Skip to content
FilmySphere

From the earlier FilmySphere, kept as published on 2015-08-08. It has not been updated.

Review of Male

FilmySphere critic

ಮಳೆ ಪ್ರೇಮವೊಂದೇ ಸೆಲೆ ನಿರ್ದೇಶಕ ಆರ್ ಚಂದ್ರು ನಿರ್ದೇಶನದ ಚಿತ್ರಗಳೆಂದರೆ ಅಲ್ಲೊಂದು ನವಿರಾದ ಪ್ರೇಮಕತೆ ಇರಬೇಕೆಂಬ ನಿರೀಕ್ಷೆಯಿರುತ್ತದೆ. ನಿರ್ದೇಶಕ ಶಿವು ತೇಜಸ್ ಆಗಿದ್ದರೂ ಕೂಡ ಪ್ರೇಕ್ಷಕರ ನಿರೀಕ್ಷೆಯನ್ನು ಪೂರೈಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನುವುದೇ ಮಳೆಗೆ ಗೆಲುವಿನ ಕಳೆ ತಂದಿದೆ.

ಪ್ರಥಮ ನೋಟದಲ್ಲೇ ನಾಯಕಿಯನ್ನು ಇಷ್ಟಪಡುವ ನಾಯಕ, ನಾಯಕಿಗೆ ಮಳೆಯಲ್ಲಿ ಐಸ್ಕ್ರೀಂ ತಿನ್ನುವುದೇ ಇಷ್ಟದ ಕಾಯಕ, ಚಿಲ್ಲರೆ ಕಾಸನ್ನು ಇಬ್ಬರೂ ಹಂಚಿಕೊಳ್ಳುವಂತೆ ಮಾಡುವ ಬಸ್ ನಿರ್ವಾಹಕ.. ಇಂಥ ಅದೆಷ್ಟೋ ದೃಶ್ಯಗಳನ್ನು ತೆಲುಗು, ತಮಿಳು ಸಿನೆಮಾಗಳಲ್ಲಿ ಈಗಾಗಲೇ ಬಹಳಷ್ಟು ಬಾರಿ ಕಂಡಿದ್ದೇವೆ. ಇಲ್ಲಿ ಅದೇ ದೃಶ್ಯಗಳೇ ರಿಪೀಟಾಗುವುದಾದರೂ ಸಂಭಾಷಣೆಗಳು ಹೊಸತನ ಮೂಡಿಸುವಲ್ಲಿ ಯಶಸ್ವಿಯಾಗಿದೆ. ನಾಯಕನೊಂದಿಗೆ ಪದೇ ಪದೇ ಸಿಡುಕಾಡುವ ಅಮೂಲ್ಯಗೆ ಚೆಲುವಿನ ಚಿತ್ತಾರದ ಇಮೇಜ್ ಮುಂದುವರಿದೆ. ಸಂಭಾಷಣೆಯಲ್ಲಿ ಪದೇ ಪದೇ ದ್ವಂದ್ವಾರ್ಥಗಳು ನುಸುಳಿರುವುದನ್ನು ಬಿಟ್ಟರೆ ನಾಯಕ ಪ್ರೇಮ್ ಕೂಡ ಗುಣವಂತನಾಗಿ ಉಳಿದುಕೊಳ್ಳುತ್ತಾರೆ! ಹಾಗಾಗಿ ಇಬ್ಬರು ಒಳ್ಳೆಯ ಪ್ರೇಮಿಗಳು ಚಿತ್ರದ ಮುಕ್ಕಾಲು ಭಾಗ ಗುದ್ದಾಡುತ್ತಲೇ ಸಾಗಿದರೂ ಅದರಲ್ಲಿ ಮನರಂಜನೆ ಕಾಣಲು ಪ್ರೇಕ್ಷಕನಿಗೆ ಸಾಧ್ಯವಾಗುತ್ತದೆ. ಅದಕ್ಕೆ ಸುಜ್ಞಾನ್ ಛಾಯಾಗ್ರಹಣ ಮತ್ತು ಜಸ್ಸಿಗಿಫ್ಟ್ ಸಂಗೀತ ಪೂರಕವಾಗಿದೆ. ಇತ್ತೀಚೆಗೆ ಬಹಳಷ್ಟು ಚಿತ್ರಗಳ ಕ್ಲೈಮ್ಯಾಕ್ಸ್ ನಲ್ಲಿ ಬಂದು ನಗಿಸುವ ಸಾಧುಕೋಕಿಲ ಇಲ್ಲಿ ಬೇಗನೆ ಬಂದು ಬೇಗನೇ ಮಾಯವಾಗುತ್ತಾರೆ. ಪ್ರೀತಿಸಿದವನಲ್ಲಿ ತನ್ನ ಪ್ರೀತಿಯನ್ನು ಹೇಳುವ ದಿನವೇ ಆತ ಶ್ರೀಮಂತನೆಂದು ಅರಿವಾಗುವುದು ಮತ್ತು ಹಾಗಾಗಿ ಇನ್ನು ತನ್ನ ಪ್ರೀತಿ ಹೇಳಿದಲ್ಲಿ ಅದರಿಂದ ತನ್ನ ಪ್ರೀತಿಗೆ ಅವಮಾನವಾದೀತೆಂದು ಹಿಂಜರಿಯುವ ನಾಯಕಿಯನ್ನು ನಾವು ಅರಸು ಚಿತ್ರದಲ್ಲಿಯೇ ನೋಡಿದ್ದೇವೆ. ಅಲ್ಲಿ ಇಬ್ಬರು ನಾಯಕಿಯರಿದ್ದರು. ಹಾಗಾಗಿ ಇಲ್ಲಿನ ಕ್ಲೈಮ್ಯಾಕ್ಸ್ ಏನೆಂಬುದನ್ನು ಥಿಯೇಟರಲ್ಲೇ ನೋಡಬೇಕು! ಜೊತೆಗೆ ಚಿತ್ರದ ಆರಂಭದಲ್ಲೇ ಬುಡಬುಡಿಕೆಯವನ ಮೂಲಕ ನಾಯಕನ ಪ್ರೇಮದ ಬಗ್ಗೆ ಕುತೂಹಲದ ಭವಿಷ್ಯವಾಣಿ ಹೊರಡಿಸಿ ಕೊನೆಯತನಕ ಆಸಕ್ತಿ ಉಳಿಯುವಂತೆ ಮಾಡುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಬಹುಶಃ ಗಣೇಶ್ ಮತ್ತು ಅಮೂಲ್ಯಗಾಗಿ ಹಣೆಯಲಾದಂತಿರುವ ಈ ಕತೆಯನ್ನು ಯಾವುದೇ ಪ್ರೇಮಿಗಳು ನೋಡಿದರೂ ಖುಷಿಪಡುವಂತಿದೆ ಎಂಬುದಂತೂ ನಿಜ.