Skip to content
FilmySphere

From the earlier FilmySphere, kept as published on 2015-08-14. It has not been updated.

Review of Uppi 2

Rating 4/5

ಉಪ್ಪಿ 2 ಹಸಿದ ಅಭಿಮಾನಿಗಳಿಗೆ ಫುಲ್ ಮೀಲ್ಸ್ -

ಉಪೇಂದ್ರ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಇಂದು ಪ್ರದರ್ಶನ ಶುರು ಮಾಡಿದೆ. ರಿಯಲ್ ಸ್ಟಾರ್ ಉಪೇಂದ್ರರ ಅಭಿಮಾನಿಗಳು ಚಿತ್ರವನ್ನು ಚೆನ್ನಾಗಿ ಎಂಜಾಯ್ ಮಾಡಿದ್ದಾರೆ. ಎಂದಿನಂತೆ ಜಬರ್ದಸ್ತ್ ಗಿಮಿಕ್ ಗಳಿದ್ದರೂ ಉಪ್ಪಿ 2 ಎಂಬ ಹೆಸರಿರೋದರಿಂದ ಸಹಜವಾಗಿಯೇ ಉಪೇಂದ್ರ ಚಿತ್ರವನ್ನು ನೋಡಿದವರು ಖಂಡಿತಾ ಸುಲಭದಲ್ಲಿ ಅರ್ಥ ಮಾಡಿಕೊಳ್ಳಬಹುದಾದ ಚಿತ್ರವಿದು.

ಉಪೇಂದ್ರದಲ್ಲಿ 'ನಾನು' ಎಂಬುದರ ಜೊತೆಗೆ ಕೀರ್ತಿ, ಕಾಮ, ಪ್ರೇಮದ ಬಗ್ಗೆ ಹೇಳಿದ್ದ ಉಪೇಂದ್ರ ಇಲ್ಲಿ 'ನೀನು' ಎಂಬುದರ ಜೊತೆಗೆ ಖುಷಿ, ಲಕ್ಷ್ಮಿ ಮತ್ತು ಶೀಲದ ಬಗ್ಗೆಯೂ ಹೇಳಿದ್ದಾರೆ. 'ನೀನು' ಎಂಬ ನಾಯಕನ ಪಾತ್ರದ ಮೂಲಕ ನಾವು ಇನ್ನೊಬ್ಬರನ್ನು ಹೇಗೆ ನೋಡುತ್ತೇವೆಯೋ ನಮಗೆ ಆತ ಹಾಗೆಯೇ ಕಾಣುತ್ತಾನೆ ಎಂಬುದನ್ನು ಹೇಳಿದ್ದಾರೆ. ಅಂದರೆ ಶ್ರೀಮಂತಿಕೆ ಹೊಂದಿರುವ ಲಕ್ಷ್ಮೀ ಕಟಾಕ್ಷ ಹೊಂದಿರುವ ನಾಯಕಿ ಖುಷಿಗೆ ಆತ ಒಳ್ಳೆಯ ಮನಸ್ಸಿನ ಸಾಧು ವ್ಯಕ್ತಿತ್ವದ ನಾಯಕ. "ನೀನು ಹಿಂದೆ ನಾನಾಗಿದ್ದೋನು" ಎಂಬುದನ್ನು ಸಬ್ ಬ್ರೈನ್ ನಲ್ಲಿರಿಸಿಕೊಂಡ ಖಳನಾಯಕನಿಗೆ ಆತ ಇನ್ನೂ ಕೂಡ ಬೆಳೆದು ನಿಂತ 'ನಾನು'. ಆತನೊಳಗೆ ಅರಿಷಡ್ವರ್ಗಗಳು ಸೇರಿಕೊಂಡು ಖಳನಿಗೆ ಆರು ದೇಹಗಳಲ್ಲಿ ಕಾಡುತ್ತಾನೆ. ಅದೇ ಪ್ರಶಾಂತವಾಗಿರುವ "ಸದ್ಯದ ನೀನು ಮುಂದೇನೋ ಮಾಡಲಿದ್ದಾನೆ" ಎಂಬುದನ್ನು ಮೆದುಳಲ್ಲಿರಿಸಿಕೊಂಡು ನೋಡುವಾತನಿಗೆ ಆತ ಬೇರೇನೋ ಹುನ್ನಾರದಲ್ಲಿದ್ದಾನೆಂಬ ಕಲ್ಪನೆ. ಆದರೆ ಸದ್ಯಕ್ಕೆ ಏನು ಕಣ್ಣಮುಂದೆ ಕಾಣಿಸುತ್ತಿದೆಯೋ ಅದೇ ನಿಜ ಎಂಬುದನ್ನು ನಾಯಕಿಗೆ ಹೇಳುತ್ತಾನೆ ನೀನು. ಅದನ್ನು ನಂಬಿಕೊಂಡ ನಾಯಕಿಯೂ ಖುಷಿಯಾಗಿರುತ್ತಾಳಾ ಎಂಬುದು ಚಿತ್ರದ ಮುಖ್ಯಾಂಶ. ಆದರೆ ಇಲ್ಲಿ ಹೇಳಿರುವುದು ಚಿತ್ರದ ಮೂಲ ಸಾರವೇ ಹೊರತು ಕತೆಯಲ್ಲ. ಕತೆಯಲ್ಲಿ ದುಬೈ ಡಾನಾಗಿ ಶೋಭರಾಜ್, ಉನ್ನತ ಪೊಲೀಸ್ ಅಧಿಕಾರಿಯಾಗಿ ಸಯ್ಯಾಜಿ ಭಗತ್ ಮೊದಲಾದವರಿದ್ದಾರೆ.ಜೊತೆಗೆ 'ಉಪೇಂದ್ರ'ದಲ್ಲಿದ್ದ ಮೋಹನ್, ಬ್ಯಾಂಕ್ ಜನಾರ್ಧನ್, ಬೀರಾದಾರ್ ಪಾತ್ರಗಳು ಇಲ್ಲಿಯೂ ಮುಂದುವರಿದಿವೆ. 'ಉಪೇಂದ್ರ' ಚಿತ್ರದ ದೃಶ್ಯವನ್ನು ಇಲ್ಲಿ ಎಡಿಟ್ ಮಾಡಿ ಬಳಸಿರುವುದನ್ನು, ಕಾಶ್ಮೀರದ ದೃಶ್ಯ ವೈಭವಗಳನ್ನು ಚಿತ್ರ ಮಂದಿರದಲ್ಲಿ ನೋಡಿ ಆನಂದಿಸಬಹುದು.

ಉಪೇಂದ್ರ ನಿರ್ದೇಶಿಸುವ ಸಿನೆಮಾಗಳಲ್ಲಿನ ಕತೆಯನ್ನು ವಿಮರ್ಶಿಸುವುದಕ್ಕಿಂತ ಗಿಮಿಕ್ ಗಳೊಂದಿನ ಅದರ ನಿರೂಪಣೆ ಮತ್ತು ಸಂಭಾಷಣೆಗಳು ಸದಾ ಗಮನ ಸೆಳೆಯುತ್ತವೆ. ಅದಕ್ಕೆ ಇಲ್ಲಿಯೂ ಕೊರತೆಯಿಲ್ಲ. ಹಾಗಾಗಿ ಚಿತ್ರವನ್ನು ಏನೂ ಯೋಚ್ನೇನೇ ಮಾಡದೆ ನೋಡಿ ಎಂಜಾಯ್ ಮಾಡಬಹುದು. ಯೋಚ್ನೆ ಮಾಡ್ತಾ ನೋಡಿದ್ರೆ ಚಿತ್ರದ ಮೂಲಕ ಅವರು ಹೇಳ ಹೊರಟ ಸಂದೇಶವನ್ನು ಅರ್ಥ ಮಾಡಿಕೊಳ್ಳಬಹುದು.