From the earlier FilmySphere, kept as published on 2015-07-04. It has not been updated.
Review of RangiTaranga
FilmySphere critic
ರಂಗಿತರಂಗ ಚಿತ್ರ ವಿಮರ್ಶೆ ರಂಗಿತರಂಗ: ಭೂತದ ಕಾಡಿನಲ್ಲಿ ಸಸ್ಪೆನ್ಸ್ ರಂಗವಲ್ಲಿ
ಗುಡ್ಡೆದ ಭೂತ ಎಂಬ ಕರಾವಳಿಯ ಮಂದಿ ಕಿರುತೆರೆಗೆ ನೀಡಿದ ಜನಪ್ರಿಯ ಧಾರಾವಾಹಿ ನೆನಪಿದ್ದವರು ಕಮರೊಟ್ಟು ಗ್ರಾಮವನ್ನು ಮರೆತಿರಲಾರರು. ಅಲ್ಲಿನ ಭೂತ ಚೇಷ್ಟೆಯನ್ನು ಮತ್ತು ಅದರ ಹಿಂದಿನ ಸತ್ಯವನ್ನು ಮತ್ತೊಮ್ಮೆ ಅನಾವರಣ ಮಾಡುವ ಚಿತ್ರವಾಗಿ ರಂಗಿತರಂಗ ಮೂಡಿ ಬಂದಿದೆ.
ಭೂತದ ಹರಕೆಯನ್ನು ತೀರಿಸಲು ಬೆಂಗಳೂರಿನಿಂದ ಕಮರೊಟ್ಟು ಗ್ರಾಮಕ್ಕೆ ಬಂದು ಸೇರುವ ನಾಯಕ ಮತ್ತು ನಾಯಕಿ. ರಾತ್ರಿ ರಸ್ತೆಯಲ್ಲಿ ಧುತ್ತನೆ ಕಂಡು ಮಾಯವಾಗುವ ಭೂತದ ವೇಷ; ಅದೇನೋ ನಿಗೂಢತೆ ತುಂಬಿದಂತಿರುವ ಅವರ ಮನೆ, ಹೀಗೆ ಚಿತ್ರವು ಸಸ್ಪೆನ್ಸ್ ಗಳನ್ನು ಸೃಷ್ಠಿಸುತ್ತಾ ಹೋಗುತ್ತದೆ. ಆದರೆ ನಾಯಕನ ಪತ್ನಿ ಮಾಯವಾದಾಗಿನಿಂದ ಕತೆ ಇನ್ನಷ್ಟು ಗಂಭೀರತೆ ಪಡೆಯುತ್ತದೆ. ನಿನಗೊಬ್ಬಳು ಪತ್ನಿಯೇ ಇರಲಿಲ್ಲ, ಅದೊಂದು ಇಲ್ಯೂಶನ್ ಆಗಿತ್ತೆಂದು ಪೊಲೀಸ್ ಹೇಳುವಾಗ ಆಕೆಯ ಡೈರಿಯಿಂದ ತನ್ನ ಫ್ಲ್ಯಾಶ್ ಬ್ಯಾಕ್ ಸ್ಟೋರಿ ತಿಳಿದುಕೊಳ್ಳುತ್ತಾನೆ ನಾಯಕ. ಅದರ ಪ್ರಕಾರ 6 ವರ್ಷಗಳ ಹಿಂದೆ ನಡೆದ ಅಪಘಾತದಲ್ಲಿ ಆಕೆಯಿದ್ದ ಕಾರಿಗೆ ತಾನಿದ್ದ ಬೈಕು ತಾಗಿ ಅಪಘಾತವಾಗಿತ್ತು. ಅದರಲ್ಲಿ ತೀರಿಹೋದ ಇನ್ನೂ ಎರಡು ಜೀವಗಳು ನಾನು ಮತ್ತು ನನ್ನ ಪತ್ನಿಯದೆಂದು ಲೋಕ ನಂಬಿರುವುದು ತಿಳಿಯುತ್ತದೆ. ಅಲ್ಲಿಗೆ ಮಧ್ಯಂತರ. ಮಧ್ಯಂತರದ ಬಳಿಕವೂ ಪತ್ನಿಯ ಹುಡುಕಾಟ ಸೃಷ್ಠಿಸುವ ನಾಟಕೀಯ ಸನ್ನಿವೇಶಗಳು ಪ್ರೇಕ್ಷಕನ ತಾಳ್ಮೆಯನ್ನು ಪರೀಕ್ಷಿಸುತ್ತದೆ. ಅನಷ್ಕು ಹೆಸರಲ್ಲಿ ಕತೆ ಬರೆಯುತ್ತಿದ್ದಾತನನ್ನು ಹುಡುಕಿಕೊಂಡು ಬರುವ ಪತ್ರಕರ್ತೆಗೆ ಆ ಕತೆಗಾರ ನಾಯಕನೇ ಎಂದು ತಿಳಿಯುವ ಸನ್ನಿವೇಶವೂ ಇಲ್ಲಿದೆ. ಅದರ ಬಳಿಕ ಅವರಿಬ್ಬರೂ ಸೇರಿ ಪತ್ನಿಯ ಹುಡುಕಾಟ ನಡೆಸುತ್ತಾರೆ. ಅವಳನ್ನು ಯಾರು ಯಾಕೆ ಅಪಹರಿಸಿರುತ್ತಾರೆ ಎಂಬುದು ಮತ್ತೊಂದು ಕತೆಯನ್ನು ಹೇಳುತ್ತಾ ಹೋಗುತ್ತದೆ. ಆತನಿಂದ ನಾಯಕ ಪತ್ನಿಯನ್ನು ಹೇಗೆ ರಕ್ಷಿಸುತ್ತಾನೆ ಎಂಬುದನ್ನು ತೆರೆಯ ಮೇಲೆ ನೋಡಬಹುದು.
ಚಿತ್ರವನ್ನು ಆರಂಭದಿಂದ ನೋಡುತ್ತಿದ್ದಂತೆ ಇದೊಂದು ಹೊಸಬರ ಪ್ರಯತ್ನದಂತೆ ಅನಿಸುವುದೇ ಇಲ್ಲ. ನೋಡುಗನಲ್ಲಿ ಇದೊಂದು ಮಣಿರತ್ನಂ ಚಿತ್ರವೇನೋ ಎಂಬ ಸಂದೇಹ ಮೂಡಿದರೆ ಅಚ್ಚರಿಯಿಲ್ಲ. ಅದರಲ್ಲಿ ವಿಲಿಯಂ ಡೇವಿಡ್ ಛಾಯಾಗ್ರಹಣದ ಪಾತ್ರ ಹೇಗೆ ಪ್ರಮುಖವೋ ಜೊತೆಗೆ ನವನಾಯಕನಾದರೂ ನೋಟದಲ್ಲಿ, ನಟನೆಯಲ್ಲಿ ಯಾರಿಗೂ ಕಡಿಮೆಯಿರದಂತೆ ನಟಿಸಿರುವ ನಾಯಕ ನಿರೂಪ್ ಮತ್ತು ಕಲಾವಿದರಿಂದ ನೈಜ ನಟನೆ ಹೊರತೆಗೆದ ನಿರ್ದೇಶಕ ಅನೂಪ್ ಭಂಡಾರಿಯ ಕಾರ್ಯವೈಖರಿ ಹೀಗೆ ಎಲ್ಲವೂ ಶ್ರೇಷ್ಠವೆನಿಸುತ್ತದೆ. ನಾಯಕ, ಪತ್ರಕರ್ತೆ, ಸಾಯಿಕುಮಾರ್ ಮೊದಲಾದವರ ಪಾತ್ರಗಳ ಫ್ಲ್ಯಾಶ್ ಬ್ಯಾಕ್ ಗಳು ಒಂದು ಹಂತದಲ್ಲಿ ಎರಡೆರಡು ಕತೆಗಳನ್ನು ಹೇಳುವುದು ಮತ್ತು ಒಗ್ಗಿಕೊಳ್ಳದ ಹಾಸ್ಯ ಒಂದಷ್ಟು ಹಾಸ್ಯ ದೃಶ್ಯಗಳು ಪ್ರೇಕ್ಷಕನ ತಾಳ್ಮೆ ಪರೀಕ್ಷಿಸುತ್ತವೆ. ಆದರೆ ಸಾಯಿಕುಮಾರ್ ಪಾತ್ರವನ್ನು ತೋರಿರುವ ರೀತಿ ಚಿತ್ರವನ್ನು ಅಂತ್ಯದ ತನಕ ಕಾಯ್ದುಕೊಂಡು ವೀಕ್ಷಿಸುವಂತೆ ಮಾಡುತ್ತದೆ. ಹಾಡು, ಪರಿಸರ, ಸಂಗೀತ ಮೊದಲಾದವುಗಳಲ್ಲಿನ ಹೊಸತನದೊಂದಿಗೆ ಕಲಾವಿದರೂ ಕೂಡ ಒಂದು ತಾಜಾ ಚಿತ್ರವನ್ನು ಕನ್ನಡಿಗರಿಗೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಸಿನೆಮಾಸಕ್ತರು ಖಂಡಿತಾ ಒಮ್ಮೆ ನೋಡಬೇಕಾದ ಚಿತ್ರ.