Skip to content
FilmySphere

From the earlier FilmySphere, kept as published on 2015-02-21. It has not been updated.

Review of Mythri

FilmySphere critic

ಮೈತ್ರಿ ತುಂಬಾ ಚೆನ್ನಾಗೈತ್ರಿ..! ಪುನೀತ್ ರಾಜ್, ಮೋಹನ್ ಲಾಲ್ ರಂಥ ಸ್ಟಾರ್ ನಾಯಕನಟರಿದ್ದರೂ ಹೊಸ ಬಾಲಕನೊಬ್ಬನ ನಟನೆಗೆ, ಆತನ ಸಂಭಾಷಣೆಗೆ ಮೊದಲ ದಿನದ ಮಾಸ್ ಪ್ರೇಕ್ಷಕರು ಸಿಳ್ಳೆ ಹೊಡೆದು ಸ್ವಾಗತಿಸುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಇಂಥದೊಂದು ಮ್ಯಾಜಿಕ್ಕನ್ನು ಮಾಡಿದ ಕೀರ್ತಿ ಗಿರಿರಾಜ್ ಗೆ ಸಲ್ಲುತ್ತದೆ.

ಚಿತ್ರದಲ್ಲಿ ನಟ ಪುನೀತ್ ರಾಜಕುಮಾರ್ ವಾಹಿನಿಯೊಂದಕ್ಕೆ ನಡೆಸಿಕೊಡುವ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಸ್ಲಂನಿಂದ ಜೈಲು ಸೇರಿದ ಬಾಲಾಪರಾಧಿಯೊಬ್ಬ ಭಾಗವಹಿಸುತ್ತಾನೆ. ಅಂದಮಾತ್ರಕ್ಕೆ ಆ ಹುಡುಗ ಕೋಟಿ ಗೆದ್ದು ಸ್ಲಂ ಡಾಗ್ ಮಿಲಿಯನೇರ್ ಆಗುತ್ತಾನೆ ಎಂದು ನೀವಂದುಕೊಂಡರೆ ನಿಮ್ಮ ಊಹೆ ತಪ್ಪು. ಸಿದ್ಧರಾಮನೆಂಬ ಆ ಹುಡುಗನ ಹಿನ್ನೆಲೆ ಏನಾಗಿರುತ್ತದೆ ಎಂಬ ಬಗ್ಗೆ ಆರಂಭದಲ್ಲಿ ತೋರಿಸುವ ಒಂದಷ್ಟು ದೃಶ್ಯಗಳು ಮತ್ತು ಅದನ್ನೂ ಮೀರಿದ ಫ್ಲ್ಯಾಶ್ ಬ್ಯಾಕ್ ಚಿತ್ರದ ಹೈಲೈಟ್. ಸಿದ್ಧರಾಮನ ಪಾತ್ರದಲ್ಲಿ ನಟಿಸಿರುವ ಆದಿತ್ಯ ಮತ್ತು ಜೈಲೊಳಗಿನ ಆದಿತ್ಯನ ಸ್ನೇಹಿತನಾಗಿ ಗಮನ ಸೆಳೆಯುವ ಭರವಸೆಯ ಕಲಾವಿದ ಜಗದೀಶ್ ನಟನೆ ಚಿತ್ರದ ಪ್ರಮುಖ ಆಕರ್ಷಣೆ. ಪೊಲೀಸ್ ಅಧಿಕಾರಿಯಾಗಿ ಅತುಲ್ ಕುಲಕರ್ಣಿ ಮತ್ತು ಅವರಿಗೆ ನೀಡಿರುವ ಕಂಠ ಚೆನ್ನಾಗಿದೆ. ಮೋಹನ್ ಲಾಲ್ ರ ಪಾತ್ರ ಮಧ್ಯಂತರದ ಬಳಿಕ ಬಂದು ಸೇರಿಕೊಂಡರೂ ಕತೆಯೊಳಗೆ ಆರಂಭದಿಂದಲೇ ಅವರಿಗಿರುವ ಸಂಬಂಧವನ್ನು ಸಿನೆಮಾ ಬಿಡಿಸಿಡುತ್ತಾ ಹೋದಂತೇ ಪ್ರತಿಯೊಬ್ಬ ಪ್ರೇಕ್ಷಕನೂ ಚಿತ್ರದೊಳಗೆ ತಲ್ಲೀನನಾಗುತ್ತಾನೆ. ಇದೆಲ್ಲದರ ಜೊತೆಗೆ ಇಳಯರಾಜಾರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಸೇರಿಕೊಂಡಾಗ ಮೈತ್ರಿ ಮಧುತವಾಗುತ್ತದೆ.