Skip to content
FilmySphere

From the earlier FilmySphere, kept as published on 2015-02-07. It has not been updated.

Review of Raja Rajendra

FilmySphere critic

ರಾಜರಾಜೇಂದ್ರ ಚಿತ್ರ ವಿಮರ್ಶೆ

ಯಶಸ್ವಿ ನಾಯಕನಾಗಿ ಬೆಳೆದು ನಿಂತಿರುವ ಶರಣ್ ನ ರಾಜರಾಜೇಂದ್ರ ಚಿತ್ರ ಬಹಳ ನಿರೀಕ್ಷೆಯೊಂದಿಗೆ ತೆರೆಕಂಡಿದೆ.

ಚಿತ್ರದಲ್ಲಿ ನಟ ರಾಮಕೃಷ್ಣ ರಾಜವಂಶದ ಮುದಿ ಜೀವ. ಆತನ ಪರಂಪರಾಗತ ಆಸ್ತಿಯನ್ನು ಹೊಡೆಯಲು ಆತನ ಮೂವರು ಹೆಣ್ಣುಮಕ್ಕಳ ಗಂಡಂದಿರು ಉಪಾಯ ಹೂಡುತ್ತಾರೆ. ಅದಕ್ಕೆ ಅರಮನೆ ಜ್ಯೋತಿಷಿ ಸಾಥ್ ನೀಡುತ್ತಾರೆ. ತನ್ನ ಕಾಣೆಯಾಗಿದ್ದ ಪುತ್ರನಿಗೊಬ್ಬ ಪುತ್ರನಿದ್ದನೆಂಬ ರಾಜನ ನಂಬಿಕೆಯನ್ನು ಇವರೆಲ್ಲ ಬಳಸಿಕೊಳ್ಳುತ್ತಾರೆ. ಹಾಗೆ ರಾಜನನ್ನು ಕೊಲೆಗೈಯಲು ನೇಮಿಸಲ್ಪಟ್ಟ ಬಾಡಿಗೆ ಕೊಲೆಗಾರನನ್ನೇ ಮೊಮ್ಮಗನೆಂದು ಪರಿಚಯಿಸುತ್ತಾರೆ. ಆದರೆ ಕೊಲೆಗಾರ ಬಾಟಲ್ ಮಣಿಯ ಹೆಸರಲ್ಲಿ ಬರುವ ಶರಣ್ ನಿಜಕ್ಕೂ ಬಾಟಲ್ ಮಣಿಯಾಗಿರುವುದಿಲ್ಲ. ವಾಸ್ತವದಲ್ಲಿ ಬಾಟಲಿ ಮೂಲಕ ಚುಚ್ಚಿ ಕೊಲ್ಲುವ ಬಾಟಲ್ ಮಣಿ ರವಿಶಂಕರ್ ಜೈಲಲ್ಲಿರುತ್ತಾನೆ. ಅದೇ ಸಮಯ ಬಳಸಿಕೊಂಡು ಭಯದಿಂದ ರಾತ್ರಿ ಹೊತ್ತು ಬಾಟಲಿಯಲ್ಲೇ ಉಚ್ಛೆ ಹೊಯ್ಯುವ ಶರಣ್ ಕೊಲೆಗಾರನಾಗಿ ಅರಮನೆ ಪ್ರವೇಶಿಸುತ್ತಾನೆ. ತಾಯಿಯ ಆಪರೇಶನ್ ದುಡ್ಡಿಗಾಗಿ ಮಾವ ತಬಲಾ ನಾಣಿಯೊಂದಿಗೆ ಸೇರಿ ಶರಣ್ ನಡೆಸುವ ಈ ನಾಟಕ ಎಷ್ಟರ ಮಟ್ಟಿಗೆ ಗೆಲುವು ಸಾಧಿಸುತ್ತದೆ? ಆ ಬಳಿಕ ಅರಮನೆಯೊಳಗೆ ನಡೆಯುವ ಬದಲಾವಣೆಗಳೇನು? ಆತನೇ ನಿಜವಾದ ಮೊಮ್ಮಗನಾಗಿ ಬದಲಾಗುವುದು ಹೇಗೆ? ಮೊದಲಾದ ಪ್ರಶ್ನೆಗಳಿಗೆ ತೆರೆಯ ಮೇಲೆ ಉತ್ತರ ನೋಡಬಹುದು.

ಇಪ್ಪತ್ತೈದು ವರ್ಷಗಳ ಹಿಂದೆ ಮಲಯಾಳಂನಲ್ಲಿ ತೆರೆಕಂಡ ಮೋಹನ್ ಲಾಲ್ ನಟನೆಯಲ್ಲಿ ತೆರೆಕಂಡಿದ್ದ 'ಹಿಸ್ ಹೈನೆಸ್ ಅಬ್ಧುಲ್ಲ' ಚಿತ್ರದ ಮುಖ್ಯ ಕಥಾಹಂದರವನ್ನು ಕದ್ದು ಚಿತ್ರ ಮಾಡಿದ್ದಾರೆ ನಿರ್ದೇಶಕ ಕುಮಾರ್. ಅಲ್ಲಿ ಅದೊಂದು ಕ್ಲಾಸಿಕ್ ಹಿಟ್ ಆಗಿದ್ದರೆ, ಇಲ್ಲಿ ಅದನ್ನೊಂದು ಕಾಮಿಕ್ ಹಿಟ್ ಮಾಡುವ ಪ್ರಯತ್ನ ನಡೆಸಲಾಗಿದೆ. ಆದರೆ ಚಿತ್ರದಲ್ಲಿ ಬರುವ ರಾಜಮನೆತನದ ವಿಷಯಗಳು ಮಲಯಾಳಂನಷ್ಟು ಕನ್ನಡಕ್ಕೆ ಸೂಕ್ತವೆನಿಸುವುದಿಲ್ಲ. ಆದರೆ ಅದರೊಳಗೆ ದೆವ್ವದ ಕತೆಯನ್ನು ಬೆರೆಸಿ ಹಾಸ್ಯದ ಸೃಷ್ಠಿಗೆ ಕಾರಣವೆನಿಸಿದೆ. ಚಿತ್ರದ ಕೊನೆಯ ಒಂದು ಘಂಟೆಯನ್ನು ಬರೇ ಹಾಸ್ಯಕ್ಕೆಂದೇ ಮೀಸಲಿಡಲಾಗಿದೆ. ಆದರೆ ಆ ಸಮಯದಲ್ಲಿ ಚಿತ್ರದ ಕತೆಯಲ್ಲಿ ಯಾವುದೇ ಟ್ವಿಸ್ಟ್ ಗಳು ಉಂಟಾಗುವುದಿಲ್ಲವಾದುದರಿಂದ ನೋಡುಗ ಬರೇ ಕಾರ್ಟೂನ್ ನೋಡುವಂತೆ ಕುಳಿತಿರುತ್ತಾನೆ. ಸದಾ ಕತೆಯಲ್ಲಿ ಫೈರ್ ಇರ್ಬೇಕು ಎನ್ನುವ ನಿರ್ದೇಶಕರು ಇನ್ನಾದರೂ ಸ್ವಂತದ್ದೊಂದು ಒಳ್ಳೆಯ ಕತೆ ಬರೆದು, ಉತ್ತಮ ಸಂಭಾಷಣೆಯೊಂದಿಗೆ ಬಂದು ಫೈರ್ ಸೃಷ್ಠಿಸುವ ಅನಿವಾರ್ಯತೆಯುಂಟಾಗಿದೆ.