From the earlier FilmySphere, kept as published on 2015-04-25. It has not been updated.
Review of Daksha
FilmySphere critic
ದಕ್ಷ: ಇದು ದಾಖಲೆಯ ಪಕ್ಷ! ಚಿತ್ರ ವಿಮರ್ಶೆ ಗಿನ್ನಿಸ್ ದಾಖಲೆ ಪ್ರಮಾಣ ಪತ್ರ ಸಿಗುವ ಮೊದಲೇ ದಾಖಲೆಯ ಚಿತ್ರವೆಂಬ ಹೆಸರಿನಲ್ಲಿ ತೆರೆಗೆ ಬಂದಿದೆ ಎಸ್. ನಾರಾಯಣ್ ರ ದಕ್ಷ. ಪ್ರಯತ್ನವನ್ನು ಖಂಡಿತಾ ಮೆಚ್ಚೋಣ; ಆದರೆ ಚಿತ್ರ ನೋಡಿದವರ ತಲೆಯಲ್ಲಿ ದಾಖಲೆಯಾಗುವ ದೃಶ್ಯಗಳೇನೂ ಉಳಿಯುವುದಿಲ್ಲ ಎಂಬುದು ವಾಸ್ತವ.
ಕೆಲವೇ ಗಂಟೆಗಳೊಳಗೆ ನಡೆಯುವ ಕತೆ ಎಂಬ ವಿಚಾರ ಬಂದಾಗ ಕನ್ನಡದಲ್ಲಿ ಬಹಳ ಹಿಂದೆಯೇ ದಾಖಲೆ ಮಾಡಿದ್ದ 'ನಿಷ್ಕರ್ಷ' ಚಿತ್ರ ನೆನಪಾಗದಿರದು. ಅದರಂತೆ ಇಲ್ಲಿಯೂ ಉಗ್ರಗಾಮಿಗಳ ನಡುವಿನ ಕಮಾಂಡೋ ಹೋರಾಟವಿರುವುದರಿಂದಾಗಿ ಆಯ್ದುಕೊಂಡ ವಿಷಯದಲ್ಲಿ ಹೊಸತನವಿಲ್ಲ. ಇನ್ನು ಕತೆಯ ವಿಚಾರಕ್ಕೆ ಬಂದರೆ ಅಂತರಾಷ್ಟ್ರೀಯ ಉಗ್ರಗಾಮಿಯೊಬ್ಬ ತಮ್ಮ ಪರವಾದ ತೀರ್ಪಿಗಾಗಿ ಜಡ್ಜ್ ನನ್ನು ಬೆದರಿಸಲು ಆತನ ಮನೆಯೊಳಗೆ ಪ್ರವೇಶಿಸುತ್ತಾನೆಂದರೆ ಅದಕ್ಕೂ ಆ ಮನೆಯ ನಕ್ಷೆಯನ್ನು ಕೂಡ ಅರಿತಿರುವುದಿಲ್ಲ ಎಂಬುದು ನಂಬುವಂತಿಲ್ಲ. ಅದೇನೇ ಪೆದ್ದುತನಗಳಿದ್ದರೂ ಜಡ್ಜಾಗಿ ಸುಚೇಂದ್ರ ಪ್ರಸಾದ್ ಮತ್ತು ಕಮಾಂಡೋವಾಗಿ ವಿಜಯ್ ನಟನೆ ಚಿತ್ರಕ್ಕೆ ಗಂಭೀರತೆ ತುಂಬಿದೆ. ಆದರೆ ಭಯಾನಕವಾಗಿರಬೇಕಿದ್ದ ಉಗ್ರನ ಪಾತ್ರಧಾರಿ ಶೋಭರಾಜ್ ನಿಂದ ಹಿಡಿದು ವೈದ್ಯ ರಂಗಾಯಣ ರಘು, ಕಳ್ಳ ಬುಲೆಟ್ ಪ್ರಕಾಶ್ ಎಲ್ಲರಿಂದಲೂ ಟಾಯ್ಲೆಟ್ ಕಾಮಿಡಿ ಮಾಡಿಸಿ ದಾಖಲೆಯ ಚಿತ್ರದಲ್ಲೂ ತಮ್ಮತನ ಮೆರೆದಿದ್ದಾರೆ ಎಸ್.ನಾರಾಯಣ್. ಛಾಯಾಗ್ರಾಹಕ ರೇಣುಕುಮಾರ್ ಮತ್ತು ಕೊರಿಯಾಗ್ರಫರ್, ಜೊತೆಗೆ ಹಿನ್ನೆಲೆ ಸಂಗೀತದಲ್ಲಿ ಎಸ್.ನಾರಾಯಣ್ ಪ್ರತಿಭೆಯನ್ನು ಅಲ್ಲಗಳೆಯುವಂತಿಲ್ಲ. ನಾಯಕಿ ನೇಹಾ ಪಾಟೀಲ್ ಮತ್ತು ಉದಯ್ ಗೂ ಒಳ್ಳೆಯ ಪಾತ್ರ ದೊರಕಿರುವುದು ಸುಳ್ಳಲ್ಲ.