From the earlier FilmySphere, kept as published on 2015-01-26. It has not been updated.
Review of Siddhartha
FilmySphere critic
ಸಿದ್ದಾರ್ಥ ಚಿತ್ರ ವಿಮರ್ಶೆ ಲವಲವಿಕೆಯ ಯೂತ್ ಲವ್ ಸ್ಟೋರಿ
ಹಾಗೆ ಸಿದ್ಧಾರ್ಥ ಚಿತ್ರದ ಮೂಲಕ ಕನ್ನಡ ಚಿತ್ರರಂಗದ ದಿಗ್ಗಜ ಡಾ.ರಾಜಕುಮಾರ್ ರ ಮೂರನೇ ತಲೆಮಾರಿನ ಪ್ರಥಮ ನಾಯಕ ಕೂಡ ತೆರೆಗೆ ಬಂದಿದ್ದಾರೆ. ಅದೊಂದು ಕಾರಣವೇ ಚಿತ್ರಕ್ಕೆ ಬಾನೆತ್ತರದ ನಿರೀಕ್ಷೆಯನ್ನುಂಟುಮಾಡಿತ್ತು.
ಚಿತ್ರದಲ್ಲಿ ನಾಯಕ ಕಾಲೇಜ್ ವಿದ್ಯಾರ್ಥಿ. ತಂದೆಯನ್ನಷ್ಟೇ ಹೊಂದಿರುವ ಮಧ್ಯಮ ವರ್ಗದ ಹುಡುಗ. ನಾಯಕಿ ಚಿತ್ರಕಲಾ ಶಾಲೆಯ ವಿದ್ಯಾರ್ಥಿನಿ. ಅಲ್ಲಿಗೆ ರೂಪದರ್ಶಿಯಾಗಿ ಹೋಗಿ ನಾಯಕಿಯ ರೂಪಕ್ಕೆ ಮಾರುಹೋಗುತ್ತಾನೆ. ಆಕೆಯನ್ನು ಒಪ್ಪಿಸಿದಷ್ಟೇ ಉಪಾಯದಲ್ಲಿ ಆಕೆಯ ಶ್ರೀಮಂತ ತಂದೆಯನ್ನೂ ಒಪ್ಪಿಸುತ್ತಾನೆ. ಹಾಗಾದರೆ ಇವರ ಲವ್ ಸ್ಟೋರಿಗೆ ವಿಲ್ಲನ್ಸ್ ಯಾರು? ಅದು ಅವರೇ ತಮ್ಮ ಪ್ರೀತಿಯ ನಡುವೆ ಹಾಕಿಕೊಳ್ಳುವ ಅಂತರ! ನಾಯಕ ಆಕೆಯಿಂದ 20ದಿನ ದೂರಾಗಿದ್ದು ಗೆಳೆಯರೊಂದಿಗೆ ಕಳೆಯಲೆತ್ನಿಸುತ್ತಾನೆ. ಆದರೆ ಆ ದಿನಗಳಲ್ಲಿ ಆತ ಇತರ ಹುಡಗಿಯರೊಂದಿಗೆ ಬೆಳೆಸಿದ ಗೆಳೆತನ ಕಂಡು ನಾಯಕಿ ರೋಸಿ ಹೋಗುತ್ತಾಳೆ. ಆತನಿಂದ ಒಂದು ವರ್ಷ ಗ್ಯಾಪ್ ತೆಗೆದುಕೊಂಡು ವಿದೇಶಕ್ಕೆ ಹೋಗುತ್ತಾಳೆ. ಅಲ್ಲಿಂದ ಮರಳುವಾಗ ಆಕೆಯೊಂದಿಗೆ ಒಬ್ಬ ಹುಡುಗನಿರುತ್ತಾನೆ. ನಾಯಕನನ್ನು ಅವಾಯ್ಡ್ ಮಾಡಿ ಆತನನ್ನೇ ಮದುವೆಯಾಗಹೊರಡುತ್ತಾಳೆ. ಆದರೆ ಮದುವೆ ಯಾರೊಂದಿಗೆ ಆಗುತ್ತದೆ ಎಂಬುದು ಕ್ಲೈಮ್ಯಾಕ್ಸ್.
ನಾಯಕನಾಗಿ ವಿನಯರಾಜ್ ಗಮನ ಸೆಳೆಯವುದಿಲ್ಲ. ಲವಲವಿಕೆಯ ದೃಶ್ಯಗಳು ಸಂಭಾಷಣೆಯಿಂದ ಮಾತ್ರವೇ ಆಕರ್ಷಕವೆನಿಸುತ್ತದೆ! ಆದರೆ ಆತನ ಮಾತಿನ ಶೈಲಿಯಲ್ಲಿ ಪುನೀತ್ ರೀತಿ ಮತ್ತು ಕಂಠದಲ್ಲಿ ಬೇಸ್ ಎದ್ದು ಕೇಳಿಸುವುದು ಗ್ರೇಸ್. ನಾಯಕಿ ಅಪೂರ್ವ ಅರೋರಾ ಮೆಚ್ಚುವಂಥ ನಟನೆ ನೀಡಿದ್ದಾರೆ. ನಾಯಕನ ತಂದೆಯಾಗಿ ಅಚ್ಯುತ್ ಕುಮಾರ್, ನಾಯಕಿಯ ತಂದೆಯಾಗಿ ಅಶೀಷ್ ವಿದ್ಯಾರ್ಥಿಯ ಪಾತ್ರಗಳು ಪ್ರೇಕ್ಷಕರಲ್ಲಿ ನಗು ತರಿಸುವಲ್ಲಿ ಯಶಸ್ವಿಯಾಗುತ್ತದೆ. ಅಶೀಷ್ ವಿದ್ಯಾರ್ಥಿಯ ಪಾತ್ರ ಬರುವವರೆಗೆ ಚಿತ್ರ ಆಸಕ್ತಿಯನ್ನೇ ಮೂಡಿಸದು. ನಿಖಿ ಗಲ್ರಾನಿಯ ಗೆಸ್ಟ್ ಅಪಿಯರೆನ್ಸು ಚೆನ್ನಾಗಿದೆ. ಸಾಧು ಕೋಕಿಲ ಎಂದಿನಂತೆ ನಗು ತರಿಸುತ್ತಾರೆ. ಕೊನೆಯಲ್ಲಿನ ಟ್ವಿಸ್ಟ್ ನಲ್ಲಿ ಲಾಜಿಕ್ ಗಿಂತ ಮ್ಯಾಜಿಕ್ ಗೆ ಮಹತ್ವ ಹೆಚ್ಚು. ಛಾಯಾಗ್ರಹಣ, ಸಂಕಲನ ಕೂಡ ಅಮೋಘವೆನಿಸುವುದಿಲ್ಲ. ಆದರೆ ಲವಲವಿಕೆ ತುಂಬಿದ ಯೂತ್ ಲವ್ ಸ್ಟೋರಿಯೆಂಬ ನಿಟ್ಟಿನಲ್ಲಿ ಎಲ್ಲರಿಗೂ ಇಷ್ಟವಾಗುತ್ತದೆ.