Skip to content
FilmySphere

From the earlier FilmySphere, kept as published on 2015-03-14. It has not been updated.

Review of Master Mind

FilmySphere critic

ಮಾಸ್ಟರ್ ಮೈಂಡ್

ಚಿತ್ರ ವಿಮರ್ಶೆ ಮನಗೆಲ್ಲದ ಮಾಸ್ತರಿಕೆ

ಒಂದಷ್ಟು ಸಮಯದ ಬಳಿಕ ನಿರ್ಮಾಣ, ನಿರ್ದೇಶನ, ನಟನೆಯೊಂದಿಗೆ ತೆರೆಗೆ ಬಂದಿರುವ ಕುಮಾರ್ ಗೋವಿಂದ್ ನೀಡಿರುವ ಚಿತ್ರ ಮಾಸ್ಟರ್ ಮೈಂಡ್. ಚಿತ್ರದಲ್ಲಿ ರಾಜವರ್ಧನ್ ಎಂಬ ನವ ನಟನನ್ನು ನಾಯಕನನ್ನಾಗಿ ಪರಿಚಯಿಸಿದ್ದಾರೆ.

ಮಲೇಷ್ಯಾದಲ್ಲಿ ಆರಂಭವಾಗುವ ಚಿತ್ರದಲ್ಲಿ ನಾಯಕ ತನ್ನ ಪತ್ನಿಯೊಂದಿಗೆ ಸಂತಸದಲ್ಲಿರುತ್ತಾನೆ. ಆದರೆ ಅದನ್ನು ಕ್ಷಣಿಕವಾಗಿಸುವಂತೆ ಆತನ ಪತ್ನಿಯನ್ನು ಕಣ್ಮುಂದೆಯೇ ಅಪಹರಿಸಲಾಗುತ್ತದೆ. ಬಳಿಕ ಆತನನ್ನು ಕರೆದೊಯ್ದು ಕೋಣೆಯೊಂದರಲ್ಲಿ ಮೂರು ವರ್ಷಗಳ ಕಾಲ ಕೂಡಿ ಹಾಕಲಾಗುತ್ತದೆ. ಬಳಿಕ ಕಟ್ಟಡವೊಂದರ ಮೇಲೆ ಪೆಟ್ಟಿಗೆಯೊಂದರಲ್ಲಿ ಹಾಕಿ ಬಿಡುಗಡೆಗೊಳಿಸಲಾಗುತ್ತದೆ! ಇದರ ನಡುವೆ ತನ್ನ ಪತ್ನಿಯನ್ನು ಕೂಡ ಅವರೇ ಕೊಂದಿದ್ದಾರೆಂಬ ಸುದ್ದಿಯೂ ಆತನಿಗೆ ತಿಳಿದಯುತ್ತದೆ. ಅದುವರೆಗೆ ಒಂಟಿಯಾಗಿ ತಾನು ಅನುಭವಿಸಿದ ಶಿಕ್ಷೆಗೆ ಪ್ರತೀಕಾರ ನಡೆಸಲು ನಾಯಕ ಮುಂದಾಗುತ್ತಾನೆ. ಈ ಪ್ರಯತ್ನದಲ್ಲಿ ಆತನಿಗೆ ಕ್ಯಾಬ್ ಡ್ರೈವರ್ ಹುಡುಗಿಯೊಬ್ಬಳ ಪರಿಚಯವಾಗುತ್ತದೆ. ಅವಳ ಜೊತೆ ಸೇರಿ ಆತನನ್ನು ಹುಡುಕಲು ಆರಂಭಿಸುತ್ತಾನೆ. ಈ ಪ್ರಯತ್ನ ಮುಂದುವರಿದಂತೆ ಇದನ್ನೆಲ್ಲ ಮಾಡಿಸಿದವರು ಯಾರು ಎಂಬುದು ತಿಳಿಯುತ್ತದೆ. ಆತನ ಕಡೆಯ ನ್ಯಾಯವೇನೆಂಬುದು ಗೋಚರಿಸುತ್ತದೆ. ನಾಯಕ ಆತನ ತಂಗಿಗೆ ಪ್ರೇಮದ ಹೆಸರಿನಲ್ಲಿ ವಂಚನೆ ನಡೆಸಿರುತ್ತಾನೆ. ಅದರ ಬಗೆಗೊಂದು ಫ್ಲ್ಯಾಶ್ ಬ್ಯಾಕ್ ಸ್ಟೋರಿಯಾಗುತ್ತದೆ. ಕೊನೆಯಲ್ಲಿ ಆತನ ಪ್ರತೀಕಾರ ಹೇಗಿರುತ್ತದೆ ಮತ್ತು ಅದಕ್ಕೆ ನಾಯಕನ ಪ್ರತಿಕ್ರಿಯೆ ಏನಿರುತ್ತದೆ ಎಂಬಲ್ಲಿಗೆ ಚಿತ್ರ ಕೊನೆಗೊಳ್ಳುತ್ತದೆ.

ಚಿತ್ರದ ಎಳೆ ಕುತೂಹಲಭರಿತವಾಗಿದೆ. ಆದರೆ ಚಿತ್ರಕತೆ, ನಿರ್ದೇಶನ, ಸಂಗೀತ ಮತ್ತು ಛಾಯಾಗ್ರಹಣ ಪೇಲವವಾಗಿದೆ. ವಿದೇಶೀ ಚಿತ್ರಗಳಿಂದ ಪ್ರೇರಿತವಾದಂತಿದೆಯಾದರೂ ಈ ಚಿತ್ರಕ್ಕಾಗಿ ವಿದೇಶವೇ ಬೇಕಿತ್ತೇ? ಎಂದೂ ಅನಿಸದಿರದು. ಡಿಟೆಕ್ಟಿವ್ ಚಿತ್ರಕ್ಕೆ ಜೀವಾಳವಾಗಿರಬೇಕಾದ ಹಿನ್ನೆಲೆ ಸಂಗೀತವೇ ಕೆಟ್ಟದಾಗಿರುವುದು ಮತ್ತೊಂದು ದುರಂತ. ನಾಯಕನಾಗಿ ರಾಜವರ್ಧನ್ ನಟನೆ, ಮೈಕಟ್ಟು ಗಮನಾರ್ಹ. ನಾಯಕಿಯರೂ ತಮಗೆ ಸಿಕ್ಕ ಪಾತ್ರಕ್ಕೆ ನ್ಯಾಯವೊದಗಿಸಲು ಪ್ರಯತ್ನಿಸಿದ್ದಾರೆ. ಒಟ್ಟಿನಲ್ಲಿ ಮಾಸ್ಟರ್ ಮೈಂಡ್ ಕತೆಯಲ್ಲಿ ಮಾತ್ರ ಉಳಿದುಕೊಂಡಿದೆ ಎಂಬುದು ಸತ್ಯ.