From the earlier FilmySphere, kept as published on 2014-12-25. It has not been updated.
Review of Mr. and Mrs. Ramachari
FilmySphere critic
ಮಿಸ್ಟರ್ ಆ್ಯಂಡ್ ಮಿಸ್ಸೆಸ್ ರಾಮಾಚಾರಿ
ಗ್ಯಾರಂಟಿ ಇದು ಮತ್ತೊಂದು ಸೆಂಚುರಿ!
ಗೂಗ್ಲಿಯ ಬಳಿಕ ಫುಲ್ ಎಂಟರ್ ಟೈನರ್ ಲವ್ ಸ್ಟೋರಿಯೊಂದಿಗೆ ಬಂದಿದ್ದಾರೆ ಯಶ್. ಚಿತ್ರದಲ್ಲಿ ನಾಯಕನ ಹೆಸರು ರಾಮಾಚಾರಿ. ಶಾಲಾ ದಿನಗಳಿಂದಲೇ ನಾಗರಹಾವು ಸಿನೆಮಾ ನೋಡಿ ವಿಷ್ಣುವರ್ಧನ್ ಗೆ ಫ್ಯಾನಾಗಿರುತ್ತಾನೆ. ಆತ ಹೆಸರಿಗೆ ಕಾಲೇಜು ಸ್ಟೂಡೆಂಟು. ಆದರೆ ಕಾಲೇಜಿಗೆ ಬಂದರೂ ತರಗತಿಗೆ ಆಬ್ಸೆಂಟು. ಅಪರೂಪಕ್ಕೆ ತರಗತಿಗೆ ಬಂದಿದ್ದಾಗ ಅಲ್ಲಿ ಸೀನಿಯರ್ ಗಳಿಂದ ರ್ಯಾಗಿಂಗ್ ಗೆ ಒಳಗಾಗುತ್ತಿದ್ದ ನಾಯಕಿಯನ್ನು ಕಂಡು ಕಾಪಾಡುತ್ತಾನೆ. ಈ ಸಹಾಯದಿಂದ ಸ್ನೇಹವಾಗಿ ಸ್ನೇಹ ಪ್ರೇಮವಾಗುತ್ತದೆ. ರಾಮಾಚಾರಿಯ ಮನೆಯಲ್ಲಿ ತಂದೆತಾಯಿಗೆ ಆತನಿಗಿಂತ ವಿದ್ಯಾಭ್ಯಾಸದಲ್ಲಿ ಮುಂದಿರುವ ಆತನ ತಮ್ಮನೆಂದರೆ ಅಕ್ಕರೆ. ಹಾಗಾಗಿಯೇ ರಾಮಾಚಾರಿಗೆ ಮೊದಲೇ ಆತನಿಗೆ ತನ್ನ ಆಪ್ತ ಸ್ನೇಹಿತನ ಮಗಳೊಂದಿಗೆ ಮದುವೆ ಮಾಡಲು ನೋಡುತ್ತಾರೆ. ಆದರೆ ಆತ ಮದುವೆಗೊಪ್ಪದೆ ಮನೆ ಬಿಟ್ಟು ಓಡಿ ಹೋಗುತ್ತಾನೆ. ಅದರ ಬಳಿಕ ಮನೆಯ ಜವಾಬ್ದಾರಿ ವಹಿಸುವ ರಾಮಾಚಾರಿಯ ಬೆಲೆ ತಂದೆತಾಯಿಗೆ ಮನವರಿಕೆಯಾಗುತ್ತದೆ. ಆದರೆ ಇದೇ ವೇಳೆ ನಾಯಕಿಗೆ ಮಾತ್ರ ಆತ ಮನೆಯತ್ತ ತೋರುವ ಆಸಕ್ತಿ ತನ್ನ ಮೇಲಿನ ನಿರಾಸಕ್ತಿಯಂತೆ ಅನಿಸುತ್ತದೆ. ಜೊತೆಗೆ ಆಕೆಯ ತಾಯಿಯೂ ಸದಾ ರಾಮಾಚಾರಿಯನ್ನು ವಿರೋಧಿಸುತ್ತಿರುವುದರಿಂದಾಗಿ ಆತ ವಂಚಕನೆಂದೇ ನಂಬುತ್ತಾಳೆ. ಇದೇ ವೇಳೆ ರಾಮಾಚಾರಿಯ ತಂದೆ ತಮ್ಮನಿಗೆಂದು ಮಾತನಾಡಿದ್ದ ಹುಡುಗಿಯನ್ನು ರಾಮಾಚಾರಿಗೆ ತರುವುದಾಗಿ ಮತ್ತೆ ಸ್ನೇಹಿತನಿಗೆ ಮಾತು ನೀಡುತ್ತಾರೆ! ಇದನ್ನೇ ರಾಮಾಚಾರಿ ತನಗೆಸಗಿದ ಮೋಸವೆಂದು ನಂಬುವ ನಾಯಕಿ ತಾನು ಕೂಡ ಬೇರೊಂದು ಮದುವೆಗೆ ಸಮ್ಮತಿ ಸೂಚಿಸುತ್ತಾಳೆ. ಇಷ್ಟೆಲ್ಲ ಅಡೆತಡೆಗಳ ನಡುವೆಯೂ ಸಿನಿಮೀಯ ರೀತಿಯಲ್ಲೇ ಪ್ರೇಮಿಗಳು ಒಂದಾಗುತ್ತಾರೆ. ಆದರೆ ಅದಕ್ಕೂ ಮೊದಲಿನ ರಸ ನಿಮಿಷಗಳನ್ನು ಸವಿಯಬೇಕಾದರೆ ಖಂಡಿತಾ ನೀವು ಚಿತ್ರವನ್ನು ನೋಡಲೇಬೇಕು.
ಚಿತ್ರದಲ್ಲಿ ಯಶ್ ರನ್ನು ವಿಷ್ಣುವರ್ಧನ್ ರ ಅಭಿಮಾನಿಯಾಗಿ ಇಂಟ್ರಡ್ಯೂಸ್ ಮಾಡಬೇಕಾದರೆ ಅವರಲ್ಲಿ ನಾಗರಹಾವು ರಾಮಾಚಾರಿಯ ಕಳೆ ಕಾಣುತ್ತದೆ. ಕೈಯ್ಯಲ್ಲಿನ ಬಳೆ ಮತ್ತು ಎದೆ ಮೇಲಿನ ವಿಷ್ಣು ಚಿತ್ರದ ಹಚ್ಚೆಯಷ್ಟೇ ಅಲ್ಲ, ಹೇರ್ ಸ್ಟೈಲ್ ಕೂಡ ಅದಕ್ಕೆ ಜೊತೆಯಾಗುವುದು ವಿಶೇಷ. ನಾಯಕಿಯಾಗಿ ರಾಧಿಕಾ ಪಂಡಿತ್ ಎಂದಿನಂತೆ ತಮ್ಮ ಪಾತ್ರಕ್ಕೆ ಒತ್ತು ನೀಡಿರುವ ಕತೆಯನ್ನೇ ಆಯ್ದುಕೊಂಡಿದ್ದಾರೆ. ಅಲ್ಲಿಗೆ ಮಿಸ್ಟರ್ ಆ್ಯಂಡ್ ಮಿಸ್ಸೆಸ್ ರಾಮಾಚಾರಿ ಎಂಬ ಹೆಸರು ಚಿತ್ರಕ್ಕೆ ಅನ್ವರ್ಥವಾಗುತ್ತದೆ.ನಾಯಕನ ತಂದೆಯಾಗಿ ಅಚ್ಯುತ ಕುಮಾರ್, ಸ್ನೇಹಿತನಾಗಿ ಶ್ರೀನಾಥ್ ಪಾತ್ರವಷ್ಟೇ ಅಲ್ಲ ಅತಿಥಿ ಪಾತ್ರವಾಗಿ ಪ್ರವೇಶಿಸುವ ಧ್ಯಾನ್ ರನ್ನು ಕೂಡ ನೆನಪಲ್ಲಿ ಉಳಿಸಿಕೊಳ್ಳುವಂಥ ಸನ್ನಿವೇಶಗಳನ್ನು ಸೃಷ್ಠಿಸಲಾಗಿದೆ. ರಾಮಾಚಾರಿ ಪ್ರೀತಿಸುತ್ತಿರುವುದು ತನ್ನ ತಂಗಿಯನ್ನೆಂದು ತಿಳಿಯದೇ ಆತನಿಗೆ ಪ್ರೋತ್ಸಾಹಿಸುವ ಮಿತ್ರ ಮತ್ತು ಯಶ್ ನಿಂದ ವೆರೈಟಿ ವೆರೈಟಿಯಾಗಿ ಹೊಡೆತ ತಿನ್ನಲೆಂದೇ ಕೆಣಕಲು ಬರುವ ಖಳನಟ ಲೋಕಿ, ಮ್ಯಾರೇಜ್ ಅರೇಂಜರಾಗಿ ಸಾಧುಕೋಕಿಲಾರ ಪಾತ್ರಗಳು ಪ್ರೇಕ್ಷಕರ ಮನಸೆಳೆಯುತ್ತವೆ. ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆ ಚುರುಕಾದ ಸಂಭಾಷಣೆ. ನಾಯಕ ನಾಯಕಿಯ ನಡುವಿನ ಮಾತುಗಳಲ್ಲಿ ಯಶ್ ಮತ್ತು ರಾಧಿಕಾರ ನಿಜ ಜೀವನದ ಗಾಸಿಪ್ ಗೆ ಸಂಬಂಧ ಕಲ್ಪಿಸುವ ಸಂಭಾಷಣೆಗಳಿವೆ. ಅನಗತ್ಯವಾಗಿ ನುಸುಳಿ ಬರುವ ಗೋವಾದಲ್ಲಿನ ಹಾಡೊಂದನ್ನು ಹೊರತು ಪಡಿಸಿ ಉಳಿದೆಲ್ಲ ಗೀತೆಗಳು ಆಕರ್ಷಕ. ಪೋಲಿ ನಾಯಕನಿಗೊಬ್ಬ ಬುದ್ಧಿವಂತ ತಮ್ಮ, ಸಣ್ಣ ಸಂದೇಹಗಳಿಗೆ ದೂರವಾಗುವ ನಾಯಕ ನಾಯಕಿ ಈ ಅಂಶಗಳನ್ನು ಎಷ್ಟೋ ಚಿತ್ರಗಳಲ್ಲಿ ಕಂಡಿದ್ದೇವೆ. ಆದರೆ ಇದೆಲ್ಲವನ್ನೂ ವಿಭಿನ್ನವಾಗಿ ಆಕರ್ಷಕ ನಿರೂಪಣೆಯೊಂದಿಗೆ ತೋರಿಸುವ ಮೂಲಕ ನಿರ್ದೇಶಕರು ಗಮನ ಸೆಳೆದಿದ್ದಾರೆ.