From the earlier FilmySphere, kept as published on 2014-12-20. It has not been updated.
Review of Chirayu
FilmySphere critic
ಚಿರಾಯು ಪ್ರಶಾಂತ; ಪ್ರೇಕ್ಷಕ ದಿಗ್ಭ್ರಾಂತ! ನಿರ್ದೇಶಕ ಪ್ರಶಾಂತ್ ಉಪೇಂದ್ರರ ಎ ಸಿನೆಮಾವನ್ನು ಅದೆಷ್ಟು ಬಾರಿ ನೋಡಿದ್ದಾರೋ ಗೊತ್ತಿಲ್ಲ; ಅದರ ಗುಂಗಿನಲ್ಲಿದ್ದುಕೊಂಡೇ ಚಿರಾಯು ಚಿತ್ರವನ್ನು ಮಾಡಿದಂತಿದೆ.
ಚಿತ್ರದ ಆರಂಭದಲ್ಲಿ ಬರುವ ದೃಶ್ಯವು ಸಿನೆಮಾ ಶೂಟಿಂಗ್ ಲೊಕೇಶನ್ ನದ್ದಾಗಿರುತ್ತದೆ. ಖ್ಯಾತ ನಿರ್ದೇಶಕ ಓಂ ಪ್ರಕಾಶ್ ರಾವ್ ಇಲ್ಲಿ ತಮ್ಮದೇ ಪಾತ್ರ ತಾವಾಗಿ ನಟಿಸಿದ್ದಾರೆ. ಅವರಿಗೆ ಹೊಸದೊಂದು ಸ್ಕ್ರಿಪ್ಟ್ ಕಳಿಸುವ ವ್ಯಕ್ತಿ ಅದರ ಕತೆಯನ್ನು ಅರ್ಧದಲ್ಲೇ ನಿಲ್ಲಿಸಿರುತ್ತಾನೆ. ಆ ಕತೆಯಲ್ಲಿ ಆತನ ಪ್ರೇಯಸಿಯೇ ಆತನಿಗೆ ಶೂಟ್ ಮಾಡಿರುತ್ತಾಳೆ ಮಾತ್ರವಲ್ಲ ಅದೇ ವೇಳೆ ಆಕೆಯನ್ನು ಯಾರೋ ಆಗಂತುಕರು ಶೂಟ್ ಮಾಡುತ್ತಾರೆ. ಪ್ರೇಯಸಿ ಆತನನ್ನು ಶೂಟ್ ಮಾಡಿದ್ದೇಕೆ ಮತ್ತು ಆಕೆಯನ್ನು ಶೂಟ್ ಮಾಡಿದ ಆಗಂತುಕರ್ಯಾರು ಎಂಬುದನ್ನು ಅರಿಯುವ ಕುತೂಹಲದಿಂದ ಕತೆ ಕಳಿಸಿದಾತನನ್ನು ಅವರು ಹುಡುಕಿಕೊಂಡು ಹೋಗುತ್ತಾರೆ. ಆತ ಇದೆಲ್ಲ ತನ್ನದೇ ಕತೆ ಎಂದು ಹೇಳಿ ಪ್ರೇಯಸಿಗೆ ತನ್ನ ಮೇಲಿದ್ದ ಹಗೆಗೆ ಒಂದು ಫ್ಲ್ಯಾಶ್ ಬ್ಯಾಕ್ ಕಾರಣವನ್ನೂ ಕೊಡುತ್ತಾನೆ. ಜೊತೆಗೆ ಕ್ಲೈಮ್ಯಾಕ್ಸ್ ಏನಾಗುತ್ತದೆ ಎಂಬ ಸಂದೇಹಕ್ಕೆ 'ಅದು ಇನ್ನಷ್ಟೇ ನಡೆಯಬೇಕಿದೆ' ಎನ್ನುತ್ತಾನೆ. ನಿರ್ದೇಶಕರು ಮತ್ತು ತಂಡ ಆತನನ್ನು ಹಿಂಬಾಲಿಸಿಕೊಂಡು ಹೋಗಿ ಕ್ಲೈಮ್ಯಾಕ್ಸ್ ಏನಾಗುತ್ತದೆಂದು ನೋಡುತ್ತಾರೆ. ಆಸಕ್ತಿಯಿದ್ದವರು ಅದನ್ನು ಚಿತ್ರಮಂದಿರದಲ್ಲಿ ನೋಡಬಹುದು.
ಚಿತ್ರದೊಳಗೆ ಬರುವ 'ಸಿನೆಮಾದ ಶೂಟಿಂಗ್, ನಿರ್ದೇಶಕ, ನಾಯಕನ ಪ್ರೀತಿಗಾಗಿ ಸಾಯುವುದಾಗಿ ಹೇಳುವ ನಾಯಕಿ ನಾಯಕನನ್ನೇ ಕೊಲ್ಲಲೆತ್ನಿಸುವುದು, ಕೊನೆಗೂ ಆಕೆ ಹಾಗೆ ಮಾಡಲು ಬ್ಲ್ಯಾಕ್ ಮೇಲ್ ಗೆ ಒಳಗಾಗಿದ್ದೇ ಕಾರಣ ಎನ್ನುವುದು, ರಿವರ್ಸ್ ಸ್ಕ್ರೀ ಪ್ಲೇ ಹೆಣೆದಿರುವುದು, ನಾಯಕ ದಮ್ಮುಕಟ್ಟಿ ನಾಯಕಿಗೆ ವೇಗದ ಸಂಭಾಷಣೆಗಳಿಂದ ಬುದ್ಧಿ ಹೇಳೋದು, ಆಗ ಆತನ ಸುತ್ತಾ ಟ್ರಾಲಿ ಶಾಟ್ ಹಾಕಿರೋದು ಮೊದಲಾದವೆಲ್ಲಾ ಎ ಚಿತ್ರವನ್ನೇ ನೆನಪಿಸುತ್ತದೆ. ಆದರೆ ಒಟ್ಟು ಗುಣಮಟ್ಟ ಮಾತ್ರದಲ್ಲಿ ಮಾತ್ರ ಅದರ ಸನಿಹಕ್ಕೂ ಸುಳಿಯುವ ಅರ್ಹತೆ ಹೊಂದಿಲ್ಲದ ಚಿತ್ರವಿದು. ಯಾಕೆಂದರೆ ಸೀರಿಯಸ್ಸಾಗಿ ಹೇಳುವ ನಾಯಕನ ಬಿಲ್ಡಪ್ ಸಂಭಾಷಣೆಗಳೇ ಹಾಸ್ಯಾತ್ಮಕವೆನಿಸುತ್ತದೆ. ಮೂಗಲ್ಲೇ ಗೊಣಗುವಂತೆ ಕೇಳಿಸುವುದರಿಂದ ಕೆಲವೊಂದು ಕಡೆ ಅರ್ಥವಾಗದೇ ಹೋಗುವುದುಂಟು. ನಾಯಕನ ಕತೆ ಓದುವ ನಿರ್ದೇಶಕ ಅದನ್ನು ತಾನು ಕಂಡಿರದ ಆತನ ಮುಖ ಚಹರೆಯೊಂದಿಗೆ ಕಲ್ಪಿಸುವುದು ಹೇಗೆ? ವಿಳಾಸ ಸಿಕ್ಕೊಡನೆ ಆತನನ್ನು ಭೇಟಿಯಾಗಿ ನಿನ್ನ ಲೈಫ್ ಕತೆ ಏನಾಯಿತೆಂದು ಕೇಳುವುದು ಹೇಗೆ? ಓಂ ಪ್ರಕಾಶ್ ರಾವ್ ನಿಜಕ್ಕೂ ನಾಯಕನಿಗೋಸ್ಕರ ರಿವಾಲ್ವರ್ ಎತ್ತಿಕೊಳ್ಳಬಲ್ಲರಾ ? ಎಂಬ ಪ್ರಶ್ನೆಗಳಿಗೆ ಚಿತ್ರದಲ್ಲಿ ಉತ್ತರವಿಲ್ಲ. ಖಳನಾಯಕರಾಗಿ ಅವಿನಾಶ್, ಮುನಿ ಸೇರಿದಂತೆ ನಾಯಕನ ತಂದೆತಾಯಿಯಾಗಿ ರಾಮಕೃಷ್ಣ, ಪವಿತ್ರಾ ಲೋಕೇಶ್ ಮೊದಲಾದವರ ತಾರಾಗಣ ಚಿತ್ರದಲ್ಲಿದೆ. ನಾಯಕನ ಮಿತ್ರರ ನಟನೆ ಗಮನಾರ್ಹ. ನಾಯಕಿ ಶುಭಾ ಪೂಂಜಾ ಗ್ಲಾಮರ್, ಒಂದೆರಡು ಹಾಟ್, ಐಟಮ್ಮು, ಮೆಲಡಿ ಹಾಡುಗಳು ಮತ್ತು ಈ ಕತೆಯಷ್ಟೇ ನಿಮಗೆ ಸಾಕು ಎನ್ನುವುದಾದರೆ ಖಂಡಿತಾ ಚಿತ್ರವನ್ನು ನೋಡಬಹುದು.