Skip to content
FilmySphere

From the earlier FilmySphere, kept as published on 2015-02-14. It has not been updated.

Review of DK

FilmySphere critic

ಡಿ.ಕೆ ಚಿತ್ರ ವಿಮರ್ಶೆ ರಾಜಕೀಯದಲ್ಲೆಲ್ಲಾ ಇದು ವಾಡಿಕೆ!

ಶೋ ಮ್ಯಾನ್ ಎಂಬ ಬಿರುದಿನೊಂದಿಗೆ ನಾಯಕನಾಗಿ ಮತ್ತೆ ಬಂದಿದ್ದಾರೆ ಪ್ರೇಮ್. ಚಿತ್ರದಲ್ಲಿ ಅವರದು ಪೋಲಿ ಯುವಕನಾಗಿ ಕಾಣಿಸುವ ಪಾತ್ರ. ಆದರೆ ರಾಜಕಾರಣಿಯೊಬ್ಬನ ಬಜಾರಿ ಮಗಳಲ್ಲಿ ಛಾಲೆಂಜ್ ಹಾಕಿದ್ದಕ್ಕಾಗಿ ಹೇಗೆ ಕಿಂಗ್ ಮೇಕರಾಗಿ ಬದಲಾಗುತ್ತಾನೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ.

ಅದ್ಧೂರಿ ಇಂಟ್ರಡಕ್ಷನ್ ಸಾಂಗ್ ಮೂಲಕ ಎಂಟ್ರಿಯಾಗುವ ಪ್ರೇಮ್ ತಮ್ಮ ಹಳ್ಳಿ ಸೊಗಡಿನ ಸಂಭಾಷಣಾ ಶೈಲಿಯಲ್ಲಿ ಎಂದಿನಂತೆ ಗಮನ ಸೆಳೆಯುತ್ತಾರೆ. ಫೈಟ್ ಸೀನ್ ಗಳು ಚೆನ್ನಾಗಿವೆ. ಆದರೆ ಕತೆಯ ವಿಚಾರಕ್ಕೆ ಬಂದರೆ ನಿರೂಪಣೆಯಲ್ಲಿಯೂ ಹೊಸತನವಿಲ್ಲ ಎನ್ನಬೇಕಾಗುತ್ತದೆ. ಚುನಾವಣೆ ವಿಚಾರದಲ್ಲಿ ವಿರೋಧ ಕಟ್ಟಿಕೊಂಡ ಎರಡು ಮನೆಯ ಬದ್ಧವೈರಿ ಹುಡುಗ ಮತ್ತು ಹುಡುಗಿ ಪ್ರೀತಿಸಿ, ಸಂಬಂಧ ಬೆಳೆಸಿ ಮದುವೆಯಾಗುವ ಮಧ್ಯಂತರದ ವರೆಗಿನ ಕತೆ ಹಿಂದಿ ಚಿತ್ರ ಇಶಕ್ ಝಾದೆಯನ್ನು ಹೋಲುತ್ತದೆ. ಮಧ್ಯಂತರದ ಬಳಿಕ ಕತೆಯಲ್ಲಿ ನಂಬಲರ್ಹ ಟ್ವಸ್ಟ್ ಗಳಿಲ್ಲ. ಆದರೆ ರಾಜಕೀಯದಲ್ಲಿ ಮಾನವನ್ನು ಬದಿಗಟ್ಟು ವರ್ತಿಸಿದರೆ ಒಳಗಿದ್ದವರೆಲ್ಲ ಸುಖಿನೋಭವಂತು ಎಂಬ ಸಂದೇಶವಿದೆ! ಎಲ್ಲಕ್ಕಿಂತ ಮುಖ್ಯವಾಗಿ ನಾಯಕಿ ಚೈತ್ರಾ ಪ್ರಥಮ ಚಿತ್ರದಲ್ಲಿಯೇ ಭರವಸೆಯ ನಟನೆ ನೀಡಿದ್ದಾರೆ. ಆಕೆಯ ಪಾತ್ರಕ್ಕೆ ಪ್ರಾಮುಖ್ಯತೆಯೂ ಇರುವುದರಿಂದ ಚೆನ್ನಾಗಿಯೇ ಮೂಡಿ ಬಂದಿದೆ. ಹಾಡುಗಳ ಕೊರಿಯಾಗ್ರಫಿ ಚೆನ್ನಾಗಿದೆ. ಅದರಲ್ಲೂ ಹಳ್ಳಿಯ ಸಾಮಾನ್ಯ ಜಾಗಗಳನ್ನೇ ಬಳಸಿಕೊಂಡು ಚಿತ್ರೀಕರಿಸಲಾಗಿರುವ ಡ್ಯೂಯೆಟ್ ಸಾಂಗ್ ಮನಮೋಹಕ. ಅಘೋರಿ ಸ್ವಾಮಿಯಂತೆ ಪ್ರತ್ಯಕ್ಷವಾಗುವ ಶೋಭರಾಜ್ ರ ಪಾತ್ರ ಪಾಪ್ಯುಲರ್ರಾಗಲು ಬಳಸುವ ಚೀಪ್ ಗಿಮಿಕ್ ಗಳು ಮತ್ತು ಅವರ ನಟನೆಯ ರೀತಿ ಹಾಸ್ಯ ಸೃಷ್ಠಿಸುವಲ್ಲಿ ಯಶಸ್ವಿಯಾಗುತ್ತದೆ. ಆದರೆ ನಾಯಕಿಯ ಮೂರು ಮಂದಿ ಅಣ್ಣಂದಿರ ಕ್ಯಾರಿಕೇಚರ್ ಪಾತ್ರಗಳು ಕಿರಿಕಿರಿಯುಂಟುಮಾಡುತ್ತವೆ. ಚಿತ್ರದಲ್ಲಿ ಚುನಾವಣೆಯ ಬಗ್ಗೆ, ರಾಜಕಾರಣಿಗಳ ಬಗ್ಗೆ ಹೇಳಲಾಗಿದೆಯೇ ಹೊರತು ಕತೆಯ ಬಗ್ಗೆ ಹೆಚ್ಚು ಗಮನಹರಿಸಿದಂತಿಲ್ಲ. ರಾಜಕಾರಣಿಗಳ ರೀತಿನೀತಿಗಳ ಬಗ್ಗೆ ಅವಹೇಳನ ಮಾಡುವುದೇ ಪ್ರೇಮ್ ತಂಡದ ಗುರಿಯಾಗಿದ್ದರೆ ಅದರಲ್ಲಿ ಅವರು ಯಶಸ್ವಿಯಾಗಿದ್ದಾರೆ. ಆದರೆ ಈ ತೆರನಾದ ಸಾಕಷ್ಟು ಚಿತ್ರಗಳು ಹಲವಾರು ಭಾಷೆಗಳಲ್ಲಿ ಬಂದುಹೋಗಿರುವುದರಿಂದ "ಡಿ.ಕೆ"ಯಲ್ಲಿ ಪ್ರೇಕ್ಷಕರಿಗೆ ಹೊಸದಾಗಿ ಕಾಣದಿದ್ದರೆ ಅಚ್ಚರಿಯೇನಿಲ್ಲ.