Skip to content

hello@filmysphere.com+91 99868 150022

FilmySphere

From the earlier FilmySphere, kept as published on 2015-01-02. It has not been updated.

Review of Shivam

FilmySphere critic

ಶಿವಂ ಚಿತ್ರ ವಿಮರ್ಶೆ ಕಂಡವರಿಗೆ ಕಷ್ಟಾನುಭವಂ!

ಶೀರ್ಷಿಕೆಯ ಕಾರಣದಿಂದಲೇ ಬಹಳಷ್ಟು ಸುದ್ಧಿ ಮಾಡಿದ್ದ ಶ್ರೀನಿವಾಸ ರಾಜು ನಿರ್ದೇಶನದ ಉಪೇಂದ್ರರ ಶಿವಂ ಕಡೆಗೂ ತೆರೆಗೆ ಬಂದಿದೆ. ಚಿತ್ರತಂಡ ನೀಡಿದ ಬಿಲ್ಡಪ್ ಗಳನ್ನು ಕೇಳಿ ಬಹಳ ನಿರೀಕ್ಷೆಯೊಂದಿಗೆ ಈ ಅಡ್ಡನಾಮ ಚಿಹ್ನೆಯೊಂದಿಗಿನ ಚಿತ್ರವನ್ನು ನೋಡಲು ಹೋದರೆ ಉದ್ದನಾಮ ಬೀಳುವುದು ಗ್ಯಾರಂಟಿ. ಯಾಕೆಂದರೆ ಒಂದಷ್ಟು ಖರ್ಚು ಮಾಡಿರುವುದನ್ನು ಬಿಟ್ಟರೆ ಒಟ್ಟು ಚಿತ್ರದಲ್ಲಿ ಯಾವುದೇ ಆಕರ್ಷಕ ಅಂಶಗಳಿಲ್ಲ. ಚಿತ್ರದಲ್ಲಿ ನಾಯಕ ಉಪೇಂದ್ರ ಆರಂಭದಲ್ಲಿ ಅಲೆಕ್ಸ್ ಎಂಬ ಡಾನ್ ಆಗಿ ಕಾಣಿಸುತ್ತಾರೆ. ಮತ್ತೊಬ್ಬ ಮುಸ್ಲಿಂ ಡಾನ್ ನನ್ನು ಮಟ್ಟ ಹಾಕಲು ಯತ್ನಿಸುತ್ತಾರೆ. ಹಳ್ಳಿಯ ಆತನ ಮನೆಯಲ್ಲಿ ಆತನ ತಂದೆ ವಂಶಪಾರಂಪರ್ಯವಾಗಿ ದೊರಕಿರುವ ಊರ ದೇಗುಲದ ಅರ್ಚಕ ಸ್ಥಾನದಲ್ಲಿರುತ್ತಾರೆ. ಅವರ ನಿಧನಾನಂತರ ಆ ಸ್ಥಾನವನ್ನು ವಹಿಸಲು ಹಿರಿಮಗ ನಿರಾಕರಿಸುತ್ತಾನೆ. ದೇಗುಲದ ಆಡಳಿತ ಭ್ರಷ್ಟರ ಕೈಗೆ ಹೋಗದಂತೆ ತಪ್ಪಿಸಲು ತಕ್ಷಣ ವಿದೇಶದಿಂದ ಮರಳುವ ಕಿರಿಯ ಮಗ ಅಲೆಕ್ಸ್ ಅರ್ಚಕ ಬಸವಣ್ಣನಾಗುತ್ತಾನೆ. ಕೊನೆಯಲ್ಲಿ ಆತ ಮುಂಬೈನಲ್ಲಿ ಡಾನ್ ಆಗಿರಲಿಲ್ಲ; ಮುಸ್ಲಿಂ ಡಾನನ್ನು ಮುಗಿಸಲು ಹೊರಟಿದ್ದ ರಾ ಏಜೆಂಟ್ ಆಗಿದ್ದನೆಂಬುದನ್ನು ತೋರಿಸಲಾಗುತ್ತದೆ. ಇದರ ನಡುವೆ ಆತನನ್ನು ಪ್ರೀತಿಸುವ ಮಾವನ ಮಗಳು ಸಲೋನಿ, ಆತನಿಗೆ ಸಹಾಯಕ ಅಧಿಕಾರಿಣಿಯಾಗಿ ಬರುವ ರಾಗಿಣಿ ಪಾತ್ರಗಳು ಬಂದು ಹೋಗುತ್ತವೆ. ಆದರೆ ಯಾರ ಪಾತ್ರಗಳಿಗೂ ಕೂಡ ವಿಶೇಷವೆನಿಸುವಂಥ ನಟನೆಗೆ ಅವಕಾಶವಿಲ್ಲ. ಹಾಡುಗಳ ಸಾಮಾನ್ಯ. ಫೈಟುಗಳು ಅಸಾಮಾನ್ಯ. ಹಾಗಾಗಿಯೇ ನಾಯಕ ಆಕಾಶದಲ್ಲೇ ಹಾರಾಡಿ ಹೊಡೆಯುತ್ತಾನೆ. ಅರ್ಚಕ ಮತ್ತು ಪೊಲೀಸ್ ಪಾತ್ರಗಳನ್ನು ಈ ಹಿಂದೆ ತಮಿಳು ಚಿತ್ರವೊಂದರಲ್ಲಿ ಅರ್ಜುನ್ ಸರ್ಜಾ ನಿರ್ವಹಿಸಿದ್ದರು. ಅದೇ ರೀತಿ ಒಟ್ಟು ಚಿತ್ರ ತಮಿಳು ಅಥವಾ ಪಕ್ಕಾ ತೆಲುಗು ನೇಟಿವಿಟಿಗೆ ಹೊಂದಿಕೊಳ್ಳುವಂತೆ ಮಾಡಿದ್ದಾರೆ. ತಲೆಯನ್ನು ಗ್ರಾಫಿಕ್ಸ್ ಮೂಲಕ ಬೋಳು ಮಾಡಿರುವುದೂ ಸೇರಿದಂತೆ, ಗಾಂಧಿನಗರದಲ್ಲಿ ಬಿಡುಗಡೆಯಾದ ಚಿತ್ರದ ಒಟ್ಟು ಪ್ರಿಂಟ್ ಡಲ್ ಅನಿಸುತ್ತದೆ. ಖುದ್ದು ಉಪೇಂದ್ರರೇ ಹೊಗಳಿ ಮಾತನಾಡಿದ್ದ ಸಂಭಾಷಣೆಕಾರರು ಒಂದೆರಡು ಜಾಗದಲ್ಲಿ ಬಿಟ್ಟರೆ ಇಡೀ ಚಿತ್ರದಲ್ಲಿ ನಿರಾಶೆ ಮೂಡಿಸುತ್ತಾರೆ. ಇಷ್ಟಕ್ಕೂ ಚಿತ್ರದ ಮೂಲಕ ನಿರ್ದೇಶಕರು ನೀಡ ಹೊರಟ ಸಂದೇಶವಾದರೂ ಏನು ಗೊತ್ತೇ? ತಲೆತಲಾಂತರದಿಂದ ಹಿಂದೂಗಳ ವಿರುದ್ಧ ಅನ್ಯಾವೆಸಗುತ್ತಿರುವ ಮುಸ್ಲಿಮರ ವಿರುದ್ಧ ಒಂದು ಕ್ರಾಂತಿಯುತ ಹೋರಾಟ! ಒಟ್ಟಿನಲ್ಲಿ ದ್ವಂದ್ವಾರ್ಥದ ಸಂಭಾಷಣೆಗಳು, ನಾಟಕೀಯ, ಪೇಲವ ಸನ್ನಿವೇಶಗಳಿಂದ ಕೂಡಿರುವ ಚಿತ್ರ ರಿಯಲ್ ಸ್ಟಾರ್ ಅಭಿಮಾನಿಗಳಿಗೆ ಕೂಡ ನಿರಾಶೆ ಮೂಡಿಸುವಂತಿದೆ ಎಂಬುದು ದುರದೃಷ್ಟಕರವಾದರೂ ವಾಸ್ತವ.