From the earlier FilmySphere, kept as published on 2015-01-15. It has not been updated.
Review of Jackson
FilmySphere critic
ಜಾಕ್ಸನ್ ಚಿತ್ರ ವಿಮರ್ಶೆ ಜನವರಿ ಮೊದಲ ವಾರದಲ್ಲಿ ಬರುವುದಾಗಿ ಹೇಳಿ ಜರ್ಕ್ ಹೊಡೆದ ಜಾಕ್ಸನ್ ಎರಡನೇ ವಾರಕ್ಕೆ ತೆರೆಗೆ ಬಂದಿದ್ದಾನೆ. ಚಿತ್ರಕತೆಯಲ್ಲಿಯೂ ಆರಂಭದಲ್ಲಿ ಸ್ವಲ್ಪ ಜರ್ಕ್ ಹೊಡೆಯುತ್ತಾನೆ. ಉಳಿದಂತೆ ಸದಾ ಎಣ್ಣೆ ಹೊಡೆಯುತ್ತಾನೆ. ಅಡ್ಡ ಬಂದವರನ್ನು ಹೊಡೆಯುತ್ತಾನೆ.
ಚಿತ್ರದಲ್ಲಿ ಜಾಕ್ಸನ್ ಎಂಬುದು ನಾಯಕನಿಗಿರುವ ಅಡ್ಡ ಹೆಸರು. ಆತ ಪಕ್ಕದ್ಮನೆ ಕುಮುದಾಳನ್ನು ಪ್ರೀತಿಸುತ್ತಿರುತ್ತಾನೆ. ಅವಳು ಗ್ರೀನ್ ಸಿಗ್ನಲ್ ಕೊಡುವ ಮುಂಚೆ ಅವಳ ತಂದೆ ರೆಡ್ ಸಿಗ್ನಲ್ ಹಾಕುತ್ತಾನೆ. ಅದೇ ನೋವಲ್ಲಿ ಕುಡಿಯಲೆಂದು ಬಾರು ಬಾರುಗಳಿಗೆ ಅಲೆಯುತ್ತಾನೆ. ಆದರೆ ಕುಡಿಯುವ ಮೊದಲು ಆತನಿಂದ ರಕ್ತದಾನ ಪಡೆಯಲು ಸಾವಿನ ಹಂತದಲ್ಲಿರುವ ಎರಡು ಜೀವಗಳು ಕಾಯುತ್ತಿರುತ್ತವೆ. ಅದು ಯಾರು? ನಾಯಕನಿಗೆ ಕೊನೆಗೂ ಆತನ ಪ್ರೇಯಸಿ ಸಿಗುತ್ತಾಳ ಎಂಬುದನ್ನು ನೋಡಬೇಕಾದರೆ ನೀವು ಚಿತ್ರಮಂದಿರಕ್ಕೆ ಹೋಗಬೇಕು. ಹೇಳುವಂಥ ಕತೆಯಿಲ್ಲವಾದರೂ ಟೈಮ್ ಪಾಸಿಗೊಂದಷ್ಟು ತಮಾಷೆ ಜೊತೆಗೆ ಅಂಡರ್ ಕರೆಂಟ್ ನಲ್ಲಿಯೇ ಕುಡಿತದ ವಿರುದ್ಧ ಒಂದು ಬಲವಾದ ಸಂದೇಶವಿರುವುದನ್ನು ಅರ್ಥಮಾಡಿಕೊಳ್ಳಬಹುದು.
ನಾಯಕನಾಗಿ ವಿಜಯ್ ಎಂದಿನಂತೆ ತಮ್ಮ ಪಾಸಿಟಿವ್ ಅಂಶಗಳಾದ ಸ್ಲಂ ಭಾಷೆ, ಟಪ್ಪಾಂಗುಚ್ಚಿ ಡಾನ್ಸು, ಮತ್ತು ರಂಗಾಯಣ ರಘು ಕಾಂಬಿನೇಶನ್ ಮತ್ತು ಒಂದೆಡರು ಹೊಡೆದಾಟಗಳ ಮೂಲಕ ಅಭಿಮಾನಿಗಳಿಗೆ ತೃಪ್ತಿ ನೀಡುತ್ತಾರೆ. ನಾಯಕಿ ವೃಂದಾ ಕೂಡ ಗಮನ ಸೆಳೆಯುತ್ತಾರೆ. ಚಿತ್ರದ ಮತ್ತೊಂದು ಪ್ರಮುಖ ಜೋಡಿಯಾಗಿ ನಟಿಸಿರುವ ಐಶ್ವರ್ಯಾ ಮತ್ತು ಆಕೆಯ ಜೋಡಿ ಯುವಕ ನೆನಪಿನಲ್ಲಿ ಉಳಿಯುವುದು ಕಷ್ಟ. ಅದೇ ವೇಳೆ ಅರಸ್ ಮತ್ತು ಅವರಿಗೆ ಜೋಡಿಯಾಗಿ ನಟಿಸಿರುವ ಪ್ರಶಾಂತ್ ಸೇರಿದಂತೆ ಒಂದಷ್ಟು ಹೊಸ ಕಲಾವಿದರು ಪ್ರೇಕ್ಷಕರಲ್ಲಿ ನಗು ಮೂಡಿಸುವಲ್ಲಿ ಯಶಸ್ವಿಯಾಗುತ್ತಾರೆ.