From the earlier FilmySphere, kept as published on 2015-01-31. It has not been updated.
Review of Abhinetri
FilmySphere critic
ಅಭಿನೇತ್ರಿ ಸಿನೆಮಾ ವಿಮರ್ಶೆ
ಕತೆ ಕಲ್ಪನಾಳದ್ದೇ ಖಾತ್ರಿ!
ಕೊನೆಗೂ ನಟಿ ಕಲ್ಪನಾರ ಜೀವನ ಚರಿತ್ರೆಯನ್ನು ತೊಂಬತ್ತರಷ್ಟು ಹೋಲುವಂತೆ ಸ್ವತಃ ತಯಾರಿಸಿದ ಚಿತ್ರದೊಂದಿಗೆ ಪೂಜಾ ತೆರೆಗೆ ಬಂದಿದ್ದಾರೆ. ಚಿತ್ರದಲ್ಲಿ ಪೂಜಾ ಹೆಸರು ನಂದಾ. ಆಕೆ ಮಂಗಳೂರು ಮೂಲದ ಹುಡುಗಿ. ಹುಬ್ಬಳ್ಳಿಯಿಂದ ನಾಟಕ ನಟಿಯಾಗಿ ರಂಗ ಪ್ರವೇಶ. ಅದರ ಮಾಲಕನ ಮೂಲಕ ಚೆನ್ನೈಗೆ ಹೋಗಿ ಕನ್ನಡದ ಸಿನೆಮಾ ನಟಿಯಾಗಿ ಆಯ್ಕೆ. ಸ್ಟಾರ್ ನಟಿಯಾಗಿ ಬೆಳೆದ ಬಳಿಕ ಆರಂಭದಲ್ಲಿ ತನ್ನನ್ನು ಅವಮಾನಿಸಿದವರಿಗೆ ಪ್ರತೀಕಾರ ಮಾಡುವುದರಲ್ಲೇ ತಲ್ಲೀನೆ; ಮುಂಗೋಪಿ. ಅದರಿಂದಾಗಿಯೇ ಇರುವ ಅವಕಾಶ ಕಳೆದುಕೊಂಡು ಮರಳಿ ನಾಟಕ ರಂಗಕ್ಕೆ. ಅಲ್ಲಿ ಅದರ ಮಾಲಕನೊಂದಿಗೆ ಪ್ರೇಮ. ಕೊನೆಯಲ್ಲಿ ನಿಗೂಢ ರೀತಿಯಲ್ಲೊಂದು ಆತ್ಮಹತ್ಯೆ. ಇವೆಲ್ಲವೂ ಕಲ್ಪನಾ ಬದುಕಿನಲ್ಲಿ ನಡೆದಿದೆಯೆಂದು ಹೇಳಲಾಗಿರುವ ಘಟನೆಗಳು. ಅಂದಿನ ಕಾಲದ ಕ್ಯಾಮರ, ಕಾಸ್ಟ್ಯೂಮ್ಸು ಮತ್ತು ಒಂದೆರಡು ವಾಹನಗಳನ್ನು ತೋರಿಸಿದ್ದು ಬಿಟ್ಟರೆ ಹಳೆಯ ಶೈಲಿಯಲ್ಲಿನ ನೃತ್ಯ ಚಿತ್ರೀಕರಣ ಸೇರಿದಂತೆ ಹಲವಾರು ಆಕರ್ಷಕ ಅಂಶಗಳನ್ನು ತೋರಿಸುವ ಸಾಧ್ಯತೆಯಿದ್ದರೂ ನಿರ್ದೇಶಕರು ಬಳಸಿಲ್ಲವೆನ್ನಬಹುದು. ಕಲ್ಪನಾ ಎಂಬ ಹೆಸರನ್ನು ಹೇಳದಿದ್ದರೂ ಆಕೆಯದೇ ಕತೆಯೆಂಬ ಭಯದಿಂದಲೋ ಏನೋ ಆಕೆಯ ಬಗೆಗಿನ ಅಸ್ಪಷ್ಟ ಮಾಹಿತಿಗಳನ್ನು ಹಾಗೆಯೇ ಉಳಿಸಲಾಗಿದೆ. ಆಕೆಯದೆಂದು ಗುರುತಿಸಬಹುದಾದ ಒಂದು ಸಾಧನೆಯನ್ನೋ, ಸ್ವಭಾವವನ್ನೋ ಹೈಲೈಟ್ ಮಾಡದೆ ಬರೇ ಘಟನೆಗಳ ಗೊಂಚಲನ್ನಾಗಿಸಲಾಗಿದೆ. ಕಲ್ಪನಾ ಬಗ್ಗೆ ತಿಳಿದಿರದ ಅನ್ಯ ಪ್ರೇಕ್ಷಕರು ಚಿತ್ರವನ್ನು ಕಂಡಾಗ ಈ ಕತೆಯನ್ನು ಯಾಕೆ ಆಯ್ದುಕೊಂಡರೆಂದೇ ಅರ್ಥವಾಗದು! ನಾಯಕಿಯಾಗಿ ದಪ್ಪ ಮೈಯ ಪೂಜಾ ಬಳ್ಳಿ ಮೈಯ ಕಲ್ಪನಾರ ಕಲ್ಪನೆಯನ್ನೇ ಮೂಡಿಸುವುದಿಲ್ಲ. ಹೇಗೋ ಘಟನೆಗಳ ಮೂಲಕ ಇದು ಆಕೆಯದೇ ಪಾತ್ರವೆಂದು ಅಂದುಕೊಳ್ಳುತ್ತಿದ್ದ ಹಾಗೇ ಪೂಜಾರ ಕಂಠದಿಂದ ಹೊಮ್ಮುವ ವಿಭಿನ್ನ ಸ್ಲ್ಯಾಂಗ್ ನ ಸಂಭಾಷಣೆ ನಮ್ಮನ್ನು ಮತ್ತೆ ಪೂಜಾ ಬಳಿಗೇ ಎಳೆದು ತರುತ್ತದೆ. ಆದರೂ 'ನಾ ಬಂದೇ..'ಎಂದು ಹೇಳುವಲ್ಲಿನ ಪೂಜಾರ ಕನ್ನಡದ ಪ್ರಯತ್ನವನ್ನು ಖಂಡಿತಾ ಶ್ಲಾಘಿಸಬಹುದು. ಚಿತ್ರದ ಮಧ್ಯಂತರದ ವೇಳೆಗೆ ಪಡೆಯಪ್ಪದ ನೀಲಾಂಬರಿಯೇ ಮೈಮೇಲೆ ಬಂದಂತಾಡುವ ಪೂಜಾರ ಅಭಿನೇತ್ರಿ ಪ್ರೇಕ್ಷಕನಿಗೆ ನಿರಾಶೆ ಮೂಡಿಸಿದರೂ ಬಳಿಕ ಬರುವ ರವಿಶಂಕರ್ ಪಾತ್ರದಿಂದಾಗಿ ಚಿತ್ರಕ್ಕೆ ಒಂದಷ್ಟು ಜೀವಕಳೆ ತುಂಬುತ್ತದೆ ಎಂಬುದನ್ನು ಅಲ್ಲಗಳೆಯಲಾಗದು. ಉಳಿದಂತೆ ಅತುಲ್ ಕುಲಕರ್ಣಿ ಪಾತ್ರವೂ ಡಮ್ಮಿ. ಮಕರಂದ್ ದೇಶಪಾಂಡೆಯನ್ನು ಹೊರತು ಪಡಿಸಿ ರಮ್ಯಾ ಬಾರ್ನ, ಸಂಜನಾ ಗಾಂಧಿ, ಶ್ರೀನಗರ ಕಿಟ್ಟಿ ಹೀಗೆ ಯಾರಿಗೂ ನೆನಪಲ್ಲಿ ಉಳಿಯುವ ದೃಶ್ಯಗಳಿಲ್ಲ. ಮನೋ ಮೂರ್ತಿ ಸಂಗೀತದಲ್ಲಿ ಒಂದೆರಡು ಹಾಡುಗಳು ಮೆಲುಕು ಹಾಕುವಂತಿವೆ. ವಿಭಿನ್ನ ಚಿತ್ರವೊಂದನ್ನು ನೋಡಬಯಸುವವರು, ಕಲ್ಪನಾ ಪ್ರೇಮಿಗಳು ಖಂಡಿತಾ ಒಮ್ಮೆ ನೋಡಬೇಕಾದ ಚಿತ್ರವಿದು.