ರವೇ ಆಟಗಾರ.
ಚಿತ್ರದಲ್ಲಿ ಹತ್ತು ಮಂದಿ ಕಂಟೆಸ್ಟಂಟ್ಸ್ ಕೂಡ ಹತ್ತು ವಿಧದ ಬ್ಯಾಕ್ ಗ್ರೌಂಡ್ ಹೊಂದಿದವರು. ವಿಜೇತರಿಗಿರುವ ಪ್ರಶಸ್ತಿಯ ಮೊತ್ತ ಒಂದು ಕೋಟಿಯನ್ನು ಗೆಲ್ಲಲೆಂದು ದೂರದ ದ್ವೀಪವೊಂದರ ಮನೆಯಲ್ಲಿ ಉಳಿದುಕೊಳ್ಳಲು ಬಯಸಿದವರು. ಆದರೆ ಅವರಲ್ಲಿ ಒಬ್ಬೊಬ್ಬರದೇ ಕೊಲೆಯಾಗತೊಡಗುತ್ತದೆ. ಅದಕ್ಕೆ ಕಾರಣ ಹುಡುಕಿದಾಗ ತಾವು ಶೋ ಹೆಸರಿನಲ್ಲಿ ಕಿಡ್ನ್ಯಾಪ್ ಆಗಿದ್ದೇವೆ ಎನ್ನುವುದನ್ನು ಅವರ ಅರಿವಿಗೆ ಬರುತ್ತದೆ. ಅದಕ್ಕೆ ಕಾರಣ ಅವರಲ್ಲಿ ಒಂಬತ್ತು ಮಂದಿ ಕಂಟೆಸ್ಟ್ ಗಳು ಕೂಡ ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿರುತ್ತಾರೆ. ಅವರೆಲ್ಲರನ್ನು ಸದ್ದಿಲ್ಲದೆ ಕೊಲೆಗೈಯ್ಯುವ ಆ ಹತ್ತನೆಯ ಕಂಟಸ್ಟೆಂಟ್ ಯಾರು? ಆತನ ಬೆನ್ನ ಹಿಂದೆ ಬೆಂಬಲವಾಗಿರುವವರು ಯಾರು? ಪ್ರತಿಯೊಬ್ಬರ ಕ್ರಿಮಿನಲ್ ಹಿನ್ನೆಲೆಗಳೇನು? ಎಂಬುದನ್ನು ಚಿತ್ರದಲ್ಲಿ ಇಂಟರ್ವೆಲ್ ಬಳಿಕ ತೋರಿಸಲಾಗಿದೆ. ಹಾಗಾಗಿ ಕತೆ ಕೊನೆಯವರೆಗೆ ಆಸಕ್ತಿಯನ್ನು ಉಳಿಸಿಕೊಳ್ಳುತ್ತದೆ.
ಕನ್ನಡದಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಗಳು ತೀರಾ ಕಡಿಮೆ. ರಂಗಿತರಂಗವೆಂಬ ಒಂದು ಮಿಸ್ಟರಿ ಥ್ರಿಲ್ಲರ್ ಚಿತ್ರದ ಬಳಿಕ ಬಂದ ಚಿತ್ರವಿದು. ಆದರೆ ಆಟಗಾರ ಚಿತ್ರದ ಕತೆ ತಿಳಿದ ಮೇಲೆ ತೆರೆಯ ಮೇಲೆ ನೋಡಬೇಕೆನಿಸುವ ಅಂಶಗಳೇನೂ ಉಳಿದಿರುವುದಿಲ್ಲ. ಚಿತ್ರವನ್ನು ಹಾಸ್ಯದಿಂದ ದೂರವಾಗಿರಿಸಲೆಂದೇ ಸಾಧುಕೋಕಿಲ, ಆರೋಹಿತ ಪಾತ್ರಗಳಿಗೆ ಆರಂಭದಲ್ಲೇ ಅಂತ್ಯ ನೀಡಲಾಗಿದೆ. ಚಿತ್ರದಲ್ಲಿ ಕೇಂದ್ರಪಾತ್ರಗಳಲ್ಲೊಬ್ಬರಾಗಿರುವ ಚಿರಂಜೀವಿ ಸರ್ಜಾ ಹಿಂದಿನ ಚಿತ್ರಗಳಿಗಿಂತ ಭಿನ್ನವಾದ ಪಾತ್ರವನ್ನು ನಿರ್ವಹಿಸಿದ್ದಾರೆ. ಅನಂತನಾಗ್ ಶಬ್ಧ ಸಾವಿನ ಗಂಟೆಯಂತೆ ಮೊಳಗುತ್ತದೆ. ರವಿಶಂಕರ್ ಗೆ ಒಂದಷ್ಟು ದ್ವಂದ್ವಾರ್ಥದ ಸಂಭಾಷಣೆಯನ್ನೂ ನೀಡಲಾಗಿದೆ. ಅಪರಾಧಗಳಿಗೆ ಗೊತ್ತಿದ್ದು ಕುಮ್ಮಕ್ಕು ಕೊಡುವವರನ್ನೂ ಕೊಲ್ಲುವ ಮೂಲಕ ಸಾಮಾನ್ಯರು ಕೂಡ ಕಾನೂನನ್ನು ಕೈಗೆತ್ತಿಕೊಳ್ಳಬಹುದು; ಮತ್ತು ತಾವು ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳಬಹುದು ಎಂದು ತೋರಿಸಿರುವುದು ಅರ್ಥಹೀನ. ನಿರ್ಮಾಪಕ ದ್ವಾರಕೀಶ್ ಸೇರಿದಂತೆ ವೀಣಾ ಸುಂದರ್ ದಂಪತಿ ಚಿಕ್ಕ ಪಾತ್ರದಲ್ಲೇ ಚೊಕ್ಕ ನಟನೆ ನೀಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಚಿತ್ರ ಎರಡೇ ಗಂಟೆಯೊಳಗೆ ಮುಗಿದು ಬಿಡುತ್ತದೆ ಎಂಬುದು ಖುಷಿಯ ವಿಚಾರ. ಗ್ಲಾಮರ್ ಪ್ರಿಯರು ಮೇಘನಾ ರಾಜ್, ಪಾವನಾ, ಪಾರುಲ್ ಮೊದಲಾದ ನಟಿಯರನ್ನು ನೋಡಲಿಕ್ಕಾದರೂ ಒಮ್ಮೆ ಥಿಯೇಟರ್ ಗೆ ಹೋಗಬಹುದು.