From the earlier FilmySphere, kept as published on 2015-01-11. It has not been updated.
Review of Paipoti
FilmySphere critic
ಪೈಪೋಟಿ ಚಿತ್ರ ವಿಮರ್ಶೆ ಪ್ರೀತಿ ಜೊತೆಗೆ ಬೈಟು ಟೀ..!
ಇಬ್ಬರು ನಾಯಕರು ಸೇರಿ ಒಬ್ಬಳೇ ಹುಡುಗಿಯನ್ನು ಪ್ರೀತಿಸಿದರೆ ಕತೆಯೇನಾಗುತ್ತದೆ? ಒಂದೋ ಒಬ್ಬ ನಾಯಕ ಸಾಯಬೇಕು ಅಥವಾ ಇನ್ನೊಬ್ಬ ತ್ಯಾಗಿಯಾಗಬೇಕು ಎಂಬುದನ್ನು ನಾವು ಹಲವಾರು ಸಿನೆಮಾಗಳಲ್ಲಿ ನೋಡಿದ್ದೇವೆ. ಆದರೆ ಪೂರ್ತಿಯಾಗಿ ಇವೆಲ್ಲಕ್ಕಿಂತ ವಿಭಿನ್ನ ಅನುಭವ ನೀಡುವ ಚಿತ್ರವೇ ಪೈಪೋಟಿ.
ರಮೇಶ ಮತ್ತು ಸುರೇಶ ಇಬ್ಬರು ಆತ್ಮೀಯ ಸ್ನೇಹಿತರು. ಎಲ್ಲ ವಿಚಾರಗಳಲ್ಲಿಯೂ ಅವರು ಪರಸ್ಪರ ಹೋಲುತ್ತಾರೆ. ಕೊನೆಗೆ ಇಬ್ಬರೂ ಸೇರಿ ಪ್ರೇಮಿಸುವ ಹುಡುಗಿಯೂ ಒಬ್ಬಳೇ ಆಗಿರುತ್ತಾಳೆ. ಅದು ಗೊತ್ತಾದ ತಕ್ಷಣ ಪರಸ್ಪರ ಬಿಟ್ಟು ಕೊಟ್ಟು ತ್ಯಾಗಿಯಾಗಲು ಯತ್ನಿಸುತ್ತಾರೆ. ಆದರೆ ಇಂಟರ್ ವೆಲ್ ಹೊತ್ತಿಗೆ ಅದೇ ವಿಚಾರದಲ್ಲಿ ಅವರಿಬ್ಬರಲ್ಲೇ ವೈಮನಸ್ಯ ಮೂಡಿ ಪರಸ್ಪರ ಜಿದ್ದಿಗೆ ಬಿದ್ದು ಪ್ರೀತಿಸಲು ಶುರು ಮಾಡುತ್ತಾರೆ. ಆದರೆ ಇಬ್ಬರಲ್ಲಿಯೂ ಸ್ನೇಹವನ್ನಷ್ಟೇ ಕಂಡಿರುವ ಹುಡುಗಿ ತಂದೆ ಬಯಸುವ ಹುಡುಗನ ಕೈ ಹಿಡಿಯಲು ಸಿದ್ಧವಾಗುತ್ತಾಳೆ. ತಂದೆ ನೋಡಿದ ಶ್ರೀಮಂತ ಹುಡುಗನೊಂದಿಗೆ ಮದುವೆ ನಿಶ್ಚಯಗೊಳಿಸಲಾಗುತ್ತದೆ. ಇನ್ನೇನು ಮದವೆ ನಡೆಯುತ್ತದೆ ಎನ್ನುವಷ್ಟರಲ್ಲಿ ಅಲ್ಲೊಂದು ಘಟನೆ ನಡೆಯುತ್ತದೆ. ಅದು ಏನು? ಇಬ್ಬರಲ್ಲಿ ಯಾರ ಪ್ರೀತಿ ಸಕ್ಸಸ್ ಆಗುತ್ತದೆ? ಎಂಬ ಪ್ರಶ್ನೆಗಳಿಗೆ ಉತ್ತರ ಪಡೆಯಬೇಕಾದರೆ ನೀವು ಪೈಪೋಟಿ ಚಿತ್ರವನ್ನು ನೋಡಬೇಕು. ಚಿತ್ರದಲ್ಲಿ ಇಬ್ಬರು ನಾಯಕರಾದ ಗುರುರಾಜ್ ಮತ್ತು ನಿರಂಜನ್ ಶೆಟ್ಟಿಗೆ ಸಮಾನ ಅವಕಾಶಗಳನ್ನು ನೀಡಲಾಗಿದೆ. ಆದರೆ ಗುರು ತಮ್ಮ ನಟನೆಯಿಂದ ಹೆಚ್ಚು ಆಕರ್ಷಕವಾಗುತ್ತಾರೆ. ಅದೇ ಸಂದರ್ಭದಲ್ಲಿ ನಿರಂಜನ್ ಗೆ ಉತ್ತಮ ಅವಕಾಶಗಳಿದ್ದರೂ ತಮ್ಮ ಮಾತನಾಡುವ ಶೈಲಿ ಮತ್ತು ಓವರ್ ಆ್ಯಕ್ಟಿಂಗ್ ರೀತಿಯಿಂದಾಗಿ ಗುರುವಿನ ಮುಂದೆ ಶಿಷ್ಯನಾಗಿ ಉಳಿಯುತ್ತಾರೆ. ನಾಯಕಿ ಪೂಜಾಗೆ ಆರಂಭದ ದೃಶ್ಯಗಳಲ್ಲೆಲ್ಲಾ ಇವರಿಬ್ಬರನ್ನು 'ಮೆಂಟ್ಲುಗಳು' ಎಂದು ಕರೆಯುವುದಷ್ಟೇ ಕೆಲಸವೆನ್ನಬಹುದು. ಬಳಿಕವೂ ಈಕೆ ತನ್ನ ನಟನೆಯಿಂದ ಗಮನ ಸೆಳೆಯುವ ಸಂದರ್ಭಗಳಿಲ್ಲ. ಚುರುಕಾದ ಸಂಭಾಷಣೆಗಳಿದ್ದರೂ ಅದರಲ್ಲಿ ಅಲ್ಲಲ್ಲಿ ಪರಭಾಷೆಯ ಗಂಧವೇ ತುಂಬಿರುವುದು ಗೋಚರಿಸುತ್ತದೆ. ತ್ರಿಭುವನ್ ಮಾಸ್ಟರೇ ಖುದ್ದು ಪರದೆಯ ಮೇಲೆ ಕಾಣಿಸಿಕೊಂಡರೂ ಕೂಡ ಒಂದೊಳ್ಳೆಯ ಕೊರಿಯಾಗ್ರಫಿಯ ಕೊರತೆ ಇರುವುದನ್ನು ಕಾಣಬಹುದು. ಆದರೆ ಆರಂಭದಲ್ಲೇ ಬರುವ 'ಅವಳಿಗವಳೇ..' ಹಾಡನ್ನು ಬರೇ ಬಾಯಿಯಷ್ಟೇ ಬಳಸಿ ಸೃಷ್ಠಿಸಿರುವುದು ಮತ್ತು ಹಾಡಿನಲ್ಲಿ ಆ ಗಾಯಕರನ್ನು ಬುದ್ಧಿಪೂರ್ವಕವಾಗಿ ತೋರಿಸಿರುವುದು ಮಾತ್ರವೇ ವಿಶೇಷ. ಛಾಯಾಗ್ರಹಣ, ಎಡಿಟಿಂಗ್ ಜೊತೆಗೆ ಅಚ್ಯುತ ಕುಮಾರ್ ನಂಥ ನೈಜ ನಟನೆಯ ಕಲಾವಿದರು ಚಿತ್ರಕ್ಕೆ ಟಾನಿಕ್ ನೀಡಿದ್ದಾರೆ. ಜೊತೆಗೆ ಅಶ್ಲೀಲತೆ, ದ್ವಂದ್ವಾರ್ಥಗಳಿಗೆ ಸಾಕಷ್ಟು ಬ್ರೇಕ್ ಕೊಟ್ಟು ಒಂದು ಯೂತ್ ಫುಲ್ ಹಾಸ್ಯ ಚಿತ್ರವನ್ನು ನೀಡುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.