Skip to content
FilmySphere

From the earlier FilmySphere, kept as published on 2015-04-03. It has not been updated.

Review of Vaastu Prakaara

FilmySphere critic

ವಾಸ್ತು ಪ್ರಕಾರ

ಕಾಣೋ ಮೊದಲು ಕಾತರ; ಕಂಡಾಗ ಬೇಸರ

ಮನೆಯ ವಾಸ್ತುವಿಗಿಂತ ಮನದ ವಾಸ್ತು ಮುಖ್ಯ ಎಂಬುದನ್ನು ವಿಡಂಬನೆಯ ಮೂಲಕ ತಿಳಿಸುವುದಾಗಿ ಹೇಳಿದ್ದ ಯೋಗರಾಜ ಭಟ್ಟರ ವಾಸ್ತು ಪ್ರಕಾರ ತೆರೆಕಂಡಿದೆ.

ಚಿತ್ರದಲ್ಲಿ ಪ್ರಸಿದ್ಧ ವಾಸ್ತು ಶಾಸ್ತ್ರಜ್ಞನ ಮಗನೋರ್ವ ಆತನ ವಾಸ್ತುವಿಗೆ ವಿರೋಧ ತೋರಿಸುತ್ತಾನೆ. ತಂದೆಯೊಂದಿಗೆ ಭಿನ್ನಾಭಿಪ್ರಾಯ ಮಾಡಿಕೊಂಡು ಕಾಲ್ಪನಿಕ ದೇಶವೊಂದನ್ನು ಸೇರುತ್ತಾನೆ. ಆದರೆ ಅನಿವಾರ್ಯವಾಗಿ ಅಲ್ಲಿರುವ ತನ್ನ ಮಾವನೊಂದಿಗೆ ಸೇರಿ ವಾಸ್ತು ಪ್ರಕಾರ ಮನೆ ರಿಪೇರಿಗೆ ಶುರು ಮಾಡುತ್ತಾನೆ. ಕಾರಣ ಆ ಮನೆಯಲ್ಲಿ ತಾನು ಪ್ರೀತಿಸುವ ಹುಡುಗಿಯಿರುತ್ತಾಳೆ. ಮಾತ್ರವಲ್ಲ, ಡೈವೋರ್ಸ್ ಗೆ ಮುಂದಾಗಿರುವ ಆ ಹುಡುಗಿಯ ತಂದೆ ತಾಯಿಯನ್ನು ಒಂದಾಗಿಸುವುದು ಮತ್ತು ಅವರ ಮನೆ ರಿಪೇರಿ ಮೂಲಕ ಆ ಶ್ರೀಮಂತರಿಂದ ಒಂದಷ್ಟು ಹಣವನ್ನು ತಮ್ಮದಾಗಿಸುವ ಯೋಜನೆ ಅವರದಾಗಿರುತ್ತದೆ. ಕ್ಲೈಮ್ಯಾಕ್ಸ್ ನಲ್ಲಿ ಎಲ್ಲವೂ ನಿರೀಕ್ಷಿತ ಅಂಶಗಳೊಂದಿಗೆ ಕೊನೆಯಾಗುತ್ತದೆ. ಇದರ ನಡುವೆ ಡೈವೋರ್ಸ್ ಗೆ ಯತ್ನಿಸುವ ವಕೀಲೆಯೊಂದಿಗೆ ಮಾವನಿಗೂ ಒಂದು ಲವ್ ಸ್ಟೋರಿಯಿದ್ದು ಅದಕ್ಕೂ ಒಂದು ಸುಖಾಂತ್ಯವಿದೆ.

ವಾಸ್ತು ಶಾಸ್ತ್ರಜ್ಞನ ಮಗನಾಗಿ ರಕ್ಷಿತ್ ಶೆಟ್ಟಿ ಮತ್ತು ಆತನ ಮಾವನಾಗಿ ಜಗ್ಗೇಶ್ ನಟಿಸಿದ್ದಾರೆ. ಜಗ್ಗೇಶ್ ಮತ್ತು ರಕ್ಷಿತ್ ಶೆಟ್ಟಿ ತಮ್ಮ ಮಾತಿನ ಶೈಲಿಯಿಂದಲೇ ಪ್ರೇಕ್ಷಕರ ಮನದಲ್ಲಿ ಸ್ಥಾನಗಳಿಸಿಕೊಂಡವರು. ಆದರೆ ಅವರಿಗೆ ತಮ್ಮ ಡೈಲಾಗ್ ಡೆಲಿವರಿ ಶೈಲಿಯನ್ನಷ್ಟೇ ಆರೋಪಿಸಿ, ಸಂಭಾಷಣೆಗೆ ಸರಿಯಾದ ವಾಸ್ತು ನೀಡುವಲ್ಲಿ ಸೋತಿದ್ದಾರೆ! ನಾಯಕಿ ಐಶಾನಿ ಶೆಟ್ಟಿಯೂ ಅಷ್ಟೇ, ಮುಖ, ಕಂಠದಲ್ಲಿ ಇನ್ನೂ ಮೆಚ್ಯೂರಿಟಿ ಕಾಣಿಸದ ಹುಡುಗಿಯಿಂದ ಆಕೆಯೇ ಹುಡುಗನ ಮೇಲೆ ಬಿದ್ದು ಲವ್ ಮಾಡುತ್ತಾಳೆ ಎಂಬಂಥ ದೃಶ್ಯಗಳನ್ನು ಅರಗಿಸುವುದು ಕಷ್ಟ. ಅದರಲ್ಲೂ ಹಡುಗಿಗಿಂತ ತಾನು ತುಂಬಾ ಎತ್ತರ ಎಂದು ಫೀಲಾಗುವ ನಾಯಕನಿಗೆ ಆತನ ಎತ್ತರಕ್ಕೆ ತಕ್ಕಂಥ ಮ್ಯಾನ್ಲೀ ಪರ್ಫಾರ್ಮೆನ್ಸ್ ಗೆ ಅಥವಾ ಒಂದೊಳ್ಳೇ ಫೈಟ್ ಗೂ ಅವಕಾಶ ಕೊಡದೆ ನಿರಾಶೆ ಮೂಡಿಸುತ್ತಾರೆ. ಸುಧಾರಾಣಿಯೇನೋ ಕೋಪಿಷ್ಠೆ ಹೆಂಡತಿಯಾಗಿ ನಟಿಸಿದ್ದಾರೆ. ಆದರೆ ಅನಂತನಾಗ್ ರಂಥ ನಟನಿಗೆ ಆಕೆಯ ಗಂಡನಾಗಿ ಕೊನೆಯ ತನಕ ವ್ಯಕ್ತಿತ್ವವೇ ಇರದಂಥ ಪಾತ್ರವನ್ನು ನೀಡಿದ್ದಾರೆ. ಹಿರಿಯ ವಾಸ್ತು ಶಾಸ್ತ್ರಜ್ಞನಾಗಿ ಟಿಎನ್ ಸೀತಾರಾಮ್ ಪಾತ್ರ ವಾಸ್ತು ಬಗ್ಗೆ ಯಾವುದೇ ಮಾಹಿತಿಯನ್ನು ನೀಡದೆ ಬಿಲ್ಡಪ್ಪಲ್ಲಿ ಬಂದು ಸಪ್ಪೆಯಾಗಿ ಮೂಲೆ ಸೇರುತ್ತದೆ. ಇದೆಲ್ಲವನ್ನೂ ಗಮನಿಸಿದಾಗ ಮಿಸ್ ಕಾಸ್ಟಿಂಗ್ ಅಥವಾ ಕತೆಗಿಂತ ಸ್ಟಾರ್ ನಾಯಕರನ್ನು ತೆರೆಯ ಮೇಲೆ ಓಡಾಡಿಸುವುದೇ ಭಟ್ಟರ ಚಿತ್ರದ ವಾಸ್ತುವೇನೋ ಎಂಬ ಸಂದೇಹ ಮೂಡುವುದು ಸಹಜ.

ಚಿತ್ರ ಮುಗಿದಾಗ ಹರಿಕೃಷ್ಣ ಸಂಗೀತದ ಒಂದೆರಡು ಹಾಡುಗಳು, ಕೆಟ್ಟ ಕನ್ನಡದಲ್ಲಿ ಸಿಡುಕುವ ಪಾರುಲ್ ರ ಗ್ಲಾಮರ್ ಜೊತೆಗೆ ಸಂತೋಷ್ ಪಾತಾಜೆಯ ಛಾಯಾಗ್ರಹಣವಷ್ಟೇ ನೆನಪಲ್ಲಿ ಉಳಿಯುತ್ತದೆ. ಸಂದೇಶದಕ್ಕಿಂತ ಅದನ್ನು ಯಾರು ಹೇಳಿದ್ದಾರೆ ಎನ್ನುವುದೇ ಮುಖ್ಯವಾಗುವ ಈ ಕಾಲಘಟ್ಟದಲ್ಲಿ ಮನಸ್ಸು ತಾಕದ ಈ ಚಿತ್ರ ನೀಡುವ ಸಂದೇಶವೂ ಅಷ್ಟೇ ಮಸುಕಾಗಿ ಬಿಡುತ್ತದೆ.